Advertisement

ಕೃಷಿಯ ಪ್ರೇಮ

12:30 AM Mar 04, 2019 | |

ವ್ಯವಸಾಯ ಯಾವತ್ತೂ ಪುರುಷರ ಕಸುಬು ಅನ್ನೋ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಆದರೆ, ಮೂಡಲಗಿಯ ಈ ಪ್ರೇಮ ಎಂಬ ದಿಟ್ಟೆ, ಎಲ್ಲ ಪುರುಷರಂತೆ ಕೃಷಿಗೆ ಕೈ ಹಾಕಿ ಗೆದ್ದಿದ್ದಾರೆ. 

Advertisement

ಕೃಷಿ, ಪುರುಷರಿಗಷ್ಟೇ ಮೀಸಲಾದ ಕಸುಬು ಅನ್ನೋರೇ ಹೆಚ್ಚು. ಆದರೆ ಬೆಳಗಾವಿಯ ಮೂಡಲಗಿಯ ಸುಣದೋಳಿ ಗ್ರಾಮದ ಪ್ರೇಮ ಗಾಣಿಗೇರ ಈ ಮಾತಿಗೆ ಅಪವಾದ.   ಈಕೆ  ಕಳೆದ 12 ವರ್ಷಗಳಿಂದ ಪುರುಷರಿಗಿಂತ ನಾವೇನು ಕಡಿಮೆ ಅಂತ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.  

ಇಡೀ ಕುಟುಂಬದ ಜವಾಬ್ದಾರಿ ಪ್ರೇಮ ಅವರ ಮೇಲಿದೆ. ಜೊತೆಗೆ ಇಬ್ಬರು ಬುದ್ಧಿ ಮಾಂದ್ಯ ಮಕ್ಕಳ ಪಾಲನೆ ಮಾಡಬೇಕು. ಹೀಗಿದ್ದರೂ ನೈಸರ್ಗಿಕ  ಕೃಷಿಯಲ್ಲಿ ಈಕೆಯದು ಎತ್ತಿದ ಕೈ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯುವುದು ಹೇಗೆ ಅನ್ನೋದನ್ನು ಕೃಷಿ ಮಾಡಿ ತೋರಿಸಿದ್ದಾರೆ. ಇವರ ಕುಟುಂಬ ಮೊದಲಿನಿಂದಲೂ ರಾಸಾಯನಿಕ ಪದ್ಧತಿಯಲ್ಲಿ ಬೆಳೆ ಬೆಳೆಯುತ್ತಿದ್ದವರು. ಆದಾಯಕ್ಕಿಂತ ಖರ್ಚು ಹೆಚ್ಚಾಗುವುದನ್ನು ಮನಗಂಡ ಇವರು ಕೃಷಿಯಲ್ಲಿ ಏನಾದರೂ ಹೊಸತನ್ನು ಮಾಡಬೇಕೆಂಬ ಛಲದಿಂದ ಎದೆಗುಂದದೆ ಸಾವಯವ ಕೃಷಿಯತ್ತ ಮುಖಮಾಡಿದರು.

