ಬೆಂಗಳೂರು: ಇಲ್ಲಿ ಬೀದಿ ದೀಪಗಳಿಲ್ಲ. ರಸ್ತೆಯಲ್ಲಂತೂ ಗುಂಡಿಗಳೇ ಹೆಚ್ಚು. ಜತೆಗೆ ಸಂಚಾರ ದಟ್ಟಣೆ, ಕಳ್ಳರ ಹಾವಳಿ ಇರುವುದೂ ಇಲ್ಲೇ. ಕೊನೆಗೆ ನಗರದಲ್ಲಿ ಮಳೆಬಂದರೂ ದಿಢೀರ್ ನೆರೆಗೆ ತುತ್ತಾಗುವುದು ಇದೇ ಪ್ರದೇಶ.
ಇದರ ನೇರ ಪರಿಣಾಮ ನಾಯಂಡಹಳ್ಳಿಯ ಪಂತರಪಾಳ್ಯದಲ್ಲಿನ ಜನರು ಮೇಲಾಗುತ್ತಿದೆ. ಬೀದಿ ದೀಪ ಇಲ್ಲದೆ ಕಳ್ಳರ ಹಾವಳಿ, ಕಿಡಿಗೇಡಿಗಳ ಕಾಟ, ಸ್ವಚ್ಛಗೊಳ್ಳದ ಚರಂಡಿಗಳಿಂದ ದುರ್ವಾಸನೆ ಹೀಗೆ ಹಲವು ಸಮಸ್ಯೆಗಳು ಇಲ್ಲಿವೆ. ಜೋರು ಮಳೆ ಬಂದರೆ ನೀರು ರಸ್ತೆಗೆ ಬಂದು ಮನೆಗಳ ಮುಂದೆ ನಿಲ್ಲಲಿದೆ ಎಂಬ ಆತಂಕದಲ್ಲಿ ಜನ ಜೀವನ ನಡೆಸುತ್ತಿದ್ದಾರೆ.
Advertisement
ಅದು ನಾಯಂಡಹಳ್ಳಿ. ಸಮಸ್ಯೆಗಳ ಕೂಪವಾದರೂ ಈ ಭಾಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದು, ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈಗ ಮತ್ತೆ ಮಳೆಗಾಲ ಬಂದಿದ್ದು, ಈ ವರ್ಷವೂ ಜನರಿಗೆ ಗೋಳು ತಪ್ಪಿದ್ದಲ್ಲ. ಕಾರಣ, ಪಾಲಿಕೆ ಈ ಬಾರಿಯೂ ಚರಂಡಿ ಸ್ವಚ್ಛತೆ, ಸ್ಲ್ಯಾಬ್ ಅಳವಡಿಕೆ, ಗುಂಡಿ ಮುಚ್ಚುವುದು, ಬೀದಿ ದೀಪಗಳ ಅಳವಡಿಕೆಯಂತಹ ಯಾವ ಮುನ್ನೆಚ್ಚಕೆ ಕ್ರಮವನ್ನೂ ಕೈಗೊಂಡಿಲ್ಲ.
Related Articles
Advertisement
ಪಂತರಪಾಳ್ಯದಲ್ಲಿ ಮಳೆನೀರು ಹರಿಯುವ ಚರಂಡಿಗೆ ಶೌಚ ನೀರು ಬಿಡುತ್ತಿದ್ದು, ಸುತ್ತಲಿನ ಪ್ರದೇಶಕ್ಕೆ ಅದರ ದುರ್ವಾಸನೆ ಹಬ್ಬಿದೆ. ಹೀಗಿರುವಾಗ ಹೂಳೆತ್ತಲು ಯಾರು ಮುಂದೆಬರುತ್ತಾರೆ ಎಂದು ಬಿಬಿಎಂಪಿ ಅಧಿಕಾರಿ ಪ್ರಶ್ನಿಸಿದ್ದಾರೆ. ಪಂತರಪಾಳ್ಯ ಕೊಳಗೇರಿಯಲ್ಲಿ ಕಳ್ಳರ ಹಾವಳಿ, ಕಿಡಿಗೇಡಿಗಳ ಕಾಟವಿರುವ ಕಾರಣ ಹೊಯ್ಸಳ ವಾಹನ ದಿನದ 24 ಗಂಟೆಯೂ ನಾಯಂಡಹಳ್ಳಿಯಿಂದ ರಾಜರಾಜೇಶ್ವರಿನಗರ ಗೇಟ್, ಪಂತರಪಾಳ್ಯ, ನಾಯಂಡಹಳ್ಳಿ ರೈಲು ನಿಲ್ದಾಣ ರಸ್ತೆ ಸೇರಿ ಸುತ್ತಲ ಪ್ರದೇಶದಲ್ಲಿ ಗಸ್ತಿನಲ್ಲಿರುತ್ತದೆ ಎನ್ನುತ್ತಾರೆ ಬ್ಯಾಟರಾಯನಪುರ ಠಾಣೆಯ ಪೊಲೀಸರು. ಅಲ್ಲದೆ, ಆರು ತಿಂಗಳ ಹಿಂದೆ ಡಾಂಬರೀಕರಣಗೊಂಡಿದ್ದ ನಾಯಂಡಹಳ್ಳಿಯಿಂದ ಆರ್.ಆರ್.ನಗರ ಗೇಟ್ವರೆಗಿನ ರಸ್ತೆ ಗುಂಡಿಮಯವಾಗಿದೆ. ಇದರಿಂದ ವಾಹನ ಸವಾರರು ತೊಂದರೆ ಪಡುತ್ತಿದ್ದಾರೆ.
