ಎಲ್ಲೋ, ಯಾರಿಗೋ, ಏನೋ ಆಗಿದೆ ಅಂತ ಮೆಸೇಜು ನೋಡಿ, “ಅಯ್ಯೋ ಪಾಪ’ ಎಂದು ಮರುಗಿ, ದೂರದಿಂದಲೇ ಸಾಮಾಜಿಕ ಕಳಕಳಿ ಮೆರೆದು ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಾವು, ಮನೆಯಲ್ಲಿ ಹಿರಿಯರಿಗೆ ಆರೋಗ್ಯ ಕೆಟ್ಟರೆ ಸ್ಪಂದಿಸದೆ, ಪಕ್ಕದ ಮನೆಯಲ್ಲಿ ಹಸಿವಿನಿಂದ ನರಳುವವರನ್ನು ಕಂಡೂ ಕಾಣದಂತೆ, ಓಣಿಯಲ್ಲಿ, ಊರಲ್ಲಿ ನೋವಿನಿಂದ ಬಳಲುವವರನ್ನು, ಕಷ್ಟದಲ್ಲಿರುವವರನ್ನು ಕಂಡು “ಇವರದು ಯಾವಾಗಲೂ ಇದೇ ಗೋಳು’ ಎಂದು ಉದಾಸೀನ ತೋರುತ್ತೇವೆ.
ಮೊದಲೆಲ್ಲ ಗಡಿಯಾರದಲ್ಲಿ ಅಲಾರಾಂ ಕಿವಿಗಡಚಿಕ್ಕುವಂತೆ ಸೌಂಡ್ ಮಾಡಿದಾಗ ನಿದ್ರಾದೇವಿಯ ತೋಳ ತೆಕ್ಕೆಯಿಂದ ಒಲ್ಲದ ಮನಸ್ಸಿನಿಂದ ಹೊರ ಬಂದು, “ಕರಾಗ್ರೆ ವಸತೇ ಲಕ್ಷ್ಮೀ’ ಎಂದು ದೇವತೆಯರನ್ನು ನೆನೆಸುತ್ತ ಬೆಳಗನ್ನು ಸ್ವಾಗತಿಸುತ್ತಿದ್ದೆವು. ಈಗ ಮೊಬೈಲ್ ರಾಣಿಯ ಠಣ್ ಠಣ್ ನಾದ ಕಿವಿಗೆ ಬಿದ್ದಾಗ, ಕಣ್ಣಲ್ಲಿ ನಿದ್ದೆ ತೇಲುತ್ತಿದ್ದರೂ ಯಾರ್ಯಾರು ಗುಡ್ ಮಾರ್ನಿಂಗ್ ಮೆಸೇಜು ಕಳಿಸಿದ್ದಾರೆಂದು ಚೆಕ್ ಮಾಡುವ ಉತ್ಸಾಹ ಮೂಡುತ್ತದೆ. ನಿದ್ದೆಗಣ್ಣಲ್ಲೇ ಡೇಟಾ ಆನ್ ಮಾಡಿ, ವಾಟ್ಸ್‌ಆ್ಯಪ್‌ನಲ್ಲಿ ಎಷ್ಟು ಟೀ ಕಪ್‌ಗ್ಳು, ಗುಲಾಬಿ ಹೂಗಳು ಬಂದಿವೆ ಎಂದು ಮುಖ ತೊಳೆಯುವ ಮೊದಲೇ ಮೊಬೈಲ್ ಮುಖ ಸವರುತ್ತೇವೆ.
