Advertisement
ಇಂಗ್ಲೆಂಡ್ ರಾಜಧಾನಿಯ ಖ್ಯಾತ ಸ್ಥಳ ಲಂಡನ್ ಬ್ರಿಡ್ಜ್ ಮತ್ತು ಹತ್ತಿರದ ಮಾರುಕಟ್ಟೆಯಲ್ಲಿ ಮೂವರು ಉಗ್ರರು ಚಾಕುವಿನಿಂದ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿ ಏಳು ಮಂದಿಯ ಸಾವಿಗೆ ಕಾರಣರಾಗಿದ್ದಾರೆ. ಹನ್ನೆರಡು ದಿನಗಳ ಹಿಂದೆ, ಅಂದರೆ ಮೇ 22 ರಂದು ಮ್ಯಾಂಚೆಸ್ಟರ್‌ನ ಸಂಗೀತ ಸಂಜೆಯಲ್ಲಿ ನಡೆದ ಆತ್ಮಾಹುತಿ ದಾಳಿಯಿಂದ 22 ಮಂದಿ ಅಸುನೀಗಿದ್ದರು.
Related Articles
Advertisement
ದಾಳಿಯ ಬಗ್ಗೆ ಸುಳಿವು ಸಿಗುತ್ತಿದ್ದಂತೆ, ಬ್ರಿಡ್ಜ್ ಮತ್ತು ಮಾರುಕಟ್ಟೆಯಲ್ಲಿದ್ದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯಿಂದಾಗಿ ಕೆಲವರು ಮನೆ ಸೇರಲು ಸಾಧ್ಯವಾಗಿಲ್ಲ. ಇಂಥವರಿಗೆ ಸ್ಥಳೀಯ ಜನ ತಮ್ಮ ಮನೆಗಳಲ್ಲಿಯೇ ಉಳಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ, ಮನೆ ಸೇರದವರ ಕುಟುಂಬಗಳು ರಾತ್ರಿಯಿಡೀ ತಮ್ಮವರಿಗಾಗಿ ಹುಡುಕಾಟ ನಡೆಸಿವೆ. ಈ ಘಟನೆಯನ್ನು ನಾವು ಭಯೋತ್ಪಾದನಾ ದಾಳಿ ಎಂದೇ ಪರಿಗಣಿಸಲಿದ್ದೇವೆ. ಇದರ ಆಧಾರದ ಮೇಲೆಯೇ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಚುನಾವಣೆ ಮುಂದೂಡಿಕೆ ಇಲ್ಲಜೂ.8 ರಂದು ಇಂಗ್ಲೆಂಡ್‌ನಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇದನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಥೆರೇಸಾ ಮೇ ಹೇಳಿದ್ದಾರೆ. ದಾಳಿಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಮುಂದೂಡಿಕೆಯ ಬಗ್ಗೆ ಭಾರಿ ಚರ್ಚೆಗಳು ನಡೆದಿವೆ. ಆದರೆ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ಮೇ ಸ್ಪಷ್ಟಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಭಾನುವಾರ ಯುಕಿಪ್ ಬಿಟ್ಟು ಉಳಿದೆಲ್ಲಾ ಪಕ್ಷಗಳು ಪ್ರಚಾರ ಕಾರ್ಯ ಕೈಬಿಟ್ಟಿದ್ದವು. ಸೋಮವಾರದಿಂದ ಮತ್ತೆ ಪ್ರಚಾರ ಆರಂಭಿಸುವುದಾಗಿ ಈ ಪಕ್ಷಗಳು