Advertisement

ನೋಟದಾಗೆ ನಗೆಯ ಮೀಟಿ…

11:38 AM Nov 07, 2017 | |

ಸಾಮಾನ್ಯವಾಗಿ ಮನುಷ್ಯರು ತಮ್ಮ ಗಾತ್ರಕ್ಕಿಂತಲೂ ಕಡಿಮೆ ಇರುವ ವಸ್ತು ಮತ್ತು ಜೀವಿಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ, ಗಾತ್ರದಲ್ಲಿ ತಮಗಿಂತಲೂ ದೊಡ್ಡದಾದ ವಸ್ತು ಮತ್ತು ಜೀವಿಗಳನ್ನು ಬೆರಗಾಗಿ ನೋಡುತ್ತಾರೆ. ಆನೆಯನ್ನು ನೋಡಿ ಬೆರಗಾಗುವ ನಾವು ಇರುವೆಯನ್ನು ನಿರ್ಲಕ್ಷಿಸುತ್ತೇವೆ. ಹಿಮಾಲಯ ಪರ್ವತಗಳನ್ನು ನೋಡಿ ನಿಬ್ಬೆರಗಾಗುವ ನಾವು ಮನೆಯ ಹತ್ತಿರ ಇರುವ ಹುತ್ತವನ್ನು ನಿರ್ಲಕ್ಷಿಸುತ್ತೇವೆ. ಅದೇ ರೀತಿ, ಸಣ್ಣ ಜೀವಿಯಲ್ಲೂ ವಿರಾಟ್‌ ರೂಪವನ್ನು ಹುಡುಕುತ್ತೇವೆ. ಪುಟ್ಟ ಜಿಗಣೆಯ ರಕ್ತ ಹೀರುವಿಕೆ ನಮ್ಮ ಕಣ್ಣಿಗೆ ಪ್ರಬಲವಾಗಿ ತೋರಬಹುದು. ಈ ವಿರಾಟ್‌ ದೃಷ್ಟಿ- ಆ ಪಕ್ಷಿನೋಟಗಳ ಬೆಸುಗೆಯಲ್ಲೇ ಇದೆ ಬದುಕಿನ ಗುಟ್ಟು…

Advertisement

ರಸಋಷಿ ಕುವೆಂಪು ಅವರು ತಮ್ಮ “ಮಲೆನಾಡಿನ ಚಿತ್ರಗಳು’ ಎನ್ನುವ ಪುಸ್ತಕದಲ್ಲಿ ವಿರಾಟ್‌ ದೃಷ್ಟಿಯ ಕುರಿತು ಬಹು ಒಳ್ಳೆಯ ಮಾತುಗಳನ್ನು ಹೇಳುತ್ತಾರೆ. ಜಗತ್ತಿನ ಪ್ರತಿಯೊಂದು ವಸ್ತುವನ್ನೂ, ಪ್ರತಿಯೊಂದು ಸನ್ನಿವೇಶವನ್ನೂ ವಿರಾಟ್ ದೃಷ್ಟಿಯಿಂದ ನೋಡಿದಾಗ ಅಲ್ಪತ್ವಮಹತ್ವಗಳೆಲ್ಲಾ ಮಾಯವಾಗಿ ಸಮತ್ವ ಮೂಡುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. “ವಿರಾಟ್ ದೃಷ್ಟಿ’ ಎಂದರೆ ಡಿಜಿಟಲ್ ಯುಗದ ನಾವು “ಕ್ಲೋಜ್‌ ಅಪ್‌’ ನೋಟವೆಂದು ಅರ್ಥ ಮಾಡಿಕೊಳ್ಳಬಹುದು. ಕುವೆಂಪು ಅವರ ಮಾತನ್ನು ಸ್ವಲ್ಪ ವಿಸ್ತೃತವಾಗಿ ತಿಳಿಯೋಣ.