ಹೊದ್ದ ಹೊದಿಕೆಯನ್ನು ಮೈ ಮೇಲೆಳೆದುಕೊಂಡು ಮಲಗಿಯೇ ಎಲ್ಲರಿಗೂ ರಿಪ್ಲೆ„ ಮಾಡುತ್ತಾ, ಫೇಸ್‌ಬುಕ್‌ಗೆ ಎಂಟ್ರಿ ಕೊಟ್ಟು ನಿನ್ನೆ ಅಪ್ ಲೋಡ್ ಮಾಡಿದ ಪಿಕ್‌ಗಳಿಗೆ ಎಷ್ಟು ಲೈಕ್ಸ್ ಬಂದಿವೆ ಎಂದು ಚೆಕ್ ಮಾಡುತ್ತ, ಹೆಚ್ಚು ಲೈಕ್ಸ್ ಬಂದಿದ್ದರೆ ಎವರೆಸ್ಟ್ ಏರಿದಷ್ಟು ಸಂತಸಪಡುತ್ತ, ಕಮ್ಮಿ ಇದ್ದರೆ ಗಾಳಿ ತೆಗೆದ ಸೈಕಲ್ ಗಾಲಿ ಹಾಗೆ ಮುಖ ಜೋತು ಬಿಟ್ಟುಕೊಂಡು, ಅವ್ವ ಕೊಟ್ಟ ಹಬೆಯಾಡುವ ಟೀಯನ್ನು ಎಡಗೈಯಲ್ಲಿ ಹಿಡಿದು ಬಲಗೈಯಲ್ಲಿ ಫ್ರೆಂಡ್ಸ್ ಜೊತೆ ಚಾಟ್ ಮಾಡುತ್ತಿರುವಾಗ, “ಟೀ ಆರುತ್ತೆ ಬೇಗ ಕುಡಿ’ ಎಂಬ ಅಪ್ಪನ ಏರುದನಿಗೆ ಬೆಚ್ಚಿ ಬಿದ್ದು ಆರಿದ ಟೀಯನ್ನು ಗಟಗಟ ಗಂಟಲಿಗೆ ಸುರಿಯುವುದರೊಳಗೆ, ಬ್ಯಾಟರಿ ಡೌನ್ ಎಂಬ ಸಂದೇಶ ಮೊಬೈಲಿನಲ್ಲಿ ಮೂಡುತ್ತದೆ. ಅದನ್ನು ನೋಡಿ “ಛೇ! ಎಷ್ಟು ಬೇಗ ಬ್ಯಾಟರಿ ಡೌನ್ ಆಯಿತು’ ಎಂದು ಗೊಣಗುತ್ತ ಮೊಬೈಲ್ ಬುಡಕ್ಕೆ ಪಿನ್ ಚುಚ್ಚಿ ಎರಡೆರಡು ನಿಮಿಷಕ್ಕೊಮ್ಮೆ ಎಷ್ಟು ಪರ್ಸೆಂಟ್ ಚಾರ್ಜ್ ಆಯ್ತು ಅಂತ ಕಣ್ಣಾಡಿಸುತ್ತಲೇ ಮುಂಜಾನೆಯ ಕರ್ಮಾದಿಗಳನ್ನು ಮುಗಿಸುತ್ತೇವೆ.
