Advertisement

Lok sabha Election: ತ್ರಿಕೋನ ಪೈಪೋಟಿ- ಒಗ್ಗಟ್ಟಿಗೆ ಬಾದಾಮಿ ಬೆಟ್ಟದಷ್ಟೇ ತಾಪತ್ರಯ

06:08 PM May 29, 2024 | Team Udayavani |

■ ಗೋಪಾಲ ಮೂಲಿಮನಿ/
ಮಲ್ಲಿಕಾರ್ಜುನ ಕಲಕೇರಿ
ಉದಯವಾಣಿ ಸಮಾಚಾರ
ಬಾದಾಮಿ/ಗುಳೇದಗುಡ್ಡ: ಎರಡು ತಾಲೂಕು ಕೇಂದ್ರ, ಒಂದು ಪಟ್ಟಣ ಪಂಚಾಯಿತಿ ಹಾಗೂ 114ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡ ಬಾದಾಮಿ ವಿಧಾನಸಭೆ ಮತಕ್ಷೇತ್ರ, ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ಚಾಲುಕ್ಯರ ನಾಡು. ಚಾಲುಕ್ಯ ವಾಸ್ತುಶಿಲ್ಪ ಕಲೆಯ ಮೂಲಕ ಪ್ರವಾಸೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಈ ಕ್ಷೇತ್ರದಲ್ಲಿ ಕಳೆದ ಬಾರಿ ಹಾಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆಯಿಂದ ಹೈ ವೋಲ್ಟೇಜ್‌ ಕ್ಷೇತ್ರವಾಗಿತ್ತು.

Advertisement

ಸಿದ್ದರಾಮಯ್ಯ ಅವರ ಐದು ವರ್ಷ ವಿರೋಧ ಪಕ್ಷದಲ್ಲಿದ್ದರೂ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿರುವುದನ್ನು
ಅಲ್ಲಗಳೆಯುವಂತಿಲ್ಲ. ಆದರೆ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಒಂದು ಭಾಗವಾದರೆ, ಅತಿ ಹೆಚ್ಚು ಜಾತಿ ಲೆಕ್ಕಾಚಾರ ಮೇಲೆ ಚುನಾವಣೆ ನಡೆಯುವುದು ಈ ಕ್ಷೇತ್ರದ ಮತ್ತೊಂದು ವಿಶೇಷ.

ಕುರುಬ, ವಾಲ್ಮೀಕಿ, ಮುಸ್ಲಿಂ, ನೇಕಾರರು, ಗಾಣಿಗ, ಪಂಚಮಸಾಲಿ, ಬಣಜಿಗ ಸಹಿತ ವಿವಿಧ ಒಳ ಪಂಗಡಗಳು ಫಲಿತಾಂಶ ಮೇಲೆ ಪರಿಣಾಮ ಬೀರುವಷ್ಟು ಬಲಿಷ್ಠವಾಗಿವೆ. ಇಲ್ಲಿ ಅಹಿಂದ ಅಥವಾ ಲಿಂಗಾಯತ ಹೆಸರಿನ ಮೇಲೆ ಚುನಾವಣೆ ನಡೆದ ಇತಿಹಾಸ ಈಚಿನ ದಿನಗಳಲ್ಲಿ ಕಂಡಿಲ್ಲ ಎಂಬುದು ರಾಜಕೀಯ ವಿಶ್ಲೇಷಣೆ.

ತ್ರಿಕೋನ ಪೈಪೋಟಿ: ಕಳೆದ 2013ರಕ್ಕೂ ಮುಂಚೆ ಕಾಂಗ್ರೆಸ್‌-ಬಿಜೆಪಿ ನೇರ ಪೈಪೋಟಿ ಎದುರಿಸುತ್ತಿದ್ದ ಈ ಕ್ಷೇತ್ರದಲ್ಲಿ, 2013ರ ವೇಳೆ ಕಾಂಗ್ರೆಸ್‌ನಲ್ಲಿದ್ದ ಜಿಪಂ ಮಾಜಿ ಉಪಾಧ್ಯಕ್ಷ ಹಣಮಂತ ಮಾವಿನಮರದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಮತ ಬ್ಯಾಂಕ್‌ ಆಗಿದ್ದ ಪಂಚಮಸಾಲಿ ಸಮಾಜದ ಬಹುಪಾಲು ಮತ ಸೆಳೆಯುವಲ್ಲಿ ಆಗ ಮಾವಿನಮರದ ಯಶಸ್ವಿಯಾಗಿದ್ದರು. ಅದರ ಫಲವಾಗಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಕಾಂಗ್ರೆಸ್‌ನ ಸಿದ್ದರಾಮಯ್ಯ ಗೆಲ್ಲಲು ಸಾಧ್ಯವಾಗಿತ್ತು.