ಸಾಮಾನ್ಯವಾಗಿ ಮನುಷ್ಯರು ತಮ್ಮ ಗಾತ್ರಕ್ಕಿಂತಲೂ ಕಡಿಮೆ ಇರುವ ವಸ್ತು ಮತ್ತು ಜೀವಿಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಗಾತ್ರದಲ್ಲಿ ತಮಗಿಂತಲೂ ದೊಡ್ಡದಾದ ವಸ್ತು ಮತ್ತು ಜೀವಿಗಳನ್ನು ಬೆರಗಾಗಿ ನೋಡುತ್ತಾರೆ. ಆನೆಯನ್ನು ನೋಡಿ ಬೆರಗಾಗುವ ನಾವು ಇರುವೆಯನ್ನು ನಿರ್ಲಕ್ಷಿಸುತ್ತೇವೆ. ಹಿಮಾಲಯ ಪರ್ವತಗಳನ್ನು ನೋಡಿ ನಿಬ್ಬೆರಗಾಗುವ ನಾವು ಮನೆಯ ಹತ್ತಿರ ಇರುವ ಹುತ್ತವನ್ನು ನಿರ್ಲಕ್ಷಿಸುತ್ತೇವೆ. ಕಾರು ಚಲಾಯಿಸಿಕೊಂಡು ಹೋಗುವಾಗ ಪಕ್ಕದಲ್ಲಿರುವ ಸ್ಕೂಟರ್‌ ಚಾಲಕನನ್ನು ನಿರ್ಲಕ್ಷಿಸುತ್ತೇವೆ,

ಆದರೆ ಲಾರಿ ಬಸ್ಸುಗಳನ್ನು ಕಂಡರೆ ದಾರಿ ಬಿಡುತ್ತೇವೆ. ಒಟ್ಟಾರೆಯಾಗಿ ಬದುಕಿನ ಸಂಗತಿಗಳಲ್ಲಿ ಗಾತ್ರವನ್ನು ಕಂಡು ತಾರತಮ್ಯ ಮಾಡುವ ಸ್ವಭಾವ ನಮ್ಮಲ್ಲಿ ರೂಢಿಗತವಾಗಿ ಬಂದಿರುತ್ತದೆ. ಆದರೆ, ಜಗತ್ತಿನ ಸೃಷ್ಟಿಯಲ್ಲಿ ಎಲ್ಲವೂ ಸುಂದರವಾಗಿಯೇ ಇರುತ್ತವೆ. ಮಲೆನಾಡಿನ ಕಾಡಿನಲ್ಲಿ ಇರುವ ಜಿಗಣೆಯನ್ನು (ಇಂಬಳ) ಒಮ್ಮೆ ಗಮನವಿಟ್ಟು ನೋಡಿ. ನಮ್ಮ ಉಗುರಿನಷ್ಟೂ ಉದ್ದವಿರದ, ಶ್ಯಾವಿಗೆ ಎಳೆಯಷ್ಟೂ ದಪ್ಪವಿರದ ಈ ಪುಟ್ಟ ಪ್ರಾಣಿಯ ಚಾಕಚಕ್ಯತೆ ನಿಮ್ಮನ್ನು ವಿಸ್ಮಯಗೊಳಿಸದಿದ್ದರೆ ಹೇಳಿ.

ಎಣ್ಣೆ ಸ್ನಾನ ಮಾಡಿಸುವಾಗ ಮನೆಯ ಹಿರಿಯ ಹೆಂಗಸರು “ಅಶ್ವತ್ಥಾಮ ಬಲಿ ವ್ಯಾಸ’ ಎನ್ನುತ್ತಾ ಮೊದಲಿಗೆ ಎಣ್ಣೆಯ ಚುಕ್ಕೆಗಳನ್ನು ನೆಲದ ಮೇಲೆ ಇಡುತ್ತಾರಲ್ಲಾ, ಹಾಗೆ ಈ ಜಿಗಣೆ ಮೊದಲಿಗೆ ತನ್ನ ಸುತ್ತಲೂ ಕರಾರುವಾಕ್ಕಾಗಿ ನಾಲ್ಕು ದಿಕ್ಕಿಗೆ ತನ್ನ ಮೂತಿಯನ್ನು ಒತ್ತುತ್ತದೆ. ಅಷ್ಟರಿಂದಲೇ ಅದು ರಕ್ತದ ವಾಸನೆ ಯಾವ ದಿಕ್ಕಿಗಿದೆ ಎಂದು ಪತ್ತೆ ಹಚ್ಚಿಬಿಡುತ್ತದೆ. ಆ ದಿಕ್ಕಿಗೆ ಸರಿಯಾಗಿ ತನ್ನ ಗಾತ್ರವನ್ನು ಸಾಧ್ಯವಾದಷ್ಟು ಹಿಗ್ಗಿಸಿ ಚಲಿಸುತ್ತದೆ. ಮತ್ತೆ ಯಥಾಪ್ರಕಾರ ನಾಲ್ಕು ದಿಕ್ಕಿಗೆ ಮೂತಿಯೂರಿ, ಮತ್ತೂಂದು ಸೆಂಟಿಮೀಟರ್‌ ಚಲಿಸುತ್ತದೆ.

