ಬೆಂಗಳೂರು: ಡೀಸೆಲ್ ದರ ಏರಿಕೆ ಹಾಗೂ ಥರ್ಡ್‌ಪಾರ್ಟಿ ಪ್ರೀಮಿಯಂ ದರ ಹೆಚ್ಚಳ ಖಂಡಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಮುಷ್ಕರ ಬಿಸಿ ತುಸು ಜೋರಾಗಿ ತಟ್ಟಿತು.
ಮೊದಲ ದಿನಕ್ಕೆ ಹೋಲಿಸಿದರೆ ಮುಷ್ಕರದ ಕಾವು ಕೊಂಚ ತೀವ್ರವಾಗಿತ್ತು. ಯಶವಂತಪುರದ ಆರ್‌ಎಂಸಿ ಯಾರ್ಡ್‌ನಲ್ಲಿಯ 500ಕ್ಕೂ ಅಧಿಕ ಲಾರಿ ಏಜೆಂಟರುಗಳು ಕಚೇರಿಗಳಿಗೆ ಬೀಗ ಹಾಕಿ ಬೆಂಬಲ ಸೂಚಿಸಿದರು. ವೈಟ್‌ಫೀಲ್ಡ್‌ನಲ್ಲಿರುವ ಗೂಡ್‌ಶೆಡ್‌ಗೆ ಬಂದಿಳಿದ ಸರಕುಗಳನ್ನು ಸಾಗಿಸಲು ಲಾರಿಗಳು ಮುಂದೆಬರಲಿಲ್ಲ.
ನಿತ್ಯ ಆರ್‌ಎಂಸಿ ಯಾರ್ಡ್‌ನಲ್ಲೇ ಮೂರು ಸಾವಿರ ಲಾರಿಗಳು ಬಂದುಹೋಗುತ್ತವೆ. ಆದರೆ, ಇಡೀ ದಿನ 50 ಲಾರಿಗಳು ಕೂಡ ಬರಲಿಲ್ಲ. ಅದೇ ರೀತಿ, ಗೂಡ್‌ಶೆಡ್‌ನಲ್ಲಿ ಕೂಡ ಸಾವಿರ ಲಾರಿಗಳು ನಿಂತಿದ್ದು ಕಂಡುಬಂತು. ದೊಡ್ಡಬಳ್ಳಾಪುರ, ನೆಲಮಂಗಲದಲ್ಲೂ ಇದೇ ಸ್ಥಿತಿ ಇತ್ತು.
ಮೊದಲ ದಿನ ಮುಷ್ಕರ ಪರಿಣಾಮಕಾರಿ ಇರಲಿಲ್ಲ. ಎರಡನೇ ದಿನ ಕಾವು ಏರತೊಡಗಿದೆ. ಟ್ರಕ್ ಟರ್ಮಿನಲ್, ರೈಲ್ವೆ ಗೂಡ್‌ಶೆಡ್‌ಗಳು, ಪ್ರಮುಖ ನಗರಗಳ ಆರ್‌ಎಂಸಿ ಯಾರ್ಡ್‌ಗಳಲ್ಲಿ ಸಾಲು-ಸಾಲಾಗಿ ಲಾರಿಗಳು ನಿಂತಿವೆ. ಇದರಿಂದ ಸರಕು-ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿ, ಕೋಟ್ಯಂತರ ರೂ. ನಷ್ಟವಾಗಿದೆ.
ಆದರೆ, ಶೇ. 10ರಿಂದ 20ರಷ್ಟು ಲಾರಿಗಳು ಮಾತ್ರ ಎಂದಿನಂತೆ ಕಾರ್ಯಾಚರಣೆ ನಡೆಸಿವೆ ಎಂದು ಅಖೀಲ ಭಾರತ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘಗಳ ಮಹಾಒಕ್ಕೂಟದ ಕಾರ್ಯದರ್ಶಿ ಗೋಪಾಲಸ್ವಾಮಿ ತಿಳಿಸಿದರು. ಅಲ್ಲದೆ, ಹುಬ್ಬಳ್ಳಿ, ಮೈಸೂರು ಮತ್ತಿತರ ಪ್ರಮುಖ ನಗರಗಳಲ್ಲಿ ಲಾರಿ ಮುಷ್ಕರದ ಬಿಸಿ ತಟ್ಟಿದೆ. ಆಹಾರಧಾನ್ಯ, ಸಿಮೆಂಟ್, ಮರಳು ಮತ್ತಿತರ ಸರಕುಗಳ ಸಾಗಣೆಯಲ್ಲಿ ತುಸು ವ್ಯತ್ಯಯ ಉಂಟಾಗಿದೆ ಎಂದರು.
ನಾಳೆಯಿಂದ ತರಕಾರಿಗೂ ಬ್ರೇಕ್?: ಆದರೆ, ಒಟ್ಟಾರೆ ಲಾರಿಗಳ ಕಾರ್ಯಾಚರಣೆ ನೋಡಿದಾಗ, ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ತರಕಾರಿ, ಹಣ್ಣು, ಅಡುಗೆ ಅನಿಲ ಮತ್ತಿತರ ಸರಕು-ಸಾಗಣೆ ಎಂದಿನಂತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಗೋಪಾಲಸ್ವಾಮಿ, “ಹಾಲು, ತರಕಾರಿ ಸೇರಿದಂತೆ ಅಗತ್ಯವಸ್ತುಗಳ ಸಾಗಣೆಗೆ ಯಾವುದೇ ರೀತಿ ಅಡತಡೆ ಉಂಟುಮಾಡಿಲ್ಲ. ಬುಧವಾರ ಸಂಜೆವರೆಗೂ ಕಾದುನೋಡುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ, ಗುರುವಾರದಿಂದ ಅದಕ್ಕೂ ಬ್ರೇಕ್ ಬೀಳಲಿದೆ’ ಎಂದು ಎಚ್ಚರಿಸಿದರು.