Advertisement

ನಿಂಬೆ ಹಣ್ಣಿನಂಥಾ ಹಬ್ಬ ಬಂತು ನೋಡಿ! 

07:00 AM Apr 19, 2018 | |

ಬೇಸಿಗೆಯ ಬಾಯಾರಿಕೆ ತಣಿಸುವ ಅತ್ಯುತ್ತಮ ಮಾರ್ಗವೆಂದರೆ ನಿಂಬೆ ಹಣ್ಣಿನ ಪಾನಕ. ನಿಂಬೆ ಹಣ್ಣನ್ನು ಯಾವುದಕ್ಕೆಲ್ಲಾ ಬಳಸುತ್ತೇವೆ ಎಂದು ಯೋಚಿಸಿದರೆ ಅಚ್ಚರಿಯಾಗುತ್ತೆ. ಬಾಯಾರಿಕೆ ನೀಗಿಸಲು ಬೇಕು, ಚಿತ್ರಾನ್ನಕ್ಕೂ ಬೇಕು, ವಾಹನ ಪೂಜೆ ಮಾಡುವಾಗಲೂ ಬೇಕು. ಆದರೆ ಇಲ್ಲೊಂದು ನಗರದಲ್ಲಿ ನಿಂಬೆ ಹಣ್ಣಿನ ಕಲಾಕೃತಿಗಳನ್ನು ನೋಡಬಹುದು. ಅಲ್ಲಿ ನಿಂಬೆ ಹಣ್ಣಿನ ಹಬ್ಬವನ್ನೇ ಆಚರಿಸಲಾಗುತ್ತದೆ.


ಫ್ರಾನ್ಸ್‌ನ ಮೆಂಟನ್‌ ನಗರದಲ್ಲಿ ನಿಂಬೆ ಹಣ್ಣಿನ ಹಬ್ಬ ನಡೆಯುತ್ತದೆ. ಆ ಸಂದರ್ಭದಲ್ಲಿ  ಇಡೀ ನಗರ ನಿಂಬೆ ಹಣ್ಣುಗಳಿಂದ ಕಂಗೊಳಿಸುತ್ತದೆ. ಆ ಹಬ್ಬದ ಹೆಸರು “ಫೆಟೆ ಡು ಸಿ ಸಿಟ್ರೊನ್‌’. ನಗರವಾಸಿಗಳು ಈ ಹಬ್ಬದ ಆಚರಣೆಯಲ್ಲಿ ಸಂಭ್ರಮದಿಂದ ತೊಡಗಿಕೊಳ್ಳುತ್ತಾರೆ. ಈ ನಗರದ ಪ್ರತಿಯೊಂದು ಕಡೆಗಳಲ್ಲಿ ನಿಂಬೆ ಹಣ್ಣಿನಿಂದ ನಿರ್ಮಿತಗೊಂಡ ಸುಂದರ ಕಲಾಕೃತಿಗಳು ಕಂಗೊಳಿಸುತ್ತವೆ. ಅದರ ಜೊತೆಗೆ ರಾತ್ರಿಯಲ್ಲಿ ನಿಂಬೆ ಬಣ್ಣವಾದ ಹಳದಿಯ ದೀಪಾಲಂಕಾರದ ರಂಗು ನೋಡುಗರ ಕಣ್ಮನ ಸೆಳೆಯುತ್ತದೆ.