ಅನುದಾನಕ್ಕೆ ಕೊರತೆ ಇಲ್ಲ:
ಪಾಲಿಕೆ ಪ್ರತಿ ವರ್ಷ ವಾರ್ಡ್‌ಗಳ ಅಭಿವೃದ್ಧಿಗೆ 2ರಿಂದ 3 ಕೋಟಿ ರೂ. ಮೀಸಲಿಟ್ಟಿದ್ದು, ಈ ಅನುದಾನದಲ್ಲಿ ಶೇ.10ರಷ್ಟು ಹಣ ಚರಂಡಿಗಳ ಹೂಳೆತ್ತಲು, ನಿರ್ವಹಣೆ, ಹೊಸ ಚರಂಡಿ ಕಾಮಗಾರಿ, ಗುಂಡಿ ಮುಚ್ಚಲು ಬಳಸಬಹುದು. ಈಗಾಗಲೇ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಚರಂಡಿ ಸ್ವಚ್ಛತಾ ಕಾರ್ಯ ನಿರಂತರವಾಗಿದ್ದು, ವರ್ಷಪೂರ್ತಿ ನಿರ್ವಹಣೆ ಮಾಡಲಾಗು ವುದು ಎನ್ನುತ್ತಾರೆ ಪಾಲಿಕೆ ಪ್ರಧಾನ ಎಂಜಿನಿಯರ್ ವೆಂಕಟೇಶ್.
ಎಲ್ಲೆಲ್ಲಿ ನೀರು ನಿಲ್ಲುತ್ತೆ?:
ನಾಯಂಡಹಳ್ಳಿ ಕ್ವಾಟ್ರರ್ಸ್, ಕೆಂಪೇಗೌಡ ರೈಲು ನಿಲ್ದಾಣದ ಪಾರ್ಸಲ್ ಕಚೇರಿ ಬಳಿ, ದೀಪಾಂಜಲಿನಗರ ಮೆಟ್ರೋ ನಿಲ್ದಾಣದ ಹತ್ತಿರ, ರಾಜರಾಜೇಶ್ವರಿ ಗೇಟ್ ಸೇರಿದಂತೆ ಹಲವೆಡೆ ಚರಂಡಿಯಲ್ಲಿ ಹೂಳು, ಸ್ಲ್ಯಾಬ್ ಅಳವಡಿಸದ ಕಾರಣ ನೀರು ರಸ್ತೆ ಮೇಲೆ ಬರುತ್ತದೆ.
ಅನಾಹುತಕ್ಕೆ ಆಹ್ವಾನ ನೀಡುತ್ತಿದೆ ತೆರೆದ ಚರಂಡಿ:
ನಾಯಂಡಹಳ್ಳಿ ಬಸ್ ನಿಲ್ದಾಣದಿಂದ ಆರ್.ಆರ್.ನಗರ ಗೇಟ್ವರೆಗೆ 2 ಕಿ.ಮೀ. ಮುಖ್ಯರಸ್ತೆ ಇದ್ದು, ಹತ್ತಕ್ಕೂ ಅಧಿಕ ಕಡೆ ಚರಂಡಿಗಳ ಮೇಲೆ ಸ್ಲ್ಯಾಬ್ ಹಾಕಿಲ್ಲ. ಇದು ಪಾದಚಾರಿ ರಸ್ತೆಯಾಗಿರುವ ಕಾರಣ ಪಾದಚಾರಿಗಳು ಕೈಯಲ್ಲಿ ಜೀವಹಿಡಿದು ಸಂಚರಿಸುವ ಪರಿಸ್ಥಿತಿ ಇದೆ. ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿರುವ ವಿಭಜಕದ ಮೇಲೆ ಹುಲ್ಲು ಬೆಳೆದು, ಬುಡದಲ್ಲಿ ಹೂಳುತುಂಬಿದೆ. ಇದರಿಂದ ನೀರು ಸರಾಗವಾಗಿ ಹೋಗುವುದಿಲ್ಲ. ಮಳೆ ಬಂದರಂತೂ ಮೇಲ್ಸೇತುವೆ ಜಲಾವೃತಗೊಂಡಿರುತ್ತದೆ. ಇದರಿಂದ ವಾಹನಗಳ ಓಟಕ್ಕೆ ಬ್ರೇಕ್ ಬೀಳುತ್ತದೆ. ಇದರಿಂದ ಸವಾರರು ಪರದಾಡುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮಂಜುನಾಥ್ ಗಂಗವತಿ