Advertisement

ಪ್ರೇಮದಲೀ ಹೊಡೆದಾಟದಲೀ ಯುವರ್ಸ್‌ ಫೈತ್‌ಫ‌ುಲೀ!

11:15 AM Jan 14, 2017 | |

“ಆತ ಒಂಥರಾ ಅನಾಥರು ಸಿನಿಮಾದ ಉಪೇಂದ್ರ ತರಹ. ಏನ್‌ ಕೆಲಸ ಹೇಳಿದ್ರು ಮಾಡ್ತಾನೆ …’ ಚಿತ್ರದಲ್ಲಿ ಈ ಸಂಭಾಷಣೆ ಬರುವ ಮುನ್ನವೇ ಪ್ರೇಕ್ಷಕರು ಅನಾಥರು ಸಿನಿಮಾದ ಉಪೇಂದ್ರ ಪಾತ್ರವನ್ನು ನೆನಪಿಸಿಕೊಂಡಿರುತ್ತಾರೆ. ಲೋಕದ ಗೊಡವೆ ಇಲ್ಲದ ವ್ಯಕ್ತಿಯೋರ್ವ ತನ್ನ ತಂಟೆಗೆ ಬರುವವರನ್ನು ಹೇಗೆ ಹಿಗ್ಗಾಮುಗ್ಗಾ ಥಳಿಸುತ್ತಾನೆ ಮತ್ತು ಅದಕ್ಕೆ ಕಾರಣ ಏನು ಎಂಬುದರ ಹಿನ್ನೆಲೆಯೊಂದಿಗೆ “ಲೀ’ ಸಿನಿಮಾ ತೆರೆದುಕೊಳ್ಳುತ್ತಾ ಹೋಗುತ್ತದೆ.

Advertisement

ಹೀಗೆ ಮುಂದೆ ಸಾಗುವ ಸಿನಿಮಾದಲ್ಲಿ “ಲೀ’ಯ ಹಿನ್ನೆಲೆಯನ್ನು ನಿರ್ದೇಶಕರು ಬಿಚ್ಚಿಡುತ್ತಾ ಹೋಗಿದ್ದಾರೆ. ಹಾಗಂತ “ಲೀ’ ನಿಮ್ಮಲ್ಲಿ ಒಂದಾಗುತ್ತಾನಾ ಎಂದರೆ ಉತ್ತರಿಸೋದು ತುಂಬಾ ಕಷ್ಟ. ಪ್ರೀತಿಗೆ ಅಡ್ಡ ಬರುವ ಧರ್ಮ ಒಂದು ಕಡೆಯಾದರೆ, ಅಧರ್ಮಿಗಳ ಕೈಯಲ್ಲಿ ಸಿಲುಕುವ ಪ್ರೇಮಿಗಳು ಮತ್ತೂಂದು ಕಡೆ. ಈ ಎರಡರ ಮಧ್ಯೆ ನಡೆಯುವ ಘಟನೆಗಳೇ “ಲೀ’ಯ ಜೀವಾಳ. ಹಾಗೆ ನೋಡಿದರೆ ನಿರ್ದೇಶಕರು ಮಾಡಿಕೊಂಡಿರುವ ಒನ್‌ಲೈನ್‌ ಚೆನ್ನಾಗಿದೆ.

ಧರ್ಮಕ್ಕಿಂತ ಪ್ರೀತಿ ಮುಖ್ಯ ಎಂಬುದನ್ನು ಹೇಳುವುದು ಅವರ ಸ್ಪಷ್ಟ ಉದ್ದೇಶ. ತುಂಬಾ ಸಿಂಪಲ್‌ ಆಗಿರುವ ಈ ಕಥೆಯನ್ನು ಅಷ್ಟೇ ನೇರವಾಗಿ, ಯಾವುದೇ ಗೊಂದಲಗಳಿಲ್ಲದೇ ನಿರೂಪಿಸುವ ಅವಕಾಶ ನಿರ್ದೇಶಕರಿಗಿದ್ದರೂ ಅದನ್ನು ಅವರು ಬಳಸಿಕೊಂಡಿಲ್ಲ. ಸಿನಿಮಾದಲ್ಲಿ ಆಗಾಗ ಬರುವ ಫ್ಲ್ಯಾಶ್‌ಬ್ಯಾಕ್‌, ಧುತ್ತನೆ ಬರುವ ಹಾಡುಗಳು ಸಿನಿಮಾದ ವೇಗಕ್ಕೆ ಬ್ರೇಕ್‌ ಹಾಕಿವೆ. ಹಾಗಾಗಿಯೇ “ಲೀ’ ಕಥೆ ಇಷ್ಟೊಂದು ಕ್ಲಿಷ್ಟಕರವಾಗಿದೆಯಾ ಎಂಬ ಭಾವನೆ ಕೂಡಾ ಬರುತ್ತದೆ. 