ಏನೇನ್‌ ಮಾಡ್ತಾರೆ?
ಫ್ರೆಂಚರು ಬಹಳ ಸಡಗರ ಸಂಭ್ರಮದಿಂದ ಆಚರಿಸುವ  ಫೆಟೆ ಡು ಸಿ ಸಿಟ್ರೊನ್‌ ಎಂಬ ಹಬ್ಬವು ಇಂದು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಹಬ್ಬದಲ್ಲಿ ಜಗತ್ತಿನ ಪ್ರಸಿದ್ದ ಸ್ಮಾರಕಗಳು, ಕಟ್ಟಡಗಳು, ವಿವಿಧ ಪ್ರಾಣಿಪಕ್ಷಿಗಳು, ಗೊಂಬೆಗಳು, ವಾದ್ಯ ಪರಿಕರಗಳು… ಹೀಗೆ ಬಗೆ ಬಗೆಯ ವಿನ್ಯಾಸದ ಕಲಾಕೃತಿಗಳು ನಿಂಬೆ ಹಣ್ಣುಗಳಿಂದ ನಿರ್ಮಾಣಗೊಂಡು ಜನರಲ್ಲಿ ಅಚ್ಚರಿ ಮೂಡಿಸುತ್ತವೆ. ಕಲಾಕೃತಿಗಳ ರಚನೆಯಲ್ಲಿ ನಿಂಬೆ ಹಣ್ಣುಗಳ ಜೊತೆಗೆ ಕಿತ್ತಳೆ ಹಣ್ಣನ್ನೂ ಬಳಸಲಾಗುತ್ತದೆ. ಪ್ರತಿ ವರ್ಷ ವಿಷಯವೊಂದನ್ನು ಆರಿಸಿಕೊಂಡು ಆ ವಿಷಯಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಮೂಡಿಸಲಾಗುತ್ತದೆ. 2015ರಲ್ಲಿ  ನಿಂಬೆ ಹಬ್ಬದ ವಿಷಯ “ಭಾರತ’ ಆಗಿತ್ತು. ಆ ವರ್ಷ ಭಾರತದ ಸ್ಮಾರಕಗಳನ್ನು ನಿಂಬೆಹಣ್ಣಿನಲ್ಲಿ ತಯಾರಿಸಿ ಸಂಭ್ರಮಿಸಿದ್ದರು. 

Advertisement

ನಿಂಬೆ ಹಣ್ಣಿನ ಮೆರವಣಿಗೆ
ಈ ನಿಂಬೆ ಹಬ್ಬ ಮೊದಲು ಶುರುವಾಗಿದ್ದು 1935ರಲ್ಲಿ. ಚಿಕ್ಕದಾಗಿ ಪ್ರಾರಂಭಗೊಂಡ ಈ ಹಬ್ಬಕ್ಕೆ ಈಗ ಪ್ರತಿ ವರ್ಷ ವಿಶ್ವದ ಹಲವೆಡೆಗಳಿಂದ ಸುಮಾರು ಒಂದೂವರೆ ಲಕ್ಷದಷ್ಟು ಪ್ರವಾಸಿಗರು ಬರುತ್ತಾರೆ. ಮೂರು ವಾರಗಳ ನಡೆಯುವ ಈ ಹಬ್ಬದಲ್ಲಿ ನಿಂಬೆಯ ಕಲಾಕೃತಿ ಪ್ರದರ್ಶನ ಮಾತ್ರವಲ್ಲ, ಮೆರವಣಿಗೆಯೂ ನಡೆಯುತ್ತೆ. ಈ ನಿಂಬೆ ಉತ್ಸವದಲ್ಲಿ ಹಲವು ಜಾನಪದ ಕಲೆಗಳ ಪ್ರದರ್ಶನವನ್ನೂ ನೋಡಬಹುದು. ಇಡೀ ಮೆಂಟನ್‌ ನಗರದ ರಸ್ತೆಗಳು, ಉದ್ಯಾನವನಗಳು, ಕಟ್ಟಡಗಳು ಬರೀ ನಿಂಬೆ ಹಣ್ಣುಗಳಿಂದಲೇ ಅಲಂಕಾರಗೊಂಡು, ಹಳದಿ ಮತ್ತು ಕೇಸರಿ ಬಣ್ಣದ ದೀಪಗಳಿಂದ ನೋಡುಗರ ಮನಸೂರೆಗೊಳ್ಳುತ್ತವೆ. ಕಲಾಕೃತಿಗಳ ತಯಾರಿಕೆಗೆ ಬಳಕೆಯಾಗುವ ನಿಂಬೆ ಹಣ್ಣುಗಳ ತೂಕ ಸುಮಾರು 145 ಟನ್‌ಗಳು! 300ಕ್ಕೂ ಹೆಚ್ಚು ಪರಿಣತರು ಈ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗುತ್ತಾರೆ.

ದಂಡಿನಶಿವರ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next