Advertisement

Love Matter: ಪ್ರೇಯಸಿ ಜತೆ ಮಾತನಾಡುತ್ತಿದ್ದ ವ್ಯಕ್ತಿ ಅಪಹರಿಸಿ, ಹತ್ಯೆ

01:09 PM Oct 18, 2023 | Team Udayavani |

ಬೆಂಗಳೂರು: ತಾನೂ ಪ್ರೀತಿಸುತ್ತಿದ್ದ ಯುವತಿ ಜತೆ ಚಾಟಿಂಗ್‌ ಮಾಡುತ್ತಿದ್ದ ಸಿವಿಲ್‌ ಎಂಜಿನಿಯರ್‌ನನ್ನು ಅಪಹರಿಸಿ ಕೊಲೆಗೈದ ಇಬ್ಬರು ಆರೋಪಿಗನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಮೂಲದ ಪ್ರತಾಪ್‌ (23) ಮತ್ತು ಆತನ ಸಹಚರ ಎನ್‌. ಮಂಜುನಾಥ್‌(22) ಬಂಧಿತರು. ಆರೋಪಿಗಳು ಅ.8ರಂದು ದಾವಣಗೆರೆಯ ಹೊನ್ನಾಳ್ಳಿ ತಾಲೂಕಿನ ಹೊಸಹಳ್ಳಿಯ ಲೋಕೇಶ್‌(2s) ಎಂಬಾತನನ್ನು ಅಪಹರಿಸಿ ಕೊಲೆಗೈದಿದ್ದರು ಎಂದು ಬೆಂ.ಗ್ರಾ. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಿವಿಲ್‌ ಎಂಜಿನಿಯರ್‌ ಆಗಿರುವ ಲೋಕೇಶ್‌, 8ನೇ ಮೈಲಿ ಬಳಿಯ ಕೆನ್ನಮೆಟಲ್‌ ಫ್ಯಾಕ್ಟರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಯುವತಿಯನ್ನು ಪ್ರೀತಿಸುತಿದ್ದ. ಮತ್ತೂಂದೆಡೆ ಇದೇ ಯುವತಿಯನ್ನು ಆರೋಪಿ ಪ್ರತಾಪ್‌ 4 ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಲೋಕೇಶ್‌ ಜತೆ ಪ್ರೇಯಸಿ ಸಲುಗೆಯಿಂದ ಇರುವುದನ್ನು ಸಹಿಸದ ಆರೋಪಿ, ಲೋಕೇಶ್‌ಗೆ ಈ ಹಿಂದೆ ಎಚ್ಚರಿಕೆ ನೀಡಿದ್ದ. ಬಳಿಕ ಯುವತಿ ಮತ್ತು ಪ್ರತಾಪ್‌ ಕೆಲಸ ಬಿಟ್ಟಿದ್ದರು.

ಅಪಹರಿಸಿ ಕೊಲೆ: ಎಚ್ಚರಿಕೆ ನಡುವೆಯೂ ಲೋಕೇಶ್‌, ಯುವತಿ ಜತೆ ಚಾಟಿಂಗ್‌ ಮಾಡು ವುದು ಮತ್ತು ಫೋನ್‌ನಲ್ಲಿ ಮಾತನಾಡುತ್ತಿದ್ದ. ಅದರಿಂದ ಆಕ್ರೋಶಗೊಂಡ ಪ್ರತಾಪ್‌, ಸ್ನೇಹಿತ ಮಂಜುನಾಥ್‌ ಜತೆ ಸೇರಿ ಲೋಕೇಶ್‌ ಹತ್ಯೆಗೆ ಸಂಚು ರೂಪಿಸಿದ್ದ. ಅ.5ರಂದು ಸಂಜೆ 6 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಲೋಕೇಶ್‌ನನ್ನು ಬೈಕ್‌ನಲ್ಲಿ ಅಪಹರಿಸಿಕೊಂಡು ಚಿಕ್ಕ ಕುಕ್ಕನಹಳ್ಳಿ ಬಳಿ ಕರೆದೊಯ್ದು ಕಲ್ಲಿನಿಂದ ತಲೆಗೆ ಹೊಡೆದು ಕೊಲೆಗೈದಿದ್ದರು. ಬಳಿಕ ಮೃತದೇಹವನ್ನು ಸಮೀಪದ ರಾಗಿ ಮತ್ತು ಜೋಳದ ಹೊಲಕ್ಕೆ ಎಸೆದು ಪರಾರಿಯಾಗಿದ್ದರು. ಕೆಲ ದಿನಗಳ ಬಳಿಕ ಹೊಲದ ಮಾಲೀಕ ಬಂದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಬಳಿಕ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಬಟ್ಟೆ ಹಾಗೂ ಇತರೆ ಸಾಕ್ಷ್ಯ ಸಂಗ್ರಹಿಸಿ ಗುರುತು ಪತ್ತೆಗಾಗಿ ರಾಜ್ಯದ ವಿವಿಧ ಠಾಣೆಗೆ ಕಳುಹಿಸಿದ್ದರು. ಬಳಿಕ ಲೋಕೇಶ್‌ ಧರಿಸಿದ್ದ ಶೂನಿಂದ ಮೃತದೇಹ ಗುರುತಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ನೆಲಮಂಗಲದ ಉಪವಿಭಾಗದ ಡಿವೈಎಸ್ಪಿ ಕೆ.ಎಸ್‌.ಜಗದೀಶ್‌, ಠಾಣಾಧಿಕಾರಿ ಎಂ.ಕೆ.ಮುರಳಿಧರ್‌, ಪಿಎಸ್‌ಐ ಪ್ರಶಾಂತ್‌, ಎಎಸ್‌ಐ ಮಲ್ಲಗುಂಡಿ ಬಸವರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Advertisement

ಕಂಪನಿ ಶೂ ಕೊಟ್ಟ ಸುಳಿವು:  ಘಟನಾ ಸ್ಥಳದಲ್ಲಿ ಲೋಕೇಶ್‌ ಧರಿಸಿದ್ದ ಶೂಪತ್ತೆಯಾಗಿದ್ದು, ಅದು ಯಾವ ಫ್ಯಾಕ್ಟರಿ ಶೂ ಎಂದು ಶೋಧಿಸಿದಾಗ ಕೆನ್ನಮೆಟಲ್‌ ಫ್ಯಾಕ್ಟರಿಯ ಸಿಬ್ಬಂದಿ ಧರಿಸುವ ಶೂ ಎಂಬುದು ಗೊತ್ತಾಗಿದೆ. ಈ ಆಧಾರದ ಮೇಲೆ

ಕೊಲೆಯಾದ ವ್ಯಕ್ತಿ ಲೋಕೇಶ್‌ ಎಂಬುದು ಗೊತ್ತಾಗಿದೆ. ಬಳಿಕ ತನಿಖೆ ವೇಳೆ ಆರೋಪಿಗಳ ಸುಳಿವು ಸಿಕ್ಕಿ ಬಂಧಿಸಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next