Advertisement

ವಿದ್ಯಾರ್ಥಿ ನಟಿಸಿಯೂ ಸೋತ: ಮೇಷ್ಟ್ರು ನಟಿಸದೇ ಗೆದ್ದರು!

04:26 PM Apr 10, 2018 | |

ದಶಕಗಳ ಹಿಂದಿನ ಮಾತು. ನಾನಾಗ ಮೈಸೂರಿಗೆ ಸಮೀಪದ ಹಳ್ಳಿಯೊಂದರ ಕಾಲೇಜಿನಲ್ಲಿ ಗಣಿತ ಉಪನ್ಯಾಸಕನಾಗಿದ್ದೆ. ವಿದ್ಯಾರ್ಥಿ ಸಂಘದ ಚುನಾವಣೆಯಾಗಿ ಅದರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಅಂದು ಏರ್ಪಟ್ಟಿತ್ತು. ಸರಿ. ಕಾಲೇಜು ಎಲೆಕ್ಷನ್‌ ಅಂದಮೇಲೆ ಹೈಕಳ ಉತ್ಸಾಹಕ್ಕೇನು ಕಡಿಮೆ ಹೇಳಿ? ಮುಖ್ಯ ಅತಿಥಿಗಳು, ಪ್ರಾಚಾರ್ಯರ ಹಿತನುಡಿ ನಡುವೆ ವಿನೋದಾವಳಿ ಇರಲೇಬೇಕಲ್ಲ? ಭಾವಗೀತೆ, ಜನಪದಗೀತೆ, ಏಕಪಾತ್ರಾಭಿನಯ…

Advertisement

ಇವುಗಳ ಜೊತೆಗೆ ಮಿಮಿಕ್ರಿ ಬೇರೆ. ಅದುವರೆಗೂ ಕೂಲ್‌ ಆ್ಯಂಡ್‌ ಕ್ಲಾಸಿಕ್‌ ಎಂಬಂತಿದ್ದ ವಾತಾವರಣ ದಿಢೀರ್‌ ಕಾವೇರಿದ್ದು ಮಿಮಿಕ್ರಿ ಶುರುವಾದಾಗಲೇ. ಏನೆಂದರೆ ಅಪ್ಪಣ್ಣ ಎಂಬ ಒಬ್ಬ ವಿದ್ಯಾರ್ಥಿ ತರ್ಕಶಾಸ್ತ್ರ ಉಪನ್ಯಾಸಕರಾದ ನಟೇಶ್‌ ಎಂಬುವರ ನಡಿಗೆಯ ವಿಧಾನವನ್ನು ಅನುಕರಿಸಿದ. ಅವರು ತಮ್ಮ ಬಕ್ಕತಲೆಯ ಮೇಲೆ ಪದೇ ಪದೆ ಕೈಯಾಡಿಸುತ್ತ ಪಾಠ ಮಾಡುತ್ತಿದ್ದರು. ಈತ ಅದನ್ನು ಮತ್ತಷ್ಟು ಉತ್ಪ್ರೇಕ್ಷೆ ಮಾಡಿದ.

ತಮ್ಮ ಸಹಪಾಠಿಯ “ಪ್ರತಿಭೆ’ ಕಂಡು ಜಮಾಯಿಸಿದ ವಿದ್ಯಾರ್ಥಿಗಳದ್ದು ಜೋರು ಕರತಾಡನ,ಕೇಕೆ,ಸಿಳ್ಳೆ. ಆ ಉಪನ್ಯಾಸಕರು ಮುಂದಿನ ಸಾಲಿನಲ್ಲೇ ಕುಳಿತು ಮುಜುಗರವಾದರೂ ತೋರಿಸಿಕೊಳ್ಳದೆ ನಗೆ ನಟಿಸಿದ್ದರು. ವೇದಿಕೆಯಲ್ಲಿದ್ದವರಿಗೆ, ಬೋಧಕ, ಬೋಧಕೇತರ ಸಿಬ್ಬಂದಿಗೆ ಹೀಗೂ ಉಂಟೆ ಅನ್ನುವಷ್ಟು ಅಚ್ಚರಿ, ಜೊತೆಗೆ ಬೇಸರ. ಸಾಲದ್ದಕ್ಕೆ ಅಪ್ಪಣ್ಣನಿಗೆ ಗೆಳೆಯರಿಂದ “ಒನ್ಸ್‌ ಮೋರ್‌’ ಎಂಬ ಪ್ರಶಂಸೆ. ಒನ್ಸ್‌ಮೋರ್‌ ಕೇಳಿದ ಮೇಲೆ ಅಪ್ಪಣ್ಣನ ಉತ್ಸಾಹವೂ ಹೆಚ್ಚಿತ್ತು.

