Advertisement

ನೋಡಿ ಮನೆ ಕಟ್ಟಿ! ಪ್ಲ್ಯಾನ್ ನಲ್ಲಿ ಎಲ್ಲವೂ ಇರಬೇಕು!

08:52 PM Jan 12, 2020 | Sriram |

ಮನೆ ಕಟ್ಟುವಾಗ, ಪ್ರತಿಯೊಂದು ಅಗತ್ಯಕ್ಕೂ ಒಂದೊಂದು ರೀತಿಯ ಸ್ಥಳ ಬೇಕಾಗುತ್ತದೆ. ಬೆಡ್‌ರೂಮಿನಲ್ಲಿ ಶಾಂತವಾದ ನಿದ್ರೆ ಬರಿಸುವಂಥ ವಾತಾವರಣ ಇರಬೇಕು. ಅದೇ ರೀಡಿಂಗ್‌ ರೂಮು, ಚೇತೋಹಾರಿಯಾಗಿ, ಹುರುಪು- ಉತ್ಸಾಹ ತುಂಬುವ ರೀತಿಯಲ್ಲಿ ಇರಬೇಕಾಗುತ್ತದೆ.

Advertisement

ಮನೆಯ ವಿನ್ಯಾಸ ಎಂದಾಕ್ಷಣ ನಮ್ಮ ಕಣ್ಣಮುಂದೆ ಕಾಗದದ ಮೇಲೆ ನಾಲ್ಕಾರು ಕೋಣೆಗಳ ಜೋಡಣೆ ಇರುವ ಚಿತ್ರಣ ಮೂಡಿಬರುತ್ತದೆ. ಜೊತೆಗೆ ಒಂದಷ್ಟು ಪೀಠೊಪಕರಣ, ಕಿಟಕಿ ಬಾಗಿಲುಗಳು, ತೆರೆದ ಸ್ಥಳದಲ್ಲಿ ಒಂದಷ್ಟು ಹಸಿರು ಗಿಡಗಳ ಚಿತ್ತಾರ, ಹಾಗೆಯೇ ವೈವಿಧ್ಯಮಯ ನೆಲಹಾಸುಗಳು- ಇವು ಸಾಮಾನ್ಯವಾಗಿ ಬಹುತೇಕ ಎಲ್ಲಾ ಆರ್ಕಿಟೆಕ್ಟ್ ಇಂಜಿನಿಯರ್‌ಗಳು ರೂಪಿಸುವ ಪ್ಲ್ಯಾನ್‌ನಲ್ಲಿ ಇರುತ್ತದೆ. ಒಂದೊಂದು ಕೋಣೆಯನ್ನೂ ಚೌಕಾಕಾರವಾಗಿಯೋ, ಇಲ್ಲವೇ ಬೇರೆಯದೇ ಆಕಾರದಲ್ಲಿಯೋ ಇರುವಂತೆ ಪ್ಲ್ರಾನ್‌ ಮಾಡಿರುತ್ತಾರೆ. ಸುಮಾರು ಹತ್ತಿಪ್ಪತ್ತು ಅಡಿಗಳ ಆಸುಪಾಸಿನಲ್ಲಿ ಉದ್ದ ಹಾಗು ಅಗಲ ಇರುವುದೂ ಸಾಮಾನ್ಯ. ಹಾಗಾದರೆ ನಾವು ಸುಮ್ಮನೆ ವಿವಿಧ ಕೊಠಡಿಗಳ ಅಗಲ ಉದ್ದ ನೋಡಿಕೊಂಡು, ಒಂದರ ಪಕ್ಕ ಒಂದರಂತೆ ಇಲ್ಲವೇ ಆಸುಪಾಸಿನಲ್ಲಿ ಇಟ್ಟುಬಿಟ್ಟರೆ, ಅದು ಮನೆಯ ವಿನ್ಯಾಸ ಆಗುತ್ತದೆಯೇ? ನಾವು ಮನೆಯನ್ನು ಕಟ್ಟಿಕೊಳ್ಳುವುದು ನಮ್ಮ ವಿವಿಧ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಇರಲಿ ಎಂದು. ಅದು ವಿಶಾಲವಾದ ಬೆಡ್‌ರೂಮ್‌ ಇರಬಹುದು, ಇಲ್ಲವೇ ಓದುವ ಸ್ಥಳ ಆಗಬಹುದು. ತುಂಬಾ ಪುಸ್ತಕಗಳಿದ್ದರೆ, ಅದಕ್ಕೆಂದೇ ಒಂದು ಪ್ರತ್ಯೇಕ ಸ್ಟಡಿ ವಿನ್ಯಾಸ ಮಾಡಬೇಕಾಗುತ್ತದೆ.

