ಹುಬ್ಬಳ್ಳಿ: ತಂದೆ, ತಾಯಿ ಹಾಗೂ ಗುರುಗಳನ್ನು ಗೌರವಿಸುವುದು, ಪೂಜ್ಯ ಭಾವನೆಯಿಂದ ಕಾಣುವುದು ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಬಂದಿದೆ. ಇವರನ್ನು ದೇವರ ಭಾವನೆಯಲ್ಲಿ ಕಾಣುವ ಪರಂಪರೆ ನಮ್ಮ ದೇಶದಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆದ ಲಿಂ|ಮಹಾದೇವಪ್ಪ ಸಿದ್ಧರಾಮಪ್ಪ ಪುರದ ಹಾಗೂ ಬಸವಣ್ಣೆಮ್ಮ ಮಹಾದೇವಪ್ಪ ಪುರದ ಮಾತೃವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾತೃವಂದನಾ ಕಾರ್ಯಕ್ರಮ ಅನುಕರಣೀಯ ಹಾಗೂ ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಣಕವಾಡ ಶ್ರೀ ಗುರು ಅನ್ನದಾನೀಶ್ವರ ದೇವಮಂದಿರ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಮಹಾ ಸ್ವಾಮೀಜಿ ಆಶೀರ್ವಚನ ನೀಡಿ, ವಯಸ್ಸಾದ ತಂದೆ-ತಾಯಿಯನ್ನು ಗೌರವದಿಂದ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಪಾಲಕರು ಮಕ್ಕಳನ್ನು ಹೇಗೆ ಲಾಲನೆ-ಪಾಲನೆ ಮಾಡಿ ಪೋಷಿಸುತ್ತಾರೋ ಹಾಗೆಯೇ ಮಕ್ಕಳು ಸಹ ಪಾಲಕರನ್ನು ಗೌರವದಿಂದ ಕಾಣಬೇಕು. ಇಳಿವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು. ಜೀವನ ನೀಡಿದ ಪಾಲಕರನ್ನು ಸರಿಯಾಗಿ ನೋಡಿಕೊಳ್ಳದಿರುವುದು ವಿಷಾದದ ಸಂಗತಿ ಎಂದರು.
ಶ್ರೀ ಹಾಲಸಿದ್ಧರಾಮ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವಕೀಲ ಎಸ್.ಎಂ.ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಡಾ| ಜಿ.ಬಿ.ಪಾಟೀಲ ಮಾತನಾಡಿದರು.
ಡಾ|ಜಯಶೀಲಾ, ದಾಕ್ಷಾಯಿಣಿ, ಡಾ| ಉಮೇಶ ಪುರದ, ಶಾರದಾ ಸಿ.ಸವಡಿ, ಸುಶೀಲಾ ಮ.ಕುದರಿ, ಸಾವಮ್ಮ ಗೋಣಿ, ಶಾಂತಾ ಯಾದವಾಡ, ಡಾ| ಈಶ್ವರ ಸವಡಿ, ಡಾ| ಶಂಭು ಪುರದ ಇನ್ನಿತರರಿದ್ದರು.