Advertisement

Loksabha election: ಗಮನಾರ್ಹ ಸ್ಪರ್ಧಿಗಳ ಕಥೆ ಏನಾಯ್ತು?

11:33 PM Jun 04, 2024 | Team Udayavani |

ನರೇಂದ್ರ ಮೋದಿ

Advertisement

2ನೇ ಬಾರಿ ವಾರಾಣಸಿಯಿಂದ ಸ್ಪರ್ಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ನ ಅಜಯ್‌ ರಾಯ್‌ ವಿರುದ್ಧ ಜಯ ಗಳಿಸಿದ್ದಾರೆ. ಈ ಬಾರಿ ಮೋದಿಯವರು ವಾರಾಣಸಿಯಿಂದ ಸ್ಪರ್ಧಿಸುವುದಿಲ್ಲ ಅಥವಾ ವಾರಾಣಸಿ ಜತೆಗೆ ತಮಿಳುನಾಡಿನಿಂದಲೂ ಸ್ಪರ್ಧಿಸುತ್ತಾರೆ ಎಂಬ ಹೇಳಲಾಗಿತ್ತಾದರೂ ಅವರು ವಾರಾಣಸಿಯಿಂದ ಲೇ ಸ್ಪರ್ಧಿಸಿ ಮತ್ತೂಮ್ಮೆ ಗೆಲುವಿನ ನಗೆ ಬೀರಿದ್ದಾರೆ.

ರಾಹುಲ್‌ ಗಾಂಧಿ

ಉ. ಪ್ರದೇಶದ ರಾಯ್‌ಬರೇಲಿ ಮತ್ತು ಕೇರಳದ ವಯನಾಡ್‌ನಿಂದ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ ಎರಡೂ ಕಡೆ ಜಯ ಗಳಿಸಿದ್ದಾರೆ. ರಾಯ್‌ಬರೇಲಿಯಲ್ಲಿ ಬಿಜೆಪಿ ದಿನೇಶ್‌ ಪ್ರತಾಪ್‌ ಸಿಂಗ್‌ ಹಾಗೂ ವಯನಾಡ್‌ನ‌ಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಸುರೇಂದ್ರನ್‌ ವಿರುದ್ಧ ಅವರು ಜಯಗಳಿಸಿದ್ದಾರೆ. ಈ ಹಿಂದೆ ವಯ ನಾಡ್‌ನ‌ಲ್ಲಿ ಗೆದ್ದು, ಅಮೇಠಿಯಲ್ಲಿ ಸೋತಿದ್ದರು.

ಅಣ್ಣಾಮಲೈ

Advertisement

ತ.ನಾಡಿನಲ್ಲಿ ಬಿಜೆಪಿಗೆ ಹೊಸ ಶಕ್ತಿ ತಂದುಕೊಡುತ್ತಾರೆ ಎಂದೇ ಭಾವಿಸಲಾಗಿದ್ದ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಕೊಯಮತ್ತೂರಿನಲ್ಲಿ ಡಿಎಂಕೆಯ ಗಣಪತಿ ರಾಜಕುಮಾರ್‌ ವಿರುದ್ಧ ಸೋತಿದ್ದಾರೆ. ಮತಗಟ್ಟೆ ಸಮೀಕ್ಷೆಗಳು  ಇವರ ಸೋಲಿನ ಬಗ್ಗೆ ಭವಿಷ್ಯ ನುಡಿದಿದ್ದವು. ಆದರೆ ಫ‌ಲಿತಾಂಶ ತನ್ನ ಪರವಾಗಿರುತ್ತದೆ ಎಂಬ ವಿಶ್ವಾಸ ಅಣ್ಣಾಮಲೈಗಿತ್ತು. ತಮಿಳುನಾಡಿನ ಬಿಜೆಪಿ ಅಧ್ಯಕ್ಷರೂ ಆಗಿರುವ ಇವರ ಸೋಲು ಬಿಜೆಪಿ ಪಾಲಿಗೆ ಹಿನ್ನಡೆಯೇ ಆಗಿದೆ.

