Advertisement

ಪ್ರೀತಿ-ಪ್ರೇಮ ಬದುಕಿನ ಅಡಿಪಾಯವಾಗಲಿ 

11:07 PM Nov 17, 2022 | Team Udayavani |

ಪ್ರೀತಿ, ಪ್ರೇಮ ಎಂಬ ಎರಡು ಪುಟ್ಟ ಪುಟ್ಟ ಸರಳ ಪದಗಳು. ಆಲಿಸಲೂ ರಮ್ಯ ಶಬ್ದಗಳು. ಆದರೆ ವಿಶಾಲ ವ್ಯಾಖ್ಯಾನಕ್ಕೆ ಒಳಪಟ್ಟದ್ದು. ಪುರಾಣ, ಧರ್ಮಗ್ರಂಥ, ಲೌಕಿಕ, ಅಲೌಕಿಕ ಪ್ರಪಂಚದಲ್ಲಿ ಪ್ರೀತಿ- ಪ್ರೇಮದ ಮಹಿಮೆ ವರ್ಣಿಸಲದಳ. ಜಗತ್ತು ನಿಂತಿರುವುದೇ ಪ್ರೀತಿ-ಪ್ರೇಮದ ಸುಭದ್ರ ಪಂಚಾಗದಲ್ಲಿ. ಪ್ರೀತಿ-ಪ್ರೇಮ ವಿಹೀನ ಜೀವನ ವಿರಸ, ವೈಮನಸ್ಸಿಗೆ ಮೂಲ ಹೇತುವಾಗಿ ಪರಿಣಮಿಸುತ್ತದೆ.

Advertisement

ಪ್ರೀತಿ-ಪ್ರೇಮಗಳ ಹೃನ್ಮನಪೂರ್ವಕ, ಹೃನ್ಮನ ಬೆಸೆಯುವ ಅಸಂಖ್ಯಾತ ಪ್ರಸಂಗ-

ಸನ್ನಿವೇಶಗಳು ರಾಮಾಯಣ, ಮಹಾ ಭಾರತಗಳಲ್ಲಿ ಆದರ್ಶಮಯವಾಗಿವೆ, ರಾಮ-ಹನುಮರ ಪ್ರೇಮ, ಕೃಷ್ಣ-ಬಲ ರಾಮರ, ಕೃಷ್ಣ-ಕುಚೇಲರ, ರಾಮ ಮತ್ತು ತನ್ನ ಸಹೋದರರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ಪ್ರೀತಿ, ಯಶೋದಾ-ಕೃಷ್ಣ, ನಾರದ ಪ್ರೇಮ, ಕುಂತಿ- ಕೃಷ್ಣ,

ಗಣಪತಿಯ ತಂದೆ-ತಾಯಿ ಪ್ರೀತಿ, ದೇವರ ಮತ್ತು ಭಕ್ತರ ಈ ಪರಿಯ ಅನೇಕಾನೇಕ ಕಥಾನಕಗಳು ಹೀಗೆಲ್ಲ.

ಈ ಎಲ್ಲ ಪುರಾಣ ಕಥೆಗಳಲ್ಲಿ ಪ್ರೀತಿ-ಪ್ರೇಮದ ಮಹತ್ವ, ಅದರಲ್ಲಿರುವ ಶಕ್ತಿ, ಈ ಎರಡು ಗುಣಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಗಳು ಜನಮನ್ನಣೆಗೆ ಪಾತ್ರವಾದುದನ್ನು ಸಾರಿ ಹೇಳುತ್ತವೆ. ಇದೇ ಪ್ರೀತಿ-ಪ್ರೇಮದ ಸಾರ.ಹಾಗೆಂದು ಈ ಪ್ರೀತಿ-ಪ್ರೇಮ ಎಲ್ಲೆಯನ್ನು ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೂ ಪೌರಾಣಿಕ ಮತ್ತು ಐತಿಹಾಸಿಕ ಕಥಾನಕಗಳಲ್ಲಿ ಸಾಕಷ್ಟು ನಿದರ್ಶನಗಳು ದೊರಕುತ್ತವೆ. ಯಾವೊಂದೂ ಅನುಮಾ ನಕ್ಕೂ ಆಸ್ಪದವಿಲ್ಲದಂತೆ ಕಲ್ಮಶರಹಿತ, ಶುದ್ಧ ಅಂತಃಕರಣದ ಪ್ರೀತಿ ನಮ್ಮ ಬಾಳನ್ನು ಹಸನಾಗಿಸುವುದು ನಿಶ್ಚಿತ. ಇದೇ ವೇಳೆ ಪ್ರೀತಿ-ಪ್ರೇಮದ ವಿಚಾರದಲ್ಲಿ ಎಡವಟ್ಟು ಮಾಡಿಟ್ಟುಕೊಂಡರೆ ಅದು ನಮ್ಮ ಬದುಕಿಗೇ ಕೊಳ್ಳಿ ಇಡಬಹುದು. ಇಲ್ಲಿ ನಮ್ಮ ವಿವೇಚನೆ ಪ್ರಮುಖ ಪಾತ್ರ ವಹಿಸುತ್ತದೆ.