ಮನೆ ಹೊರಗೆ ಕಾಲಿಡುವಾಗಲೂ ಮೊಬೈಲ್ ಬೇಕೇ ಬೇಕು, ಇಲ್ಲದಿದ್ದರೆ ಉಸಿರೇ ನಿಂತಂತಾಗುತ್ತೆ. ಹೋದಲ್ಲೆಲ್ಲ ಮೊಬೈಲ್ ಹೊತ್ತು ಸಾಗುವುದು ಈಗ ಎಲ್ಲರಿಗೂ ಚಟವಾಗಿ ಬಿಟ್ಟಿದೆ. ಕಾಲೇಜಿರಬಹುದು, ದೇವಸ್ಥಾನವಿರಬಹುದು ಯಾವುದೇ ಫರಕು ಬೀಳದೇ ಕಣ್ಣುಗಳು ಯಾವಾಗಲೂ ಮೊಬೈಲ್ ಸ್ಕ್ರೀನ್ ಮೇಲೆಯೇ ನೆಟ್ಟಿರುತ್ತವೆ. ಬಲಗೈ ತೋರುಬೆರಳು ಬಿಟ್ಟೂ ಬಿಡದೆ ಸ್ಕ್ರೀನ್‌ನ್ನು ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ ಸರಿಸುತ್ತಲೇ ಇರುತ್ತೆ. ಪಬ್ಲಿಕ್ ಪ್ಲೇಸ್‌ಗಳಲ್ಲಿ ಇತರರು ಏನು ಮಾಡುತ್ತಿದ್ದಾರೆ? ಸುತ್ತು ಮುತ್ತ ಏನು ನಡೆಯುತ್ತಿದೆ? ಎನ್ನುವುದರ ಪರಿವೆ ಇಲ್ಲದಷ್ಟು ಮೊಬೈಲ್‌ನಲ್ಲಿ ಮುಳುಗಿ ಹೋಗಿ, ಪಕ್ಕಕ್ಕೆ ಫ್ರೆಂಡ್ಸ್ ಇದ್ದರೂ ಅವರೊಂದಿಗೆ ಮಾತಾಡುವುದನ್ನು ಬಿಟ್ಟು, ಎಲ್ಲೋ ಇರುವ ಅಪರಿಚಿತ ಫ್ರೆಂಡ್ಸ್‌ಗೆ ಸ್ಟೈಲಿ ಕಳಿಸೋದು, ಮತ್ತು ಕಂಬೈನ್ ಸ್ಟಡಿ ಮಾಡೋಣ ಬಾ ಅಂತ ಕರೆದು, ಎಲ್ಲರೂ ಒಂದೊಂದು ಮೂಲೆಯಲ್ಲಿ ಯಾರಧ್ದೋ ಜೊತೆ ಚಾಟ್ ಮಾಡುತ್ತ ಕುಳಿತು ಕೊನೆಗೆ “ಅಯ್ಯೋ! ಇವತ್ತು ಡಿಸ್ಕಸ್ ಮಾಡೋಕೆ ಆಗಲಿಲ್ಲ’ ಅಂತ ಗೊಣಗುವುದು ಕಾಮನ್ ಆಗಿ ಬಿಟ್ಟಿದೆ. ಸೋಶಿಯಲ್ ನೆಟ್‌ವರ್ಕ್‌ನ ದುಷ್ಪರಿಣಾಮಗಳ ಬಗ್ಗೆ ಅರಿತಿದ್ದರೂ ಆ ಗೀಳಿನಿಂದ ನಮಗೆ ಹೊರಬರಲಾಗುತ್ತಿಲ್ಲ. ಮೊಬೈಲ್‌ಗೆ ದಾಸರಾಗಿ ಹೆತ್ತವರ ಮಾತಿಗೆ ಕವಡೆ ಕಿಮ್ಮತ್ತು ಕೊಡದೆ ಅವರನ್ನು ಚಿಂತೆಗೀಡು ಮಾಡುತ್ತಿದ್ದೇವೆ. ನಮ್ಮ ಎಲ್ಲ ರೀತಿಯ ಹಸಿವುಗಳಿಗೂ ಮೊಬೈಲಿನಲ್ಲಿಯೇ ಫುಡ್ ಸರ್ಚ್ ಮಾಡುವ ಚಟವನ್ನು ಚೆನ್ನಾಗಿಯೇ ಅಂಟಿಸಿಕೊಂಡಿದ್ದೇವೆ.
