Advertisement

ಮತ್ತೆ ವಾಪಸ್‌ ಬಂದ್ರೆ ಜಾಗೃತೆ ಮೋಸ ಹೋದ ಹುಡ್ಗಿಯ ಲಾಸ್ಟ್‌ ಲೆಟರ್‌

03:45 AM Jan 10, 2017 | |

ಗೆಳತಿಯರ ಜೊತೆ ದಾರಿಯುದಕ್ಕೂ ಹರಟೆ ಹೊಡೆಯುತ್ತಿದ್ದ ನಾನು ಮಾತಿನ ಮಲ್ಲಿಯೆಂದೇ ಕರೆಸಿಕೊಂಡಿದ್ದೆ. ನೀನು ನನ್ನ ಇಷ್ಟಪಟ್ಟಿದ್ದು ಇದೇ ಕಾರಣಕ್ಕೆ ಅಲ್ಲವೇ. ಆದರೆ ನಾನು ಮಾತು ನಗು ಮರೆತು ಮೌನದ ದಾರಿ ಹಿಡಿದಿದ್ದು ಕೂಡ ನಿನ್ನಿಂದಲೇ. 

Advertisement

ನಿನ್ನ ಜೊತೆಗಿನ ಯಾವ ನೆನಪುಗಳನ್ನು ಈ ಕ್ಷಣ ನೆನಪಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಆದರೆ ನನ್ನನ್ನ ಮತ್ತೆ ಬಂದು ಕಾಡುತ್ತಿರುವ ನಿನಗೆ ಈ ಮೂಲಕವಾದರೂ ನನ್ನ ಮಾತನ್ನು ತಲುಪಿಸಲೇಬೇಕಾಗಿದೆ. ಅದಕ್ಕಾಗಿಯೇ ನಿನ್ನ ಜೊತೆಗೆ ಕಳೆದ ಆ ಕಹಿ ನೆನಪುಗಳನ್ನು ಮತ್ತೆ ಕಷ್ಟವೆನಿಸಿದರೂ ನೆನಪನ್ನು ಮೆಲುಕು ಹಾಕುತ್ತಿರುವೆ. ಆಶ್ಚರ್ಯವಾಗಬಹುದು ನಿನಗೆ, ಕಹಿ ನೆನಪುಗಳೆಂದು ಹೇಳುತ್ತಿರುವುದಕ್ಕೆ.

ಹೌದು ನೆನಪುಗಳನ್ನು ಸಿಹಿ ಮಾಡಲು ನೀನೆಲ್ಲಿ ಬಿಟ್ಟೆ ಹೇಳು. ನುಂಗಲಾರದ ನೋವುಗಳನ್ನು ನೀಡಿ ಯಾವ ಹೆಣ್ಣು ಅನುಭವಿಸದ ನೋವನ್ನು, ದುಃಖವನ್ನು ನಾನು ನಿನ್ನಿಂದ ಅನುಭವಿಸಿದ್ದೀನಿ ಎಂಬುದನ್ನು ಮಾತ್ರ ಮರೀಬೇಡ. ಹೌದು ಕಣೋ, ನೀನು ಬಿಟ್ಟೋದ ಆ ದಿನಗಳಲ್ಲಿ ನನ್ನೆಲ್ಲಾ ನೋವು, ಮನದಲ್ಲಿ ಮೂಡಿದ್ದ ಭಾವನೆಗಳು, ಹೇಳಬೇಕೆಂದಿದ್ದ ಮಾತುಗಳು, ನನ್ನೆದೆಯಲ್ಲಿಯೇ ಹರಳುಗಟ್ಟಿ ನನ್ನ ನಗು ನೆಮ್ಮದಿಯನ್ನು ಕಳೆದುಕೊಂಡು ಮೌನ ಗರ್ಭಕ್ಕೆ ಕಾಲಿಟ್ಟು ಒಬ್ಬಂಟಿಯಾಗಿ ಹೋಗಿದ್ದಾಗ ಎಲ್ಲಿದ್ದೆ ನೀನು. 

ನಿನ್ನ ಪ್ರೀತಿಯ ಬಂಧನದಲ್ಲಿ ಬಿದ್ದ ನಾನು ನಿನ್ನನ್ನು ಪೂರ್ತಿಯಾಗಿ ನಂಬಿದ್ದೆ, ನೀನು ತೋರಿಸುತಿದ್ದ ಆ ಪ್ರೀತಿ, ಕಾಳಜಿ ನನ್ನನ್ನು ಸಂಪೂರ್ಣವಾಗಿ ಬಂಧಿಯನ್ನಾಗಿ ಮಾಡಿತ್ತು. ನಿನ್ನನ್ನು ಎಷ್ಟು ಪ್ರೀತಿಸುತ್ತಿರಲಿಲ್ಲ ನಾನು ಹೇಳು. ನೀನೂ ಅಷ್ಟೇ, ನನ್ನನ್ನ ಪದೇಪದೇ ನೀನು ನನ್ನ ಮುದ್ದು ಹೆಂಡತಿ ಎಂದು ಹೇಳಿ ಹಣೆಗೆ ಮುತ್ತಿಟ್ಟಾಗ ಪ್ರತಿಸಾರಿಯು ನನ್ನ ಕಣ್ಣಲ್ಲಿ ನಿನ್ನ ಪ್ರೀತಿಗಾಗಿ ಕಂಬನಿಯೊಂದು ಜಾರಿ ಹೋಗುತ್ತಿತ್ತು. 