Advertisement

ಭಗವಂತನ ವರಪ್ರಸಾದ ಪಡೆಯುವಲ್ಲಿ ಭಗವಂತನಲ್ಲಿ ನಾವಿಡುವ ಪ್ರೀತಿ-ಪ್ರೇಮ ಗಣನೀಯವಾಗಿ ಪರಿಗಣನೆಗೆ ಬರುತ್ತದೆ.

ಪ್ರೀತಿ-ಪ್ರೇಮ ಅಮರತ್ವದ ಪ್ರತೀಕ, ಹೊಂದಾಣಿಕೆಯ ದ್ಯೋತಕ, ನಂಬಿಕೆಯ ಮೂಲಾಧಾರ, ಸುಮನಸ್ಸಿನ ಸಂಕೇತ ವಾಗಿದ್ದು ಸ್ವಸ್ಥ ಸಮಾಜದ ಹೆಗ್ಗುರುತಾಗಿದೆ. ನಮ್ಮ ಬದುಕಿನ ಹುಟ್ಟಿನಿಂದ ಬಾಲ್ಯ, ಶೈಶಾವಸ್ಥೆ, ಯೌವ್ವನ, ಮುದಿತನದ ವಿವಿಧ ಮಜಲುಗಳಲ್ಲಿನ ಜೀವನದಲ್ಲಿ ಪ್ರೀತಿ-ಪ್ರೇಮ ಅನವರತ ರೂಪ ತಾಳಿ ಹಾಸು ಹೊಕ್ಕಾದಲ್ಲಿ ಬಾಳಿನ ದಿವ್ಯತೆ, ಭವ್ಯತೆ, ಆನಂದವೇ ಬೇರೆ ರೀತಿಯದ್ದು. ದೆೃವ ಪ್ರೇಮದಿಂದ ತಂದೆ -ತಾಯಿ, ಹಿರಿ ಯರು, ಕುಟುಂಬ, ಸಮಾಜ, ಗುರು, ಪ್ರಕೃತಿ, ಪ್ರಾಣಿ-ಪಕ್ಷಿ, ದೇಶ… ಪ್ರೇಮಗಳು ರಕ್ತಗತವಾದರೆ ಬಾಳಿನ ವ್ಯಕ್ತಿತ್ವ ಸದಾ ಭೂಷಣ ಪ್ರಾಯವಾಗಿ ಕಂಗೊಳಿಸುವುದು. ಸಾಧನೆಗೆ ಪ್ರೇರಣಾಸ್ರೋತವಾಗುವುದು.

ದ್ವೇಷ, ಕೋಪ-ತಾಪ, ವೆೃಮನಸ್ಸು, ಮತ್ಸರ,ವಿರಸ, ಬೇಸರ, ಭಿನ್ನಾಭಿಪ್ರಾಯ ಇತ್ಯಾದಿ ಗಳ ಅಂಕುಶಕ್ಕೆ ಪ್ರೀತಿ-ಪ್ರೇಮವೇ ರಾಮ ಬಾಣ. ದೆೃಹಿಕ ಆರೋಗ್ಯಕ್ಕೂ ಇವು ದಿವ್ಯ ಔಷಧ ಎಂಬುದು ಸಾಬೀತಾಗಿದೆ.