ಸ್ಮತಿ ಇರಾನಿ

2019ರಲ್ಲಿ ರಾಹುಲ್‌ ಗಾಂಧಿಯನ್ನು ಅಮೇಠಿ ಯಿಂದ 55 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದ ಸ್ಮತಿ ಇರಾನಿ ಅವರು ಈ ಬಾರಿ ಅದೇ ಕ್ಷೇತ್ರದಿಂದ ಕಾಂಗ್ರೆಸ್‌ನ ಕಿಶೋರಿಲಾಲ್‌ ಶರ್ಮ ವಿರುದ್ಧ ಸೋತಿದ್ದಾರೆ. ಶರ್ಮ ಗೆಲುವಿನಿಂದ ಪರೋಕ್ಷವಾಗಿ ಗಾಂಧಿ ಕುಟುಂಬಕ್ಕೆ ಮತದಾರರು ಬೆಂಬಲಿಸಿದ್ದಾರೆ.

ಅಮಿತ್‌ ಶಾ

ಬಿಜೆಪಿಯ ಭೀಷ್ಮ ಲಾಲ್‌ಕೃಷ್ಣ ಆಡ್ವಾಣಿ ಅವರು ನಿರಂತರವಾಗಿ ಪ್ರತಿನಿಧಿಸುತ್ತಿದ್ದ  ಗುಜರಾತಿನ ಗಾಂಧಿನಗರವನ್ನು 2019ರಿಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ 7.5 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿಕೊಡಿ ಎಂದು ಅಮಿತ್‌ ಶಾ ಮತದಾರರಿಗೆ ಮನವಿ ಮಾಡಿದ್ದು, ಅವರಿಗೆ ಅಂಥದ್ದೇ ಫ‌ಲಿತಾಂಶ ಸಿಕ್ಕಿದೆ. ಕಾಂಗ್ರೆಸ್‌ನ ಸೋನಾಲ್‌ ಪಟೇಲ್‌ ವಿರುದ್ಧ ಭರ್ಜರಿ ಅಂತರದಿಂದ ಗೆದ್ದಿದ್ದಾರೆ.

ಕಂಗನಾ ರಾಣೌತ್‌

ರಾಜಕಾರಣಿಯಾಗಿ ಬದಲಾಗಿರುವ ಬಾಲಿವುಡ್‌ ನಟಿ ಕಂಗನಾ ರಾಣೌತ್‌ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್‌ ವಿರುದ್ಧ 72,088  ಮತಗಳ ಅಂತರದಿಂದ ಜಯಿಸಿದ್ದಾರೆ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಕಂಗನಾ ಕಳೆದ ಕೆಲವು ವರ್ಷಗಳಿಂದ ಹಲವು ವಿವಾದಗಳಿಂದಲೂ ಸುದ್ದಿಯಲ್ಲಿ ದ್ದರು. ಬಿಜೆಪಿ ಪರವಾಗಿದ್ದಕ್ಕೆ ಅವರ ವಿರುದ್ಧ ಮಹಾರಾಷ್ಟ್ರದ ಮಹಾಅಘಾಡಿ ಸರ್ಕಾರವು ಬೇರೆ ಬೇರೆ ರೀತಿಯಲ್ಲಿ ಕಾನೂನು ಸಮರವನ್ನೂ ಸಾರಿತ್ತು.

ಅಧೀರ್‌ ರಂಜನ್‌

ಪಶ್ಚಿಮ ಬಂಗಾಲದ ಬಹರಂಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಹಿರಿಯ ನಾಯಕ ಅಧೀರ್‌ ರಂಜನ್‌ ಅವರು ಮಾಜಿ ಕ್ರಿಕೆಟಿಗ, ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಯೂಸುಫ್ ಪಠಾಣ್‌ ವಿರುದ್ಧ ಸೋಲು ಕಂಡಿದ್ದಾರೆ. ಇದೇ ಮೊದಲ ಬಾರಿ ಚುನಾವಣೆ ಎದುರಿಸಿದ್ದ ಯೂಸುಫ್ ಪಠಾಣ್‌ ಅವರು ನಿರಂತರ 5 ಬಾರಿ ಗೆದ್ದಿದ್ದ ಅಧೀರ್‌ ರಂಜನ್‌ ಅವರನ್ನು ಸೋಲಿಸಿ ಗಮನ ಸೆಳೆದಿದ್ದಾರೆ.

