Advertisement
ಇಲ್ಲಿ ಎಗ್ಗಿಲ್ಲದೆ ಆಗಾಗ ಅದೆಲ್ಲವನ್ನೂ ನೋಡಬಹುದು, ಅವೆಲ್ಲವನ್ನು ಕೇಳಬಹುದು ಮತ್ತೆ ಅದನ್ನೆಲ್ಲಾ ಹೇಳಬಹುದು! ಇಲ್ಲಿ ಅದೆಲ್ಲ ನೋಡಿ, ಕೇಳಿ, ಹೇಳುವುದು ಏನು ಎಂಬ ಅನುಮಾನವಿದ್ದರೆ, “ಹಾಲು ತುಪ್ಪ’ ನೋಡಿದರೆ ಆ “ಅನುಭವ’ ತಾನೇ ಗೊತ್ತಾಗುತ್ತೆ. ಇದೊಂದು ಹಳ್ಳಿ ಸೊಗಡಿನ ಚಿತ್ರ. ಆದರೆ, ಅಂತಹ ಹಳ್ಳಿ ಸೊಗಡಿನ ಚಿತ್ರದಲ್ಲಿ ಏನಿರಬೇಕೋ ಆ ಸ್ಪಷ್ಟತೆ ಇಲ್ಲಿಲ್ಲ, ಏನಿರಬಾರದೋ ಅದೇ ಹೇರಳವಾಗಿದೆ. ಒಂದು ಸಿನಿಮಾದಲ್ಲಿ ಮನರಂಜನೆ ಇರಬೇಕು ನಿಜ. ಅದಿಲ್ಲಿ ಅತಿಯಾಗಿರುವುದರಿಂದಲೋ ಏನೋ, ನೋಡುಗ ಅರಗಿಸಿಕೊಳ್ಳೋದು ತುಸು ಕಷ್ಟ.
Related Articles
Advertisement
ಉಳಿದಂತೆ ಸಾಕಷ್ಟು ಎಡವಟ್ಟುಗಳಿದ್ದರೂ, ಅವೆಲ್ಲವನ್ನೂ ತೆರೆಯ ಮೇಲೆ ಬರುವ ಒಂದು ಹಾಡು ಪಕ್ಕಕ್ಕಿರಿಸುತ್ತದೆ. ಉಳಿದಂತೆ ಆ ಹಳ್ಳಿಯ ಪರಿಸರ, ಅಲ್ಲಿನ ಭಾಷೆ, ಆ ಜನರ ಗುಣ, ದ್ವೇಷ, ಅಸೂಯೆ ಅದರ ನಡುವಿನ ಪ್ರೀತಿ, ಪ್ರೇಮ, ತಲ್ಲಣ ಸಿನಿಮಾದ ವೇಗಕ್ಕೆ ಹೆಗಲು ಕೊಟ್ಟಿವೆ. ಶಿವನಹಳ್ಳಿ ಹಾಗೂ ಪಾರ್ವತಿಪುರ ಜನರ ನಡುವೆ ಹಳೇ ದ್ವೇಷ. ಆದರೆ, ಆ ಊರಿನ ಹುಡುಗಿ, ಈ ಊರಿನ ಹುಡುಗನ ನಡುವೆ ಪ್ರೀತಿ ಚಿಗುರಿ, ಅದು ಎರಡು ಗ್ರಾಮಗಳ ಮಧ್ಯೆ ಮತ್ತಷ್ಟು ವಿರೋಧಕ್ಕೆ ಕಾರಣವಾಗುತ್ತೆ.
ಈ ನಡುವೆ ಒಂದು ಊರಿನ ಹಿರಿಯ ಜೀವವನ್ನು ಅಪಾರವಾಗಿ ಮೆಚ್ಚಿಕೊಳ್ಳುವ ಆ ಊರ ಜನ, ಆ ಹಿರಿಯ ಜೀವಕ್ಕೆ ಒಂದು ಖಾಯಿಲೆ ಇದೆ ಅಂತ ಗೊತ್ತಾದಾಗ, ದೂರ ಸರಿಯುವ ಮೂಲಕ ಆ ಮನಸ್ಸಿಗೆ ನೋವುಂಟು ಮಾಡುತ್ತಾರೆ. ಅಂತಹ ಜನರ ಮನಸ್ಥಿತಿ ಅರಿತು ಊರಾಚೆ ಹೋಗುವ ಆ ಹಿರಿಯಜ್ಜನಿಗೆ ನಿಯಮ ಮೀರಿ, ಪಾರ್ವತಿಪುರಕ್ಕೆ ಹೋಗಿದ್ದಕ್ಕೆ ಊರ ಪಂಚಾಯ್ತಿಯಿಂದ ಒಂಭತ್ತು ತಿಂಗಳು ಬಹಿಷ್ಕಾರ ಹಾಕುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಕಥೆ. ಸೆಂಚುರಿ ಗೌಡರ ಪಾತ್ರದಲ್ಲಿ ಮತ್ತದೇ ಮಾತುಗಳನ್ನು ಬಿಟ್ಟರೆ, ಬೇರೇನನ್ನೂ ನಿರೀಕ್ಷಿಸುವಂತಿಲ್ಲ.
ಗಡ್ಡಪ್ಪ ಪಾತ್ರದಲ್ಲಿ ಗಟ್ಟಿತನವಿದೆ. ಅಲ್ಲಲ್ಲಿ ಕಣ್ಣು ಒದ್ದೆ ಮಾಡುವಲ್ಲಿ ಯಶಸ್ವಿ. ಪವನ್ ಸೂರ್ಯ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಸಂಹಿತಾ ವಿನ್ಯಾ ಗಮನಸೆಳೆಯೋದು ಕಷ್ಟ. ಹೊನ್ನವಳ್ಳಿ ಕೃಷ್ಣ, ಜಯರಾಮ್ ಆಕರ್ಷಿಸಿದರೆ, ನಾಗರಾಜ್‌ಕೋಟೆ ಮತ್ತಿತರರ ಪಾತ್ರ ಅತಿಯೆನಿಸುತ್ತೆ. ಉಳಿದಂತೆ ಕಾಣಸಿಗುವ ಪಾತ್ರಗಳ್ಯಾವೂ ಗಮನಸೆಳೆಯಲ್ಲ. ಆರ್.ವಿ.ನಾಗೇಶ್ವರರಾವ್ ಕ್ಯಾಮೆರಾದಲ್ಲಿ ಹಳ್ಳಿಯ ಸೊಬಗಿದೆ. ಇಂದ್ರಸೇನ ಸಂಗೀತದಲ್ಲಿ ಹಾಡೊಂದು ಗುನುಗುವಂತಿದೆ.
ಚಿತ್ರ: ಹಾಲು ತುಪ್ಪನಿರ್ಮಾಣ: ದೊಡ್ಮನೆ ವೆಂಕಟೇಶ್
ನಿರ್ದೇಶನ: ಶಶಾಂಕ್ ರಾಜ್
ತಾರಾಗಣ: ಪವನ್ ಸೂರ್ಯ, ಸಂಹಿತಾ ವಿನ್ಯಾ, ಹೊನ್ನವಳ್ಳಿ ಕೃಷ್ಣ, ಸೆಂಚುರಿ ಗೌಡ, ಗಡ್ಡಪ್ಪ, ಬಸವರಾಜ್ ಕಟ್ಟಿ ಮುಂತಾದವರು * ವಿಜಯ್ ಭರಮಸಾಗರ