ಪಂಚಭೂತಗಳು ಸಂಗಮಿಸಿರುವ ಈ ಜಗತ್ತು ಎಂಬತ್ತು ಲಕ್ಷ ಜೀವರಾಶಿಗೂ ಸೇರಿದ್ದು. ಎಲ್ಲರಿಗೂ ಬದುಕುವ ಹಕ್ಕು, ರೀತಿ-ನೀತಿಯನ್ನು ಪ್ರಕೃತಿ ದಯಪಾಲಿಸಿದೆ. ಈ ರೀತಿ-ನೀತಿ ಪ್ರಕಾರ ಬದುಕಿದಲ್ಲಿ ಬಾಳು ಸುಗಮವಾಗುವುದು. ಆದ ಕಾರಣ ಮಾನವ-ಮಾನವರೊಂದಿಗೆ ಮಾತ್ರವಲ್ಲ ಪ್ರಕೃತಿಯೊಡಗೂಡಿ ಸಕಲ ಚರಾಚರಗಳ ಬದುಕಿಗೂ ಪ್ರೇರಕರಾಗಬೇಕು. ಸಮಗ್ರ ಪ್ರಕೃತಿಯ ಪ್ರೀತಿ- ಪ್ರೇಮ ಮಾನವನ ಬದುಕಿನ ಅವಿಚ್ಛಿನ್ನ ಭಾಗವಾಗಬೇಕು. ಹೀಗಾದಲ್ಲಿ ಮಾತ್ರ ಪ್ರಕೃತಿ ಪುರುಷ ಪ್ರೇಮ ಮುಂದುವರಿಯುವುದು.

ಇಂದು ಪ್ರಕೃತಿಯೊಂದಿಗೆ ಮಾನವನ ದುರಾಸೆ, ದುರಹಂಕಾರದ ದುಂಡಾ ವರ್ತನೆಯ ಅಟ್ಟಹಾಸ, ಬರ್ಬರತೆ ಯಿಂದಾಗಿಯೇ ಪ್ರಕೃತಿ ಮಾತೆ ಮುನಿದು ವಿವಿಧ ಅವತಾರ ತಾಳುತ್ತಿ¨ªಾಳೆ ಎಂಬ ಬೀಭತ್ಸ ಚಿತ್ರಣ ನಮ್ಮೆಲ್ಲರ ಮುಂದೆ ಪ್ರಸ್ತುತವಾಗುತ್ತಿದೆ.

ಇನ್ನು ನಮ್ಮ ಸಾಮಾಜಿಕ ಜೀವನದ ಎಲ್ಲ ದುಗುಡ, ದುಮ್ಮಾನಗಳಿಗೆ ಪ್ರಧಾನ ಕಾರಣವೇ ಪ್ರೀತಿ-ಪ್ರೇಮದ ಕೊರತೆ. ಪ್ರೀತಿ ಜಗತ್ತನ್ನೇ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಮೂಲ್ಯ ಅಸ್ತ್ರ. ಪ್ರೀತಿ- ಪ್ರೇಮವನ್ನು ಹೃನ್ಮನದಲ್ಲಿ ಅವಿಭಾಜ್ಯವನ್ನಾಗಿಸಿ  ಬಾಳಿನ ನಕಾರಾತ್ಮಕತೆಯನ್ನು ವ್ಯರ್ಜಿಸಿ ಬಾಳಬಂಡಿಯಲ್ಲಿ ಪಯಣಿಸಬೇಕು. ಈ ಸುಮಧುರ ಪಯಣ ಪ್ರತಿಯೋರ್ವರ ಬಾಳಿನಲ್ಲಿ ಸುವಾಸನೆ ಬೀರು ವುದು ನಿಸ್ಸಂಶಯ. ಈ ಪ್ರಯಾಣದಲ್ಲಿ ನಾವು ಭಾಗಿಯಾಗಬೇಕಾಗಿರುವುದು ನಮ್ಮ ಆದ್ಯತೆಯಾಗಬೇಕು.

- ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next