ಜೇವರ್ಗಿ: ಪಟ್ಟಣದ ವಿಜಯಪುರ ರಸ್ತೆ ಶಿಕ್ಷಕರ ಕಾಲೋನಿ ಹತ್ತಿರದ ಗೋಗಿ ಲೇಔಟ್ ಬಡಾವಣೆಯಲ್ಲಿ ಆಯೋಜಿಸಲಾದ ಕಮಲ ಜಾತ್ರೆಗೆ ಶುಕ್ರವಾರ ಅದ್ಧೂರಿ ಚಾಲನೆ ದೊರಕಿದೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜೇವರ್ಗಿ ಪಟ್ಟಣದಲ್ಲಿ ಆಯೋಜಿಸಲಾದ ಕಮಲ ಜಾತ್ರೆಗೆ ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕರಾದ ಎಂ.ವೈ. ಪಾಟೀಲ, ಶಶೀಲ ನಮೋಶಿ, ದೊಡ್ಡಪ್ಪಗೌಡ ಪಾಟೀಲ ಜಂಟಿಯಾಗಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಮಂಡಿಸಿದ ಬಜೆಟ್ ಕುರಿತು ಹಾಗೂ ಕೇಂದ್ರದ ಮೋದಿ ಸರ್ಕಾರದ ಯೋಜನೆಗಳ ಕುರಿತು ಚಾಯ್ ಪೇ ಚರ್ಚಾ ನಡೆಸಲಾಯಿತು. ಬೆಂಗಳೂರಿನ ಖ್ಯಾತ ಕಲಾವಿದರಿಂದ ಜಾದು ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಬಿಸಿಲಿನ ಕಾರಣ ಜನ ಹೆಚ್ಚಾಗಿ ಜಾತ್ರೆಗೆ ಆಗಮಿಸಿರಲಿಲ್ಲ. ಸಂಜ ಎ ಸಹಸ್ರಾರು ಕುಟುಂಬದ ಸದಸ್ಯರೊಡನೆ ಆಗಮಿಸಿದ್ದು ಕಂಡು ಬಂತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಾಧನೆಗಳ ಕುರಿತು ಛಾಯಾಚಿತ್ರ ಪ್ರದರ್ಶನ ಜತೆಗೆ ಚಿಕ್ಕ ಚಿಕ್ಕ ಮಕ್ಕಳು ಹಾಗೂ ಯುವಕರು ಕೈ ಮೇಲೆ ಕಮಲ ಚಿತ್ರ ಬಿಡಿಸಿಕೊಂಡು ಸಂತಸ ಪಟ್ಟರು. ಕಡಿಮೆ ದರದಲ್ಲಿ ಆಹಾರ ಮಳಿಗೆ ಕೂಡ ತೆರೆಯಲಾಗಿತ್ತು. ಒಟ್ಟಾರೆ ಪಟ್ಟಣ ಸೇರಿದಂತೆ ತಾಲೂಕಿನ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಕಮಲ ಜಾತ್ರೆ ಒಂದು ಹೊಸ ಅನುಭವ ನೀಡಿದಂತಾಗಿದೆ.
ಸೆಲ್ಫಿಗೆ ಮುಗಿಬಿದ್ದ ಜನರು: ಜಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಬಿಎಸ್‌ವೈ ಭಾವಚಿತ್ರಗಳೊಂದಿಗೆ ಯುವಕರು ಸೆಲ್ಫಿ ತೆಗೆದುಕೊಂಡರು.
ಸೆಲ್ಫಿತೆಗೆದುಕೊಂಡ ಕ್ಷಣಾರ್ಧದಲ್ಲಿಯೇ ಚಿತ್ರ ಪ್ರತಿಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು ಬಲೂನ್ ಒಡೆದು, ಜೋಕಾಲಿ, ಉಯ್ನಾಲೆ ಆಟ ಆಡಿ ಸಂತಸ ಪಟ್ಟರೆ ವೃದ್ದರು ಚಾಯ್ ಪೇ ಚರ್ಚಾದಲ್ಲಿ ಬಿಜಿಯಾಗಿದ್ದರು. ಮಹಿಳೆಯರು ಬಣ್ಣ ಬಣ್ಣದ ಬಳೆ ತೊಟ್ಟು ಖುಷಿಪಟ್ಟರು.