ಆತ ಎರಡನೇ ಬಾರಿ ನಟೇಶರನ್ನು ಮಿಮಿಕ್‌ ಮಾಡಲು ಆರಂಭಿಸಿಬಿಟ್ಟ. ಈಗ ನಟೇಶರ ಸಹನೆಯ ಕಟ್ಟೆಯೂ ಒಡೆಯಿತು. ಅವರು ಏನಾದರೂ ಮಾಡಿ ಅಪ್ಪಣ್ಣನಿಗೆ ತಕ್ಕ ಪಾಠ ಕಲಿಸಲು ನಿಶ್ಚಯಿಸಿದರು. ಅವರ ಆತ್ಮವಿಶ್ವಾಸ ಮುಖಚಹರೆಯಲ್ಲಿ ವ್ಯಕ್ತವಾಗಿತ್ತು. ಎಲ್ಲರೂ ನೋಡನೋಡುತ್ತಿದ್ದಂತೆ ನಟೇಶ್‌ ಸಾವಧಾನವಾಗಿ ವೇದಿಕೆಗೇರಿದರು. “ನೋಡಿ, ನಾನೂ ಈ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಶಾಲಾ-ಕಾಲೇಜಿನ ದಿನಗಳಲ್ಲಿ ನನಗೆ ಅಭಿನಯದಲ್ಲಿ ದೊಡ್ಡ ಬಹುಮಾನವೇ ಬಂದಿತ್ತು.

ಅಪ್ಪಣ್ಣಾ, ಒಂದ್‌ ಸಹಾಯ ಮಾಡಿ. ನನಗೆ ಎಲ್ಲಿಂದಲಾದರೂ ಒಂದು ಹಿಡಿ ಮಸಿ ತನ್ನಿ. ಅದೇ ನನಗೆ ಮೇಕಪ್‌’ ಎಂದರು. ಒಂದು ಕ್ಷಣ ಅವರು ಏನು ಹೇಳುತ್ತಿದ್ದಾರೆ, ಅವರು ಯಾವ ಪಾತ್ರ ಮಾಡಲು ಈ ಬಣ್ಣ ಕೇಳುತ್ತಿದ್ದಾರೆ ಎಂದು ಯಾರಿಗೂ ತೋಚಲಿಲ್ಲ. ಅಪ್ಪಣ್ಣನಂತೂ ಮೇಷ್ಟ್ರು ಹೇಳಿದ ಪರಿಕರ ತರಲು ಹೊರಗೋಡಿದ. ಮುಖ್ಯ ಅತಿಥಿಗಳು ಮತ್ತು ಪ್ರಾಚಾರ್ಯರು ಗಂಭೀರವಾಗಿ ಏನನ್ನೋ ಚರ್ಚಿಸುತ್ತಿದ್ದರು. ಐದು ನಿಮಿಷ ಸಭೆಯಲ್ಲಿ ನೀರವ ಮೌನ. ಅಪ್ಪಣ್ಣ ಕಾಲೇಜಿನ ಎದುರಿಗಿದ್ದ ಸ್ಟೇಶನರಿ ಮಳಿಗೆಯಿಂದ ಕಪ್ಪು ಶಾಯಿ ತಂದು “ಸಾರ್‌, ಇಗೊಳ್ಳಿ’ ಅಂದ. 

