ಬೆಳಗಾವಿ/ಅಥಣಿ: ಆತನಿಗೆ ಶಾಲಾ ದಿನಗಳಿಂದಲೂ ಬಾಲಕಿಯ ಮೇಲೆ ಪ್ರೇಮ. ಆದರೆ ಅದು ಏಕಮುಖೀ. ಈ ಪ್ರೇಮ ಜ್ವಾಲೆಯಿಂದ ಆತ ಓದಿದ ಶಾಲೆಗೇ ಬೆಂಕಿಯಿಟ್ಟ,. ಶಾಲೆಗೆ ಬೆದರಿಕೆಯ ಪತ್ರಗಳನ್ನೂ ಬರೆದ! ಅಥಣಿ ತಾಲೂಕಿನ ತಾಂವಶಿ ಗ್ರಾಮದ ಯುವಕ ಉಮೇಶ ಅಚಿತನಳ್ಳಿ (19) ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ಓದಿದ್ದು, ಪರೀಕ್ಷೆಯಲ್ಲಿ ಫೇಲಾಗಿದ್ದಾನೆ. ಆದರೆ ಪ್ರೀತಿಯಲ್ಲೂ ಫೇಲಾಗಿದ್ದರಿಂದ ಖನ್ನತೆಗೊಳಗಾಗಿ ಕಲಿತ ಶಾಲೆಗೆ ಬೆಂಕಿ ಇಟ್ಟಿದ್ದ. ಇದು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿತ್ತು. ಆದರೆ ಇದೀಗ ಈ ಯುವಕ ಪೊಲೀಸರ ಅತಿಥಿಯಾಗಿದ್ದು, ಸಮಸ್ಯೆಗೊಂದು ಅಂತ್ಯ ಕಂಡಂತಾಗಿದೆ.
ಖನ್ನತೆಗೊಳಗಾಗಿದ್ದ ಯುವಕ: ಶಾಲಾ ದಿನಗಳಿಂದಲೂ ಇದೇ ಶಾಲೆಯ ಬಾಲಕಿಯನ್ನು ಈತ ಇಷ್ಟಪಡುತ್ತಿದ್ದ. ಆದರೆ ಅದು ಒನ್ ಸೈಡೆಡ್ ಲವ್. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆತ ಅನುತ್ತೀರ್ಣಗೊಂಡರೆ ಆಕೆ ಪಾಸಾಗಿ ಕಾಲೇಜು ಮೆಟ್ಟಿಲೇರಿದ್ದಳು. ಆದರೆ ಈತ ಶಾಲೆ ಬಿಟ್ಟು ಎರಡ್ಮೂರು ವರ್ಷ ಖಾಲಿ ಅಲೆಯುತ್ತಿದ್ದ. ಈ ಅವಧಿಯಲ್ಲಿ ಆತನಿಗೆ ಖನ್ನತೆ ಜೊತೆಯಾಗಿತ್ತು.
ಅದೇ ಖನ್ನತೆಯಲ್ಲಿ ಕಲಿತ ಗ್ರಾಮದ ಪ್ರೌಢಶಾಲೆಗೆ ಬೆಂಕಿ ಕೂಡ ಇಟ್ಟಿದ್ದನು. ಇದರಿಂದ ಶಾಲಾ ಕೊಠಡಿಯಲ್ಲಿದ್ದ ಕೆಲ ಪ್ರಮುಖ ದಾಖಲೆಗಳು, ಪೀಠೊಪಕರಣಗಳು ಸುಟ್ಟು ಕರಕಲಾಗಿ ಗ್ರಾಮಸ್ಥರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಘಟನೆ ಕಗ್ಗಂಟಾಗಿತ್ತು. ಬೆಂಕಿ ಹಚ್ಚುವ ಮುನ್ನ ಶಾಲೆಯ ಗೋಡೆ ಮೇಲೆ ಯುವತಿಯ ಹೆಸರು ಬರೆದು ಆಕೆ ತನ್ನ ಸಂಬಂಧಿಕ ಯುವಕನನ್ನು ಪ್ರೀತಿಸುತ್ತಿದ್ದಾಳೆ. ಅವರಿಬ್ಬರ ವಿವಾಹ ಮಾಡಬೇಕು ಇಲ್ಲದಿದ್ದರೆ ಮುಂದೆ ಅನಾಹುತ ಆಗಲಿದೆ ಎಂದು ಯುವತಿಯ ಅಪಪ್ರಚಾರ ಮಾಡಿ ಬೆಂಕಿ ಹಚ್ಚಿದ ಪ್ರಕರಣದ ವಿಷಯಾಂತರಕ್ಕೆ ಯತ್ನಿಸಿದ್ದನು.
