Advertisement

ಭುವಿಯೊಳು ಆನಂದ ನೀಡಲೆಂದು ಅವತರಿಸಿದವ ಶ್ರೀಕೃಷ್ಣ ….

11:48 PM Aug 17, 2022 | Team Udayavani |

“ಕೃಷ್‌’ ಅಂದರೆ ಕೃಷಿಗೆ ಯೋಗ್ಯವಾದ ಭೂಮಿ. “ಣ’ ಅಂದರೆ ಆನಂದ ರೂಪ. ಭುವಿಯೊಳು ಆನಂದ ನೀಡಲೆಂದೇ ಅವತರಿಸಿದ ರೂಪವೇ ಶ್ರೀಕೃಷ್ಣ. ಭುವಿಗೆ ಭುವಿಯ ಸಜ್ಜನರ ಆನಂದಕ್ಕಾಗಿಯೇ ಇಳೆಗೆ ಇಳಿದು ಬಂದ ರೂಪ ಶ್ರೀಕೃಷ್ಣ.

Advertisement

ಭಗವಂತನ ಅವತಾರದ ಉದ್ದೇಶ ಜ್ಞಾನ ಕಾರ್ಯ ಹಾಗೂ ಬಲಕಾರ್ಯ. ಇದೆರಡನ್ನೂ ಭುವಿಯಲ್ಲಿ ತೋರಿದ ರೂಪವೇ ಕೃಷ್ಣ ರೂಪ. ಮನುಕುಲ ಮಾನವ ನಾಗಿ ಬದುಕಲು ಮರೆತಾಗ ಮನುಷ್ಯರಾಗಿ ಬದು ಕಲು ಕಲಿಯಿರಿ ಎಂದು ಎಚ್ಚರಿಸಿದ ರೂಪ. ಅದಕ್ಕೆಂದೇ ನರನಾಗಿ ಬಂದು ನರನಂತೆ ನಟಿಸಿ ಮೆರೆದ ರೂಪ.

ಬದುಕಿನಲಿ ಸತ್ಯ, ಧರ್ಮಗಳಿಗೆ ಹೊಸ ಅರ್ಥವನ್ನು ನೀಡಿದ ರೂಪ. ಸಜ್ಜನರ ಹಿತವೇ ಸತ್ಯ, ಸಜ್ಜನರ ಬದುಕಿಗೆ ಹಿತವಾದ ಆಚರಣೆಯೇ ಧರ್ಮ (ಯತ್ಸತಾಂ ಹಿತಮತ್ಯಂತಂ ತತ್‌ ಸತ್ಯಮಿತಿ ನಿಶ್ಚಯಃ) ಎಂದು ತಿಳಿಹೇಳಿ ಅದರಂತೆ ನಡೆದು ತೋರಿದ ರೂಪ.

ಅವತಾರದ ಒಂದೊಂದು ಲೀಲೆಯಲ್ಲೂ ಲೋಕ ಶಿಕ್ಷಣವನ್ನು ತೋರಿದ ರೂಪ. ಹುಟ್ಟಿನಿಂದಲೇ ಹೆತ್ತವರಿಂದ ಬೇರ್ಪಟ್ಟು ದೂರದ ನಂದನ ಮನೆಯಲ್ಲಿ ಆನಂದದಿಂದ ಬೆಳೆದ, ಸಾಕಿದ ನಂದ ಯಶೋದೆಯರ ಮುದ್ದಿನ ಕಂದನಾಗಿ ಬೆಳೆದ, ಗೋಪ ಗೋಪಿಯರ ಮನಕೆ ಆನಂದವನ್ನು ನೀಡಿದ ಪುಟ್ಟ ಕಂದ ಕೃಷ್ಣ. ಗೋಪಿಯರ ಜತೆ ನಲಿದಾಡಿದ, ಕ್ರೀಡಿಸಿದ, ಬಯಸಿ ಬಂದ ಎಲ್ಲರಿಗೂ ಆನಂದ ನೀಡಿದ, ಬಯಸದೇ ದ್ವೇಷದಿಂದ ಬಂದವರನ್ನು ತರಿದ.