Advertisement

ಹೀಗೆ ಕಷ್ಟ ಪಡುತ್ತಲೇ ನಿಮ್ಮನ್ನು ತಲುಪಿ, ನಿಮ್ಮ ಬೂಟಿನ ಲೇಸಿನ ರಂಧ್ರದಲ್ಲಿ ತೂರಿ, ಅನಂತರ ನಿಮ್ಮ ಕಾಲುಚೀಲದ ನೇಯ್ಗೆಯ ಮಧ್ಯದ ರಂಧ್ರದಲ್ಲಿ ತೂರಿ ರಕ್ತವನ್ನು ಹೀರುವುದಕ್ಕೆ ಶುರು ಹಚ್ಚಿಕೊಳ್ಳುತ್ತದೆ. ಒಮ್ಮೆ ಒಂದು ಚಮಚದಷ್ಟು ರಕ್ತವನ್ನು ಹೀರಿದರೆ ಸಾಕು, ಮತ್ತೆ ಆರು ತಿಂಗಳ ಕಾಲ ಆಹಾರವಿಲ್ಲದಂತೆ ಬದುಕಿ ಬಿಡುತ್ತದೆ. ಯಾವುದೇ ಕೆಲಸದ ಜವಾಬ್ದಾರಿಗಳಿಲ್ಲದೆ ಭೂಗತವಾಗಿಬಿಡುತ್ತದೆ! ಒಮ್ಮೆ ಈ ಎಲ್ಲಾ ವಿವರಗಳನ್ನು ನೀವು ಗಮನಿಸಿದಿರೋ, ಜಿಗಣೆ ನಿಮಗೆ ವಿಶಿಷ್ಟ ಪ್ರಾಣಿಯಾಗಿ ಕಾಣಿಸಲು ಶುರುವಾಗುತ್ತದೆ.

ಆನೆ ಮತ್ತು ಜಿಗಣೆಯಲ್ಲಿ ಯಾವುದು ಶ್ರೇಷ್ಠ ಎಂದು ಯಾರಾದರೂ ಪ್ರಶ್ನೆ ಮಾಡಿದರೆ, ನೀವು ಜಿಗಣೆಯನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಎರಡಕ್ಕೂ ಅದರದೇ ಶಕ್ತಿ- ಸಾಮರ್ಥ್ಯಗಳಿವೆ. ಹೋಲಿಕೆ ಮಾಡುವುದು ಕಷ್ಟ ಎನ್ನುವ ಉತ್ತರವನ್ನು ಜಾಣತನದಲ್ಲಿ ಕೊಡುತ್ತೀರಿ. ಅಂದರೆ ಏನಾಯ್ತು? ಜಿಗಣೆಯೊಂದನ್ನು ವಿರಾಟ್‌ ದೃಷ್ಟಿಯಲ್ಲಿ ನೋಡಿದ ಕಾರಣವಾಗಿ ನಿಮ್ಮಲ್ಲಿ ಸೃಷ್ಟಿಯನ್ನು ಸಮತ್ವದಲ್ಲಿ ಕಾಣುವ ಮನೋಭಾವ ಉಂಟಾಯಿತಲ್ಲವೆ? ಅದನ್ನೇ ಕುವೆಂಪು ಹೇಳಿರುವುದು.