ಅಗತ್ಯಕ್ಕೆ ತಕ್ಕ ಆಕೃತಿ
ಪ್ರಕೃತಿಯಲ್ಲಿ ಕಂಡುಬರುವ ವೈವಿಧ್ಯಮಯ ಆಕೃತಿಗಳ ಹಿಂದೆ ತರ್ಕಬದ್ಧ ವಿನ್ಯಾಸ ಇರುತ್ತದೆ. ತರ್ಕ ಇರುವುದು ನಮಗೆ ಅರಿವಾಗದಿದ್ದರೆ, ಅದು ನಮ್ಮ ಮಿತಿಯಷ್ಟೇ! ನಮಗೆ ಎರಡು ಕಣ್ಣುಗಳಿರುವುದು ಹತ್ತಿರ- ದೂರದ ಪರಿಕಲ್ಪನೆ ನೀಡಲು. ಬೈನಾಕ್ಯುಲರ್‌ ವಿಷನ್‌- ಅಂದರೆ ನಮಗೆ ಒಂದೇ ಕಣ್ಣಿನಲ್ಲಿ ನೋಡಿದರೆ, ದೂರದ ಪರಿಕಲ್ಪನೆ ಅಷ್ಟಾಗಿ ಸಿಗುವುದಿಲ್ಲ. ಆದುದರಿಂದಲೇ ದೂರದಲ್ಲಿ ನಡೆಯುವ ವಿದ್ಯಮಾನಗಳನ್ನು ನೋಡಲು ಎರಡೂ ಕಣ್ಣಿಗೆ ದೂರದರ್ಶಕಗಳನ್ನು ಅಳವಡಿಸಲಾಗಿರುವ ಬೈನಾಕ್ಯುಲರ್‌ಗಳನ್ನು ಬಳಸಲಾಗುತ್ತದೆ. ನಮ್ಮ ಕಣ್ಣುಗಳು ಗೋಲಿಯಂತೆ ಇರುವುದರಿಂದ, ಎಲ್ಲ ಕಡೆಗೂ ಸುಲಭವಾಗಿ ತಿರುಗಲು ಸಾಧ್ಯವಾಗುತ್ತದೆ. ನಮ್ಮ ಕಿವಿಗಳು ಮುಂದಿನಿಂದ ಬರುವ ಶಬ್ದದ ಅಲೆಗಳನ್ನು ಒಳಗಿವಿಗೆ ವರ್ಗಾಯಿಸಲು ಸುಲಭವಾಗುವಂತೆ ರಚನೆಯಾಗಿದೆ. ಹಾಗಾಗಿ, ಅವು ಸಣ್ಣ “ಮೊರ’ಗಳ ರೀತಿಯಲ್ಲಿ ಇರುತ್ತವೆ. ವಯಸ್ಸಾದ ಮೇಲೆ ಈ ಮೊರಗಳು ಸಾಲದಾದಾಗ, ಕೈಯನ್ನು ಅರ್ಧಚಂದ್ರಾಕೃತಿಯಲ್ಲಿ ಮಡಚಿ, ಕಿವಿಯ ಪಕ್ಕಕ್ಕೆ ಇರಿಸಿ, ಕೇಳಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಇದೇ ರೀತಿಯಲ್ಲಿ, ನಾವು ನಮ್ಮ ಮನೆಗಳ ವಿವಿಧ ಅಗತ್ಯಗಳಿಗೆ ತಕ್ಕಂತೆ ಆಕೃತಿಗಳನ್ನು ರೂಪಿಸಿಕೊಂಡರೆ ಸ್ಥಳ ಪೋಲಾಗುವುದಿಲ್ಲ.