ಪೂತನಿಯ ರಕ್ತಹೀರಿದ, ಹೊರ ಆಚರಣೆ ನೋಡದೆ ಒಳಭಾವನೆಯನ್ನು ಪೂತನಿಯಲ್ಲಿ ಕಂಡ. ಹಾಗಾಗಿ ಅವಳನ್ನು ಕೊಂದ. ರಾಮನಾದಾಗಲೂ ತಾಟಕಿಯನ್ನೇ ಮೊದಲು ಸಂಹರಿಸಿದ್ದ. ಸ್ತ್ರೀ ವಧೆ ಉಚಿತವೇ ? ಪ್ರಶ್ನೆ. ಪ್ರಜಾ ರಕ್ಷಣ ಕಾರಣದಿಂದ ಅದು ದೋಷವೇ ಅಲ್ಲವೆಂದು ಬಹಳ ಬಾಲಕರ ರಕ್ತಪಿಪಾಸಿಯಾದ ಪೂತನಿಯನ್ನು ಕೊಂದ. ಗೋಕುಲಕ್ಕೆ ಆನಂದ ನೀಡಿದ.

Advertisement

ಕೃಷ್ಣ ಪರಿಸರ ಪ್ರೇಮಿ, ಜಲ, ವಾಯುಗಳ ರಕ್ಷಣೆಯ ಅರಿವನ್ನು ಮೂಡಿಸಿದ, ಕಾಳಿಯ, ಯಮುನೆಯ ಮಡುವನ್ನು ವಿಷದಿಂದ ಕಲುಷಿತಗೊಳಿಸಿದಾಗ ಅವನನ್ನು ನಿಗ್ರಹಿಸಿ, ಯಮುನೆಯ ಜಲವನ್ನು, ನೆಲವನ್ನು ಶುದ್ಧೀಕರಿಸಿ ಪರಿಸರ ಪ್ರೇಮಿಯಾಗಿ ತೋರಿಬಂದ. ರಾಮನಾಗಿ ಶಬರಿಯ ಆತಿಥ್ಯ ಸ್ವೀಕರಿಸಿದವ, ಕೃಷ್ಣನಾಗಿ ಕುಬೆjಯ ಗಂಧವನ್ನು ಸ್ವೀಕರಿಸಿ ವರಿಸಿದ, ಹರಿಸಿದ. ಜಾತಿ ಮತಗಳನ್ನು ಮೀರಿ ಕೃಷ್ಣ ಹಸನ್ಮುಖೀ ಆನಂದ ರೂಪಿ ಆದರೂ ಎಲ್ಲರಿಗೂ ಒಂದೇ ರೀತಿ ಕಾಣಿಸಲೇ ಇಲ್ಲ. ಅವರವರ ಯೋಗ್ಯತೆ ಯಂತೆ ಅವರವರಿಗೆ ಕಂಡು ಬಂದ.

ಜಟ್ಟಿಗಳಿಗೆ ಬರಸಿಡಿಲಿನಂತೆ ರೌದ್ರನಾಗಿಯೂ, ಸಾಮಾನ್ಯರಿಗೆ ಮಹಾಪುರುಷನಂತೆ ಅದ್ಭುತ ನಾಗಿಯೂ ಸ್ತ್ರೀಯರಿಗೆ ಮನ್ಮಥನಂತೆ ಶೃಂಗಾರ ರೂಪಿ ಯಾಗಿಯೂ, ಗೊಲ್ಲರಿಗೆ ಬಂಧುವಿನಂತೆ, ಹಾಸ್ಯ ನಟನಂತೆ, ದುಷ್ಟರಾಜರಿಗೆ ಶಾಸನ ಮಾಡುವ ವೀರನಂತೆ, ತಂದೆ ತಾಯಿಗಳಿಗೆ ಅಕ್ಕರೆಯ ಶಿಶುವಾಗಿ, ಕಂಸನಿಗೆ ಮೃತ್ಯುವಿನಂತೆ ಭಯಾನಕನಾಗಿ, ನಾರದಾದಿ ಯೋಗಿಗಳಿಗೆ ಶಾಂತಮೂರ್ತಿಯಾಗಿ, ಯಾದವರಿಗೆ ಪಾಲಕನಾಗಿ, ದಯಾಮೂರ್ತಿಯಾಗಿ ಹೀಗೆ ನವರಸ ಭರಿತನಾಗಿ ಕಂಡುಬಂದವ ಶ್ರೀಕೃಷ್ಣ.