ಎಷ್ಟು ನಂಬಿದ್ದೆ ನಾನು. ನಮ್ಮಿಬ್ಬರ ಜಾತಿ ಬೇರೆ ಆದರೂ ಚಿಂತಿಸದೆ ನಿನ್ನ ಧೈರ್ಯದಿಂದ ಪ್ರೀತಿಸುತ್ತಿರಲಿಲ್ಲವೇ? ಆದರೆ ನೀನು ಮಾಡಿಲ್ಲಾದರು ಏನು. ನನ್ನ ನಂಬಿಕೆಗೆ ಮೋಸ ಮಾಡಿ ಕಾರಣಗಳೇ ಇಲ್ಲದೆ ನನ್ನ ಬಿಟ್ಟು ಹೋದೆಯಲ್ಲ, ನಾನು ನಿನ್ನಾ ಕಾಡಿ ಬೇಡಿದಾಗಲೂ ನಿನಗೆ ಕರುಣೆ ಬಂದಿರಲಿಲ್ಲ, ಅಲ್ವಾ. ನನ್ನ ಯಾವ ಪ್ರಶ್ನೆಗಳಿಗೂ ಉತ್ತರಿಸದೆ ನನ್ನ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳಿ ಹೋದೆ. 

Advertisement

ಇಷ್ಟೆಲ್ಲಾ ನಿನ್ನ ಮಾತು, ವರ್ತನೆಯಿಂದ ರೋಸಿ ಹೋಗಿದ್ದಕ್ಕೆ ನಾನು ಆವತ್ತು ನನ್ನತನಕ್ಕೆ ಧಕ್ಕೆ ಬರುತ್ತಿದೆ ಎಂದರಿತು ನಾನು ನಾನಾಗಿ ವರ್ತಿಸಬೇಕಾಯಿತು. ಆದರೆ ಅದರಲ್ಲಿ ಯಾವುದೇ ತಪ್ಪಿರಲಿಲ್ಲ ನನ್ನದು.

ನೀನು ನನ್ನಿಂದ ದೂರಾದ ದಿನದಿಂದ ಮನದಲ್ಲಿ ಸಾವಿರಾರು ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು, ನೋವು ಹೇಳಿಕೊಳ್ಳಲು ಯಾವ ಮನಸುಗಳಿರಲಿಲ್ಲ, ಕೇಳುವಂತಹ ಯಾವ ಮನಸ್ಸುಗಳಿರಲಿಲ್ಲ. ಮನಸುಗಳಿದ್ದರೂ ನಂಬಿಕೆಗಳೇ ಇರಲಿಲ್ಲ. ನೀನು ಬಿಟ್ಟು ಹೋದ ಕ್ಷಣದಿಂದ ಊಟ ಬಿಟ್ಟು ಹುಚ್ಚಿಯಂತಾಗಿದ್ದ ನಾನು ಸಾಯಲು ಹೊರಟಿದ್ದೆ. ಆದರೂ ಉಳಿದೆ.

ಕಡೆಗೆ ನನ್ನ ನೋವಿಗೆ ಕಿಟಕಿಯಾಗಿದ್ದು ಖಾಲಿ ಕಾಗದ ಮತ್ತು ಪೇಪರ್‌. ಯಾರಲ್ಲೂ ಹಂಚಿಕೊಳ್ಳಲಾಗದ ನೋವು ಸಂಕಟಗಳನ್ನು ನನ್ನೊಳಗೂ ತಡೆಯಲಾಗದೆ, ನನ್ನೆಲ್ಲಾ ನೋವು ಭಾವನೆಗಳನ್ನು ಬರಹದ ರೂಪದಲ್ಲಿ ಬರೆದಿಟ್ಟು ಕಣ್ಣೀರು ಸುರಿದ್ದು ಅದೆಷ್ಟೋ. ನನ್ನ ಕಣ್ಣಿಂದ ಹರಿದು ಹೋದ ಕಣ್ಣೀರಿಗೆ ಲೆಕ್ಕಾನೇ ಇಲ್ಲ. ಆದರೆ ನೀನು ಮಾತ್ರ ಇನ್ನೊಬ್ಬಳನ್ನು ಪ್ರೀತಿಸಿ ಖುಷಿಯಾಗಿದ್ದೆ. 