ಅರಬಾಂವಿ ಕೃಷಿ ವಿಶ್ವವಿದ್ಯಾಲಯ, ಆತ್ಮಾ ಯೋಜನೆಯಿಂದ  ರಾಜ್ಯದ ಹಲವು ಕಡೆ ಆಯೋಜಿಸಿದ ಕೃಷಿ ತರಬೇತಿಗಳಲ್ಲಿ ಭಾಗವಹಿಸಿದ ಪ್ರೇಮಾ, ಸಾವಯವ ಕೃಷಿಯ ಬಗ್ಗೆ ತಿಳಿದುಕೊಂಡಿದ್ದಾರೆ.   ಇಂದು ತಮ್ಮ ಭೂಮಿಯಲ್ಲಿ ಎರೆಹುಳ ಗೊಬ್ಬರ, ಬಯೋಡೈಜೀಸ್ಟರ್‌, ಬಯೋಗ್ಯಾಸ್‌, ದೇಸಿ ಆಕಳ ಗೋಮೂತ್ರದಿಂದ ಪಂಚಗವ್ಯ ಜೀವಾಮೃತಗಳನ್ನು ಬಳಸುತ್ತಾರೆ.  4ಎಕರೆಯಲ್ಲಿ ಒಂದು ಎಕರೆ ಅರಿಶಿಣ ಬೆಳೆದಿದ್ದಾರೆ.  ಸುಮಾರು 30 ಕ್ವಿಂಟಾಲ್‌ ಜೈವಿಕ ಗೊಬ್ಬರ ಹಾಕುವುದರಿಂದ ಸಂಪೂರ್ಣ ಸಾವಯವ ಫ‌ಸಲು ಕೈಗೆ ಸಿಗುತ್ತಿದೆ. ಉಳಿದ ಮೂರು ಎಕರೆಯಲ್ಲಿ  ಪೇರು, ಬೀಟ್‌ರೂಟ್‌, ಉದ್ದಿನಬೇಳೆ, ಕಬ್ಬು, ಅಲಸಂದಿ, ಈರುಳ್ಳಿ, ಮೆಣಸು, ಪಪ್ಪಾಯಿ, ನಿಂಬೆ, ಚಿಕ್ಕು, ನುಗ್ಗೆ, ಗುಲಾಬಿ ಸೇರಿದಂತೆ ಇನ್ನು ಅನೇಕ ಬಗೆಯ ತರಕಾರಿ, ಕಾಳುಗಳನ್ನು ಬೆಳೆಯುತ್ತಿದ್ದಾರೆ. ಅರಿಶಿಣದಿಂದ ವರ್ಷಕ್ಕೆ ಮೂರು ಲಕ್ಷ ರೂ. ಆದಾಯವಿದೆ.  ತೋಟಗಾರಿಕೆಯಿಂದ 7 ಲಕ್ಷ ಆದಾಯ ಸಿಗುತ್ತಿದೆಯಂತೆ. 

ಕಳೆದ 5 ವರ್ಷಗಳಿಂದ ಯಾವುದೇ ರಾಸಾಯನಿಕಗಳನ್ನು ಬಳಸದೇ ಇರುವುದರಿಂದ ಆದಿತ್ಯಾ ಗ್ರೂಪ್‌ನಿಂದ ಸಾವಯವ ದೃಢೀಕರಣ ಪತ್ರವನ್ನು ಪಡೆದಿದ್ದಾರೆ. ಜೊತೆಗೆ ಬೆಳಗಾವಿ ಮತ್ತು ಧಾರವಾಡದಲ್ಲಿ  ಸಾವಯವ ರೈತ ಮಹಿಳೆ ಪ್ರಶಸ್ತಿಯನ್ನೂ ಪಡೆದಿದ್ದಾರೆ.

Advertisement

ಸಾವಯವ ಪದ್ದತಿಯಿಂದ ಬೆಳೆದಿರುವ ಪೇರು, ಅರಿಶಿಣ, ಕಬ್ಬು ಹಾಗೂ ಇತರೆ ಬೇಸಾಯದಿಂದ ವರ್ಷಕ್ಕೆ 9-10 ಲಕ್ಷ ಆದಾಯ ಗಳಿಸುತ್ತೇನೆ ಎಂದು ಪ್ರೇಮಾ  ಹೆಮ್ಮೆಯಿಂದ ಹೇಳುತ್ತಾರೆ. ಬೇರೆ ಬೇರೆ ಕಡೆಗಳಿಗೆ ತೆರಳಿ ರೈತರಿಗೆ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಉಪನ್ಯಾಸವನ್ನೂ ನೀಡುತ್ತಿದ್ದಾರೆ. 

– ಅಡಿವೇಶ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next