Advertisement

ಕಾಡು ಮೃಗ, ಪಕ್ಷಿಗಳಿಂದ ಫ‌ಸಲು ನಷ್ಟ ; ಪರಿಹಾರಕ್ಕೆ ಆಗ್ರಹ

02:15 AM Feb 04, 2021 | Team Udayavani |

ಕಾರ್ಕಳ: ಕೋವಿಡ್‌-19ದಿಂದ ನಗರದ ಜನತೆ ಊರುಗಳತ್ತ ಮುಖ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಡುಮೃಗಗಳ ಹಾವಳಿಯಿಂದ ಕೃಷಿ ನಡೆಸಲು ಸಾಧ್ಯವಾಗುತಿಲ್ಲ. ಫ‌ಸಲು ನಷ್ಟವಾಗುತ್ತಿದೆ. ಕಾಡು ಪ್ರಾಣಿಗಳಿಂದ ರಕ್ಷಣೆ ಹೇಗೂ ಇಲ್ಲ. ಕನಿಷ್ಠ ಪರಿಹಾರವನ್ನಾದರೂ ಒದಗಿಸಿ ಎಂದು ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ ಆಗ್ರಹಿಸಿದರು.
ತಾ.ಪಂ. ಕಾರ್ಕಳ ಇದರ 20ನೇ ಸಾಮಾನ್ಯ ಸಭೆ ಬುಧವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು. ತಾ.ಪಂ ಅಧ್ಯಕ್ಷೆ ಸೌಭಾಗ್ಯಾ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಹರೀಶ್‌ ನಾಯಕ್‌, ಸ್ಥಾಯೀ ಸಮಿತಿ ಅಧ್ಯಕ್ಷ ಪ್ರವೀಣ್‌ ಸಾಲಿಯಾನ್‌, ತಾ.ಪಂ. ಇ.ಒ. ಮೇ| ಡಾ| ಹರ್ಷ, ತಹಶೀಲ್ದಾರ್‌ ಪುರಂದರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ ವಿಷಯ ಪ್ರಸ್ತಾವಿಸಿ, ಕೃಷಿಯಲ್ಲಿ ಹೆಚ್ಚಿನ ಮಂದಿ ನಿರತರಾಗಿದ್ದಾರೆ. ನವಿಲು, ಕಾಡುಕೋಣ, ಮಂಗ, ಹಂದಿಗಳು ಫ‌ಸ ಲಿಗೆ ಹಾನಿ ಉಂಟು ಮಾಡುವುದರಿಂದ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದ ಕ್ಕೆ ಯಾವ ಪರಿಹಾರವೂ ಇಲ್ಲ ಎಂದರು.

Advertisement

ಅರಣ್ಯ ಇಲಾಖೆ ಅಧಿಕಾರಿ ಉತ್ತರಿಸಿ, ಕಾಡುಕೋಣ ಫ‌ಸಲು ನಷ್ಟ ಮಾಡಿದರೆ ಪರಿಹಾರ ನೀಡಲಾಗುತ್ತದೆ. ಇತರ ಮೃಗಗಳಿಗೆ ಅನ್ವಯವಾಗುವುದಿಲ್ಲ. ಕಾಡುಕೋಣದಿಂದ ಫ‌ಸಲು ಹಾನಿ ಬಗ್ಗೆ ಇಲಾಖೆ ಗಮನಕ್ಕೆ ತಂದಲ್ಲಿ ಸ್ಥಳ ಮಹಜರು ನಡೆಸಿ ವರದಿ ಸಲ್ಲಿಸುತ್ತೇವೆ ಎಂದರು. ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಸರಕಾರದ ಗಮನಕ್ಕೆ ತರುವ ಎಂದು ತಾ.ಪಂ. ಇ.ಒ. ಡಾ| ಹರ್ಷ ಹೇಳಿದರು.

94 ಸಿ ಯೋಜನೆಯ ಫ‌ಲಾನುಭವಿಗಳು ಜಾಗ ವಿಸ್ತರಿಸಿ ಒತ್ತುವರಿ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ರಸ್ತೆ ಕೂಡ ಸಕ್ರಮಗೊಳಿಸುತ್ತಿದ್ದಾರೆ ಎಂದು ಸದಸ್ಯ ಸುಧಾಕರ ಶೆಟ್ಟಿ ಹೇಳಿದರು.
ಸರಕಾರಿ ಜಾಗದ ಒತ್ತುವರಿಗೆ ಅವಕಾಶವಿಲ್ಲ ಎಂದು ತಹಶೀಲ್ದಾರ್‌ ಪುರಂದರ ಹೆಗ್ಡೆ ಹೇಳಿದರು. ಗ್ರಾ.ಪಂ.ಗಳಿಗೆ ಪತ್ರ ಬರೆದು ಒತ್ತುವರಿ ನಡೆಸಿದ ಕಡೆಗಳಲ್ಲಿ ತೆರವಿಗೆ ಕ್ರಮವಹಿಸುತ್ತೇವೆ ಎಂದು ಇ.ಒ. ಹೇಳಿದರು.

