Advertisement

ಪ್ರೀತಿ ಕದ್ದವರ ಅನುರಾಗ ಅನುಬಂಧ

05:19 AM Feb 23, 2019 | |

“ಮಾತ್‌ ಕೊಟ್ಳು, ಮನಸೂ ಕೊಟ್ಳು. ಹತ್ತಿರ ಬರ್ತಾ ಇದ್ದಂಗೆ ಕೈ ಕೊಟ್ಳು…’ ಹೀಗೆ ಹೇಳುತ್ತಲೇ ನಾಯಕ ಸಿದ್ಧಾರ್ಥ್ ಕಣ್ಣಾಲಿಗಳು ತುಂಬಿಕೊಂಡಿರುತ್ತವೆ. ಈ ಮಾತು ಬರುವ ಹೊತ್ತಿಗೆ ಸಿದ್ಧಾರ್ಥ್ ಹುಡುಗಿಯೊಬ್ಬಳನ್ನು ಮನಸಾರೆ ಒಪ್ಪಿ ಮದ್ವೆಯಾಗುವ ಕನಸನ್ನೂ ಕಂಡಿರುತ್ತಾನೆ. ಆದರೆ, ಅಲ್ಲೊಂದು ತಿರುವು ಅವನ ಆಸೆ-ಆಕಾಂಕ್ಷೆಗಳನ್ನೆಲ್ಲಾ ನುಚ್ಚು ನೂರು ಮಾಡಿಬಿಡುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಚಿತ್ರದ ಒನ್‌ಲೈನ್‌.

Advertisement

ಇಷ್ಟು ಹೇಳಿದ ಮೇಲೆ ಇದೊಂದು ಲವ್‌ಸ್ಟೋರಿ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇಲ್ಲಿ ಪ್ರೀತಿ, ಪ್ರೇಮ, ದ್ವೇಷ, ಹಾಸ್ಯ, ಸಂಬಂಧಗಳ ಮೌಲ್ಯ ಇತ್ಯಾದಿ ಎಲ್ಲವೂ ಇದೆ. ಹಾಗೆ ಹೇಳುವುದಾದರೆ, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಚಿತ್ರಗಳ ಸಂಖ್ಯೆ ಕಮ್ಮಿಯಾಗುತ್ತಿದೆ ಎನ್ನುವವರಿಗೆ “ಕದ್ದು ಮುಚ್ಚಿ’ ಒಂದು ಫ್ಯಾಮಿಲಿ ಓರಿಯೆಂಟೆಡ್‌ ಚಿತ್ರವಾಗಿ ಗಮನಸೆಳೆಯುತ್ತದೆ. ಅದರಲ್ಲೂ ಮನರಂಜನೆ ಜೊತೆಗೆ ಒಂದಷ್ಟು ಭಾವನೆಗಳ ಜೊತೆ ಆಟವಾಡುವಂತಹ ಕಥೆ ಇಲ್ಲಿ ಮೇಳೈಸಿದೆ ಎಂಬುದೇ ಸಮಾಧಾನದ ವಿಷಯ.

ಸಾಮಾನ್ಯವಾಗಿ, ಈಗಿನ ಯುವಕರು ಆ್ಯಕ್ಷನ್‌ ಪ್ರಿಯರು. ಅವರಿಗೆ ಇಲ್ಲಿ ಆ್ಯಕ್ಷನ್‌ ಜೊತೆಗೆ ಮುದ್ದಾದ ಲವ್‌ಸ್ಟೋರಿ ಕೂಡ ಬೋನಸ್‌ ಎನ್ನಬಹುದು. ಕಥೆಯಲ್ಲಿ ಹೇಳಿಕೊಳ್ಳುವಷ್ಟು ಹೊಸತನ ಇಲ್ಲದಿದ್ದರೂ, ನಿರೂಪಣೆಯಲ್ಲಿ ಕೊಂಚ ಹೊಸತನವಿದೆ. ಸಿನಿಮಾದ ಮೊದಲರ್ಧ ನೋಡುಗರನ್ನು ಹಿಡಿದು ಕೂರಿಸುವ ತಾಕತ್ತು ಹೊಂದಿಲ್ಲ. ಎಲ್ಲೋ ಒಂದು ಕಡೆ ಸೀಟಿಗೆ ಒರಗಿಕೊಂಡು ತಾಳ್ಮೆ ಕಳೆದುಕೊಂಡವರಿಗೆ ಚೆಂದದ ಹಾಡೊಂದು ಕಾಣಿಸಿಕೊಂಡು ಕೊಂಚ ಸಮಾಧಾನಕ್ಕೆ ಕಾರಣವಾಗುತ್ತದೆ.