ಎತ್ತರ ಮತ್ತು ಚಲನೆಯೂ ಮುಖ್ಯ
ನಾವು ಓದಲು ಕೂರಲು ಸುಮಾರು ಒಂದರಿಂದ ಒಂದೂಕಾಲು ಅಡಿ ಎತ್ತರದ ಕುರ್ಚಿ ಬೇಕಾಗುತ್ತದೆ- ನಮ್ಮ ಎತ್ತರ ಹಾಗೂ ಮೊಣಕಾಲ ಉದ್ದದ ಆಧಾರದ ಮೇಲೆ. ಚೇರಿನಲ್ಲಿ ಕೂತಾಗ ಪಾದ ನೆಲದ ಮೇಲೆ ಮಟ್ಟವಾಗಿ ಕೂರಬೇಕು. ನೇತಾಡುವಷ್ಟು ಎತ್ತರದ ಕುರ್ಚಿಯಾದರೆ, ಹೆಚ್ಚು ಹೊತ್ತು ಕೂರಲು ಆಗುವುದಿಲ್ಲ. ಅದರ ಮುಂದಿರುವ ಟೇಬಲ್‌- ಸುಮಾರು ಎರಡೂವರೆ ಅಡಿಯಷ್ಟು ಎತ್ತರ ಇರಬೇಕಾಗುತ್ತದೆ. ಈ ಎತ್ತರ ನಾವು ಆರಾಮವಾಗಿ- ಬೆನ್ನು ಬಾಗಿಸದೆ, ಕೂತು ಓದಲು ಬರೆಯಲು ಅನುಕೂಲಕರವಾಗಿರುತ್ತದೆ. ಹಾಗೆಯೇ, ಮೊಣಕೈಯನ್ನು ಟೇಬಲ್‌ ಮೇಲೆ ಸರಾಗವಾಗಿ ಇಟ್ಟುಕೊಂಡು ಮುಂದೆ ಬಾಗಿದಾಗ, ಟೇಬಲ್‌ ಟಾಪ್‌ ಆಧಾರ ಕಲ್ಪಿಸುವ ರೀತಿಯಲ್ಲಿ ಇರುತ್ತದೆ. ಇನ್ನು, ಟೇಬಲ್‌ ಉದ್ದ ನಮ್ಮ ಕೈಗೆ ಅದರ ಮೇಲ್ಮೆ„ಯಲ್ಲಿ ಇಟ್ಟಿರುವ ಪುಸ್ತಕ- ಪೆನ್ನು ಸುಲಭದಲ್ಲಿ ಕೈಗೆ ಸಿಗುವಂತೆ ಇರಬೇಕಾಗುತ್ತದೆ, ಹಾಗಾಗಿ ಸ್ಟಡಿ ಟೇಬಲ್‌ಗ‌ಳ ಅಗಲ ಎರಡರಿಂದ ಎರಡೂವರೆ ಅಡಿಯಷ್ಟಿದ್ದು, ಉದ್ದ 3- 4 ಅಡಿಗಳವರೆಗೂ ಇರುತ್ತದೆ.

