Advertisement
ಇತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು)ಅವರ ಒಬ್ಬರ ಹೆಸರು ಅಂತಿಮಗೊಳಿಸಿ ಸ್ಥಳೀಯ ನಾಯಕರು ಹೈಕಮಾಂಡ್‌ಗೆ ಕಳುಹಿಸಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಪುಟ್ಟರಾಜು ಮತ್ತು ವೆಂಕಟರಮಣೇಗೌಡ ನಡುವೆ ಸೆಣೆಸಾಟ ನಡೆಯಲಿದೆ ಎಂಬ ಮಾತು ಜಿಲ್ಲೆಯ ರಾಜಕೀಯವಲಯದಲ್ಲಿ ಕೇಳಿ ಬರುತ್ತಿದೆ.
Related Articles
Advertisement
ಬಿಜೆಪಿ ಮುಖಂಡರಿಂದ ಎರಡು ಸಭೆ: ಧ್ವಜ ವಿವಾದದ ಬಳಿಕ ಬಿಜೆಪಿ ಮುಖಂಡರು ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ಮೈತ್ರಿ ಟಿಕೆಟ್ ನಮ್ಮ ಪಕ್ಷಕ್ಕೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ಹಿರಿಯ ಮುಖಂಡ ಹಾಗೂ 2018ರ ಲೋಕಸಭೆ ಉಪಚುನಾವಣೆಯ ಪರಾಜಿತ ಅಭ್ಯರ್ಥಿ ಡಾ.ಸಿದ್ದರಾಮಯ್ಯ ನೇತೃತ್ವದಲ್ಲಿ ಟಿಕೆಟ್‌ಗಾಗಿ ಸಭೆ ನಡೆಸಲಾಗಿತ್ತು. ಅದಾದ ಬಳಿಕ ಪಾಂಡವಪುರದಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಹಾಸನದ ಮಾಜಿ ಶಾಸಕ ಪ್ರೀತಂಗೌಡ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಯಿತು. ಎರಡೂ ಸಭೆಯಲ್ಲಿ ಬಿಜೆಪಿಗೆ ಕ್ಷೇತ್ರ ಉಳಿಸಿಕೊಳ್ಳಬೇಕು. ನಮ್ಮ ಪಕ್ಷದ ಆಕಾಂಕ್ಷಿತರಿಗೆ ಮೈತ್ರಿ ಟಿಕೆಟ್ ನೀಡಬೇಕು ಎಂದು ಒತ್ತಾಯ ಕೇಳಿ ಬಂದಿದೆ.
ಕಾಂಗ್ರೆಸ್ ಕದತಟ್ಟಿದ ಮಾಜಿ ಸಚಿವ ನಾರಾಯಣಗೌಡ: ಮೊದಲಿನಿಂದಲೂ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಜೆಡಿಎಸ್ ವಿರೋಧಿ ಸಿಕೊಂಡು ಬರುತ್ತಲೇ ಇದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ಇದರಿಂದ ಮತ್ತಷ್ಟು ಕೆರಳಿದ ಕೆ.ಸಿ.ನಾರಾಯಣಗೌಡ ಮೈತ್ರಿ ವಿರೋಧಿಸಿದರು. ನಂತರ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದು. ಹಾಲಿ ಸಂಸದೆ ಸುಮಲತಾಅಂಬರೀಷ್ ಪರ ಬ್ಯಾಟ್ ಬೀಸಿದ್ದರು. ಒಂದು ವೇಳೆ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ, ಬಹುತೇಕ ಮಂಡ್ಯ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಹೋಗುವುದು ಖಚಿತವಾಗುತ್ತಿದ್ದಂತೆ ನಾರಾಯಣ ಗೌಡ ಕಾಂಗ್ರೆಸ್ ಬಾಗಿಲು ಬಡಿದಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೌಪ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ಸೇರುವುದು ಖಚಿತ ಎಂದು ಆಪ್ತ ಮೂಲಗಳು ತಿಳಿಸಿವೆ.
ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಬಳಸಲು ಮುಂದಾದ ಸುಮಲತಾ: ಜೆಡಿಎಸ್ ರಾಜಕೀಯ ವೈರಿಯಾಗಿರುವ ಸಂಸದೆ ಸುಮಲತಾ ಬಿಜೆಪಿಯಿಂದ ಸ್ಪ ರ್ಧಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯ ನಾಯಕರು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲೇ ತಮ್ಮ ಪ್ರಭಾವ ಬಳಸಲು ಮುಂದಾಗಿದ್ದಾರೆ. ಅದಕ್ಕಾಗಿ ಬಿಜೆಪಿ ನಾಯಕರನ್ನು ಭೇಟಿ ಮಾಡುವ ಮೂಲಕ ಟಿಕೆಟ್ ಲಾಬಿಗೆ ಮುಂದಾಗಿದ್ದಾರೆ. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿಯಾಗಿ ಮಂಡ್ಯ ಕ್ಷೇತ್ರದ ರಾಜಕೀಯ ಚರ್ಚೆ ನಡೆಸುವುದರ ಜೊತೆಗೆ ಸ್ಪರ್ಧೆಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ, ಬಿಜೆಪಿ ಮೂಲಗಳ ಪ್ರಕಾರ ಟಿಕೆಟ್ ನೀಡಲು ಸಾಧ್ಯವಿಲ್ಲ. ಮುಂದೆ ವಿಧಾನ ಪರಿಷತ್ ಸದಸ್ಯ ಅಥವಾ ರಾಜ್ಯಸಭಾ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡುವ ಮೂಲಕ ಸಮಾಧಾನ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಒಂದು ವೇಳೆ ಸುಮಲತಾ ಒಪ್ಪಿಕೊಳ್ಳದಿದ್ದರೆ ಪಕ್ಷೇತರ ಸ್ಪರ್ಧೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ತಿಳಿದು ಬಂದಿದೆ.
ಜಿಲ್ಲೆಯ ಬಿಜೆಪಿ ನಾಯಕರ ಒಗ್ಗೂಡಿಸಿದ ಸ್ಪರ್ಧಾಕಾಂಕ್ಷಿ ಡಾ.ಸಿದ್ದರಾಮಯ್ಯ : ಲೋಕಸಭಾ ಚುನಾವಣೆಗೆ ಜಿಲ್ಲೆಯ ಬಿಜೆಪಿ ಹಿರಿಯ ಮುಖಂಡ ಡಾ.ಸಿದ್ದರಾಮಯ್ಯ ಸ್ಪರ್ಧೆಗೆ ಮುಂದಾಗಿದ್ದಾರೆ. ಜಿಲ್ಲಾ, ರಾಜ್ಯ ಮಟ್ಟದಲ್ಲೂ ಟಿಕೆಟ್‌ಗಾಗಿ ಲಾಬಿ ನಡೆಸಲು ಮುಂದಾಗಿರುವ ಇವರು, ಜಿಲ್ಲಾ ಮಟ್ಟದ ಮುಖಂಡರು, ಕಾರ್ಯಕರ್ತರ ಸಭೆ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಒಗ್ಗಟ್ಟಿನ ಮೂಲಕ ಜಿಲ್ಲಾ ಹಾಗೂ ರಾಜ್ಯಮಟ್ಟದ ನಾಯಕರ ಮೂಲಕ ಟಿಕೆಟ್ ಪಡೆ ಯ ಲು ಕಸರತ್ತು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ನಡೆಸಿದ ಸಭೆಗೆ ಬಹುತೇಕ ಜಿಲ್ಲಾ ನಾಯಕರು ಭಾಗವಹಿಸಿ ಡಾ.ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.
