Advertisement

ದೀವಗಿಯಲ್ಲಿ ಚಂದಾವರ ಹನುಮಂತನ ಸವಾರಿ

05:08 PM Jun 10, 2022 | Team Udayavani |

ಕುಮಟಾ: ಒಂದೆಡೆ ಜೈ ಶ್ರೀರಾಮ ಎಂಬ ಘೋಷಣೆ. ಇನ್ನೊಂದೆಡೆ ದಾರಿಯುದ್ದಕ್ಕೂ ಜನಸಾಗರ. ಮತ್ತೂಂದೆಡೆ ಗುಡ್ಡ, ಬೆಟ್ಟ, ಕಲ್ಲುಗಳೆನ್ನದೆ ಸರಾಗವಾಗಿ ಸಾಗುವ ಪಲ್ಲಕ್ಕಿ. ಇದನ್ನೆಲ್ಲ ನೋಡುತ್ತಿರುವ ಜನ ಭಕ್ತಿ ಪರವಶರಾಗಿ ಮೂಕವಿಸ್ಮಿತರಂತೆ ನಿಂತು ನಮಸ್ಕರಿಸುತ್ತಿದ್ದಾರೆ.

Advertisement

ಹೌದು ಇದೆಲ್ಲ ಕಾಣಸಿಕ್ಕಿದ್ದು ಚಂದಾವರ ಸೀಮೆಯ ಹನುಮಂತ ದೇವರ ಪಲ್ಲಕ್ಕಿ ಸವಾರಿ ವೇಳೆ.

ತಾಲೂಕಿನ ದೀವಗಿ ಶ್ರೀ ರಾಮಾಂಜನೇಯ ಮಠದಲ್ಲಿ ಕೆಲ ದಿನಗಳಿಂದ ವಿರಾಜಮಾನನಾಗಿರುವ ಹನುಮಂತ ಪ್ರತಿನಿತ್ಯ ಗ್ರಾಮದ ಹಲವು ಭಾಗಗಳಿಗೆ ಸವಾರಿ ಮೂಲಕ ಹೊರಡುತ್ತಾನೆ. ಆ ಮೂಲಕ ಭಕ್ತರ ಮನೆಯಂಗಳದಲ್ಲಿ ನಿಂತು ದರುಶನ ನೀಡಿ, ಅವರ ಸಕಲ ಕಷ್ಟಗಳನ್ನು ದೂರ ಮಾಡುತ್ತಿದ್ದಾನೆ.

ಪ್ರತಿನಿತ್ಯ ಬೆಳಗಿನ ಜಾವ ಶ್ರೀಮಠದಲ್ಲಿ ಅಥವಾ ಪಲ್ಲಕ್ಕಿ ಇರುವ ಯಾವುದೇ ಗ್ರಾಮದ ದೇವಾಲಯಗಳಲ್ಲಿ ಅಭಿಷೇಕ, ರುದ್ರಾಭಿಷೇಕ, ಪಂಚಾಮೃತ ಪೂಜೆ, ಅಭಿಷೇಕ, ಫಲಪಂಚಾಮೃತ ಅಭಿಷೇಕ ಸೇವೆಗಳು ಇರುತ್ತದೆ. ಒಂದು ಘಂಟೆಗೆ ಮಹಾಪೂಜೆ ಇರುತ್ತದೆ. ನಂತರ ಪುಡಿ ಪ್ರಸಾದಗಳನ್ನು ಹಚ್ಚುವ ಮೂಲಕ ಭಕ್ತರು ತಮಗೆ ಆಗಬೇಕಾದ ಕೆಲಸ ಕಾರ್ಯ, ರೋಗಭಾದೆ, ಮೋಡಿಮಂತ್ರ, ಮನೆಜಾಗ, ಬಾವಿಜಾಗ, ಮಂಗಳಕಾರ್ಯ, ವ್ಯಾಪಾರ ವ್ಯವಹಾರ ಸೇರಿದಂತೆ ಅನೇಕ ವಿಷಯಗಳ ಕುರಿತು ಆಂಜನೇಯನಿಂದ ಅಪ್ಪಣೆ ಪಡೆದು, ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳುತ್ತಾರೆ.