ಪೊಲೀಸರಿಗೇ ಸವಾಲು ಹಾಕಿದ್ದ: ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದನ್ನು ಗಮನಿಸಿದ ಉಮೇಶ ಮೂರ್‍ನಾಲ್ಕು ದಿನಗಳ ಹಿಂದೆ ಶಾಲೆಗೇ ಐದು ಪುಟಗಳ ಅನಾಮಧೇಯ ಪತ್ರ ಬರೆದು ಬೆದರಿಕೆ ಹಾಕಿದ್ದನು. ಬೆಂಕಿ ಹಚ್ಚಿದ್ದು ನಾನು, ಅಮಾಯಕರನ್ನು ಬಂಧಿಸಿ ಕಿರುಕುಳ ಕೊಡುವುದು ಬೇಡ. ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಬೇಕು ಎನ್ನುವ ಸವಾಲು ಬೇರೆ.
ಉಮೇಶ ಪ್ರೀತಿಸುತ್ತಿದ್ದ ಯುವತಿಯ ನಿಶ್ಚಿತಾರ್ಥ ಆಗಿತ್ತು. ವಿವಾಹ ದಿನಾಂಕ ಕೂಡ ನಿಗದಿಯಾಗಿತ್ತು. ಇದರಿಂದ ಮತ್ತಷ್ಟುನೊಂದಿದ್ದ ಯುವಕ ಶಾಲಾ ದಿನಗಳನ್ನು ನೆನಪಿಸಿ ಶಾಲೆಯಲ್ಲಿ ಬಂದು ಕೂರುವುದನ್ನು ಮಾಡುತ್ತಿದ್ದನು ಎಂದು ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಭಗ್ನ ಪ್ರೇಮಿ ಸಿಕ್ಕಿದ್ದು ಹೇಗೆ?: ಶಾಲೆಗೆ ಬೆಂಕಿ ಹಚ್ಚಿದವನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ವಿಷಯವಾಗಿತ್ತು. ತಾಂವಶಿ ಗ್ರಾಮದಲ್ಲಿ ಶೋಧ ನಡೆಸುತ್ತಿದ್ದಾಗ ಗ್ರಾಮದ ಚಿಕ್ಕ ಹುಡುಗನ ಎದುರು ತನ್ನ ಪ್ರೇಮ ಹಾಗೂ ಶಾಲೆಗೆ ಬೆಂಕಿ ಹಚ್ಚಿರುವ ಬಗ್ಗೆ ಹೇಳಿಕೊಂಡಿದ್ದನು. ಪೊಲೀಸರು ಗ್ರಾಮದಲ್ಲಿ ತನಿಖೆ ಮುಂದುವರಿಸಿದಾಗ ಆ ಬಾಲಕ ಪೊಲೀಸರ ಎದುರು ವಿಷಯ ತಿಳಿಸಿದಾಗ ಭಗ್ನ ಪ್ರೇಮಿಯ ಕೃತ್ಯ ಬಯಲಾಗಿದೆ. ಭಗ್ನ ಪ್ರೇಮಿಯ ಮನೆಯಲ್ಲಿ ಎರಡು ಪ್ರೇಮ ಪತ್ರಗಳು ಹಾಗೂ ಶಾಲೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಪತ್ರಗಳು ಪತ್ತೆಯಾಗಿವೆ. ಬೆದರಿಕೆ ಪತ್ರದಲ್ಲಿನ ಕೈ ಬರಹ ಹೋಲಿಕೆ ಆಗುತ್ತಿದ್ದಂತೆ ಪೊಲೀಸರು ಉಮೇಶನನ್ನು ಬಂಧಿಸಿದ್ದಾರೆ.