ವೆಂಕಟರಮಣೇಗೌಡ ಹೆಸರು ಘೋಷಣೆಯೊಂದೇ ಬಾಕಿ: ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಹಾಗೂ ಬಿಲ್ಡರ್ ಆಗಿರುವ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಹೆಸರು ಅಂತಿಮವಾಗಿದೆ. ಜಿಲ್ಲೆಯ ಆಕಾಂಕ್ಷಿತರ ಪಟ್ಟಿಯಲ್ಲಿ ವೆಂಕಟರಮಣೇಗೌಡ ಅವರ ಒಂದೇ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದ್ದು, ಅಂತಿಮ ಘೋಷಣೆ ಬಾಕಿ ಉಳಿದಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ ಕಣಕ್ಕಿಳಿಯುವುದು ಖಚಿತ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವೆಂಕಟರಮಣೇಗೌಡ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಅವರ ಸಹೋದರ ಆಗಿದ್ದು, ಶಾಸಕ ಶರತ್‌ಬಚ್ಚೇಗೌಡರಿಗೆ ಚಿಕ್ಕಮಾವ. ರಾಜಕೀಯದಲ್ಲಿ ಗುರುತಿಸಿಕೊಳ್ಳದಿದ್ದರೂ ರಾಜಕೀಯ ನಂಟು ಹೊಂದಿದ್ದಾರೆ. ಅಲ್ಲದೆ, ಸಚಿವ ಚಲುವರಾಯಸ್ವಾಮಿ ಆಪ್ತ ಬಳಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ನಾಯಕರು ಮೈತ್ರಿ ಅಭ್ಯರ್ಥಿ ಸೋಲಿಸಲು ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ರಣತಂತ್ರ ಹೆಣೆದಿದ್ದಾರೆ.
ಮೈತ್ರಿ ಅಭ್ಯರ್ಥಿಯಾಗಿ ಪುಟ್ಟರಾಜು: ನಿಖಿಲ್ ಸಾರಥ್ಯ?: ಜೆಡಿಎಸ್ ತನ್ನ ಮೈತ್ರಿ ಪಕ್ಷ ಬಿಜೆಪಿಯಲ್ಲಾಗುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ನಡುವೆ ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೆಸರು ಅಂತಿಮಗೊಂಡಿದೆ. ಶೀಘ್ರದಲ್ಲಿಯೇ ಘೋಷಣೆಯಾಗಲಿದ್ದು, ನಿಖಿಲ್ ಸಾರಥ್ಯದಲ್ಲಿ ಚುನಾವಣೆ ನಡೆಯಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಜಿಲ್ಲೆಯ ಜೆಡಿಎಸ್ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಖುದ್ದು ವರಿಷ್ಠರೇ ಸರಿಪಡಿಸುವ ಹಿನ್ನೆಲೆಯಲ್ಲಿ ನಿಖೀಲ್‌ಗೆ ಸಾರಥ್ಯ ನೀಡಿದ್ದಾರೆ. ಅದಕ್ಕಾಗಿ ನಿಖಿಲ್ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಸಂಚರಿಸಲಿದ್ದಾರೆ. ಈ ಚುನಾವಣೆ ಜೆಡಿಎಸ್‌ಗೂ ಪ್ರತಿಷ್ಠೆಯಾಗಿರುವುದರಿಂದ ಗಂಭೀರವಾಗಿ ಪರಿಗಣಿಸಿರುವ ದಳಪತಿಗಳು ಕಾಂಗ್ರೆಸ್ ಸೋಲಿಸಲು ರಾಜಕೀಯ ರಣತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಮುಂದಾಗಿದ್ದಾರೆ. ಜಿಲ್ಲೆಯ ಎಲ್ಲ ಮಾಜಿ ಶಾಸಕರು, ಮುಖಂಡರನ್ನು ಒಂದೇ ವೇದಿಕೆಗೆ ಕರೆ ತರುವ ಮೂಲಕ ಒಗ್ಗಟ್ಟು ಪ್ರದರ್ಶಿಸಿ ಜೆಡಿಎಸ್ ಭದ್ರಕೋಟೆ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಲು ಕಸರತ್ತು ಆರಂಭಿಸಿದ್ದಾರೆ.
–ಎಚ್.ಶಿವರಾಜು