Advertisement

ಮುಂದೆ 2018ರ ವೇಳೆಗೆ ರಾಜಕೀಯ ಚಿತ್ರಣವೇ ಬದಲಾಗಿತ್ತು. ಕಾಂಗ್ರೆಸ್‌ನಿಂದ ವೈದ್ಯ ಡಾ|ದೇವರಾಜ ಪಾಟೀಲರಿಗೆ ಟಿಕೆಟ್‌ ಕೊಟ್ಟು, ಕಸಿದುಕೊಳ್ಳಲಾಯಿತು. ಟಿಕೆಟ್‌ ಕೈತಪ್ಪಿದ ಬೇಸರದಲ್ಲಿ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಇದ್ದರು. ಇನ್ನು ಬಿಜೆಪಿಯಲ್ಲಿ ಟಿಕೆಟ್‌ ಗಾಗಿ ಹಲವರ ಪೈಪೋಟಿ ನಡೆದಿತ್ತು. ಇದೆಲ್ಲದರ ಮಧ್ಯೆ ಆಗ ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳು,
ಹೊರಗಿನವರಿಗೆ ಮನೆ ಹಾಕಿದವು. 2013, 2018 ಹಾಗೂ ಈಚೆಗೆ ನಡೆದ 2023ರ ಚುನಾವಣೆಯಲ್ಲಿ ತ್ರಿಕೋನ ಪೈಪೋಟಿ ನಡೆಯುತ್ತಲೇ ಬಂದಿದೆ.

ಒಳೇಟಿನ ಗುಮ್ಮ: ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ, ಇಲ್ಲಿ ಎಲ್ಲಾ ಪಕ್ಷಗಳ ನಾಯಕರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ, ಸೌಹಾರ್ದತೆ ಯಿಂದಲೂ ಇರುತ್ತಾರೆ. ಆದರೆ ಚುನಾವಣೆ ಬಂದಾಗ ಪರಸ್ಪರ ಕೊಡುವ ಒಳೇಟು, ಫಲಿತಾಂಶ ಬಳಿಕವೇ ಗೋಚರಿಸುತ್ತದೆ ಎಂಬುದು ಹಲವು ಬಾರಿ ಸಾಬೀತಾಗಿದೆ.

ಬಿಜೆಪಿ ಅಭ್ಯರ್ಥಿ-ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಅವರ ಸ್ವತಃ ಕ್ಷೇತ್ರವೂ ಆಗಿರುವ ಬಾದಾಮಿ ಕಳೆದ 2014ರ ಬಳಿಕ ತಮ್ಮದೇ ಕ್ಷೇತ್ರದಲ್ಲಿ ಕಡಿಮೆ ಲೀಡ್‌ ಪಡೆಯಲು ಇಲ್ಲಿನ ಒಳೇಟಿನ ಗುಮ್ಮವೇ ಕಾರಣ ಎನ್ನಲಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇಲ್ಲಿ 18,867 ಲೀಡ್‌ ಬಂದಿದ್ದರೆ, 2019ರ ಲೋಕಸಭೆ ಚುನಾವಣೆ ವೇಳೆ, ಇಲ್ಲಿ 9,675 ಲೀಡ್‌ ಬಂದಿದೆ. ಜಿಲ್ಲೆಯ ಇತರ ಕ್ಷೇತ್ರಗಳಲ್ಲಿ 10ರಿಂದ 30 ಸಾವಿರವರೆಗೂ ಲೀಡ್‌ ಪಡೆದ ಗೌಡರು, ತಮ್ಮದೇ ಸ್ವಂತ ಕ್ಷೇತ್ರದಲ್ಲಿ ಕೊಂಚ ಹಿನ್ನಡೆ ಸಾಧಿಸುತ್ತ ಬಂದಿದ್ದಾರೆ. ಈ ಬಾರಿ ಅದು ಮತ್ತಷ್ಟು ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದೆ.