ಕಂಸನನ್ನು ಕೊಂದು ಉಗ್ರಸೇನನಿಗೆ ಪಟ್ಟ ಕಟ್ಟಿದ, ದೇವಕಿ, ವಸುದೇವನನ್ನು ಸೆರೆಯಿಂದ ಬಿಡಿಸಿದ. ಅವರಲ್ಲಿ ಕ್ಷಮೆ ಯಾಚಿಸಿದ. ತಂದೆ ತಾಯಿಗಳ ರಕ್ಷಣೆ ಮಕ್ಕಳ ಕರ್ತವ್ಯ. ನಮ್ಮಿಂದ ನಿಮ್ಮ ರಕ್ಷಣೆ ಮಾಡಲಾಗಲಿಲ್ಲ. ನೂರು ವರ್ಷ ಬದುಕಿ ಹೆತ್ತವರ ಸೇವೆ ಮಾಡಿದರೂ ಋಣ ತೀರಿಸಲಾಗದು. ಈ ಸಾಧನಾ ಶರೀರ ಬಂದುದುದೇ ಹೆತ್ತವರಿಂದ. ತನು, ಮನ, ಧನಗಳಿಂದ ಅವರ ಸೇವೆ ಮಾಡದವ ಬದುಕಿಯೂ ಸತ್ತಂತೆ ಎಂದು ಸಮಾಜಕ್ಕೆ, ಹೆತ್ತವರ ಸೇವೆ ಪ್ರತಿಯೊಬ್ಬ ಮಕ್ಕಳ ಕರ್ತವ್ಯ ಎಂಬ ದೊಡ್ಡ ಸಂದೇಶ ನೀಡಿದ ಕೃಷ್ಣ. ಅದಕRೆಂದೇ ಅವತರಿಸಿದ ವನಲ್ಲವೇ. ಸಂಸ್ಕಾರ, ಸಂಸ್ಕೃತಿಯ ರಕ್ಷಣೆ, ಅನುಸರಣೆ ಗಾಗಿ ಮಾರ್ಗದರ್ಶನ ನೀಡಿದ ಕೃಷ್ಣ. 18 ದಿನಗಳ ಮಹಾಯುದ್ಧ ಮುಗಿದು ಕೃಷ್ಣ ಕುರುಕ್ಷೇತ್ರದಿಂದ ದ್ವಾರಕೆಗೆ ಮರಳಿದ ಸಂದರ್ಭ, ದ್ವಾರಕೆಯ ಜನ ಗೌರವದಿಂದ ಎದುರುಗೊಂಡಿದ್ದಾರೆ. ಕೃಷ್ಣನೂ ಎಲ್ಲರನ್ನೂ ಗೌರವಿಸಿದ್ದಾನೆ.

ಹಿರಿಯರಿಗೆ ಬಾಗಿ ನಮಿಸಿದ (ಪ್ರಹ್ವಾಭಿ ವಂದನ), ಕೆಲವರನ್ನು ತಬ್ಬಿಕೊಂಡ (ಆಶ್ಲೇಷಾ), ಕೆಲವರಿಗೆ ಹಸ್ತಲಾಘವ ನೀಡಿದ (ಕರಸ್ಪರ್ಶ), ಕೆಲವರನ್ನು ಕಂಡು ನಕ್ಕು ಕಟಾಕ್ಷ ಬೀರಿದ (ಸ್ಮಿತೇಕ್ಷಣೈಃ), ಸಂಬಂಧಕ್ಕೆ ತಕ್ಕಂತೆ ಎಲ್ಲ ವರ್ಗದವರನ್ನು ಗೌರವಿಸಿದ. ಮನುಷ್ಯ ಹೇಗೆ ವರ್ತಿಸಬೇಕೆಂದು ಸ್ವತಃ ನಡೆದು ತೋರಿಸಿದವ ಕೃಷ್ಣ. ಸ್ವತಃ ತಾನೇ ಮುಂಜಾನೆ ಬ್ರಾಹ್ಮಿà ಮುಹೂರ್ತದಲ್ಲಿ ಎದ್ದು ಧ್ಯಾನಕ್ಕೆ ತೊಡಗಿ ನಮಗೂ ಪ್ರಾತಃಕಾಲ ಧ್ಯಾನಕ್ಕೆ ಯೋಗ್ಯ ಎಂದು ಸೂಚಿಸಿದ.

