Advertisement

ನವಸಾಕರ ಮಹಿಳೆಯಲ್ಲರಳಿದ ಸಾಮಾಜಿಕ ಸ್ವಾಸ್ಥ್ಯದ ‘ಪ್ರೇಮ’

11:03 AM Oct 06, 2017 | |

ಮಹಾನಗರ: ‘ಗರ್ಭಿಣಿಯರು ಪ್ಲಾಸ್ಟಿಕ್‌ ಹೊಗೆಯನ್ನು ಉಸಿರಾಡಿದರೆ ಬುದ್ಧಿಮಾಂದ್ಯ ಮಕ್ಕಳು ಹುಟ್ಟುತ್ತಾರೆ’
ಎಂಬ ಗಣ್ಯರೋರ್ವರ ಮಾತಿನಿಂದ ಜಾಗೃತರಾದ ಮಹಿಳೆಯೋರ್ವರು ಮೂರು ವರ್ಷ ಗಳಿಂದ ಪ್ಲಾಸ್ಟಿಕ್‌
ವಿರುದ್ಧ ಹೋರಾಟ ಮತ್ತು ಸ್ವಚ್ಚತಾ ಕಾರ್ಯ ನಡೆಸುತ್ತಿದ್ದಾರೆ. ಇಡೀ ಊರು ಶೇ. 100ರಷ್ಟು ಪ್ಲಾಸ್ಟಿಕ್‌ ಮುಕ್ತ ಮತ್ತು
ಸ್ವಚ್ಚವಾಗಿ ಪರಿವರ್ತಿತಗೊಳ್ಳುವವರೆಗೆ ವಿರಮಿಸೆನು ಎಂಬ ಸಂಕಲ್ಪ ತೊಟ್ಟಿದ್ದು, ಅದು ಈಡೇರುವತ್ತ ಗ್ರಾಮ ಹೆಜ್ಜೆ ಇಟ್ಟಿದೆ.

Advertisement

ಈ ಮಾದರಿ ಕಾರ್ಯದ ಹಿಂದಿರುವ ನಾಯಕಿ ಪುತ್ತೂರಿನ ಚಾಮೆತ್ತಡ್ಕ ನಿವಾಸಿ ಪ್ರೇಮಾ. ನವಸಾಕ್ಷರೆಯಾಗಿರುವ ಈಕೆ
ಚಾಮೆತ್ತಡ್ಕ ಬಾಡು ಪರವ ಅವರ ಪತ್ನಿ. ಪ್ಲಾಸ್ಟಿಕ್‌ ವಿರುದ್ಧದ ಜಾಗೃತಿ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದರು. ಆ ಯಶಸ್ಸಿನ ಇಡೀ ಊರನ್ನು ಶೇ. 100ರಷ್ಟು ಪ್ಲಾಸ್ಟಿಕ್‌ ಮುಕ್ತಗೊಳಿಸಲು ಕಾರ್ಯೋನ್ಮುಖರಾಗಿದ್ದಾರೆ.