ಮತ್ತೆ ಮತ್ತೆ ಚಿಕ್ಕ ಪುಟ್ಟ ಪ್ರಾಣಿ ಮತ್ತು ಸನ್ನಿವೇಶಗಳನ್ನು ಕ್ಲೋಜ್‌ ಅಪ್‌ನಲ್ಲಿ ಗಮನಿಸುತ್ತಾ ಹೋದಂತೆಲ್ಲಾ ಇನ್ನಷ್ಟು ವಿಶೇಷಗಳು ನಮಗೆ ಗೋಚರಿಸುತ್ತಾ ಹೋಗುತ್ತವೆ. ಮತ್ತಷ್ಟು ಸಮತ್ವಭಾವ ಒಡಮೂಡುತ್ತದೆ. ನ್ಯಾಷನಲ್ ಜಿಯಾಗ್ರಾಫಿಕ್‌ ಥರದ ಟಿವಿ ಚಾನೆಲ್‌ಗ‌ಳು ನಮಗೆ ಇಷ್ಟವಾಗುವುದೇ ಅವುಗಳು ತೋರುವ ಕ್ಲೋಜ್‌ ಅಪ್‌ ದೃಶ್ಯಗಳಿಂದ ಅಲ್ಲವೆ? ನಿಶ್ಚಲವಾದ ನೀರಿನಲ್ಲಿ ಒಂದು ಹನಿ ನೀರು ಬಿದ್ದಾಗ ಏಳುವ ತರಂಗಗಳು, ಅದರಿಂದ ಸಿಡಿಯುವ ಸಾವಿರಾರು ತುಷಾರ ಕಣಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಕಂಡಾಗ ರೋಮಾಂಚನವಾಗುತ್ತದೆ.

ಆದರೆ, ಇದಕ್ಕೆ ಸಂಪೂರ್ಣವಾಗಿ ವಿಭಿನ್ನವಾದ ಒಂದು ಮಾತನ್ನು ಕತೆಗಾರ ಜಯಂತ ಕಾಯ್ಕಿಣಿ ತಮ್ಮ “ಬೊಗಸೆಯಲ್ಲಿ ಮಳೆ’ ಕೃತಿಯಲ್ಲಿ ಹೇಳಿ ಬಿಡುತ್ತಾರೆ. ಎಷ್ಟೇ ಸುಂದರವಾದ ಮುಖವಾದರೂ ತೀರಾ ಹತ್ತಿರ ಹೋದಾಗ ಅದರ ಕುರೂಪವೆಲ್ಲಾ ಕಂಡು ಬಿಡುತ್ತದೆ. ಮುತ್ತು ಕೊಡುವಾಗ ಕಣ್ಣು ಮುಚ್ಚಿಕೊಳ್ಳುವುದು ಬೇರೆ ಯಾವ ಕಾರಣಕ್ಕೂ ಅಲ್ಲ ಎನ್ನುವ ವಿಚಾರವೂ ಸತ್ಯವೆನ್ನಿಸಿ ಬಿಡುತ್ತದೆ. ಅಂದರೆ, ಪಕ್ಷಿನೋಟದಲ್ಲಿ (ಡಿಜಿಟಲ್‌ ಯುಗದಲ್ಲಿ ಅದನ್ನು ಲಾಂಗ್‌ ಶಾಟ್‌ ಅನ್ನೋಣ) ಕಾಣುವ ಸೌಂದರ್ಯ ವಿರಾಟ್‌ ದೃಷ್ಟಿಯಲ್ಲಿ ಕುರೂಪವಾಗಿ ಬಿಡುತ್ತದೆ ಎನ್ನುವುದು ಇಲ್ಲಿ ಕವಿಭಾವ.

