Advertisement
ದ.ಕ. ಜಿಲ್ಲೆಯಲ್ಲಿ ಜನವರಿಯ ಅಕ್ಕಿ ವಿತರಣೆ ಆಗುತ್ತಿದ್ದಂತೆ ಅದರಲ್ಲಿ ಕಂಡು ಬಂದಿರುವ ದೊಡ್ಡ ಗಾತ್ರದ ಬಿಳಿ ಬಣ್ಣದ ಅಕ್ಕಿಯನ್ನು ಕಂಡು ಪಡಿತರ ಅಕ್ಕಿಗೆ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂದು ಆಹಾರ ಇಲಾಖೆ, ಗ್ರಾ.ಪಂ.ಗಳಿಗೆ ದೂರು ಹೇಳುತ್ತಿರುವ ಪ್ರಸಂಗ ಕಂಡು ಬರುತ್ತಿದೆ.
ಕೇಂದ್ರ ಸರಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆಜಿ ಅಕ್ಕಿಗೆ ನಿಗದಿತ ಪ್ರಮಾಣದ ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತಿದೆ. ಇದರಲ್ಲಿ ಕಬ್ಬಿಣದ ಅಂಶ, ಫೋಲಿಕ್ ಆಮ್ಲ, ಹಾಗೂ ಬಿ ವಿಟಮಿನ್ ಅಂಶಗಳಿವೆ. ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತೀ ವ್ಯಕ್ತಿಗೆ ನೀಡುವ 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಸಾರವರ್ಧಿತ ಮಿಶ್ರಿತ ಅಕ್ಕಿ ಹಾಗೂ 5 ಕೆಜಿ ಸಾದಾ ಅಕ್ಕಿಯನ್ನು ನೀಡುವಂತೆ ಸರಕಾರದ ಮಾರ್ಗಸೂಚಿ ಇದೆ. ಪ್ರತೀ ಫಲಾನುಭವಿಗೆ ಸಾದಾ ಅಕ್ಕಿ ಹಾಗೂ ಸಾರವರ್ಧಿತ ಅಕ್ಕಿಯನ್ನು ಪ್ರತ್ಯೇಕವಾಗಿ ನೀಡಬೇಕು ಅನ್ನುವ ನಿಯಮ ಇದೆ. ಮಿಶ್ರಿತ ಅಕ್ಕಿ
ಪ್ರಸ್ತುತ 14 ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ನೀಡಲಾಗುತ್ತಿದೆ. ದ.ಕ.ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವಿತರಣೆ ಪ್ರಾರಂಭವಾಗಿಲ್ಲ ಅನ್ನುವುದು ಅಧಿಕಾರಿಗಳ ಹೇಳಿಕೆ. ಆದರೆ ಕೆಲವು ಜಿಲ್ಲೆಗಳಲ್ಲಿ ಪೂರೈಕೆ ಮಾಡುವ ಅಕ್ಕಿಯಲ್ಲಿ ಸ್ವಲ್ಪ ಭಾಗವನ್ನು ದ.ಕ. ಜಿಲ್ಲೆಗೂ ಕಳುಹಿಸಿದ್ದು ಜನವರಿಯಲ್ಲಿ ವಿತರಿಸಿದ ಅಕ್ಕಿಯೊಟ್ಟಿಗೆ ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಿ ಕಳುಹಿಸಲಾಗಿದೆ. ಲಭ್ಯತೆ ಕಡಿಮೆ ಇರುವ ಕಾರಣ ಬಹುತೇಕ ಪಡಿತರ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ನೀಡದೆ ಮಿಶ್ರಣ ಮಾಡಿ ಅಕ್ಕಿಯನ್ನು ವಿತರಿಸಲಾಗಿದೆ.