ಹೇಳಿವೆ. ಉಗ್ರರ ಮಟ್ಟ ಹಾಕದೇ ಬಿಡೆವು ಎಂದು ಪ್ರಧಾನಿ ಥೆರೇಸಾ ಮೇ ಹೇಳಿದ್ದಾರೆ. ನಮ್ಮ ತಾಳ್ಮೆಗೂ ಮಿತಿಯಿದೆ ಎಂದು ಆಕ್ರೋಶದಿಂದ ಹೇಳಿಕೆ ನೀಡಿದ್ದಾರೆ. ವರ್ಷದಲ್ಲೇ ಇದು ಮೂರನೇ ಬಾರಿ ಆಗುತ್ತಿರುವ ದಾಳಿಯಾಗಿದೆ. ಇದಕ್ಕೆ ಇಸ್ಲಾಮಿಕ್ ಭಯೋತ್ಪಾದನೆಯೇ ಕಾರಣ ಎಂದು ಕಿಡಿಕಾರಿದ್ದಾರೆ. ಲಂಡನ್ ಮೇಯರ್ ಸಾದಿಕ್ ಖಾನ್ ಕೂಡ, ಲಂಡನ್ ನಗರದ ಅಮಾಯಕರ ಮೇಲೆ ಕ್ರೌರ್ಯದ ದಾಳಿ ಎಂದು ಹೇಳಿದ್ದಾರೆ. ವಿಶ್ವಾದ್ಯಂತ ಖಂಡನೆ
ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಜಾಗತಿಕ ನಾಯಕರೆಲ್ಲರೂ ಲಂಡನ್ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿದ್ದಾರೆ. ಈ ದಾಳಿ ದಿಗ್ಭ್ರಮೆ ತಂದಿದೆ ಎಂದು ಮೋದಿ ಹೇಳಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್, ತಮ್ಮ ಹೇಳಿಕೆಯನ್ನು ಲಂಡನ್ ಮೇಯರ್ ಸಾದಿಕ್ ಖಾನ್ ಅವರನ್ನು ಹಳಿಯಲು ಬಳಸಿಕೊಂಡಿದ್ದಾರೆ. ಆತಂಕ ಪಡಲು ಯಾವುದೇ ಕಾರಣವಿಲ್ಲ ಎಂದು ಸಾದಿಕ್ ಖಾನ್ ಹೇಳುವ ಮೂಲಕ, ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈಗ ಉಗ್ರರು ಬಂದೂಕು, ಬಾಂಬ್ ಬಿಟ್ಟು, ಚಾಕು, ಟ್ರಕ್‌ಗಳಲ್ಲಿ ಬಂದು ದಾಳಿ ಮಾಡುತ್ತಿದ್ದಾರೆ. ಹಿಂದೆ ಬಂದೂಕಿನಿಂದಲೇ ಉಗ್ರರ ದಾಳಿಯಾಗುತ್ತಿತ್ತು ಎಂದು ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಎಂದಿದ್ದಾರೆ. ಇದಷ್ಟೇ ಅಲ್ಲ, ಇಂಥ ಘಟನೆಗಳನ್ನು ನೋಡಿದರೆ, 6 ಮುಸ್ಲಿಂ ದೇಶಗಳಿಗೆ ನಿಷೇಧ ಹೇರುವ ನಮ್ಮ ಕ್ರಮ ಸರಿಯಾದದ್ದು ಎಂದೂ ಪ್ರತಿಪಾದಿಸಿದ್ದಾರೆ. ಲಂಡನ್ ದಾಳಿ
ಎಲ್ಲಿ?- ಲಂಡನ್ ಬ್ರಿಡ್ಜ್ ಮತ್ತು ಹತ್ತಿರದ ಮಾರ್ಕೆಟ್
ಹೇಗೆ? – ಚಾಕುವಿನಿಂದ ಇರಿದು, ವ್ಯಾನ್ ಹತ್ತಿಸಿ ಹಿಂಸಾಚಾರ
ಯಾವಾಗ? – ಶನಿವಾರ ರಾತ್ರಿ 10 ಗಂಟೆ(ಇಂಗ್ಲೆಂಡ್ ಕಾಲಮಾನ)
ಯಾರು? – ಹುಸಿ ಆತ್ಮಹತ್ಯಾ ಜಾಕೆಟ್ ಧರಿಸಿದ್ದ ಮೂವರು ಉಗ್ರರು
ಏನಾಯ್ತು? – ಏಳು ಮಂದಿ ಸಾವು, 48 ಜನಕ್ಕೆ ಗಾಯ