Advertisement

Loophole: ನಿಮ್ಮ ಪಡಿತರ ಅಪಾಯದಲ್ಲಿ? ಸೇವಿಸುವ ಆಹಾರ ಎಷ್ಟು ಸುರಕ್ಷಿತ?

03:24 AM Dec 16, 2024 | Team Udayavani |
ಬೆಂಗಳೂರು: ರಾಜ್ಯದ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಲೋಪದೋಷಗಳು ಕಂಡುಬಂದಿವೆ. ಈ ಆಹಾರಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳೂ ಕಾಡಲಾರಂಭಿಸಿವೆ.

ರಸಗೊಬ್ಬರ, ಕೀಟನಾಶಕಗಳ ಜತೆಗೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿರುವ ಅಂಶ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಬೆಳಕಿಗೆ ಬಂದ ಅನಂತರ ಮೇಲಿನ ಪ್ರಶ್ನೆಗಳು ಹುಟ್ಟಿಕೊಂಡಿವೆ. ಹೀಗಾಗಿ ಸೇವಿಸುತ್ತಿರುವ ಆಹಾರ ಅಪಾಯ ಮಟ್ಟದಲ್ಲಿದೆಯೇ ಎಂಬ ಸಂಶಯ ಉಂಟಾಗಿದೆ.  ಇದು 2017-2022ರವರೆಗೆ ಆಯ್ದ ಜಿಲ್ಲೆಗಳಲ್ಲಿ ಸಿಎಜಿ ನಡೆಸಿದ ತನಿಖಾ ವರದಿಯ ಭಾಗವಾಗಿದ್ದು, ಈ ಲೋಪದೋಷಗಳ ಸುಧಾರಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ವಿಧಾನಸಭೆಯಲ್ಲಿ ಮಂಡಿಸಲಾದ 2017-2022ರವರೆಗಿನ ಸಾರ್ವಜನಿಕ ವಿತರಣ ವ್ಯವಸ್ಥೆಯ ಸರಬರಾಜು ನಿರ್ವಹಣೆ ಮೇಲಿನ ಕಾರ್ಯನಿರ್ವಹಣ ಲೆಕ್ಕಪರಿಶೋಧನೆಯಲ್ಲಿ ಪಡಿತರ ಆಹಾರ ಧಾನ್ಯದ ಸಂಗ್ರಹ, ಸಾಗಣೆ, ನಿರ್ವಹಣೆ, ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆಯಲ್ಲಿ ಅನೇಕ ಎಡವಟ್ಟುಗಳನ್ನು ಸಿಎಜಿ ಗುರುತಿಸಿದೆ. ಜತೆಗೆ ಹಲವು ಸುಧಾರಣೆ ಕ್ರಮಗಳನ್ನು ಶಿಫಾರಸು ಮಾಡಿದೆ.

ನ್ಯಾಯಬೆಲೆ ಅಂಗಡಿಗಳ ಮೂಲ ಸೌಕರ್ಯದಲ್ಲಿ ಕೊರತೆಯಿದೆ. ಆಹಾರ ಧಾನ್ಯಗಳನ್ನು ರಸಗೊಬ್ಬರ, ಕೀಟನಾಶಕಗಳ ಜತೆಗೆ ಸಂಗ್ರಹಿಸಿಟ್ಟಿರುವ ನಿದರ್ಶನಗಳಿವೆ. ಈ ಮೂಲಕ ಸುರಕ್ಷಿತ ಆಹಾರ ಸಂಗ್ರಹಣೆ ಅಭ್ಯಾಸದ ಪಾಲನೆ ಆಗುತ್ತಿಲ್ಲ ಎಂದು ಸಿಎಜಿ ಆಕ್ಷೇಪಿಸಿದೆ. ಅನಧಿಕೃತ, ನವೀಕರಿಸದ ತೂಕದ ಮಾಪನಗಳ ಬಳಕೆ, ಕೆಲಸದ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗಳು ಮುಚ್ಚಿರುವುದನ್ನು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖೀಸಿದೆ.

Advertisement

ಇನ್ನು ಪಡಿತರ ಸಾಗಾಣಿಕೆದಾರರು ಅಧಿಕೃತ ವಾಹನವನ್ನು ಬಳಸದೇ ಪ್ರಯಾಣಿಕರ ಸಾಗಣೆ ವಾಹನಗಳನ್ನು ಬಳಸಿದ್ದಾರೆ. ಅಲ್ಲದೆ ಸಾಗಾಟ ವಾಹನಕ್ಕೆ ಜಿಪಿಎಸ್‌ ಬಳಸಿಲ್ಲ. ಜತೆಗೆ ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗಗಳಲ್ಲಿ ಸಂಚರಿಸಲಾಗಿದೆ. ಇಂತಹ ಅಕ್ರಮಗಳು ಘಟಿಸಿದ್ದರೂ ಬಿಲ್‌ ಚುಕ್ತಾ ಮಾಡಿರುವ ಅಧಿಕಾರಿಗಳ ಕ್ರಮವನ್ನು ಸಿಎಜಿ ಪ್ರಶ್ನಿಸಿದೆ.