ಚಾರ್ಲಿ ಎಂಬ ಕುಂಗ್‌ಫ‌ು ಪಟು ಹಾಗೂ ಲೀಲಾ ಎಂಬ ತುಂಟ ಹುಡುಗಿಯ ನಡುವಿನ ಲವ್‌ಸ್ಟೋರಿಯೊಂದಿಗೆ ತೆರೆದುಕೊಳ್ಳುವ ಕಥೆಯಲ್ಲಿ ಸಾಕಷ್ಟು ಎಡರು ತೊಡರುಗಳು ಎದುರಾಗುತ್ತವೆ. ನಿರ್ದೇಶಕರು ಕಥೆಯನ್ನು ಮತ್ತಷ್ಟು ರೋಚಕವನ್ನಾಗಿಸಬೇಕೆಂಬ ಉದ್ದೇಶದಿಂದ ಮಾಫಿಯಾ, ದುಬೈ ಶೇಕ್‌, ಅಂಡರ್‌ವರ್ಲ್ಡ್ ಹೀಗೆ ಅನೇಕ ಅಂಶಗಳನ್ನು ಸೇರಿಸಿದ್ದಾರೆ. ಇದರ ಪರಿಣಾಮವಾಗಿ ಕಥೆ ಫೋಕಸ್‌ ಕಳೆದುಕೊಂಡಿದೆ. ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆಂಬ ಗೊಂದಲ ಪ್ರೇಕ್ಷಕರಿಗೆ ಕಾಡುತ್ತದೆ.

ಆ ಕಡೆ “ಲೀ’ಯ ಹಿನ್ನೆಲೆ, ಈ ಕಡೆ ಆತನ ಸದ್ಯದ ಸ್ಥಿತಿ, ರೌಡಿಗಳ ಅಟ್ಟಹಾಸ … ಹೀಗೆ ಸಿನಿಮಾದುದ್ದಕ್ಕೂ ಇಂತಹ ದೃಶ್ಯಗಳು ಇಣುಕುವ ಮೂಲಕ ಕಥೆಯ ಓಘಕ್ಕೆ ಧಕ್ಕೆ ತಂದಿದ್ದಾರೆ. ಮೊದಲೇ ಹೇಳಿದಂತೆ ಕಥೆಯ ಒನ್‌ಲೈನ್‌ ಗಂಭೀರ ವಿಷಯ ಹೊಂದಿದೆ. ಆದರೆ, ಕಾಮಿಡಿ ಮೇಲಿನ ಆಸೆಯಿಂದ ಚಿತ್ರದಲ್ಲಿ ಬರುವ ಕೆಲವು ದೃಶ್ಯಗಳು ಅನಾವಶ್ಯಕವಾಗಿ ಕಾಣುತ್ತವೆ. ಅದರಲ್ಲೂ ನಾಯಕನ ಉಳಿವಿಗಾಗಿ ಪ್ರಾಣಿಗಳು ಫೈಟ್‌ ಮಾಡೋದು, ನಾಯಕನ ಹಿನ್ನೆಲೆಯ ಬಗ್ಗೆ ಪ್ರಾಣಿಗಳು ಮಾತನಾಡೋದು …