ಎಲ್ಲೋ, ಯಾರಿಗೋ, ಏನೋ ಆಗಿದೆ ಅಂತ ಮೆಸೇಜು ನೋಡಿ, “ಅಯ್ಯೋ ಪಾಪ’ ಎಂದು ಮರುಗಿ, ದೂರದಿಂದಲೇ ಸಾಮಾಜಿಕ ಕಳಕಳಿ ಮೆರೆದು ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಾವು, ಮನೆಯಲ್ಲಿ ಹಿರಿಯರಿಗೆ ಆರೋಗ್ಯ ಕೆಟ್ಟರೆ ಸ್ಪಂದಿಸದೆ, ಪಕ್ಕದ ಮನೆಯಲ್ಲಿ ಹಸಿವಿನಿಂದ ನರಳುವವರನ್ನು ಕಂಡೂ ಕಾಣದಂತೆ, ಓಣಿಯಲ್ಲಿ, ಊರಲ್ಲಿ ನೋವಿನಿಂದ ಬಳಲುವವರನ್ನು, ಕಷ್ಟದಲ್ಲಿರುವವರನ್ನು ಕಂಡು “ಇವರದು ಯಾವಾಗಲೂ ಇದೇ ಗೋಳು’ ಎಂದು ಉದಾಸೀನ ತೋರುತ್ತೇವೆ.
ಇಲ್ಲಿ ಸಮಾನ ಮನಸ್ಕರೊಂದಿಗೆ ಭಾವನೆಗಳನ್ನು ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಅವಕಾಶವಿದೆ. ಪಿಕ್, ವಿಡಿಯೊ, ಮೋಜು ಮಸ್ತಿ, ಮ್ಯೂಜಿಕ್, ನಾಲೆಡುj, ಬಿಸಿನೆಸ್ ಹೀಗೆ ಎಲ್ಲದಕ್ಕೂ ಮೊಬೈಲ್‌ನಲ್ಲಿ ಜಾಗವಿದೆ. ಹಾಗಂತ ಎದ್ದರೂ ಬಿದ್ದರೂ ಅದರಲ್ಲಿಯೇ ಮುಳುಗಿದರೆ ನಮಗೇ ಅಪಾಯ. ಭವಿಷ್ಯದ ಗತಿಯೂ ಅಧೋಗತಿ. ಮೊಬೈಲ್‌ನ್ನು ಇತಿಮಿತಿಯಲ್ಲಿ ಬಳಸಿ ನಿಸರ್ಗದತ್ತ ಮಾನವ ಸಹಜ ಪ್ರೀತಿ ವಿಶ್ವಾಸ ಗೌರವ ಭಾವನೆಗಳನ್ನು ಹಂಚಿಕೊಂಡು, ಸಮಾಜ, ಕುಟುಂಬ, ಸ್ನೇಹಿತರ ಜೊತೆಗೆ ಬೆರೆತು ಬ್ಯಾಲನ್ಸ್$x ಜೀವನ ಸಾಗಿಸೋಣ. ಅಮೂಲ್ಯವಾಗಿರುವ ಮಾನವ ಜೀವನದ ಮೌಲ್ಯ ಉಳಿಸಿಕೊಳ್ಳೋಣ.
ಕವಿ ಜಿ.ಎಸ್.ಎಸ್‌ರವರ
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ ಎಂಬ ಭಾವಗೀತೆಯನ್ನು
ದಿನವೂ ಹುಡುಕಿದೆ ಇಲ್ಲದ ಭಾವಗಳ
ಜೀವವಿರದ ಡಬ್ಬಿಯೊಳಗೆ
ಪಕ್ಕದಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ
ಎಂದು ತಿರುಚಿ ಹಾಡಿ ಪಶ್ಚಾತಾಪ ಪಡುವ ಪ್ರಸಂಗ ಬರುವ ಮುನ್ನವೇ ಬನ್ನಿ ಮೊಬೈಲ್ ಗೀಳಿನಿಂದ ಹೊರ ಬರೋಣ. ವಾಸ್ತವ ಜೀವನದ ಲೋಕಕ್ಕೆ ಸ್ಪಂದಿಸೋಣ…
ಜಯಶ್ರೀ ಅಬ್ಬಿಗೇರಿ. ಬೆಳಗಾವಿ