Advertisement

ಸೋತು ಗೆದ್ದ ಇಂಡಿಯಾ ಮೈತ್ರಿಕೂಟ… ಬಿಜೆಪಿಯನ್ನು ಸೋಲಿಸುವ ಗುರಿಯಲ್ಲಿ ಭಾಗಶಃ ಯಶಸ್ವಿ

08:36 PM Jun 04, 2024 | Team Udayavani |

ನವದೆಹಲಿ: ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಉದ್ದೇಶದಿಂದ ರಚನೆಯಾದ ಮೈತ್ರಿಕೂಟ ಅಧಿಕಾರಕ್ಕೇರಲು ವಿಫ‌ಲವಾಗಿದೆ. ಆದರೂ ತನ್ನ ಉದ್ದೇಶದಲ್ಲಿ ಭಾಗಶಃ ಸಫ‌ಲವಾಗಿದೆ ಎನಿಸಿಕೊಂಡಿದೆ.

Advertisement

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟಕ್ಕೆ ಕೇವಲ 91 ಸ್ಥಾನ ಲಭ್ಯವಾಗಿತ್ತು. ಈ ಬಾರಿ ಸರ್ಕಾರ ರಚನೆ ಮಾಡದಿದ್ದರೂ 141 ಸ್ಥಾನಗಳ ಏರಿಕೆಯನ್ನು ಕಂಡಿದೆ. ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಮೈತ್ರಿಕೂಟ ರಚನೆ ಮಾಡಿಕೊಂಡರೂ ಸಹ ಸಣ್ಣಪುಟ್ಟ ಪಕ್ಷಗಳು ಸೇರಿ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫ‌ಲವಾಗಿದ್ದು, ಮೈತ್ರಿಕೂಟದ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡಿದೆ. ಅಲ್ಲದೆ, ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದು, ಚುನಾವಣೆಯ ಸಮಯದಲ್ಲಿ “ಹಿರಿಯ ನಾಯಕ ಸ್ಯಾಮ್‌ ಪಿತ್ರೋಡಾ ಸಂಪತ್ತು ಮರು ಹಂಚಿಕೆ ಹೇಳಿಕೆ’ ಕೂಡ ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆ ಉಂಟುಮಾಡಿತು.

ಪ್ರಧಾನಿ ಅಭ್ಯರ್ಥಿ ಇಲ್ಲದ್ದು:
ಎನ್‌ಡಿಎ ಮೈತ್ರಿಕೂಟದ ಬಳಿ ಇರುವ ಮೋದಿಯಂತಹ ಅಭ್ಯರ್ಥಿ ಇಂಡಿಯಾ ಮೈತ್ರಿಕೂಟದ ಬಳಿ ಇಲ್ಲದೇ ಇದ್ದುದ್ದು ಸಹ ಸೋಲಿಗೆ ಪ್ರಮುಖ ಕಾರಣವಾಗಿದೆ. ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್‌ರಂತಹ ಎಲ್ಲಾ ನಾಯಕರು ಪ್ರಧಾನಿ ಹುದ್ದೆಯತ್ತ ಕಣ್ಣು ಹಾಕಿದ್ದು, ಜನರಲ್ಲಿ ಮೈತ್ರಿಕೂಟದ ಮೇಲಿನ ವಿಶ್ವಾಸವನ್ನು ಕುಂದಿಸಲು ಕಾರಣವಾಯಿತು.

ಅಧಿಕಾರಕ್ಕೇರಲು ವಿಫ‌ಲವಾದರೂ ಇಂಡಿಯಾ ಮೈತ್ರಿಕೂಟದ ಸಾಧನೆಯನ್ನು ಅಲ್ಲಗಳೆಯುವಂತಿಲ್ಲ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಾಡಿಕೊಂಡ ಒಪ್ಪಂದಗಳು, ಚುನಾವಣೆಗೂ ಮುನ್ನ ಜನರನ್ನು ತಲುಪಿದ್ದು, ಕೇಂದ್ರ ಸರ್ಕಾರದ ವೈಫ‌ಲ್ಯಗಳನ್ನು ಜನರಿಗೆ ಅರ್ಥ ಮಾಡಿಸಿದ್ದು ಮೈತ್ರಿಕೂಟದ ಕೈ ಹಿಡಿದಿದೆ.

ಕಾಂಗ್ರೆಸ್‌ ಪಕ್ಷ ದೇಶದ ಪ್ರಾಚೀನ ಪಕ್ಷ ಎಂಬ ಹಣೆಪಟ್ಟಿಯನ್ನು ಹೊಂದಿದ್ದರೂ ಸಹ ಚುನಾವಣೆಗೂ ಮುನ್ನ ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು, ಇತರ ಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾಡಿಕೊಂಡಿತು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರನ್ನು ಬಿಜೆಪಿ ಪಕ್ಕಕ್ಕೆ ಸರಿಸಿದ್ದರ ಪರಿಣಾಮವನ್ನು ಯಶಸ್ವಿಯಾಗಿ ಬಳಸಿಕೊಂಡಿತು. ಮಾಯಾವತಿ ಅವರ ಪಕ್ಷಕ್ಕೆ ಸಿಗುತ್ತಿದ್ದ ಮತಗಳು ಒಟ್ಟಾಗಿ ಇಂಡಿಯಾ ಪಾಲಾಯಿತು.

Advertisement

ಇದಿಷ್ಟೇ ಅಲ್ಲದೇ ಚುನಾವಣೆ ಘೋಷಣೆಯಾಗುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪ್ರಚಾರ ಮಾಡುತ್ತಾ ಮೈತ್ರಿಕೂಟದತ್ತ ಜನರನ್ನು ಸೆಳೆದಿದ್ದು, ಈ ಚುನಾವಣೆಯಲ್ಲಿ ಲಾಭ ತಂದುಕೊಟ್ಟಿತು. ಹೀಗಾಗಿ ಅಧಿಕಾರಕ್ಕೇರುವಲ್ಲಿ ವಿಫ‌ಲವಾದರೂ ಗೆಲುವು ಕಂಡಷ್ಟೇ ಖುಷಿ ಮೈತ್ರಿಕೂಟದ ಪಾಲಾಗಿದೆ.

ಸೋಲಿಗೆ ಕಾರಣಗಳೇನು?
1. ಹೆಚ್ಚು ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿನ ವಿಫ‌ಲತೆ
2. ಮೋದಿ ರೀತಿಯ ಪ್ರಧಾನಿ ಅಭ್ಯರ್ಥಿ ಇಲ್ಲದೇ ಇದ್ದದ್ದು
3. ರಾಹುಲ್‌, ಪ್ರಿಯಾಂಕರ ಮೇಲಿನ ಹೆಚ್ಚು ಅವಲಂಬನೆ
4. ಕರ್ನಾಟಕ ಸೇರಿ ಭರವಸೆ ರಾಜ್ಯಗಳಲ್ಲಿ ಅನಿರೀಕ್ಷಿತ ಕುಸಿತ
5. ಕೊನೇ ಕ್ಷಣದಲ್ಲಿ ನಿತೀಶ್‌ ಮೈತ್ರಿಕೂಟ ತೊರೆದು ಹೋಗಿದ್ದು

Advertisement

Udayavani is now on Telegram. Click here to join our channel and stay updated with the latest news.

Next