Advertisement

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

08:54 AM Apr 28, 2024 | keerthan |

ಸಾಗರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರ ಸಹಕಾರದಿಂದ ಕಳೆದ ಐದು ವರ್ಷಗಳಲ್ಲಿ ಇಪ್ಪತ್ತು ಸಾವಿರ ಕೋಟಿ ರೂಪಾಯಿ ಅನುದಾನ ತರಲಾಗಿದೆ ಎಂದು ಲೋಕಸಭಾ ಅಭ್ಯರ್ಥಿ, ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ತಾಲೂಕಿನ ತ್ಯಾಗರ್ತಿಯ ರೈಸ್‌ ಮಿಲ್‌ ಆವರಣದಲ್ಲಿ ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ಕೊಲ್ಲೂರು, ಸಿಗಂದೂರು ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಯ ಜೊತೆಗೆ ಆಗುಂಬೆ ರಸ್ತೆಯಲ್ಲಿ 12 ಕಿಮೀ ಸುರಂಗ ಮಾರ್ಗ ನಿರ್ಮಾಣಕ್ಕೆ ಮೂರು ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಜನರನ್ನು ವಂಚಿಸುವ ಕೆಲಸ ಮಾಡುತ್ತಿದೆ. 27 ಲಕ್ಷ ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹ ದನ ನೀಡಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ದಿಟ್ಟ ನಿರ್ಧಾರ ಮಾಡಿ ಜನರನ್ನು ಕಾಪಾಡಿದ ರೀತಿ ದಕ್ಷ ಆಡಳಿತ ನೋಡಿ ಮತ ಚಲಾಯಿಸಿ ಎಂದು ವಿನಂತಿಸಿದರು.

ಮಾಜಿ ಸಚಿವ ಎಚ್‌. ಹಾಲಪ್ಪ ಹರತಾಳು ಮಾತನಾಡಿ, ಇದು ಯಾವುದೇ ಸ್ಥಳೀಯ ವಿಷಯದ ಮೇಲೆ ನಡೆಯುವ ಚುನಾವಣೆ ಅಲ್ಲ. ದೇಶದ ಜನತೆಯ ಸುರಕ್ಷತೆ ದೃಷ್ಟಿಯಿಂದ ಮತದಾನ ಮಾಡಬೇಕು. ಕಾಂಗ್ರೆಸ್‌ ಅಭ್ಯರ್ಥಿ ಹತ್ತು ವರ್ಷಗಳ ಹಿಂದೆ ಇದೇ ಕ್ಷೇತ್ರದಿಂದ ಚುನಾವಣೆಯಲ್ಲಿ ಸೋತು ಈ ಕಡೆ ಬರಲಿಲ್ಲ. ಈಗ ತಮ್ಮನ ಒತ್ತಾಯದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ದೊಡ್ಮನೆ ಸೊಸೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಆ ಕುಟುಂಬದಲ್ಲಿ ಸಹಮತ ಇಲ್ಲ. ಶಿವರಾಜ್‌ ಕುಮಾರ್‌ ಬಗ್ಗೆ ಒಳ್ಳೆಯ ನಟ ಎನ್ನುವ ಅಭಿಮಾನವಿದೆ, ಗೌರವ ಇದೆ. ನಾನು ಕೂಡ ರಾಜಕುಮಾರ್‌ ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದೆ. ಆದರೆ ಚುನಾವಣೆ ವಿಷಯಕ್ಕೆ ಬಂದಾಗ ನಮಗೆ ಯಾವುದೇ ಸಂಬಂಧ, ಜಾತಿ ಪ್ರಶ್ನೆ ಬರುವುದಿಲ್ಲ ಎಂದು ಹೇಳಿದರು.

ಬಿಜೆಪಿ ಮುಖಂಡ- ಉತ್ತರ ಕನ್ನಡ ಪ್ರಭಾರಿ ಪ್ರಸನ್ನ ಕೆರೆಕೈ ಮಾತನಾಡಿ, ಐದು ನೂರು ವರ್ಷಗಳ ಹಿಂದೂಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣ ಆಗಿದೆ. ಅದಕ್ಕೆ ಇದ್ದ ಕಾನೂನು ತೊಡಕು ಮೋದಿ ಸರ್ಕಾರ ನಿಭಾಯಿಸಿ ದೇಶದ ಬಹುಸಂಖ್ಯಾತರ ಆಸೆ ಈಡೇರಿಸಿದೆ ಎಂದರು.

Advertisement

ಬಿಜೆಪಿ ಪ್ರಮುಖರಾದ ಡಾ| ರಾಜನಂದಿನಿ, ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಜಿಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ್‌, ಭರ್ಮಪ್ಪ, ಕೆ.ಎಸ್‌. ಪ್ರಶಾಂತ್‌, ಶಾಂತಪ್ಪಗೌಡ, ಮಿಕ್ಸಿ ಮಂಜು, ಶ್ರೀಧರ್‌ ಸಂಪಳ್ಳಿ, ಕೃಷ್ಣಮೂರ್ತಿ ಹೊಸಂತೆ, ಪಾಂಡುರಂಗ, ಶಿವು ತ್ಯಾಗರ್ತಿ, ಅಲ್ಪಸಂಖ್ಯಾತ ಮೋರ್ಚಾ ಗ್ರಾಮಾಂತರ ಅಧ್ಯಕ್ಷ ನಾಸಿರ್‌ ಸಾಬ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next