ಬೆಂಗಳೂರು: 2020ರ ವೇಳೆಗೆ ರಸ್ತೆ ಅಪಘಾತಗಳ ಪ್ರಮಾಣವನ್ನು ಶೇ. 50ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಆದರೆ, ವರ್ಷದಿಂದ ವರ್ಷಕ್ಕೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ದೇಶಕ್ಕೆ ಪ್ರತಿ ವರ್ಷ 60 ಸಾವಿರ ಕೋಟಿ ರೂ. ನಷ್ಟ ಆಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ಅಂಡರ್‌ರೈಟರ್ ಲ್ಯಾಬೊರೇಟರಿ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ “ಭಾರತದಲ್ಲಿ ರಸ್ತೆ ಸುರಕ್ಷತೆಯ ಅನುಕೂಲಗಳು; ಅನುಷ್ಠಾನ’ ಕುರಿತ ವಿಚಾರ ಸಂಕಿರಣದಲ್ಲಿ ಅಧ್ಯಯನ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ರಸ್ತೆ ಸುರಕ್ಷತೆಗೆ ಹತ್ತುಹಲವು ಕಾನೂನು-ನಿಯಮ ಗಳನ್ನು ರೂಪಿಸಲಾಗಿದೆ.
ಆದರೆ, ಸಾರ್ವಜನಿಕರ ಸಹಕಾರವಿಲ್ಲದೆ ಅದನ್ನು ಅನುಷ್ಠಾನಗೊಳಿಸುವುದು ಕಷ್ಟ,’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿ ಸಂಚಾರ ನಿಯಮ ಉಲ್ಲಂಘ ನೆಗೆ ಹೆಚ್ಚಿನ ದಂಡ ವಿಧಿಸಲು ಮುಂದಾಗಿದೆ. ಈ ತಿದ್ದುಪಡಿ ಕಾಯ್ದೆ ಸಂಸತ್‌ನಲ್ಲಿ ಮಂಡನೆಯಾಗಿದ್ದು, ಒಪ್ಪಿಗೆಯೂ ಸಿಕ್ಕಿದೆ. ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಕ್ಕರೆ ಜಾರಿಗೆ ಬರಲಿದೆ ಎಂದರು.
ನಿಮ್ಹಾನ್ಸ್ ನಿರ್ದೇಶಕ ಪ್ರೊ.ಬಿ.ಎನ್. ಗಂಗಾ ಧರ್ ಮಾತನಾಡಿ, ಅಪಘಾತ ಪ್ರಕರಣಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ “ಕಾಂಪ್ರನ್ಸಿàವ್ ಟ್ರಾಮಾ ಕೇರ್’ ಆರಂಭಿಸಲು ನಿಮ್ಹಾನ್ಸ್‌ಗೆ ಬೆಂಗಳೂರು ಉತ್ತರದಲ್ಲಿ 30 ಎಕರೆ ಜಾಗ ನೀಡಿದೆ. ಶೀಘ್ರದಲ್ಲೇ ಟ್ರಾಮಾ ಕೇರ್ ಆರಂಭಿಸಲಾಗುವುದು ಎಂದರು. ಯುಎಲ್ ಸಂಸ್ಥೆಯ ಸಾರ್ವಜನಿಕ ಸುರಕ್ಷತೆ ವಿಭಾಗದ ಉಪಾಧ್ಯಕ್ಷ ಆರ್.ಎ. ವೆಂಕಟಾಚಲಂ, ನಿಮ್ಹಾನ್ಸ್ ಸಾರ್ವಜನಿಕ ಸ್ವಾಸ್ಥ್ಯ ಕೇಂದ್ರದ ಮುಖ್ಯಸ್ಥ ಡಾ.ಜಿ. ಗುರುರಾಜ್, ರಿಜಿಸ್ಟ್ರಾರ್ ಪ್ರೊ. ಶೇಖರ್ ಮತ್ತಿತರರು ಉಪಸ್ಥಿತರಿದ್ದರು.