Advertisement

ಪರರಿಗಾಗಿ ಬದುಕುವವರಿಗೆ ದೀರ್ಘಾಯುಷ್ಯ

01:00 AM Mar 20, 2019 | Team Udayavani |

ಬೆಳ್ತಂಗಡಿ: ಗಾಂಧೀವಾದಿಗಳ ಚಿಂತನೆಯು ಸ್ವಾರ್ಥರಹಿತ ವಾಗಿದ್ದು, ಪರರಿಗಾಗಿ ಬದುಕುವವರು ದೀರ್ಘಾಯುಷಿಗಳಾಗುತ್ತಾರೆ. ಕೆಲವರು ಸತ್ತಮೇಲೆ ಸ್ವರ್ಗಕ್ಕೆ ಹೋಗಲು ಪುರಾಣ, ಶಾಸ್ತ್ರಗಳನ್ನು ಓದುತ್ತಾರೆ. ಆದರೆ ಗ್ರಾಮೀಣಾಭಿವೃದ್ಧಿಯ ಕಲ್ಪನೆಯ ಮೂಲಕ ಎ.ಜಿ. ಕೊಡ್ಗಿ ಅವರು ಭೂಮಿಯನ್ನೇ ಸ್ವರ್ಗ ಮಾಡಿದ ಕೀರ್ತಿಗಳಿಸಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಮಂಗಳವಾರ ಕ್ಷೇತ್ರದ ಮಹೋತ್ಸವ ಸಭಾಭವನದಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ ವತಿಯಿಂದ ಪ್ರಕಟ ವಾಗಿರುವ “ಗ್ರಾಮೀಣಾಭಿವೃದ್ಧಿ ಕೊಡ್ಗಿ ಚಿಂತನೆಗಳು’ ಗ್ರಂಥದ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮೀಣ ಜನರಿಗೆ ಹೊಣೆಗಾರಿಕೆ ಬಂದಾಗ ಅವರು ಸರಕಾರದ ಸೌಲಭ್ಯ ಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ. ನಾವು ದೇಶ, ಸಮಾಜದ ಭವಿಷ್ಯದ ಕುರಿತು ಚಿಂತನೆ ಮಾಡಬೇಕು. ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯು ಹಳ್ಳಿಗಳ ಪರಿವರ್ತನೆಗಾಗಿ ಅಂತಾ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದು ಕೊಂಡಿದೆ ಎಂದರು.

ಪ್ರಸ್ತುತ ಹೆದ್ದಾರಿ ಅಭಿವೃದ್ಧಿಗೆ ಅನುಷ್ಠಾನಗೊಳಿಸುವ ಬಿಒಟಿ ಯೋಜನೆಯನ್ನು ಕೊಡ್ಗಿ ಅವರು ಈ ಹಿಂದೆಯೇ 5 ಬ್ಯಾಂಕ್‌ಗಳ ಮೂಲಕ ಸಾಲ ಪಡೆದು ಸುಬ್ರಹ್ಮಣ್ಯ- ಧರ್ಮಸ್ಥಳ – ಕೊಲ್ಲೂರು ರಸ್ತೆಯ ಅಭಿವೃದ್ಧಿಗೆ ಉಪಯೋಗಿಸಿದ್ದರು. ಜತೆಗೆ ಜಿಲ್ಲೆಯ 14 ನದಿಗಳ ಸೌಭಾಗ್ಯ ಸಂಜೀವಿನಿ ಯೋಜನೆಯ ಕಲ್ಪನೆಯೂ ಅವರಲ್ಲಿತ್ತು. ಕರ್ಣಾಟಕ ಬ್ಯಾಂಕ್‌ ದತ್ತು ಪಡೆದಿರುವ ಏಕೈಕ ಗ್ರಾಮ ಹೆಗ್ಗಳಿಕೆಗೆ ಅಮಾಸೆಬೈಲು ಪಾತ್ರವಾಗಿದೆ ಎಂದರು.

ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಧರ್ಮಸ್ಥಳದ ಡಿ. ಸುರೇಂದ್ರಕುಮಾರ್‌ ಅವರನ್ನು ಗೌರವಿಸಲಾಯಿತು. ಎ.ಜಿ. ಕೊಡ್ಗಿ-ಸುನಂದಾ ಕೊಡ್ಗಿ ದಂಪತಿಯನ್ನು ಸಮ್ಮಾನಿಸಲಾಯಿತು.

Advertisement

ವೇದಿಕೆಯಲ್ಲಿ ಪುಸ್ತಕ ಪ್ರಕಾಶನ ಮಾಲೆಯ ಕಾರ್ಯದರ್ಶಿ ಪ್ರೊ| ಎಸ್‌. ಪ್ರಭಾಕರ್‌, ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರಕುಮಾರ್‌ ಉಪಸ್ಥಿತರಿದ್ದರು. ಗ್ರಂಥದ ಸಂಪಾದಕ, ಪ್ರಾಧ್ಯಾಪಕ ಬಾಲಿಗದ್ದೆ ಡಾ| ಶ್ರೀಧರ ಭಟ್ಟ ಅವರು ಗ್ರಂಥದ ಕುರಿತು ಮಾತನಾಡಿದರು.

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಸ್ವಾಗತಿಸಿದರು.
ಉಪನ್ಯಾಸಕ ಡಾ| ಶ್ರೀನಾಥ್‌ ವಂದಿಸಿದರು. ಯೋಜನೆಯ ನಿರ್ದೇಶಕ ಪ್ರಕಾಶ್‌ ರಾವ್‌ ನಿರ್ವಹಿಸಿದರು.

ಕೃಷಿ ಸಂಸ್ಕೃತಿಯ ಭೀಷ್ಮಾಚಾರ್ಯ 
ಗ್ರಂಥ ಬಿಡುಗಡೆಗೊಳಿಸಿದ ಕರ್ಣಾಟಕ ಬ್ಯಾಂಕ್‌ ಆಡಳಿತ ನಿರ್ದೇಶಕ ಮಹಾಬಲೇಶ್ವರ ಭಟ್‌ ಮಾತನಾಡಿ, ಒಂದು ಗ್ರಾಮದ ಸಮಗ್ರ ಅಭಿವೃದ್ಧಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೊಡ್ಗಿ ಅವರ ಕೊಡುಗೆ ಅಮೂಲ್ಯವಾಗಿದ್ದು, ಅವರು ಕೃಷಿ ಸಂಸ್ಕೃತಿಯ ಭೀಷ್ಮಾಚಾರ್ಯ ಎನಿಸಿಕೊಂಡಿದ್ದಾರೆ ಎಂದರು.

ಹೆಗ್ಗಡೆ ಅವರ ಪ್ರೋತ್ಸಾಹ
ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಎ.ಜಿ. ಕೊಡ್ಗಿ ಚಿಂತನ ಸಂದೇಶ ನೀಡಿ, ಒಂದು ಗ್ರಾಮದ ಅಭಿವೃದ್ಧಿಗಾಗಿ ಅತಿ ಹೆಚ್ಚಿನ ಮೊತ್ತವನ್ನು ಗ್ರಾ.ಪಂ.ಗೆ ನೀಡಿದ ಕೀರ್ತಿ ಅಮಾಸೆಬೈಲು ಟ್ರಸ್ಟ್‌ಗೆ ಸಲ್ಲುತ್ತದೆ. ಗ್ರಾಮದ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ನೀಡಿದ್ದು, ಡಾ| ಹೆಗ್ಗಡೆ ಅವರ ಪ್ರೋತ್ಸಾಹದಿಂದಲೇ ಸಾಧ್ಯವಾಗಿದೆ. ಆವರ ಆಶೀರ್ವಾದ ಲಭಿಸಿದರೆ ರಾಜ್ಯದ ಆಶೀರ್ವಾದ ಸಿಕ್ಕಂತೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next