Advertisement

ಅದುವರೆಗೂ ನಟೇಶ್‌ ಅವರನ್ನೇ ಕುತೂಹಲದಿಂದ ಗಮನಿಸುತ್ತಿದ್ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಒಕ್ಕೊರಲಿನಿಂದ -“ಹೇಳಿ ಸಾರ್‌, ಭೀಮನ ಪಾತ್ರವೋ ಇಲ್ಲ ರಾವಣನಧ್ದೋ ಅಂತ ಕೇಳಿದರು. “ಎರಡೂ ಅಲ್ಲ. ನಾನೀಗ ಅಪ್ಪಣ್ಣನ ಪಾತ್ರ ಮಾಡುತ್ತೇನೆ’ ಎಂದರು ನಟೇಶ್‌! ಅಪ್ಪಣ್ಣ ಬೆಕ್ಕಸಬೆರಗಾದ. “ಏನ್ಸಾರ್‌, ನಾನು ಅಷ್ಟು ದೊಡ್ಡವನಾ?’ ಅಂತ ಹುಬ್ಬೇರಿಸಿದ. “ಅಲ್ಲವೇ ಮತ್ತೆ. ನೀನು ನನ್ನನ್ನು ಅಷ್ಟು ಚೆನ್ನಾಗಿ ಮಾಡಿ ತೋರಿಸಿದ್ದೀಯ! ನಾನೂ ನಿನ್ನನ್ನು ಮಾಡಿ ತೋರಿಸಬೇಡವೆ?

ಅದಕ್ಕಾಗಿ ತಾನೇ ಈ ಬಣ್ಣ ತರಲು ಹೇಳಿದ್ದು’ ಎಂದರು! ಈ ಮಾತು ಕೇಳುತ್ತಿದ್ದಂತೆಯೇ ಅಪ್ಪಣ್ಣ ಪೆಚ್ಚಾದ. ತನ್ನ ಕಪ್ಪು ಮೈ ಬಣ್ಣದ ಕುರಿತೇ ಗುರುಗಳು ಈಗ ಗೇಲಿ ಮಾಡಲಿದ್ದಾರೆ ಎಂದು ಅವನಿಗೆ ಗೊತ್ತಾಗಿಹೋಯಿತು. ಅದಕ್ಕೂ ಮೊದಲು ತಾನು ಗುರುಗಳ ಹಾವಭಾವವನ್ನು ಸಭ್ಯತೆಯ ಗಡಿ ಮೀರಿ ಅಣಕಿಸಿದ್ದು ಎಂಥ ಕೆಟ್ಟ ಅಭಿರುಚಿ ಅಂತ ನೊಂದುಕೊಂಡ. ಗಳಗಳನೆ ಅತ್ತ. ಅದುವರೆಗೂ “ಓಹ್‌, ಹಾ’ ಅಂತೆಲ್ಲಾ ಕೇಕೆ ಹಾಕಿ ಅವನನ್ನು ಹುರಿದುಂಬಿಸುತ್ತಿದ್ದವರು ತಣ್ಣಗಾಗಿದ್ದರು.

ನಟೇಶ್‌ ಮೇಷ್ಟ್ರು ಮಸಿ ಬಳಿದುಕೊಳ್ಳಲಿಲ್ಲ. ಬದಲಿಗೆ, ತಲೆ ಬಗ್ಗಿಸಿ ನಿಂತಿದ್ದ ಅಪ್ಪಣ್ಣನ ಬೆನ್ನು ತಟ್ಟಿದರು. ನಂತರ ಹೇಳಿದರು: “ಅಲ್ಲಯ್ಯ, ಪ್ರಕೃತಿ ತನ್ನ ಪ್ರತಿಯೊಂದು ಸೃಷ್ಟಿಯಲ್ಲೂ ವೈವಿಧ್ಯತೆ ಮೆರೆದಿದೆ. ಒಂದು ಇನ್ನೊಂದರಂತಿಲ್ಲ ಎಂದಮೇಲೆ ಅದನ್ನು ಅಣಕಿಸುವುದು ಸರಿಯೇ ಹೇಳು? ನಿನಗೆ ಒಂದು ವರಸೆ ಬಿಳುಪು ಕಡಿಮೆ. ಅಂದ ಮಾತ್ರಕ್ಕೆ ಅದನ್ನು ಅಪಹಾಸ್ಯ ಮಾಡುವುದೇ?’ ಅಂತ ಮನಮುಟ್ಟುವಂತೆ ತಿಳಿಹೇಳಿದರು. ಮುಖ್ಯ ಅತಿಥಿಗಳು, ಪ್ರಾಚಾರ್ಯರಾದಿಯಾಗಿ ಎಲ್ಲರೂ ಸೂರು ಹಾರುವಂತೆ ಕರತಾಡನ ಮಾಡಿದರು. 

* ಬಿಂಡಿಗನಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next