ಎರಡೂ ಪಕ್ಷದಲ್ಲಿ ಅಸಮಾಧಾನ: ಇಲ್ಲಿ ಚುನಾವಣೆ ಎದುರಿಸಲು ಕಾರ್ಯತಂತ್ರ ಹಣೆಯುವ ಮೊದಲು ತಮ್ಮ ತಮ್ಮ ಪಕ್ಷದ ನಾಯಕರನ್ನೇ ಮನವೊಲಿಸಿ ಪ್ರಚಾರಕ್ಕೆ ಕರೆತರಲು ಎರಡೂ ಪಕ್ಷದವರು ಸಾಕಷ್ಟು ಹೆಣಗಾಡಿದ್ದಾರೆ. ಅವರೊಂದಿಗೆ ಹೋದರೆ ನಾವು ಬರಲ್ಲ ಎಂದು ಕಾಂಗ್ರೆಸ್ಸಿನಲ್ಲಿ ಕೇಳಿ ಬಂದರೆ ನಮ್ಮನ್ನು ಸಂಪೂರ್ಣ ಕಡೆಗಣಿಸಲಾಗಿದೆ, ನಾವು ತಟಸ್ಥರಾಗಿರುತ್ತೇವೆಂದು ಬಿಜೆಪಿಯಲ್ಲಿರುವ ಮಾವ-ಅಳಿಯ ಹೇಳಿಕೊಂಡಿದ್ದರು. ಕೊನೆಗೆ ಎರಡೂ ಪಕ್ಷದ ಕೆಲ ಹಿರಿಯರು ಈ ಅಸಮಾಧಾನ ಬಗೆಹರಿಸಿ ಪ್ರಚಾರಕ್ಕೆ ಬರುವಂತೆ ಮಾಡಿದರಾದರೂ ಅವು ಮತಗಳಾಗಿ ಪರಿವರ್ತನೆಯಾಗಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ 60ರಿಂದ 70 ಸಾವಿರ ಲೀಡ್‌ನಿಂದ ಗೆಲುವು ಸಾಧಿಸುತ್ತಾರೆ. ಬಾದಾಮಿ ಮತಕ್ಷೇತ್ರದಲ್ಲಿ ಸುಮಾರು 10-15 ಸಾವಿರ ಮತಗಳ ಲೀಡ್‌ ನೀಡುತ್ತೇವೆ. ಅಲ್ಲದೇ ರಾಜ್ಯ ಹಾಗೂ ಜಿಲ್ಲೆಯ ಎಲ್ಲ ನಾಯಕರು, ಸ್ಥಳೀಯ ಮುಖಂಡರು ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಜನರು ಸಹ ಜಾತ್ಯತೀತ ಪಕ್ಷಾತೀತವಾಗಿ ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಅದರ ಜತೆಗೆ ನಮಗೆ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಸಹ ನಮ್ಮ ಗೆಲುವಿಗೆ ಸಹಕಾರಿಯಾಗಲಿವೆ.
●ಸಂಜಯ ಬರಗುಂಡಿ, ಅಧ್ಯಕ್ಷರು,
ಬ್ಲಾಕ್‌ ಕಾಂಗ್ರೆಸ್‌, ಗುಳೇದಗುಡ್ಡ

ಇಡೀ ಜಿಲ್ಲೆಯಲ್ಲಿ ಈ ಬಾರಿ 80 ಸಾವಿರದಿಂದ 1ಲಕ್ಷದ ಅಂತರದಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ದೇಶದ ರಕ್ಷಣೆ-ಸುಭದ್ರತೆಗಾಗಿ ಜನರು ಬಿಜೆಪಿಗೆ ಮತ ನೀಡಲು ಒಲವು ತೋರಿಸಿದ್ದಾರೆ. ಅದರಲ್ಲೂ ಯುವ ಮತದಾರರಿಂದ ಬಿಜೆಪಿಗೆ ಹೆಚ್ಚಿನ ಮತ ಸಿಗಲಿದೆ. ಬಾದಾಮಿಯಲ್ಲಿ ಸುಮಾರು 13-15 ಸಾವಿರ ಮತಗಳ ಲೀಡ್‌ ಬರಲಿದೆ. ದೇಶದಲ್ಲಿ ಮೋದಿಯವರು ಮಾಡಿದ ಅಭಿವೃದ್ಧಿ, ಗದ್ದಿಗೌಡರ ಜಿಲ್ಲೆಗೆ ತಂದಿರುವ ಯೋಜನೆಗಳು ಅನುಕೂಲವಾಗಲಿದೆ.
●ನಾಗರಾಜ ಕಾಚೆಟ್ಟಿ, ತಾಲೂಕು ಅಧ್ಯಕ್ಷರು, ಬಿಜೆಪಿ, ಬಾದಾಮಿ

Advertisement

Udayavani is now on Telegram. Click here to join our channel and stay updated with the latest news.

Next