ಹೀಗೆ ಮೂಡಿತ್ತು ಸ್ಫೂರ್ತಿ
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಒಂಬುಡ್ಸ್‌ಮೆನ್‌ ಆಗಿದ್ದ ಶೀನ ಶೆಟ್ಟಿ, ಮಂಗಳೂರಿನ ಜನ
ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ಅವರಿಂದ ಪ್ರೇರಣೆ ಮತ್ತು ಅಕ್ಷರ ಕಲಿತ ಬಳಿಕ ಮೂರು ವರ್ಷಗಳಿಂದ ಆಲಂಕಾರು ಗ್ರಾಮ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮ ಮತ್ತು ಸ್ವಚ್ಚತೆಯ ಕುರಿತು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಶೀನ ಶೆಟ್ಟಿ ಅವರು ಪ್ಲಾಸ್ಟಿಕ್‌ ಉಪಯೋಗದಿಂದಾಗುವ ಕೆಟ್ಟ ಪರಿಣಾಮಗಳನ್ನು
ತಿಳಿಸಿ, ಪ್ಲಾಸ್ಟಿಕ್‌ ಸುಟ್ಟ ಹೊಗೆಯನ್ನು ಗರ್ಭಿಣಿಯರು ಉಸಿರಾಡಿದರೆ ಹುಟ್ಟುವ ಮಕ್ಕಳು ಬುದ್ಧಿಮಾಂದ್ಯರಾಗುತ್ತಾರೆ. ದನ ಕರುಗಳು ಪ್ಲಾಸ್ಟಿಕ್‌ ಸೇವಿಸಿದರೆ ಅವುಗಳ ಜೀವಕ್ಕೇ ಅಪಾಯವಿದೆ ಎಂದು ಹೇಳಿದ್ದರು. ಆಗಷ್ಟೇ ಅಕ್ಷರ ಕಲಿಯುತ್ತಿದ್ದ ಪ್ರೇಮಾ ಅವರ ಮನಸ್ಸಿಗೆ ಈ ಮಾತುಗಳು ನಾಟಿದ್ದು, ಪ್ಲಾಸ್ಟಿಕ್‌ ವಿರುದ್ಧ ಹೋರಾಡಲು ಹಾಗೂ ಜಾಗೃತಿ ಮೂಡಿಸಲು ಸ್ಫೂರ್ತಿ ನೀಡಿತ್ತು.

ಗ್ರಾಮದಲ್ಲೇ ಮೊದಲ ಸ್ವಚ್ಚ ಮನೆ
ಪ್ರೇಮಾ ಆಲಂಕಾರು ಗ್ರಾಮ ವ್ಯಾಪ್ತಿಯಲ್ಲಿ ಕಾಲೇಜುಗಳು,  ವಿವಿಧ ಸಂಘ, ಸಂಸ್ಥೆಗಳು ಸಹಿತ ಸುಮಾರು 20ಕ್ಕೂ
ಹೆಚ್ಚು ಕಡೆಗಳಲ್ಲಿ ಪ್ಲಾಸ್ಟಿಕ್‌ ವಿರುದ್ಧ ಅರಿವು ಮೂಡಿಸಿದ್ದಾರೆ. ತಾಲೂಕಿನ ಹೊರ ಭಾಗಗಳಿಂದಲೂ ಅವರಿಗೆ ಮಾಹಿತಿ
ಕಾರ್ಯಕ್ರಮಗಳಿಗಾಗಿ ಆಹ್ವಾನಗಳು ಬರುತ್ತಿದ್ದು, ಪುತ್ರಿ ಸುಲೋಚನಾ ಮತ್ತು ಇಡೀ ಕುಟುಂಬವೇ ಅವರಿಗೆ ಸಹಕರಿಸುತ್ತಿದೆ. ಪ್ಲಾಸ್ಟಿಕ್‌ ಮುಕ್ತ ಊರಿನ ನಿರ್ಮಾಣ ಮತ್ತು ಸ್ವಚ್ಚತೆ ಸಂಬಂಧ ಘೋಷಣೆಗಳನ್ನು ಸ್ವತಃ ಸುಲೋಚನಾ
ಅವರೇ ಬರೆದು ಅರಿವು ಮೂಡಿಸುತ್ತಾರೆ.

Advertisement

ಮೊದಲು ನಮ್ಮ ಮನೆಯನ್ನು ಸ್ವಚ್ಚವಾಗಿಟ್ಟುಕೊಂಡು ಇತರರಿಗೆ ಅದೇ ಮಾದರಿ ಅನುಸರಿಸಲು ಹೇಳಬೇಕೆಂಬ
ಉದ್ದೇಶದಿಂದ ತಾಯಿ, ಮಗಳೀರ್ವರು ತಮ್ಮದೇ ಮನೆಯಲ್ಲಿ ಪ್ರತಿದಿನ ಬಟ್ಟೆ ಚೀಲಗಳನ್ನಿಟ್ಟು, ಅದರಲ್ಲಿ ತ್ಯಾಜ್ಯಗಳನ್ನು ಹಾಕಿ ಅಚ್ಚುಕಟ್ಟಾಗಿ ವಿಂಗಡಣೆ ಮಾಡಿ ವಿಲೇವಾರಿಗಾಗಿ ಗ್ರಾ.ಪಂ.ಗೆ ನೀಡುತ್ತಾರೆ. ಅವರ ಈ ಕೆಲಸಕ್ಕಾಗಿ ಈಗಾಗಲೇ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿದ್ದು, 2015 ರಲ್ಲಿ ಗ್ರಾಮದ ‘ಮೊದಲ ಸ್ವಚ್ಚ’ ಮನೆ ಎಂದೂ ಗುರುತಿಸಲ್ಪಟ್ಟಿತ್ತು. 