ಆಗ ನಿನ್ನ ಮರೆಯುವ ಜೊತೆಗೆ ನಿನ್ನನ್ನು ದ್ವೇಷಿಸುವುದನ್ನು ಶುರು ಮಾಡಿದ್ದೆ. ಅದರ ಜೊತೆಗೆ ನೀನು ಬಿಟ್ಟು ಹೋದ ವಿಷಯ ಮಾತ್ರ ಪ್ರಶ್ನಾತೀತವಾಗಿ ಉಳಿದಿದ್ದವು. ನಿನ್ನ ಮರೆಯುವುದರ ಜೊತೆಗೆ ಎಲ್ಲವನ್ನು ಮರೆತು ನನ್ನ ಬದುಕಿನ ದಾರಿಯನ್ನು ಕಟ್ಟಿಕೊಂಡಿದ್ದೆ. ಎರಡು ವರ್ಷ ಬೇಕಾಯಿತು ನಿನ್ನ ಮರೆಯಲು. 

ಈ ಮಧ್ಯೆ ತುಂಬಾ ಹುಡುಗರು ಪ್ರೀತಿಯನ್ನು ಹೇಳಿಕೊಂಡಿದ್ದರು. ಅವರೆಲ್ಲರ ಮಾತು ನಡತೆಯಲ್ಲೆಲ್ಲಾ ನೀನೇ ಕಾಣುತ್ತಿದ್ದೆ. ಇದು ಇನ್ನೂ ನಿನ್ನ ಮೇಲೆ ಕೋಪವನ್ನು ಹೆಚ್ಚಿಸುತ್ತಿತ್ತು. ನನಗೆ ನಿನ್ನ ಮೇಲೆ ಯಾವ ಕನಿಕರದ, ಪ್ರೀತಿಯ ಭಾವನೆಗಳಿಲ್ಲ. ಆದರೆ ನಾನು ಹಾಗೆ ಉಳಿದಿಲ್ಲ. ಈಗ ನಾನು ಸುಂದರವಾದ ಪ್ರೀತಿಯಲ್ಲಿ ಸಾಗುತ್ತಿದ್ದೇನೆ. ಹೌದು ನನ್ನವನು ನನ್ನ ಪ್ರೀತಿಯ ಉಸಿರು.  

ನೀನು ಕೇಳಬಹುದು ಇಷ್ಟೆಲ್ಲಾ ಹೇಳಿದವಳು ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆಂದು. ಹೌದು ನೀನು ನನ್ನ ದೂರ ಮಾಡಿ ಮೌನ ದಾರಿಗೆ ತಳ್ಳಿ ಹೋದೆ. ಆದರೆ ಅವನು ನನ್ನ ಮೌನದಿಂದಲೇ ಬಂಧಿಸಿ ಮೌನದಲ್ಲೂ ಮಾತಿದೆ ಎಂದು ಮನದಲ್ಲಿ, ಮೊಗದಲ್ಲಿ ನಗು ತಂದುಕೊಟ್ಟವ. ಇದು ನನ್ನ ಮನೆಯವರು ಹುಡುಕಿದ ಪ್ರೀತಿಯಾದರೂ ನಾನು ಇಷ್ಟಪಟ್ಟ ಪ್ರೀತಿ. ಅವನ ಜೊತೆಗಿನ ನನ್ನ ಬದುಕು ತುಂಬಾ ಚೆನ್ನಾಗಿದೆ. 

ಇಂದಿಗೆ ನಾನು ನಿನಗೆ ಪರಿಚಯವಾಗಿ 4 ವರ್ಷಗಳಾದವು. ಆ ಕರಾಳ ನಾಲ್ಕು ವರ್ಷದ ನೆನಪನ್ನು ಕಷ್ಟಪಟ್ಟು ಮರೆಯುತ್ತೇನೆ. ಮತ್ತೆ ನನ್ನ ಜೀವನದಲ್ಲಿ ಬಂದು ಕಾಡದಿರು. ನಿನಗೆ ನನ್ನಲ್ಲಿ ಯಾವ ನೆನಪುಗಳು ಇಲ್ಲ. ನನ್ನೆಲ್ಲ ನೆನಪುಗಳು ಆಗಲೇ ಕಣ್ಣೀರಾಗಿ ಹರಿದು ಹೋಗಿವೆ. ಇನ್ನೊಂದು ಪ್ರೀತಿ ಇಲ್ಲವೆಂದಿದ್ದರೂ ನನ್ನ ಹೃದಯದಲ್ಲಿ ಮತ್ತೆ ನಿನಗೆ ಜಾಗ ನೀಡುತ್ತಿರಲಿಲ್ಲ. ನಾನು ನಿನ್ನ ಯಾವತ್ತೂ  ಕ್ಷಮಿಸಲಾರೆ.

– ಸಾಕ್ಷಿ

Advertisement

Udayavani is now on Telegram. Click here to join our channel and stay updated with the latest news.

Next