ವರ್ಷಗಟ್ಟಲೆ ದೇಹವೆರಡು ಜೀವವೊಂದು ಎಂಬಂತೆ ಪ್ರೀತಿ ಮಾಡಿದ ಜೋಡಿ, ಮದುವೆಯಾದ ಕೂಡಲೆ ಜಗಳವಾಡಲು ಶುರುಮಾಡಿ ಡೈವೋರ್ಸ್‌ಗೆ ಅರ್ಜಿ ಹಾಕುತ್ತಾರಲ್ಲ? ಹಾಗೆ. ನಿಮ್ಮ ಊರು ಕೆಲವೊಮ್ಮೆ ನಿಮಗೆ ರೇಜಿಗೆ ಹುಟ್ಟಿಸಿ ಬಿಡುತ್ತದೆ. ಮನೆಯ ಜನರು, ಸ್ನೇಹಿತರು, ಪರಿಚಿತರು ಎಲ್ಲರೂ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ. ಅಂಥ ಹೊತ್ತಿನಲ್ಲಿ ದೂರದ ಊರಿಗೆ ಹೋಗಿಬಿಡಿ. ನಾಲ್ಕು ದಿನ ನೆಮ್ಮದಿಯಿಂದ ಹೊಸ ಊರನ್ನು ಅನುಭವಿಸಿರಿ. ಆದರೆ, ಐದನೆಯ ದಿನ ಬೆಳಗಾಗುತ್ತಲೇ ದೂರದಲ್ಲಿ ಎಲ್ಲೋ ಇರುವ ನಿಮ್ಮೂರು, ಮನೆ, ಸ್ನೇಹಿತರು ಮತ್ತೆ ಬೇಕೆನ್ನಿಸದಿದ್ದರೆ ಹೇಳಿ.

ಅಂದರೆ ವಿರಾಟ್‌ ದೃಷ್ಟಿಯಲ್ಲಿ ರೇಜಿಗೆಯೆಬ್ಬಿಸಿದ ಸಂಗತಿಗಳು, ಪಕ್ಷಿನೋಟದಲ್ಲಿ ಸಹನೀಯವೆನ್ನಿಸತೊಡಗುತ್ತವೆ. ಎಷ್ಟೋ ಕೆಟ್ಟದಾಗಿ ಕಂಡ ಊರಿನ ರಸ್ತೆ, ಕಟ್ಟಡ, ಸ್ಲಂಗಳೆಲ್ಲವೂ ವಿಮಾನದಲ್ಲಿ ಹಾರಿ ಮೇಲಿನಿಂದ ನೋಡಿದಾಗ ಸೊಗಸಾದ ಚಿತ್ರವಾಗಿಯೇ ಕಾಣುತ್ತದೆ. ಅತ್ಯಂತ ದಾರುಣವಾದ ಬಾಲ್ಯವೆಂದರೂ ಕಾಲ ಕ್ರಮಿಸಿ ನಡುವಯಸ್ಸು ಬಂದಾಗ ಒಮ್ಮೆ ಹಿಂತಿರುಗಿ ನೋಡಿದರೆ ಅದರ ಸೌಂದರ್ಯವು ಹೊಳೆಯಲಾರಂಭಿಸುತ್ತೆ. ಈ ಎರಡೂ ಆಶಯಗಳನ್ನು ಒಟ್ಟಾಗಿ ಸೇರಿಸಿ ನೋಡಿದಾಗ, ಬದುಕಿಗೆ ಕ್ಲೋಜ್‌ ಅಪ್‌ ಮತ್ತು ಲಾಂಗ್‌ ಶಾಟ್‌ಗಳೆರಡೂ ಅತ್ಯಂತ ಅವಶ್ಯಕವೆನ್ನಿಸುತ್ತೆ.

ಕೇವಲ ಒಂದೇ ಬಗೆಯ ನೋಟಕ್ಕೆ ನಾವು ಸೀಮಿತಗೊಂಡು ಬಿಟ್ಟರೆ ಮಾತ್ರ ಸಮಸ್ಯೆಗಳು ಉದ್ಭವಿಸುತ್ತವೆ. ಯಾವುದನ್ನು ಯಾವಾಗ ಉಪಯೋಗಿಸಬೇಕು ಎನ್ನುವ ಜಾಣ್ಮೆಯನ್ನು ನಾವು ಕಲಿತುಕೊಳ್ಳಬೇಕು. ಕ್ಲೋಜ್‌ ಅಪ್‌ ಮತ್ತು ಲಾಂಗ್‌ ಶಾಟ್‌ಗಳನ್ನು ಯೋಗ್ಯ ಪ್ರಮಾಣದಲ್ಲಿ ಬಳಸಿದರೆ ಮಾತ್ರ ನಮಗೆ ಸಿನಿಮೆಟೋಗ್ರಫಿ ಇಷ್ಟವಾಗುತ್ತದೆಯಲ್ಲವೆ? ಹಾಗೆ. ಈ ಅನುಭವವನ್ನು ಕನ್ನಡದ ಸುಮಧುರ ಕವಿ ಕೆ.ಎಸ್‌. ನರಸಿಂಹಸ್ವಾಮಿಯವರು “ಆ ಮಹಾಕಾವ್ಯ ಈ ಭಾವಗೀತೆ ನಿನಗೆ ಸಮರ್ಪಣೆ’ ಎಂದು ಹೇಳುವ ಮೂಲಕ ಎರಡರ ಮಹತ್ವವನ್ನು ತಿಳಿಸುತ್ತಾರೆ.