ಇಲ್ಲಿ ಹಾಸ್ಯಕ್ಕೆ ಅರ್ಥವಿಲ್ಲ. ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುವ ಹಾಸ್ಯ ದೃಶ್ಯಗಳು ಹಾಸ್ಯಾಸ್ಪದ ಎನಿಸಿವೆ. ಅದು ಬಿಟ್ಟರೆ, ಇಲ್ಲಿ ಅಪ್ಪ,ಅಮ್ಮ ಇದ್ದೂ, ಕೋಟಿ ಕೋಟಿ ಹಣವಿದ್ದರೂ ಹೆತ್ತವರ ಪ್ರೀತಿ ಕಾಣದ ನಾಯಕನ ಮನಸ್ಥಿತಿ ಹೇಗಿರುತ್ತೆ, ಸಂಬಂಧಗಳೇ ಕಳೆದುಹೋಗುತ್ತಿರುವ ಈ ದಿನಮಾನದಲ್ಲಿ ಸಂಬಂಧಗಳ ಮೌಲ್ಯ ಹೇಗಿದೆ ಎಂಬುದನ್ನಿಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಬಹುಶಃ, ಈ ಎರಡು ಅಂಶಗಳು ಚಿತ್ರದ ವೇಗಕ್ಕೆ ಕಾರಣವಾಗಿವೆ.

ಉಳಿದಂತೆ, ಒಂದೇ ಮನೆಯಲ್ಲಿ ನಡೆಯುವ ಮದುವೆ ಸಂಭ್ರಮವನ್ನು ಸೆರೆಹಿಡಿದಿರುವ ರೀತಿ ನೋಡುಗರಿಗೆ ಇಷ್ಟವಾಗದೇ ಇರದು. ಕೆಲ ಅನಗತ್ಯ ದೃಶ್ಯಗಳು, ಪಾತ್ರಗಳು ಬೇಕಿರಲಿಲ್ಲ. ಆದರೂ, ಆಗಾಗ ಹಾಡುಗಳು ಕಾಣಿಸಿಕೊಂಡು ಕೆಲ ತಪ್ಪುಗಳನ್ನು ಮರೆಸುತ್ತವೆ. ಇಲ್ಲಿ ಸಾಕಷ್ಟು ಕಲಾವಿದರ ದಂಡೇ ಇದೆ. ಅವರನ್ನು ಇನ್ನಷ್ಟು ಸರಿಯಾಗಿ ಬಳಸಿಕೊಳ್ಳಬಹುದಿತ್ತು. ಹಾಡುಗಳಿಗೆ ಕೊಟ್ಟಷ್ಟು ಗಮನವನ್ನು ಸ್ವಲ್ಪ ಹಿನ್ನೆಲೆ ಸಂಗೀತಕ್ಕೂ ಕೊಡಬಹುದಿತ್ತು.

Advertisement

ಚಿತ್ರಕಥೆಗೆ ಇನ್ನಷ್ಟು ಬಿಗಿ ಹಿಡಿತ ಇದ್ದಿದ್ದರೆ, ಮತ್ತಷ್ಟು ವೇಗ ಹೆಚ್ಚುತ್ತಿತ್ತು. ಹಾಡುಗಳಿಗೆ ಸರಿಯಾದ ಜಾಗ ಕಲ್ಪಿಸಿಕೊಡುವಲ್ಲಿ ಗಮನ ಕೊಟ್ಟಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತೇನೋ ಅಂತಹ ಸಾಧ್ಯತೆ ಇಲ್ಲಿ ತಪ್ಪಿಹೋಗಿದೆ. ಕೆಲ ದೃಶ್ಯಗಳಿಗೆ ಲಾಜಿಕ್‌ ಎಂಬುದೇ ಇಲ್ಲ. ಆದರೂ ಸುಮ್ಮನೆ ನೋಡಿಸಿಕೊಂಡು ಹೋಗುವ ಮ್ಯಾಜಿಕ್‌ ಅಂತೂ ಇದೆ. ಸಿದ್ಧಾರ್ಥ್ ಶ್ರೀಮಂತ ಹುಡುಗ. ಆದರೆ, ಸದಾ ಕೆಲಸದ ಮೇಲೆ ಪ್ರೀತಿ ತೋರುವ ಅಪ್ಪ, ಅಮ್ಮನ ಪ್ರೀತಿಯನ್ನೇ ಕಾಣದವನು.

