ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮಂಗಳವಾರ ಏಕಾಏಕಿ ನೀರಿನ ಹರಿವು ಏರಿಕೆಯಾಗಿದ್ದು, ಪಾಣೆಮಂಗಳೂರಿನಲ್ಲಿ ಹೊಸ ಸೇತುವೆ ನಿರ್ಮಾಣದ ಕಾಮಗಾರಿಯಲ್ಲಿ ನಿರತವಾಗಿರುವ ಲಾರಿಯೊಂದು ನದಿಯ ಮಧ್ಯದಲ್ಲಿ ಬಾಕಿಯಾದ ಘಟನೆ ಮಂಗಳವಾರ ಸಂಭವಿಸಿದೆ. ಬಳಿಕ ಜೆಸಿಬಿ ಸಹಾಯದಿಂದ ಲಾರಿಯನ್ನು ಬದಿಗೆ ಸರಿಸಲಾಯಿತು.
ಮಳೆಗಾಲಕ್ಕೆ ಮುನ್ನವೇ ಸೇತುವೆಯ ಬಹುತೇಕ ಪಿಲ್ಲರ್‌ಗಳು ನಿರ್ಮಾಣಗೊಂಡಿದ್ದು, ಮಳೆಯ ವೇಳೆ ಕಾಮಗಾರಿ ಸ್ಥಗಿತಗೊಳಿಸ ಲಾಗಿತ್ತು. ಪ್ರಸ್ತುತ ಕಾಮಗಾರಿ ಮತ್ತೆ ಆರಂಭ ಗೊಂಡಿದ್ದು, ನದಿಗೆ ಮಣ್ಣು ತುಂಬಿಸಿ ಲಾರಿಗಳ ಸಾಗಾಟಕ್ಕಾಗಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ.
ಮಂಗಳವಾರ ಲಾರಿಯೊಂದು ನದಿಗೆ ಮಣ್ಣು ಹಾಕಿ ಹಿಂದಿರುಗು ವಷ್ಟರಲ್ಲಿ ನೀರು ಹೆಚ್ಚಳವಾಗಿ ಒಂದು ಭಾಗದ ಮಣ್ಣು ಕೊಚ್ಚಿ ಹೋದ ಪರಿಣಾಮ ಲಾರಿ ಮಧ್ಯದಲ್ಲೇ ಸಿಲುಕಿಕೊಂಡಿತು.ಅಣೆಕಟ್ಟುಗಳಲ್ಲಿನ ನೀರಿನ ವ್ಯತ್ಯಾಸ ಹೀಗಾಗಲು ಕಾರಣ ಎನ್ನಲಾಗುತ್ತಿದೆ.