ಬೆಡ್‌ರೂಮ್‌ ಹೇಗಿರಬೇಕು?
ಬೆಡ್‌ರೂಮಿನಲ್ಲಿ ಒಂದೋ ಇಲ್ಲ, ಎರಡೋ ಹಾಸಿಗೆಗಳು ಬರುವುದು. ಅದು ಜೊತೆಯಾಗಿ ದಂಪತಿಗಳಿಗೋ ಇಲ್ಲ ಎಬ್ಬರು ಮಕ್ಕಳಿಗೆ ಪ್ರತ್ಯೇಕವಾಗಿ ಇರಬೇಕೋ ಎಂಬುದು ಆ ಕೋಣೆಯ ವಿನ್ಯಾಸವನ್ನು ನಿರ್ಧರಿಸುತ್ತದೆ. ಹಾಗೆಯೇ ವಾರ್ಡ್‌ರೋಬ್‌(ಬಟ್ಟೆಗಳ ಕಪಾಟು) ಅಗಲ ಸುಮಾರು ಎರಡು ಅಡಿಗಳು ಇರುತ್ತದೆಯಾದರೂ, ಅದರ ಉದ್ದ ಒಬ್ಬರಿಗಾದರೆ ಸುಮಾರು ಮೂರು ಅಡಿಗಳಷ್ಟು ಇರಬೇಕಾಗುತ್ತದೆ. ಇಬ್ಬರಿಗಾದರೆ 5- 6 ಅಡಿಗಳ ತನಕ ಇರುತ್ತದೆ! ಬಟ್ಟೆಬರೆ ಇಟ್ಟುಕೊಳ್ಳುವ ಕಪಾಟಿನ ಬಾಗಿಲು ತೆಗೆದಾಗ, ಅದು ಮಂಚಕ್ಕೆ ತಾಗದಷ್ಟು ಖಾಲಿ ಜಾಗವನ್ನು ಬಿಡಬೇಕಾಗುತ್ತದೆ. ಇದು ಓಡಾಡಲೂ ಕೂಡ ಉಪಯೋಗಕ್ಕೆ ಬರುವುದರಿಂದ, ಕನಿಷ್ಠ ಎರಡು ಅಡಿಗಳಷ್ಟು ಇರಬೇಕಾಗುತ್ತದೆ.

Advertisement

ರಕ ಹೊಯ್ದ ಮನೆ
ಮನೆ ಎಂದರೆ ಅದು ಚೌಕಾಕಾರವಾಗಿ ಇರಬೇಕು ಎಂದೇನಿಲ್ಲ! ಪ್ರಕೃತಿಯಲ್ಲಿ ಚೌಕಾಕಾರ ಕಂಡುಬರುವುದೇ ವಿರಳ! ಅತಿ ಶ್ರೇಷ್ಠ ವಿನ್ಯಾಸಗಾರನಾದ ಪ್ರಕೃತಿ, ಸರಳ ರೇಖೆಗಳನ್ನು ಬಳಸುವುದು ಕಡಿಮೆ! ಆದರೆ ಮಾನವರಿಗೆ ಮನೆ ಕಟ್ಟುವುದೇ ದೊಡ್ಡ ಸಾಹಸ ಆಗಿರುವುದರಿಂದ, ನಾವು ಬಹುತೇಕ ವಿನ್ಯಾಸಗಳಲ್ಲಿ ಚೌಕಾಕಾರಗಳಿಗೆ ಮೊರೆ ಹೋಗಿರುವುದು ಕಂಡುಬರುತ್ತದೆ. ಆದರೆ ಆಧುನಿಕ ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆ, ನಮ್ಮ ಮಿತಿಗಳನ್ನು ಮೀರಿ ಪ್ರಕೃತಿಯಲ್ಲಿ ಸಹಜ ಆಗಿರುವ ಆಕೃತಿಗಳನ್ನೂ ವಿನ್ಯಾಸ ಮಾಡುವುದೇ ಅಲ್ಲದೆ, ನಿರ್ಮಿಸಲೂ ಸಹ ಸಾಧ್ಯವಾಗುವ ದಿನಗಳು ದೂರವಿಲ್ಲ! ಈಗಾಗಲೇ 3ಡಿ ಪ್ರಿಂಟಿಂಗ್‌ ಮಾದರಿಯ ಮನೆ ಕಟ್ಟುವಿಕೆ ಅಥವಾ ಅಚ್ಚು ಹಾಕುವಿಕೆ ಮುಂದುವರಿದ ರಾಷ್ಟ್ರಗಳಲ್ಲಿ ಶುರುವಾಗಿದ್ದು, ನಮ್ಮಲ್ಲಿಯೂ ಸಣ್ಣಪುಟ್ಟ ವಸ್ತುಗಳನ್ನು ಮೂರು ಆಯಾಮಗಳಲ್ಲಿ ಎರಕ ಹುಯ್ದು ತಯಾರು ಮಾಡುವುದು ಶುರು ಆಗಿದೆ!