ರಾಜೀವ್‌ ಚಂದ್ರಶೇಖರ್‌

ತೀವ್ರ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿದ್ದ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಕೊನೆಗೂ ಹಾಲಿ ಸಂಸದ ಶಶಿ ತರೂರ್‌ ಅವರನ್ನೇ ಮತದಾರರು ಗೆಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸೋತಿದ್ದಾರೆ. ಅವರನ್ನು ತಿರುವನಂತಪುರದಿಂದ ಕಣಕ್ಕಿಳಿಸಲೆಂದೇ ಈ ಬಾರಿ ಬಿಜೆಪಿ ಅವರಿಗೆ ರಾಜ್ಯಸಭೆ ಟಿಕೆಟ್‌ ನೀಡಿರಲಿಲ್ಲ.

ಸುರೇಶ್‌ ಗೋಪಿ

ಕೇರಳದ ತ್ರಿಶ್ಶೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟ ಸುರೇಶ್‌ ಗೋಪಿ ಅವರು ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ದೇವರ ಸ್ವಂತ ನಾಡಿನಿಂದ ಬಿಜೆಪಿ ಪ್ರತಿನಿಧಿಯೊಬ್ಬರು ಸಂಸತ್ತನ್ನು ಪ್ರವೇಶಿಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಕೆ. ಮುರಳೀಧರನ್‌ ಅವರು ಸುರೇಶ್‌ ಗೋಪಿ ಮುಂದೆ ಸೋಲೊಪ್ಪಿಕೊಂಡಿದ್ದಾರೆ.  ಸುರೇಶ್‌ ಗೋಪಿ ಗೆಲ್ಲುವ ಮೂಲಕ ಕೇರಳದಲ್ಲಿ ಈ ಬಾರಿ ಬಿಜೆಪಿ ಖಾತೆ ತೆರೆಯುತ್ತದೆ ಎಂಬ ಸಮೀಕ್ಷೆಗಳ ಭವಿಷ್ಯ ನಿಜವಾಗಿದೆ.

ಶಶಿಕಾಂತ್‌ ಸೆಂಥಿಲ್‌

ಐಎಎಸ್‌ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದ ಶಶಿಕಾಂತ್‌ ಸೆಂಥಿಲ್‌ ತಮಿಳುನಾಡಿನ ತಿರುವಳ್ಳೂರ್‌ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ, ಬಿಜೆಪಿ ಬಾಲಗಣಪತಿ ಅವರನ್ನು 4,78,712 ಮತಗಳಿಂದ ಸೋಲಿಸಿದ್ದಾರೆ. ಅವರು  ದಿಢೀರ್‌ ಆಗಿ ತನ್ನ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ ದೇಶದ ಗಮನ ಸೆಳೆದಿದ್ದು, ಬಳಿಕ ರಾಜಕಾರಣ ಸೇರಿದ್ದರು.

ನಿತಿನ್‌ ಗಡ್ಕರಿ

ಮಹಾರಾಷ್ಟ್ರದ ನಾಗಪುರದಿಂದ 3ನೇ ಬಾರಿ ಆಯ್ಕೆ ಬಯಸಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಕಾಂಗ್ರೆಸ್‌ನ ವಿಕಾಸ್‌ ಠಾಕ್ರೆ ವಿರುದ್ಧ ಜಯ ಗಳಿಸಿದ್ದಾರೆ. ಇದು ಗಡ್ಕರಿಗೆ ಇಲ್ಲಿಂದ ಸತತ ಮೂರನೇ ಜಯ. ದೇಶದ “ಹೈವೇ ಮ್ಯಾನ್‌’ ಎಂದೇ ಕರೆಸಿಕೊಳ್ಳುವ ನಿತಿನ್‌ ಗಡ್ಕರಿ ಹೆದ್ದಾರಿ ಸಚಿವರಾಗಿ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಸುಪ್ರಿಯಾ ಸುಳೆ

