ಕಾರ್ಮೋಡ ಕವಿದು ಕತ್ತಲು ಆವರಿಸಿದ್ದ ನನ್ನ ಬಾಳಪುಟದಲ್ಲಿ ಬೆಳಕಿನ ರಂಗೋಲಿಯ ಕೈ ಹಿಡಿದು ಬಿಡಿಸಿದೆ. ಮಳೆ ಬಾರದ ಮರುಭೂಮಿಯಲ್ಲಿ ಸುರಿದ ಮಳೆಯಂತೆ ನೀ ಬಂದಿರುವೆ ನನ್ನ ಬಾಳಲ್ಲಿ. ನೀನು ವೀಣೆ, ನಾನು ತಂತಿ. ನೀನು ಎಷ್ಟು ಮಧುರವಾಗಿ ನುಡಿಸುವೆಯೊ ಅಷ್ಟು ಮಧುರ ಸ್ವರ ನಾನಾಗುವೆ.
ಮಿಡಿಯುವ ಮನಸ್ಸಿಗೆ ನಿನ್ನ ಪ್ರೀತಿಯ ಮಳೆ ಸುರಿಸಿದೆ. ನಿನ್ನ ನೆನಪಲ್ಲೇ ನನ್ನ ಜೀವನ ಸಾಗಿದೆ. ನಿನ್ನ ಈ ಮೌನ ಏನೆಂದು ನಾ ಬಲ್ಲೆ, ಆದರೆ ನಾ ಏನೆಂದು ನೀ ಬಲ್ಲೆ ಅಲ್ಲವೆ ನಲ್ಲ? ಅಂದದ ಹುಡುಗಿಗೆ ಚಂದದ ಹುಡುಗ ಎಂದು ಆ ದೇವರು ನಿನ್ನನ್ನು ಭೂಮಿಗೆ ಕಳುಹಿಸಿದ್ದಾನೆ. ಮನಸ್ಸಿನಂಚಿನ ಭಾವನೆಗಳು ಆ ತೀರಗಳಲ್ಲಿ ಒಂದಾಗುತ್ತಿವೆ, ಒಂದಾದ ಭಾವನೆಗಳೆಲ್ಲ ಸೇರಿಸಿ ನನ್ನ ಹೃದಯ ನಿನ್ನ ಪ್ರೀತಿಯನ್ನು ಬಯಸುತ್ತಿದೆ.
ನಾನಾಡುವ ಚಿಕ್ಕ ಮಕ್ಕಳ ವರ್ತನೆ ನಿನಗೆ ತುಂಬಾ ಇಷ್ಟ ಅಲ್ಲವೆ? ನನ್ನ ನಿನ್ನ ನಡುವೆ ಪ್ರೀತಿ ಎಂಬ ಎರಡು ಅಕ್ಷರ ಹುಟ್ಟಿದ್ದು ಹೀಗೇ ಅಲ್ಲವೆ? ನನ್ನ ದಿನದ ಆರಂಭವೂ ನಿನ್ನಿಂದ. ಅಂತ್ಯವೂ ನಿನ್ನಿಂದ. ಕಾರಣ ನನ್ನ ಹೃದಯ ನಿನ್ನದೇ ಹೆಸರನ್ನು ಮಿಡಿಯುತ್ತಿದೆ!ಹೇಳು, ನಿನ್ನ ಮಡಿಲಲ್ಲಿ ಮಲಗಿ ನಕ್ಷತ್ರಗಳನ್ನು ಎಣಿಸುವಾಸೆಯಾಗುತ್ತಿದೆ. ಈ ನನ್ನ ತುಂಟ ಆಸೆ ನನಸಾಗುವುದೇ?
ಮಾತಿಗೆ ನಿಲುಕದ ಸ್ವರೂಪ ನೀನು. ಮೌನದಲ್ಲೆ ಕಾಯುತಿರುವೆ ನಾನು. ಅದಕ್ಕೆ ಕಾರಣ ನೀನು ನನ್ನವ ಎನ್ನುವ ಅಂಶ ಒಂದೇ. ಈ ಮನಸ್ಸಿಗೆ ಒಣಜಂಭ. ನಿನ್ನ ಸೇರುವ ತವಕದಲ್ಲಿ ರಭಸದಿಂದ ಹರಿಯುತ್ತಿದೆ ನನ್ನೆದೆಯಲ್ಲಿ ಪ್ರೀತಿಯ ಸಮುದ್ರ. ಇಲ್ಲಿ ಸುನಾಮಿ ಅಲೆಗಳು ಬಾರದಂತೆ ಕಾಯುವ ಹೊಣೆ ನಿನ್ನದು, ಈ ಸಮಯದಲ್ಲಿ ನಾವು ದೂರಾದರೂ ನಮ್ಮ ಪ್ರೀತಿ ದೂರಾಗದು ಅಲ್ಲವೆ?
ನನ್ನ ಎಲ್ಲ ಪ್ರಶ್ನೆಗೆ ಉತ್ತರಿಸುತ್ತೀ ಎಂದು ಭಾವಿಸುತ್ತೇನೆ.
ಇಂತಿ ನಿನ್ನ ಮುದ್ದು
ಚಿಕ್ಕಿ
– ಅಂಬುಜಾಕ್ಷಿ ಕುರುವಿನಕೊಪ್ಪ