ಅ. 2ರಂದು ಸಮ್ಮಾನ
ಇವರ ಕೆಲಸವನ್ನು ಗುರುತಿಸಿ ಗಾಂಧೀಜಿಯವರಜನ್ಮ ದಿನಾಚರಣೆ ಹಿನ್ನೆಲೆ ಯಲ್ಲಿ ನಗರದ ಟಾಗೋರ್‌ ಪಾರ್ಕ್‌ನಲ್ಲಿ
ಅ. 2ರಂದು ಅವರಿಗೆ ‘ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನದ ವಾರ್ಷಿಕ ಗೌರವ 2017’ ಪ್ರಶಸ್ತಿ ಪ್ರದಾನಿಸಲಾಯಿತು.

ಪ್ಲಾಸ್ಟಿಕ್‌ ಮುಕ್ತ ಗ್ರಾಮ
ಪ್ರೇಮಾ ಅವರಿಂದ ಪ್ರೇರಿತರಾಗಿ ಆಲಂಕಾರು ಗ್ರಾಮದ ಬಹುತೇಕ ಕಡೆ ಮನೆ, ಅಂಗಡಿ ಮುಂಗಟ್ಟುಗಳಲ್ಲಿ ಜನರು ಪ್ಲಾಸ್ಟಿಕ್‌ ತ್ಯಜಿಸಿ, ಬಟ್ಟೆ ಚೀಲಕ್ಕೆ ಮೊರೆಹೋಗಿದ್ದಾರೆ. ಅಲಂಕಾರು ಪ್ಲಾಸ್ಟಿಕ್‌ಮುಕ್ತ ಗ್ರಾಮದೆಡೆಗೆ ಸಾಗಿದ್ದು, ಶೇ. 100ರಷ್ಟು ಪರಿ ಪೂರ್ಣಗೊಳಿಸುವುದು ತನ್ನ ಗುರಿ ಎನ್ನುತ್ತಾರೆ 53 ವರ್ಷದ ಪ್ರೇಮಾ.

ಹೆಮ್ಮೆ ಇದೆ
ಆಲಂಕಾರು ಗ್ರಾಮದ ಪ್ರತಿ ಮನೆಯೂ ಪ್ಲಾಸ್ಟಿಕ್‌ ಮುಕ್ತವಾಗಲು ಸಂಕಲ್ಪಿಸಿದೆ. ಪ್ಲಾಸ್ಟಿಕ್‌ನ ಅಪಾಯ ತಿಳಿಸಿಕೊಡುವಲ್ಲಿ ಮತ್ತು ಸ್ವತ್ಛತೆಯ ಜಾಗೃತಿಗೆ ಅವರ ಕಾರ್ಯದ ಬಗ್ಗೆ ಹೆಮ್ಮೆ ಇದೆ. ಅವರೊಂದಿಗೆ ಮನೆಯ ಸದಸ್ಯರೆಲ್ಲ ಕೈ ಜೋಡಿಸುತ್ತೇವೆ. ಶೇ. 100ರಷ್ಟು ಗುರಿ ಸಾಧಿಸುವ ಇರಾದೆ ಅಮ್ಮನದ್ದು.
ಸುಲೋಚನಾ,
ಪ್ರೇಮಾ ಅವರ ಪುತ್ರಿ

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next