ಆದಿಕವಿ ವಾಲ್ಮೀಕಿಯೂ ಈ ಮನೋಭಾವವನ್ನು ತನ್ನ ಕಥನದಲ್ಲಿ ವಿಶೇಷವಾಗಿ ಕಾಣಿಸುತ್ತಾರೆ. ಹನುಮಂತನಿಗೆ ಸಮುದ್ರವನ್ನು ಲಂ ಸುವುದಕ್ಕಾಗಿ ಆಕಾಶದೆತ್ತರಕ್ಕೆ ದೇಹವನ್ನು ಹಿಗ್ಗಿಸಿ ಹಾರುವುದೂ ಗೊತ್ತಿತ್ತು, ಜೊತೆಗೆ ಲಂಕೆಯ ಅರಮನೆಯನ್ನು ರಾಕ್ಷಸರಿಗೆ ತಿಳಿಯದಂತೆ ಸೇರಿಕೊಳ್ಳಲು ಅಣುವಿನಷ್ಟು ಚಿಕ್ಕದಾಗಿ ದ್ವಾರದ ಕೆಳಗಿನಿಂದ ನುಸುಳುವುದೂ ಗೊತ್ತಿತ್ತು. ನಮ್ಮ ಕಣ್ಣೋಟಕ್ಕೆ ದಕ್ಕದಷ್ಟು ದೊಡ್ಡದಾದ ತಾಜ್‌ಮಹಲ್‌ ಅನ್ನು ಒಂದು ಪುಟ್ಟ ದಂತದ ಗೊಂಬೆಯಾಗಿಸಿ ಗಾಜಿನ ಗೂಡಿನಲ್ಲಿಡುವುದೂ ನಮಗೆ ಬೇಕು,

ಅದೇ ರೀತಿ ಹೆಬ್ಬರಳಿನಿಂದ ಹೊಸಕಿ ಹಾಕಬಹುದಾದ ನೊಣದಂತಹ ಜೀವವನ್ನು ಇಡೀ 70 ಎಂಎಂ ಪರದೆಯಲ್ಲಿ ಮೂಡಿಸಿ ಅದರ ಶಕ್ತಿಗೆ ನಿಬ್ಬೆರಗಾಗಿಸುವ “ಈಗ’ ಎನ್ನುವ ತೆಲುಗು ಸಿನಿಮಾವೂ ಬೇಕು. ಮೇಲಿನ ಸಂಗತಿಗಳೆಲ್ಲವೂ ಕೇವಲ ನೋಟಕ್ಕೆ ಸಂಬಂಧಿಸಿದವುಗಳಾಗಿವೆ. ಆದರೆ, ಮನುಷ್ಯನಿಗೆ ಪಂಚೇಂದ್ರಿಯಗಳಿವೆಯಲ್ಲವೆ? ಉಳಿದ ನಾಲ್ಕು ಇಂದ್ರಿಯಗಳಾದ ಕಿವಿ, ಮೂಗು, ನಾಲಿಗೆ ಮತ್ತು ಚರ್ಮಕ್ಕೂ ಈ ವಿರಾಟ್‌ ದೃಷ್ಟಿ ಮತ್ತು ಪಕ್ಷಿನೋಟವನ್ನು ಅನ್ವಯಿಸಬಹುದು. ಅತಿ ಮತ್ತು ಮಿತಿಗಳ ನಾಜೂಕಿನ ಬಳಕೆ ಎಲ್ಲ ಸಂವೇದನೆಗಳಿಗೂ ತಿಳಿದಿರಬೇಕು. 

* ವಸುಧೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next