ಓದುವ ಕೋಣೆ ಓದಿಸುವಂತಿರಬೇಕು
ಓದಲು- ಬರೆಯಲು ಬೆಳಕು ಮುಖ್ಯ. ಬಲಗೈ ಬಳಸುವವರಿಗೆ ಎಡಗಡೆಯಿಂದ ಬೆಳಕು ಬಂದರೆ ಬರೆಯುವಾಗ ಕೈಯ ನೆರಳು ಬರೆಯುವ ಜಾಗದಲ್ಲಿ ಬೀಳುವುದಿಲ್ಲ. ಹಾಗೆಯೇ, ಬೆಳಕು ಹಿಂದಿನಿಂದ ಹಾಗೂ ಸ್ವಲ್ಪ ಎತ್ತರದಿಂದ ಬೀಳಬೇಕಾಗುತ್ತದೆ. ಬೆಳಕು ಎದುರುಗಡೆಯಿಂದ ಬಿದ್ದರೆ “ಗ್ಲೆàರ್‌’ ಅಂದರೆ ಬೆಳಕು ಹಾಳೆಗಳ ಮೇಲೆ ಪ್ರತಿಫ‌ಲಿಸಿ ಕಣ್ಣಿಗೆ ತಾಗುವುದರಿಂದ, ಓದಲು ತೊಂದರೆ ಆಗುತ್ತದೆ. ಕಿಟಕಿಗಳನ್ನು ಓದುವ ಸ್ಥಳದ ಪಕ್ಕಕ್ಕೆ ಇಡದೆ ಸ್ವಲ್ಪ ಹಿಂದಕ್ಕೆ ಇಡಬೇಕಾಗುತ್ತದೆ. ಇಲ್ಲದಿದ್ದರೆ, ಮಳೆ ಜೋರಾಗಿ ಬಂದರೆ ಎರಚಲು ಬಿದ್ದು ಪುಸ್ತಕಗಳು ಹಾಳಾಗಬಹುದು! ಸ್ಟಡಿ- ಅಧ್ಯಯನ ಸ್ಥಳವನ್ನು ವಿನ್ಯಾಸ ಮಾಡಲು ನಾನಾ ಕೋನಗಳಿಂದ ವಿವಿಧ ಅಂಶಗಳನ್ನು ನಿರ್ಧರಿಸಬೇಕಾಗುತ್ತದೆ. ಮನೆ ವಿನ್ಯಾಸ ಎನ್ನುವುದು ಸುಮ್ಮನೆ ಕೋಣೆಗಳ ಉದ್ದ ಅಗಲವನ್ನು ಅಂದಾಜಾಗಿ ನಿರ್ಧರಿಸುವುದಲ್ಲ! ಆಯಾ ಕೋಣೆಯಲ್ಲಿ ಏನೆಲ್ಲ ಪೀಠೊಪಕರಣಗಳು ಬರುತ್ತವೆ, ಅವುಗಳ ಅಗತ್ಯಗಳೇನು? ಎಷ್ಟು ಸ್ಥಳ ಬೇಕು, ಬಾಗಿಲು ಕಿಟಕಿ ಎಲ್ಲಿರಬೇಕು? ಎಂದೆಲ್ಲ ನಿರ್ಧರಿಸಿ ಮುಂದುವರಿಯಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗೆ: 9844132826

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next