ಪಿಡಿಒ ಗಳ ಕೊರತೆ

ಬಜಗೋಳಿ ಗ್ರಾ.ಪಂ.ನಲ್ಲಿ ತಾನು ಸದಸ್ಯನಾಗಿ ಆಯ್ಕೆಯಾದ ಮೇಲೆ 5 ಮಂದಿ ಪಿಡಿಒಗಳು ಬದಲಾದರು. ಜನರಿಂದಲೋ ಜನ ಪ್ರತಿನಿಧಿ ಗಳಿಂದಲೋ ಅಥವಾ ಅಧಿಕಾರಿಗಳಿಂದಲೋ ಹೀಗೆ ಯಾರಿಂದ ತಪ್ಪಾಗುತ್ತಿದೆ ಗೊತ್ತಿಲ್ಲ. ಗ್ರಾಮದ ಜನರಂತೂ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಪಿಡಿಒಗಳ ಪರಿಚಯವಾಗುವ ಮೊದಲೆ ಅಲ್ಲಿಂದ ತೆರವಾಗುತ್ತಿದ್ದಾರೆ. ಕನಿಷ್ಠ 3 ವರ್ಷಗಳಾದರೂ ಒಂದೇ ಕಡೆ ಉಳಿಸಿಕೊಳ್ಳಿ ಎಂದು ಸುಧಾಕರ ಶೆಟ್ಟಿ ಆಗ್ರಹಿಸಿದರು. ಪಿಡಿಒಗಳ ಸಂಖ್ಯೆ ಕಡಿಮೆಯಿದೆ. ಅಲ್ಲಿಗೆ ಪ್ರಭಾರ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ತಾ.ಪಂ. ಇಒ ಉತ್ತರಿಸಿದರು.

Advertisement

ಪ್ರಮೀಳಾ ಅವರ ಮನೆ ಪಕ್ಕ ರಸ್ತೆ ಹಾದು ಹೋದ ಸ್ಥಳದಲ್ಲಿ ವಿದ್ಯುತ್‌ ಕಂಬವೊಂದಿದ್ದು ಸಮಸ್ಯೆಯಾಗುತ್ತಿದೆ ಎಂದಾಗ ಮೆಸ್ಕಾಂ ಕಂಬದಿಂದ ಕಂಬಕ್ಕೆ 50 ಮೀ. ಅಂತರವಿದ್ದರೆ ತಂತಿ ಎಳೆಯಬಹುದು. ಸ್ಥಳ ಪರಿಶೀಲಿಸುವುದಾಗಿ ಹೇಳಿದರು

ಸದಸ್ಯೆ ಮಾಲಿನಿ ಜೆ. ಶೆಟ್ಟಿ ಜಲಾನಯನ ಯೋಜನೆಯಲ್ಲಿ ತೋಡುಗಳಿಂದ ಹೂಳೆತ್ತಲು ಕ್ರಮ ವಹಿಸಬೇಕು ಎಂದಾಗ ಸದ್ಯ ನಮ್ಮ ಕ್ರಿಯಾ ಯೋಜನೆಯಲ್ಲಿ ಇಲ್ಲ. ಮುಂದೆ ಇಡುತ್ತೇವೆ ಎಂದು ಕೃಷಿ ಇಲಾಖೆ ಅಧಿಕಾರಿ ಉತ್ತರಿಸಿದರು.

ಕುಡಿಯುವ ನೀರು ಒದಗಿಸಲು ಸೂಚನೆ
ತಾ| ವ್ಯಾಪ್ತಿಯಲ್ಲಿ 94 ಸಿ ಮತ್ತು ಡೀಮ್ಡ್ ಫಾರೆಸ್ಟ್‌ ಜಮೀನಿನಲ್ಲಿ ವಾಸವಾಗಿರುವ ಕುಟುಂಬಗಳಿಗೆ ತಾತ್ಕಾಲಿಕ ನೆಲೆಯಲ್ಲಿ ಕುಡಿಯುವ ನೀರು ಒದಗಿಸಲು ಸೂಚಿಸಲಾಗಿದೆ ಎಂದು ತಾ.ಪಂ. ಇ.ಒ. ಕೇಳಿದರು.