Related Articles
ಸಾರವರ್ಧಿತ ಅಕ್ಕಿ ಕಾಳುಗಳು ಸಾದಾ ಅಕ್ಕಿಗಿಂತ ದೊಡ್ಡ ಗಾತ್ರದ್ದಾಗಿದೆ. ವಿಭಿನ್ನವಾದ ಬಣ್ಣ ಹೊಂದಿವೆ. ಹೀಗಾಗಿ ಇದು ಪ್ಲಾಸ್ಟಿಕ್ ಅಕ್ಕಿ ಎಂಬ ಶಂಕೆಯಿಂದ ಬಳಕೆದಾರರು ಎಸೆದಿದ್ದಾರೆ. ಪಡಿತರ ಕೇಂದ್ರಗಳಲ್ಲಿ ಕೂಡ ಈ ಅಕ್ಕಿಯ ಸಮರ್ಪಕ ಮಾಹಿತಿ ನೀಡುವ ಅಗತ್ಯ ಇದೆ ಎನ್ನುತ್ತಾರೆ ಫಲಾನುಭವಿಗಳು.
Advertisement
ಅನುಕೂಲತೆಗಳುಸಾರವರ್ಧಿತ ಅಕ್ಕಿಯಲ್ಲಿ ಕಬ್ಬಿಣ, ಸತು, ಫೂಲಿಕ್ ಆಮ್ಲ, ವಿಟಮಿನ್ ಎ, ಡಿ, ಬಿ6, ಬಿ12 ಮತ್ತು ಇತರೆ ಪೋಷಕಾಂಶಗಳು ಸಮ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಪೋಷಕಾಂಶದ ಕೊರತೆಯಿಂದ ಉಂಟಾಗುವ ಅನೀಮಿಯಾ, ರಾತ್ರಿ ಕುರುಡುತನ ರೋಗ ಲಕ್ಷಣದಿಂದ ದೂರ ಇರಬಹುದಾಗಿದೆ. ಅಪೌಷ್ಟಿಕತೆಯನ್ನು ದೂರ ಮಾಡಬಹುದು. ಹಾಗಾಗಿ ಇತರೆ ಅಕ್ಕಿಗಳ ರೀತಿಯಲ್ಲಿ ಸಾರವರ್ಧಿತ ಅಕ್ಕಿಯನ್ನು ಆಹಾರ ಪದಾರ್ಥವಾಗಿ ಬಳಸಿಕೊಳ್ಳಬಹುದು. ಸಾರವರ್ಧಿತ ಅಕ್ಕಿಯ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ. ಸರಕಾರದ ಸೂಚನೆಯ ಪ್ರಕಾರ ಈ ಅಕ್ಕಿ ನೀಡಲಾಗುತ್ತಿದೆ. ದ.ಕ. ಜಿಲ್ಲೆ ಪಡಿತರ ಫಲಾನುಭವಿಗಳಿಗೆ ಪೂರ್ಣ ಸಾರವರ್ಧಿತ ಅಕ್ಕಿ ನೀಡುವ ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಗೊಳ್ಳಬೇಕಷ್ಟೇ. ಮುಂದಿನ ವರ್ಷದಿಂದ ಎಲ್ಲ ಜಿಲ್ಲೆಗಳಲ್ಲಿಯು ವಿತರಿಸಲಾಗುತ್ತದೆ. ಪಡಿತರ ಕೇಂದ್ರಗಳಲ್ಲಿ ನೀಡಲಾಗುತ್ತಿರುವ ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಆಗಿಲ್ಲ. ಈ ಬಗ್ಗೆ ಆತಂಕ ಬೇಡ.
-ಎಚ್.ಆರ್. ವಿಜಯಕುಮಾರ್
ಜಂಟಿ ನಿರ್ದೇಶಕ ಸಂಗ್ರಹಣೆ ಮತ್ತು ವಿತರಣೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಬೆಂಗಳೂರು – ಕಿರಣ್ ಪ್ರಸಾದ್ ಕುಂಡಡ್ಕ