ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮೀನ್ (18) ಬಂಧಿತ ಆರೋಪಿ.
ತುರ್ತು ಕರೆಗೆ ಇರುವ 112 ಸಂಖ್ಯೆಗೆ ವ್ಯಕ್ತಿಯೊಬ್ಬ ಕರೆ ಹಾಗೂ ಸಂದೇಶವನ್ನು ಕಳುಹಿಸಿದ್ದಾನೆ. ಇದರಲ್ಲಿ “ಸಿಎಂ ಯೋಗಿ ಅವರನ್ನು ಶೀಘ್ರದಲ್ಲಿ ಕೊಲೆ ಮಾಡುತ್ತೇನೆ” ಎಂದು ಬರೆದಿದ್ದ. ಈ ಬಗ್ಗೆ ಪೊಲೀಸರು ಎಚ್ಚೆತ್ತುಕೊಂಡು ತನಿಖೆ ಆರಂಭಿಸಿದ್ದರು.
ತನಿಖೆಯ ಜಾಡನ್ನು ಹತ್ತಿ ಹೋದ ಪೊಲೀಸರಿಗೆ ಮೊಬೈಲ್ ಯಾರದೆಂದು ಗೊತ್ತಾಗಿದೆ. ಮೊಬೈಲ್ ಮಾಲಕರ ಬಳಿ ಹೋದಾಗ ಮೊಬೈಲ್ ಸಜ್ಜದ್ ಹುಸೇನ್ ಎಂಬುವ ವ್ಯಕ್ತಿಯದೆಂದು ತಿಳಿದಿದೆ. ಆದರೆ ಅವರ ಮೊಬೈಲ್ ನ್ನು ಎರಡು ದಿನದ ಹಿಂದೆಯೇ ಯಾರೋ ಕಳ್ಳತನ ಮಾಡಿಕೊಂಡು ಹೋಗಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಸಜ್ಜದ್ ಹುಸೇನ್ ಅವರ ಮೊಬೈಲ್ ಕದ್ದು ಅದರಲ್ಲಿ ಯುಪಿ ಸಿಎಂಗೆ ಜೀವ ಬೆದರಿಕೆಯನ್ನು ಹಾಕಿರುವ ವ್ಯಕ್ತಿಯ ಹುಡುಕಾಟ ನಡೆಸಿದಾಗ ಪೊಲೀಸರ ಕೈಗೆ ಅಮೀನ್ ಎಂಬ ಅಪ್ರಾಪ್ತ ಸಿಕ್ಕಿಬಿದ್ದಿದ್ದಾನೆ.
ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, “ನಾನು ಸಜ್ಜದ್ ಹುಸೇನ್ ಅವರ ಮಗಳನ್ನು ಪ್ರೀತಿಸುತ್ತಿದ್ದೇನೆ. ಅವರಿಗೆ ನಮ್ಮಿಬ್ಬರ ಸಂಬಂಧ ಇಷ್ಟವಿಲ್ಲ. ಅದಕ್ಕಾಗಿ ಅವರನ್ನು ಸಿಕ್ಕಿಸಿ ಹಾಕಬೇಕೆಂದು, ಅವರ ಮೊಬೈಲ್ ಪೋನನ್ನು ಕದ್ದು, ಅದರ ಮೂಲಕ ಈ ಕೃತ್ಯವನ್ನು ಎಸಗಿದೆ” ಎಂದು ಪೊಲೀಸರ ಮುಂದೆ ತಪ್ಪೋಪ್ಪಿಕೊಂಡಿದ್ದಾನೆ.
ಸದ್ಯ ಪೊಲೀಸರು ಆರೋಪಿಯ ವಿರುದ್ಧ ಫೋನ್ ಕಳ್ಳತನ ಮತ್ತು ಇತರ ಕಠಿಣ ಸೆಕ್ಷನ್‌ಗಳ ಆರೋಪ ಹೊರಿಸಲಾಗಿದ್ದು, ಬುಧವಾರ ಲಕ್ನೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.