ಕಂಸನನ್ನು ಕೊಂದು ಭಯದಿಂದ ದಿಕ್ಕಾಪಾಲಾಗಿದ್ದ ಯದು, ವೃಷಿ¡, ಅಂಧಕ, ಮಧು, ದಾಶಾರ್ಹ, ಕುಕುರ ಮುಂತಾದ ಎಲ್ಲ ಯಾದವರನ್ನು ಮಥುರೆಯಲ್ಲಿ ಸುಖದಿಂದ ನೆಲೆಸುವಂತೆ ಮಾಡಿದ. ಜರಾಸಂಧನನ್ನು ಭೀಮದ ಮೂಲಕ ಸಂಹರಿಸಿ ಸಹದೇವನಿಗೆ, ನರಕಾಸುರನನ್ನು ಸಂಹರಿಸಿ ಭಗದತ್ತನಿಗೆ ಸಿಂಹಾಸನ ಕೊಡಿಸಿದ. ಮಗಧದಲ್ಲಿ ಬಂಧಿಯಾಗಿದ್ದ ಎಲ್ಲ ರಾಜಕುಮಾರರನ್ನೂ, ನರಕಾಸುರನ ಬಳಿ ಸೆರೆ ಇದ್ದ ಎಲ್ಲ ಸ್ತ್ರೀಯರನ್ನು ರಕ್ಷಿಸಿ ಎಲ್ಲರಿಗೂ ಆನಂದವನ್ನಿತ್ತ ಶ್ರೀಕೃಷ್ಣ.

ಕೃಷ್ಣ ಎಂದೂ ಕೋಪಗೊಂಡವನಲ್ಲ. ಹಸನ್ಮುಖೀ, ಅದಕ್ಕೆೆಂದೇ ಗೀತೆ “ಹಸನ್ನಭಾಷತ, ಪ್ರಹಸನ್ನಿದಮ ಬ್ರವೀತ್‌’ ಎಂದಿದೆ. ಆದರೆ ಜ್ಞಾನನಾಶದ ವಿಷಯದಲ್ಲಿ ಮಾತ್ರ ಬಹಳ ನಿಷ್ಠುರಿ. ಎಲ್ಲಿ ಜ್ಞಾನನಾಶ ವಾಗುತ್ತದೋ ಅಲ್ಲಿ ಎಲ್ಲರನ್ನೂ ಎಚ್ಚರಿಸಿದಾತ. ಭೀಷ್ಮ ನಿರ್ಯಾಣದಲ್ಲಿ ಧರ್ಮಜನನ್ನು ಎಚ್ಚರಿಸಿ ಅವನಿಗೆ ಭೀಷ್ಮನಿಂದ ಜ್ಞಾನಧಾರೆಯನ್ನು ಎರೆಸಿದ. ಗೀತೆಯ ಮೂಲಕ ಸಮಗ್ರ ಮನುಕುಲಕ್ಕೆ, ಭಗವತ್‌ ಪ್ರಜ್ಞೆ, ಜ್ಞಾನ, ಕರ್ಮಗಳ ಮಹತ್ವವನ್ನು ಅರುಹಿದ. ಉದ್ಧವನ ಮೂಲಕವೂ ಅವತಾರ ಸಮಾಪ್ತಿ ಸಮಯದಲ್ಲಿ ಪುನಃ ಜ್ಞಾನವನ್ನು ಈ ಲೋಕಕ್ಕೆ ಉಪದೇಶದ ಮೂಲದ ಅರುಹಿದ.

ಹೀಗೆ ಜ್ಞಾನ, ಬಲ ಕಾರ್ಯಗಳೆರಡನ್ನೂ ಜತೆಯಾಗಿ ತೋರಿ ಧರೆಯೊಳು ಸ್ವತಃ ಆನಂದರೂಪಿಯಾಗಿ ಎಲ್ಲರಿಗೂ ಆನಂದದ ಸೆಲೆಯಾಗಿ, ಧರ್ಮರಕ್ಷಕನಾಗಿ, ಜ್ಞಾನದಾಯಿಯಾಗಿ, ನಿರಂತರ ಮನದೊಳು ನೆನೆಯುವ ರೂಪಿಯಾಗಿ ಅವತರಿಸಿದ ಕೃಷ್ಣ ನಮ್ಮೆಲ É ರಿಗೂ ಆನಂದ ನೀಡಲಿ.

-ಚಿಪ್ಪಗಿರಿ ನಾಗೇಂದ್ರ ಆಚಾರ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next