ಇಬ್ಬರು ಸೋದರ ಸಂಬಂಧಿಗಳ ಸ್ಪರ್ಧೆಯ ಮೂಲಕ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರದ ಪುಣೆ ಸಮೀಪದ ಬಾರಾಮತಿ ಕ್ಷೇತ್ರದಲ್ಲಿ ಹಾಲಿ ಸಂಸದೆ, ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಜಯ ಸಾಧಿಸಿದ್ದಾರೆ. ಅವರ ವಿರುದ್ಧ  ಸೋದರ ಸಂಬಂಧಿ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಪತ್ನಿ ಸುನೇತ್ರಾ ಪವಾರ್‌ ಅವರು ಕಣದಲ್ಲಿದ್ದರು. ಎನ್‌ಸಿಪಿಯಲ್ಲೇ ಇದ್ದ ಅಜಿತ್‌ ಪವಾರ್‌ ಅವರು ಬಂಡಾಯವೆದ್ದು ಹೊರ ಹೋದವರು.

ಭಾನ್ಸುರಿ ಸ್ವರಾಜ್‌

ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಅವರ ಪುತ್ರಿ ಭಾನ್ಸುರಿ ಸ್ವರಾಜ್‌ ಹೊಸದಿಲ್ಲಿಯಿಂದ ಬಿಜೆಪಿ ಪರ ಕಣಕ್ಕಿಳಿದು, ಆಪ್‌ ನಾಯಕ ಸೋಮನಾಥ  ಭಾರ್ತಿ ವಿರುದ್ಧ ಜಯಿಸಿದ್ದಾರೆ. ತಾಯಿ ಸುಷ್ಮಾ ಸ್ವರಾಜ್‌ ಅವರ ಜನಸೇವೆಯ ಬಲದಿಂದ ಗೆದ್ದಿದ್ದಾರೆ ಎಂದು ಹೇಳಲಾಗಿದೆ.

ಮಹುವಾ ಮೊಯಿತ್ರಾ

ಪಶ್ಚಿಮ ಬಂಗಾಳದ ಕೃಷ್ಣನಗರದಿಂದ ಟಿಎಂಸಿ ಅಭ್ಯರ್ಥಿ ಮಹುವಾ ಮೊಯಿತ್ರಾ, ಬಿಜೆಪಿಯ ಅಮೃತಾ ರಾಯ್‌ ವಿರುದ್ಧ 57,083 ಅಂತರದಿಂದ ಗೆದ್ದಿದ್ದಾರೆ. ಗೌತಮ ಅದಾನಿ, ನರೇಂದ್ರ ಮೋದಿ ಸಂಬಂಧದ ಬಗ್ಗೆ ಕಟುವಾಗಿ ಟೀಕಿಸಿ ಅವರು ಗಮನ ಸೆಳೆದಿದ್ದರು.

ಅರುಣ್‌ ಗೋಯಲ್‌

ಮೀರತ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್‌ ಗೋಯಲ್‌ ಎಸ್‌ಪಿಯ ಸುನೀತಾ ವರ್ಮ ವಿರುದ್ಧ  10,585 ಮತಗಳ ಅಂತರದಿಂದ ಗೆದ್ದಿದ್ದಾರೆ. 2022ರಲ್ಲಿ ಚುನಾವಣಾ ಆಯೋಗದ ಕಮಿಷನರ್‌ ಆಗಿದ್ದ ಅವರು ಕಳೆದ ಮಾರ್ಚ್‌ನಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಹೇಮಾಮಾಲಿನಿ

ಉತ್ತರ ಪ್ರದೇಶದ ಮಥುರಾದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ನಟಿ ಹೇಮಾಮಾಲಿನಿ ಅವರು ಕಾಂಗ್ರೆಸ್‌ನ ಮುಕೇಶ್‌ ದನಗರ್‌ ವಿರುದ್ಧ 2,86, 259 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. 2003ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ  ಅವರು 2004ರಲ್ಲಿ ಬಿಜೆಪಿ ಸೇರಿದ್ದರು. 2014ರಲ್ಲಿ ಮಥುರಾದಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದ ಅವರು 2019ರಲ್ಲಿ ಪುನರಾಯ್ಕೆಯಾಗಿದ್ದರು. ಅವರಿಗೆ ಇದು ಮೂರನೆಯ ಗೆಲುವು.

Advertisement

Udayavani is now on Telegram. Click here to join our channel and stay updated with the latest news.

Next