ಟಾರ್ಪಾಲು ಹಂಚಿಕೆ: ನಮಗೂ ಕೊಡಿ
ಟಾರ್ಪಾಲು ವಿತರಣೆಗೆೆ ತಾ.ಪಂ. ಅನುದಾನವಿಲ್ಲ. ಸದಸ್ಯರಿಗೆ ಕನಿಷ್ಠ 10 ಆದರೂ ನೀಡಿ ಎಂದು ಸದಸ್ಯೆ ಮಾಲಿನಿ ಶೆಟ್ಟಿ ಒತ್ತಾಯಿಸಿದರು. ಬೇಡಿಕೆ ಜಾಸ್ತಿಯಿದೆ. ಪ್ರಾಶಸ್ತ್ಯದ ಮೇಲೆ ನೀಡುತ್ತಿದ್ದೇವೆ. ಟಾರ್ಪಾಲು ಬಂದಾಗ ಕನಿಷ್ಠ 5 ನೀಡಲು ಪ್ರಯತ್ನಿಸುವುದಾಗಿ ಕೃಷಿ ಅಧಿಕಾರಿ ತಿಳಿಸಿದರು.
ಮೂವರಿಗೆ ಸಮ್ಮಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ತಾ.ಪಂ. ಸದಸ್ಯರು ಉಪಸ್ಥಿತ ರಿದ್ದರು. ನಿತಿನ್‌ಕುಮಾರ್‌ ಕಡತ ವರದಿಗಳನ್ನು ವಾಚಿಸಿದರು.

ಸಬ್‌ಸ್ಟೇಶನ್‌ಗೆ ಜಾಗ ಬೇಕು

ಬಜಗೋಳಿ ಭಾಗದಲ್ಲಿ ಪವರ್‌ ಸ್ಟೇಶನ್‌ ಇಲ್ಲದೆ ಕೃಷಿಕರಿಗೆ ತೊಂದರೆಯಾಗುತ್ತಿದೆ. ಅಂಬೇಡ್ಕರ್‌ ಯೋಜನೆಯೂ ಅರ್ಧಕ್ಕೆ ನಿಂತಿದೆ. ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಸದಸ್ಯರೊಬ್ಬ ರು ಕೇಳಿ ದ ಪ್ರಶ್ನೆಗೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಸಂದೀಪ್‌ ಸಬ್‌ಸ್ಟೇಶನ್‌ಗೆ ಸರಕಾರದಿಂದ ಜಾಗ ಹಸ್ತಾಂತರ ಆಗಬೇಕಿದೆ. ಅದಾಗದೆ ಏನೂ ಮಾಡುವಂತಿಲ್ಲ. ಇಲಾಖೆ ಕಡೆಯಿಂದ ವಿಳಂಬವಾಗುತ್ತಿಲ್ಲ. ಕಡತ ಸರಕಾರಕ್ಕೆ ಸಲ್ಲಿಕೆಯಾಗಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿದೆ. ನೀರೆ ಸಬ್‌ಸ್ಟೇಶನ್‌ ಅದಕ್ಕಿಂತ ಮೊದಲು ಆಗುತ್ತದೆ ಎಂದರು. ಈ ಬಗ್ಗೆ ಗಮನಹರಿಸುವುದಾಗಿ ತಾ.ಪಂ. ಇಒ ಹೇಳಿದರು.

ದಾಖಲಾತಿ ಸಮಸ್ಯೆ

ಹಿಂದಿನ ಸಭೆಯ ನಡಾವಳಿ ಮೇಲಿನ ಚರ್ಚೆ ನಡೆದು ಮುಂಡ್ಕೂರು ಮುಲ್ಲಡ್ಕ ಪರಿಸರದಲ್ಲಿ ಕೊರಗ ಕುಟುಂಬಗಳಿಗೆ ಸರಕಾರದಿಂದ ಜಾಗ ಮಂಜೂರಾಗಿದೆ. ಮೀಸಲಿಟ್ಟ ಜಾಗಕ್ಕೆ ಸಂಬಂಧಿಸಿ ದಾಖಲಾತಿ ಸಮಸ್ಯೆಯಿದೆ ಎಂದು ಸದಸ್ಯರು ಹೇಳಿದಾಗ ತಾಂತ್ರಿಕ ತೊಂದರೆ ನಿವಾರಿಸುವ ಕೆಲಸವಾಗಬೇಕಿದೆ. ಜಿಲ್ಲಾಧಿಕಾರಿಗಳ ತಾ| ಗ್ರಾಮ ವಾಸ್ತವ್ಯ ಸಂದರ್ಭ ಸಮಸ್ಯೆಗೆ ಪರಿಹಾರ ಸಿಗಬಹುದು. ತಾಂತ್ರಿಕ ತೊಂದರೆಯಿಂದ ಹೀಗಾಗಿದೆ ಎಂದು ತಹಶೀಲ್ದಾರ್‌ ಪುರಂದರ ಹೆಗ್ಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next