ಮಡಿಕೇರಿ: ಕೇರಳಕ್ಕೆ ಹೋಗುತ್ತಿದ್ದ ಲಾರಿಯಿಂದ ಸೋರಿಕೆಯಾದ ಕೆಂಪು ದ್ರವ ಪದಾರ್ಥದಿಂದ ಸಿದ್ದಾಪುರ, ನೆಲ್ಲಿಹುದಿಕೇರಿ ವಿಭಾಗಗಳಲ್ಲಿ ಕೆಲವು ವಿದ್ಯಾರ್ಥಿಗಳು, ವರ್ತಕರು ಹಾಗೂ ಸಾರ್ವಜನಿಕರು ಅಸ್ವಸ್ಥರಾದ ಘಟನೆ ಸಂಭವಿಸಿದೆ.
ಕುಶಾಲನಗರ, ಸಿದ್ದಾಪುರ, ವೀರಾಜಪೇಟೆ ಮೂಲಕ ನೆರೆಯ ಕೇರಳಕ್ಕೆ ತೆರಳುತ್ತಿದ್ದ ಲಾರಿಯಿಂದ ದ್ರವ ಪದಾರ್ಥ ಸೋರಿಕೆಯಾಗಿದ್ದು, ಕೆಲವರು ಅಸ್ವಸ್ಥಗೊಂಡ ಕಾರಣ ಆತಂಕದ ವಾತಾವರಣ ಸೃಷ್ಟಿಯಾಯಿತು.
ಅತಿಯಾದ ಘಾಟಿನಿಂದ ಕೆಮ್ಮು, ನೆಗಡಿ, ಕಣ್ಣು ಉರಿ ಲಕ್ಷಣಗಳು ಕಂಡು ಬಂದವು. ವೀರಾಜಪೇಟೆ ಮುಖ್ಯ ರಸ್ತೆಯಲ್ಲಿಯೂ ದ್ರವ ಸೋರಿಕೆಯಾಗಿದ್ದು, ಘಾಟು ಬಂದ ಕಾರಣ ಪಟ್ಟಣ ಪಂಚಾಯತ್ ನೀರು ಹಾಕಿ ಶುಚಿಗೊಳಿಸುವ ಪ್ರಯತ್ನ ಮಾಡಿತು.
ಮೆಣಸಿನ ಸಾಸ್?
ಲಾರಿಯಲ್ಲಿ ಸಾಗಿಸುತ್ತಿದ್ದ ಮೆಣಸಿನ ಸಾಸ್‌ನಿಂದ ಈ ಅವಾಂತರ ಸೃಷ್ಟಿಯಾಯಿತು ಎಂದು ಹೇಳಲಾಗಿದೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರಾಘವೇಂದ್ರ ಅವರು ದ್ರವವನ್ನು ಪರೀಕ್ಷೆಗೆ ಒಳಪಡಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಅಸ್ವಸ್ಥಗೊಂಡವರು ಚೇತರಿಸಿಕೊಳ್ಳುತ್ತಿದ್ದು, ಕೊಡಗಿನ ಗಡಿ ಚೆಕ್‌ಪೋಸ್ಟ್ ಕುಟ್ಟದಲ್ಲಿ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.