ಎಲ್‌ಕೆಜಿಯಿಂದ ಬಿಬಿಎಂ ಓದಿನವರೆಗೂ ಪೋಷಕರ ಪ್ರೀತಿ ಗೊತ್ತಿಲ್ಲದ ಸಿದ್ಧಾರ್ಥ್, ಮಲೆನಾಡ ಕಡೆ ಪಯಣ ಬೆಳೆಸುತ್ತಾನೆ. ಆಕಸ್ಮಿಕವಾಗಿ ಅಲ್ಲೊಂದು ಹುಡುಗಿ ಎದುರಾಗಿ, ಅವಳ ಹಿಂದಿಂದೆ ಅಲೆದು, ಅವಳ ಪ್ರೀತಿ ಪಡೆಯುವ ನಾಯಕ, ಇನ್ನೇನು ಮದ್ವೆ ಆಗುವ ಕನಸು ಕಾಣುವಾಗಲೇ, ಪ್ರೀತಿಸಿದಾಕೆ ಅವನಿಂದ ದೂರವಾಗುತ್ತಾಳೆ, ಮನೆಯವರು ಬೇರೊಬ್ಬ ಹುಡುಗನನ್ನು ನೋಡಿ ಮದ್ವೆ ಮಾಡಲು ಮುಂದಾಗುತ್ತಾರೆ. ಆಮೇಲೆ ಏನಾಗುತ್ತೆ ಎಂಬುದು ಕಥೆ. ಕುತೂಹಲವಿದ್ದರೆ, “ಕದ್ದು ಮುಚ್ಚಿ’ ನೋಡಬಹುದು.

ವಿಜಯ್‌ ಸೂರ್ಯ ಇಲ್ಲಿ ನಟನೆಗಿಂತ ಡ್ಯಾನ್ಸ್‌ ಮತ್ತು ಫೈಟ್ಸ್‌ನಲ್ಲಿ ಗಮನಸೆಳೆಯುತ್ತಾರೆ. ಮೇಘಶ್ರೀ ನಿರ್ದೇಶಕರು ಹೇಳಿಕೊಟ್ಟಿದ್ದನ್ನಷ್ಟೇ ಮಾಡಿದಂತಿದೆ. ಚಿಕ್ಕಣ್ಣನ ಕಾಮಿಡಿ ವರ್ಕೌಟ್‌ ಆಗಿಲ್ಲ. ಅವರಿಲ್ಲಿ ಮತ್ತೆ ಕಾಮಿಡಿ ಪೀಸ್‌ ಎಂಬುದು ಮತ್ತೆ ಸಾಬೀತಾಗಿದೆ. ದೊಡ್ಡಣ್ಣ, ಸುಚೇಂದ್ರ ಪ್ರಸಾದ್‌ ಇತರರು ಸಿಕ್ಕ ಪಾತ್ರವನ್ನು ಸಲೀಸಾಗಿ ತೂಗಿಸಿಕೊಂಡು ಹೋಗಿದ್ದಾರೆ. ಹಂಸಲೇಖ ಸಂಗೀತದಲ್ಲಿ ಎರಡು ಹಾಡು ಪರವಾಗಿಲ್ಲ. ವಿಲಿಯಮ್‌ ಡೇವಿಡ್‌ ಛಾಯಾಗ್ರಹಣದಲ್ಲಿ ಮಲೆನಾಡ ಸೊಬಗಿದೆ.

ಚಿತ್ರ: ಕದ್ದು ಮುಚ್ಚಿ
ನಿರ್ಮಾಣ: ಮಂಜುನಾಥ್‌
ನಿರ್ದೇಶನ: ವಸಂತ್‌ರಾಜ್‌
ತಾರಾಗಣ: ವಿಜಯ್‌ ಸೂರ್ಯ, ಮೇಘಶ್ರೀ, ಸುಚೇಂದ್ರ ಪ್ರಸಾದ್‌, ಚಿಕ್ಕಣ್ಣ, ದೊಡ್ಡಣ್ಣ, ಹೊನ್ನವಳ್ಳಿ ಕೃಷ್ಣ, ವಾಣಿಶ್ರೀ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next