ನಿರ್ದೇಶಕ ಮುತ್ತು ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, ಅವರ ಮೊದಲ ನಿರ್ದೇಶನದ “ಪ್ರೀತಿಯ ರಾಯಭಾರಿ’ ಇಂದು ರಾಜ್ಯಾದ್ಯಂತ ತೆರೆಕಾಣುತ್ತಿರುವುದು. “ಒಂದು ಪ್ರೀತಿ ಕುರಿತ ಸಿನಿಮಾ ಮಾಡುವ ಯೋಚನೆ ಇತ್ತು. “ದೃಶ್ಯ’ ಸಿನಿಮಾದಲ್ಲಿ ಕೆಲಸ ಮಾಡಿದಾಗ, ಕ್ರೈಮ್ ಇಟ್ಟುಕೊಂಡು ಮಾಡುವ ಯೋಚನೆ ಬಂತು. ಅದಕ್ಕೊಂದು ಲವ್‌ಸ್ಟೋರಿ ಬೆರೆಸಿ, ಕುಟುಂಬ ಹಿನ್ನೆಲೆಯ ಚಿತ್ರ ಮಾಡಲು ಯೋಚಿಸುತ್ತಿರುವಾಗ, ಆರೇಳು ವರ್ಷದ ಹಿಂದೆ ನಂದಿಬೆಟ್ಟದಲ್ಲಿ ಒಂದು ಕ್ರೈಮ್ ನಡೆದಿತ್ತು. ಟಿವಿ, ಪತ್ರಿಕೆಯಲ್ಲಿ ಆ ಸುದ್ದಿ ಬಂದಾಗ, ಅದನ್ನೇ ಇಟ್ಟು ಸಿನಿಮಾ ಮಾಡಬಹುದು ಅನಿಸಿತು. ಅದೇ ಕಥೆ ಈಗ ಸಿನಿಮಾ ಆಗಿ, ರಿಲೀಸ್ ಕೂಡ ಆಗುತ್ತಿದೆ. ಇಲ್ಲಿ ಕ್ರೈಮ್ ಇದ್ದರೂ, ಕಾಮಿಡಿ ಜತೆಯಲ್ಲೇ ಸಾಗುತ್ತೆ. ಹೊಸಬಗೆಯ ಮೇಕಿಂಗ್ ಸಿನಿಮಾದಲ್ಲಿರಲಿದೆ. ಸೆನ್ಸಾರ್ ಯು/ಎ ಪ್ರಮಾಣ ಪತ್ರ ನೀಡಿದೆ. ಗಂಗಾಧರ್ ವಿತರಣೆ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಪ್ರೋತ್ಸಾಹ, ನಿರ್ಮಾಪಕರ ಸಹಕಾರದಿಂದ ಒಳ್ಳೆಯ ಚಿತ್ರ ಮಾಡಲು ಸಾಧ್ಯವಾಯ್ತು ಎಂಬುದು ಮುತ್ತು ಮಾತು.
ಅರ್ಜುನ್ ಜನ್ಯ ಮಾತನಾಡಿ,”ನಿರ್ಮಾಪಕ ವೆಂಕಟೇಶ್ ಬಂದು, ಒಂದು ಚಿತ್ರ ಮಾಡ್ತೀನಿ. ನೀವು ಸಂಗೀತ ಕೊಡಬೇಕು ಅಂದಾಗ, ನಿಮ್ಮ ಸಿನಿಮಾದ ಅರ್ಧ ಬಜೆಟ್ ನನಗೇ ಆಗುತ್ತೆ. ಬೇರೆ ಯಾರನ್ನಾದರೂ ನೋಡಿಕೊಳ್ಳಿ ಅಂದೆ. ಕೊನೆಗೆ ಎಷ್ಟಾದರೂ ಸರಿ, ನೀವೇ ಸಂಗೀತ ಕೊಡಬೇಕು ಅಂತ, ನನ್ನಿಂದಲೇ ಸಂಗೀತ ಮಾಡಿಸಿದ್ದಾರೆ. ಒಳ್ಳೆಯ ಹಾಡುಗಳು ಮೂಡಿಬಂದಿವೆ. ಈಗಾಗಲೇ ಅಮ್ಮಿ ಅಮ್ಮಿ ಹಾಡು ಸೂಪರ್ ಹಿಟ್ ಆಗಿದೆ. ಇಲ್ಲಿ ಕಥೆಯೇ ಹೀರೋ. ಕ್ಲೈಮ್ಯಾಕ್ಸ್ ಅದ್ಭುತವಾಗಿ ಮೂಡಿಬಂದಿದೆ ಎಂದರು ಅರ್ಜುನ್ ಜನ್ಯ.
ನಾಯಕ ನಕುಲ್ ಅವರಿಗೆ ಸಿನಿಮಾ ಮೇಲೆ ಆಸಕ್ತಿ ಇತ್ತಂತೆ. ಕೊನೆಗೆ ಅದಕ್ಕೆ ಪಕ್ಕಾ ತರಬೇತಿ ಪಡೆದೇ ಹೋಗಬೇಕು ಅಂತ ನಿರ್ಧರಿಸಿ, ಫೈಟ್ಸ್, ಡ್ಯಾನ್ಸ್ ಎಲ್ಲವನ್ನೂ ಪಕ್ವಗೊಳಿಸಿಕೊಂಡ ಬಳಿಕ ಕ್ಯಾಮೆರಾ ಮುಂದೆ ನಿಂತರಂತೆ. ಇಲ್ಲಿ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದುಂಟು. ಅರ್ಜುನ್ ಜನ್ಯ ಅವರ ಸಹಕಾರ ಮರೆಯುವಂತಿಲ್ಲ. ಹೊಸಬರಿಗೆ ಒಳ್ಳೆಯ ಹಾಡು ಕೊಟ್ಟು, ಸಿನಿಮಾ ಗುರುತಿಸಿಕೊಳ್ಳಲು ಕಾರಣರಾಗಿದ್ದಾರೆ. ಇನ್ನು, ನನ್ನ ತಂದೆ, ನನಗಾಗಿ ಈ ಚಿತ್ರ ಮಾಡಿದ್ದಾರೆ. ನಿಮ್ಮೆಲ್ಲರ ಹಾರೈಕೆ ಬೇಕು’ ಎಂಬುದು ನಕುಲ್ ಮಾತು.
ನಾಯಕಿ ಸುಕೃತಾ ದೇಶಪಾಂಡೆ ಅವರಿಗೆ ಇಲ್ಲಿ ಅಭಿನಯಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆಯಂತೆ. ಇನ್ನು, ಒಳ್ಳೆಯ ಚಿತ್ರದಲ್ಲಿ ನಾನಿದ್ದೇನೆ ಎಂಬುದು ಖುಷಿಯಾಗುತ್ತದೆ ಎಂದರು ಅವರು. ವಾಣಿಶ್ರೀ, ರಾಕ್‌ಲೈನ್ ಸುಧಾಕರ್, ಸಂಕಲನಕಾರ ಜೋ.ನಿ.ಹರ್ಷ ಸಿನಿಮಾ ಅನುಭವ ಹಂಚಿಕೊಂಡರು.