ಮಧ್ಯಾಹ್ನ 3ರ ಸುಮಾರಿಗೆ ಪಲ್ಲಕ್ಕಿಯಲ್ಲಿರುವ ಹನುಮನಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಸಂಬಂಧಪಟ್ಟ ಗ್ರಾಮದವರು ಪಲ್ಲಕ್ಕಿಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಾರೆ. ಈ ವೇಳೆ ಗ್ರಾಮಸ್ಥರು ತಮ್ಮ ಮನೆಗೆ ಬರುವಂತೆ ತೆಂಗಿನ ಕಾಯಿ ಇಟ್ಟು ಕರೆಯುತ್ತಾರೆ. ಆಗ ಪಲ್ಲಕ್ಕಿ ಅವರ ಮನೆಯತ್ತ ಸಾಗುತ್ತದೆ. ಇದು ಸ್ವತಃ ಹನುಮಂತನೇ ಪಲ್ಲಕ್ಕಿಯನ್ನು ಹೊತ್ತವರ ಮೂಲಕ ಕರೆದೊಯ್ಯತ್ತಾನೆ. ಹೆಗಲು ಕೊಟ್ಟವನ್ನು ತನ್ನ ಇಚ್ಚೆಗನುಸಾರವಾಗಿ ತಿರುಗಿಸುತ್ತಾ ಸಾಗುತ್ತಾನೆ ಪಲ್ಲಕ್ಕಿಯ ದಂಡಿಗೆ ಹನುಮ. ಸವಾರಿ ಸಾಗುವ ಈ ಪಲ್ಲಕ್ಕಿಗೆ ದಂಡಿಗೆ ಹನುಮ ಎಂದೂ ಕರೆಯಲಾಗುತ್ತದೆ. ಇಲ್ಲಿ ಸವಾರಿ ಮೂರ್ತಿಯನ್ನು ಕುಳ್ಳಿರಿಸಿ ಇಬ್ಬರು ಅಥವಾ ನಾಲ್ಕು ಜನ ಹೊತ್ತು ಸಾಗುತ್ತಾರೆ. ಹಲವೆಡೆ ಹನುಮನ ಪಲ್ಲಕ್ಕಿ ಇದೆಯೆಂದಾದರೂ ಚಂದಾವರ ಹನುಂಮತನ ಪಲ್ಲಕ್ಕಿ ಅತ್ಯಂತ ಶಕ್ತಿಯುತವಾದದ್ದು ಹಾಗೂ ವಿಶೇಷವಾದದ್ದು ಎನ್ನುವ ನಂಬಿಕೆ ಇದೆ. ಇದನ್ನು ಹೊತ್ತವರಿಗೆ ದೇವರ ಶಕ್ತಿಯೇನು ಎಂಬುದು ಅನುಭವಕ್ಕೆ ಬರುತ್ತದೆ. ಈ ಪಲ್ಲಕ್ಕಿಯನ್ನು ಹೊರುವಾಗ ಭಾರವಾಗಿ ಕಂಡರೂ ಹೊತ್ತ ನಂತರ ಅದರ ಅನುಭವವೇ ಬೇರೆ. ಇದು ಹನುಮನ ಮಹಿಮೆ ಎಂದು ಹೇಳಲಾಗುತ್ತದೆ.

Advertisement

ಕಳೆದ ಹತ್ತರಿಂದ ಹನ್ನೊಂದು ವರ್ಷದ ನಂತರ ಶ್ರೀ ದೇವರ ಪಲ್ಲಕ್ಕಿಯೂ ದೀವಗಿ ಮಠಕ್ಕೆ ಬಂದಿದ್ದು, ನಾಲ್ಕು ದಿನ ಮಠದಲ್ಲಿದ್ದು ನಂತರ 6 ದಿನ ಈಶ್ವರ ದೇವಸ್ಥಾನದಲ್ಲಿರುತ್ತದೆ. ನಮ್ಮ ಚಂದಾವರ ಸೀಮೆ ಎಂದರೆ 101 ಬೈಟೆಕ್‌. ಪ್ರತಿ ವರ್ಷವೂ ಪಲ್ಲಕ್ಕಿ ಮೆರವಣಿಗೆ ಹೋಗುವ ಪ್ರತೀತಿ ಇದೆ. ಕಾರ್ತಿಕ ಅಮವಾಸ್ಯೆಯಂದು ಚಂದಾವರದಲ್ಲಿ ವನಭೋಜನವಿರುತ್ತದೆ. ಆ ದಿನಂದಂದು ಶ್ರೀ ದೇವರು ನದಿಯ ಸಮೀಪ ಬಂದು ವನಭೋಜನ ಮುಗಿಸಿ ಲಾಲಕಿ ಮೆರವಣಿಗೆ ನಡೆಸಲಾಗುತ್ತದೆ. ವಿಶೇಷವಾಗಿ ಯಕ್ಷಗಾನ ಸೇವೆಯೂ ಇರುತ್ತದೆ. ತದ ನಂತರ ಒಂದುವಾರದ ಬಳಿಕ ಅದೇ ಮಾಸದಲ್ಲಿ ಶ್ರೀ ದೇವರು ಸಂಚಾರಕ್ಕೆ ತೆರಳುತ್ತದೆ.

ಒಂದು ಗ್ರಾಮದಲ್ಲಿ 5 ಕಿ.ಮೀ. ದೂರದವರೆಗೆ ಮಾತ್ರ ಸಂಚರಿಸಲಾಗುತ್ತದೆ. ಹೋಗುವಾಗ ದಾಸರು, ಐಗಳರು, ಬೋಯಿ, ಅರ್ಚಕರು ಸೇರಿ ನಾಲ್ಕು ಜನ ಇರುತ್ತೇವೆ. ಪಲ್ಲಕ್ಕಿಯನ್ನು ಕರೆದುಕೊಂಡು ಹೋಗಲು ಗ್ರಾಮದ ಜನರಿರುತ್ತಾರೆ. –ನಾಗರಾಜ ಮಂಜುನಾಥ ಭಟ್ಟ, ಹನುಮಂತ ದೇವರ ಅರ್ಚಕರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next