ಅಧಿಕಾರಿಗಳನ್ನು ಹೊಣೆ ಮಾಡಿ
ಅಕ್ರಮ ಕಂಡುಬಂದಾಗ ವಶಪಡಿಸಿಕೊಂಡ ದಾಸ್ತಾನುಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳದಿರುವುದರಿಂದ ಆಹಾರ ಧಾನ್ಯಗಳು ನಷ್ಟವಾಗಿ ಮಾನವ ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ಇದಕ್ಕೆ ಕಾರಣವಾದ ಅಧಿಕಾರಿಗಳನ್ನು ಈ ಬಗ್ಗೆ ಹೊಣೆ ಮಾಡುವಂತೆ ಸಿಎಜಿ ಸೂಚಿಸಿದೆ.
ಗೋಣಿ ಲೆಕ್ಕದಿಂದ 11.84 ಕೋಟಿ ರೂ. ನಷ್ಟ!
ಆಹಾರ ಧಾನ್ಯಗಳ ಒಟ್ಟು ತೂಕದಿಂದ ಚೀಲಗಳ ತೂಕವನ್ನು ಕಡಿಮೆ ಮಾಡಿದರೆ ಆಹಾರ ಧಾನ್ಯಗಳ ನಿವ್ವಳ ತೂಕ ಸಿಗುತ್ತದೆ. ಆದರೆ ಈ ಕ್ರಮವನ್ನು ಅನುಸರಿಸದ ಕಾರಣ ಒಟ್ಟು 11.84 ಕೋಟಿ ರೂ. ಮೌಲ್ಯದಷ್ಟು ಪಡಿತರ ಕಡಿಮೆ ಪೂರೈಕೆಯಾಗಿದೆ ಎಂದು ಸಿಎಜಿ ಹೇಳಿದೆ.

ಇನ್ನು ನ್ಯಾಯಬೆಲೆ ಅಂಗಡಿಗಳಿಗೆ ಅವುಗಳ ತಾಲೂಕು ವ್ಯಾಪ್ತಿಯ ದಾಸ್ತಾನು ಕೇಂದ್ರಗಳಿಗಿಂತ ಸಮೀಪದ ದಾಸ್ತಾನು ಕೇಂದ್ರಗಳಿಂದ ಪಡಿತರ ಪೂರೈಕೆ ಮಾಡಿದರೆ ಸಾಗಾಣಿಕೆ ವೆಚ್ಚ ಉಳಿತಾಯವಾಗಲಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ. ತಿಂಗಳು ಪೂರ್ತಿ ಪಡಿತರ ವಿತರಿಸದಿರುವುದು, ಅಂಗಡಿ ಮುಚ್ಚಿರುವುದು, ಫಲಾನುಭವಿಗಳಿಗೆ ಎಸ್‌ಎಂಎಸ್‌ ಮೂಲಕ ಸೂಚನೆ ನೀಡದಿರುವುದು, ಅನಧಿಕೃತ ಸ್ಥಳದಲ್ಲಿ ಆಹಾರ ಧಾನ್ಯಗಳ ಸಂಗ್ರಹಣೆ ಮುಂತಾದ ಲೋಪಗಳನ್ನು ಸಿಎಜಿ ಪತ್ತೆ ಹಚ್ಚಿದೆ.

ಶೇ.74 ಸಿಬಂದಿ ಕೊರತೆ
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಶೇ. 74 ಸಿಬಂದಿ ಕೊರತೆಯಿದೆ. ಮಂಜೂರಾಗಿರುವ 1,494 ಹುದ್ದೆಗಳಲ್ಲಿ 1,107 ಹುದ್ದೆಗಳು ಖಾಲಿ ಉಳಿದಿದೆ ಎಂದು ಸಿಎಜಿ ವರದಿ ಉಲ್ಲೇಖೀಸಿದೆ.
ಸಿಎಜಿ ಶಿಫಾರಸುಗಳೇನು?
ಆಹಾರ ನಿಗಮದ ಗೋದಾಮಿನ ನಿರ್ವಹಣೆಗೆ ಮಾರ್ಗಸೂಚಿ ರೂಪಿಸಬೇಕು

ನ್ಯಾಯಬೆಲೆ ಅಂಗಡಿಗಳನ್ನು ಇಲಾಖೆ ನಿಯಮಿತವಾಗಿ ತಪಾಸಣೆ ನಡೆಸಬೇಕು

ತಪ್ಪಿತಸ್ಥ ನ್ಯಾಯಬೆಲೆ ಅಂಗಡಿ ಮಾಲಕರ ಪರವಾನಿಗೆ ರದ್ದು

ತಪ್ಪು ತೂಕ ಸಾಧನ ಬಳಕೆಗೆ ದಂಡ ವಿಧಿಸಿ, ಸಿಬಂದಿ ಹೊಣೆ ಮಾಡಬೇಕು

ಆಹಾರ ಧಾನ್ಯಗಳ ಲೆಕ್ಕ ವಿಡಲು ಪ್ರಮಾಣಿತ ಕಾರ್ಯಾಚರಣ ವಿಧಾನ ರಚನೆ
Advertisement

Udayavani is now on Telegram. Click here to join our channel and stay updated with the latest news.

Next