Advertisement

ಇವೆಲ್ಲವೂ ಕಥೆಯಿಂದ ಹೊರಗುಳಿಯುವ ದೃಶ್ಯದಂತೆ ಕಾಣುತ್ತದೆ ಮತ್ತು ಅದನ್ನು ಅರಗಿಸಿಕೊಳ್ಳೋದು ಕೂಡಾ ಕಷ್ಟ. ಚಿತ್ರದಲ್ಲಿ ಬರುವ ಒಂದಷ್ಟು ಬೇಡದ ದೃಶ್ಯಗಳಿಗೆ ಕತ್ತರಿ ಹಾಕಿದರೆ ಸಿನಿಮಾದ ಅವಧಿ ಕಡಿಮೆಯಾಗುವ ಜೊತೆಗೆ “ಲೀ’ಯ ಕಥೆ ಒಂದಷ್ಟು ಸುಲಭ ಕೂಡಾ ಆಗಬಹುದು. ಚಿತ್ರದಲ್ಲಿ ಸಾಧುಕೋಕಿಲ ಹಾಗೂ ಚಿಕ್ಕಣ್ಣ ಅವರಿದ್ದರೂ ಅವರಿಂದ ಹೆಚ್ಚಿನ ಕಾಮಿಡಿಯನ್ನು ಇಲ್ಲಿ ನಿರೀಕ್ಷಿಸುವಂತಿಲ್ಲ. ಅವರನ್ನು ಮತ್ತಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.

ನಾಯಕ ಸುಮಂತ್‌ ಪಾತ್ರದ ಬಗ್ಗೆ ಹೇಳುವುದಾದರೆ ತಮ್ಮ ಪ್ರತಿಭೆ ತೋರಿಸಲು ಅವಕಾಶವಿರುವ ಪಾತ್ರ. ಹುಚ್ಚನಾಗಿ, ಪ್ರೇಮಿಯಾಗಿ, ರೌಡಿಗಳನ್ನು ಸದೆ ಬಡಿಯುವ ಆ್ಯಕ್ಷನ್‌ ಹೀರೋ ಆಗಿ ಸುಮಂತ್‌ ಚೆನ್ನಾಗಿ ನಟಿಸಿದ್ದಾರೆ. ಪ್ರತಿ ಶೇಡ್‌ನ‌ಲ್ಲೂ ಅವರ ಮ್ಯಾನರಿಸಂ ಇಷ್ಟವಾಗುತ್ತದೆ. ಸೆಂಟಿಮೆಂಟ್‌ ದೃಶ್ಯದಲ್ಲಿ ಸುಮಂತ್‌ಗೆ ಮತ್ತಷ್ಟು ಚೆನ್ನಾಗಿ ನಟಿಸುವ ಅವಕಾಶವಿತ್ತು. ನಾಯಕಿ ನಭಾ ನಟೇಶ್‌ ಹೆಚ್ಚೇನು ಗಮನ ಸೆಳೆಯೋದಿಲ್ಲ.

ಮತ್ತೂಬ್ಬ ನಾಯಕಿ ಸ್ನೇಹಾ ಗ್ಲಾಮರ್‌ಗಷ್ಟೇ ಸೀಮಿತ. ಉಳಿದಂತೆ ಸಾಧುಕೋಕಿಲ, ರಂಗಾಯಣ ರಘು, ರಾಹುಲ್‌ದೇವ್‌, ಜಯಶಂಕರ್‌, ಅಚ್ಯುತ್‌ ಕುಮಾರ್‌, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್‌, ತಬಲನಾಣಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. “ಹುಲಿರಾಜ’ ಬಾಲನಟ ಗಮನಸೆಳೆಯುತ್ತಾರೆ. ಆನಂದ್‌ರಾಜ್‌ ವಿಕ್ರಮ್‌ ಸಂಗೀತದ ಎರಡು ಹಾಡು ಇಷ್ಟವಾಗುತ್ತದೆ. ನಂದಕುಮಾರ್‌ ಛಾಯಾಗ್ರಹಣ ಚಿತ್ರಕ್ಕೆ ಪೂರಕ.

* ಚಿತ್ರ: ಲೀ
* ನಿರ್ಮಾಣ: ಸಾರಥಿ ಸತೀಶ, ದರ್ಶನ್‌ ಕೃಷ್ಣ, ಎಸ್‌.ಬಿ.ವಿನಯ್‌ 
* ನಿರ್ದೇಶನ: ಎಚ್‌.ಎಂ.ಶ್ರೀನಂದನ್‌
* ತಾರಾಗಣ: ಸುಮಂತ್‌, ನಭಾ ನಟೇಶ್‌, ಸ್ನೇಹಾ, ಸಾಧುಕೋಕಿಲ, ರಂಗಾಯಣ ರಘು, ರಾಹುಲ್‌ದೇವ್‌, ಜಯಶಂಕರ್‌, ಅಚ್ಯುತ್‌ ಕುಮಾರ್‌, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next