Advertisement

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

05:51 PM Mar 28, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಟಿಕೆಟ್‌ ಪಡೆಯುವ ವಿಚಾರದಲ್ಲಿ ಸಾಕಷ್ಟು ಆಕ್ಷೇಪಣೆಗಳನ್ನು ಎದುರಿಸಿದ್ದ ಜಗದೀಶ ಶೆಟ್ಟರ್‌ ಈಗ ಒಂದು ಹಂತದ ಆತಂಕ ನಿವಾರಿಸಿಕೊಂಡಿದ್ದಾರೆ. ಪಕ್ಷದ ಪ್ರಮುಖ ಪ್ರಭಾವಿ ನಾಯಕ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾ ನಾಯಕರ ಜತೆ ನಡೆದ ಸಂಧಾನ ಸಭೆ ಹಾಗೂ ಪ್ರಚಾರ ರ್ಯಾಲಿ ಶೆಟ್ಟರ್‌ ಅವರಿಗೆ ನೈತಿಕ ಬಲ ತಂದುಕೊಟ್ಟಿದೆ.

Advertisement

ಸಭೆಯಲ್ಲಿ ಜಗದೀಶ ಶೆಟ್ಟರ್‌ ಬಗ್ಗೆ ನಿರೀಕ್ಷೆ ಮಾಡಿದಂತೆ ಸ್ಥಳೀಯ ಮುಖಂಡರಿಂದ ಹಾಗೂ ಕಾರ್ಯಕರ್ತರಿಂದ ಅಂತಹ
ಅಸಮಾಧಾನಗಳು ಕಂಡು ಬರಲಿಲ್ಲ. ಆದರೆ ಟಿಕೆಟ್‌ ಹಂಚಿಕೆ ಮಾಡುವ ಮುನ್ನ ಸ್ಥಳೀಯ ನಾಯಕರಿಗೆ ಆದ್ಯತೆ ನೀಡಬೇಕಾಗಿತ್ತು ಎಂಬ ಅಭಿಪ್ರಾಯಗಳು ಕೇಳಿ ಬಂದವು.

ಬೆಳಗಾವಿ ಕ್ಷೇತ್ರಕ್ಕೆ ಟಿಕೆಟ್‌ ಘೋಷಣೆಯಾಗುವವರೆಗೆ ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರು ಜಗದೀಶ ಶೆಟ್ಟರ್‌ ಹೆಸರನ್ನು ವಿರೋಧ ಮಾಡುತ್ತಲೇ ಬಂದರು. ಆದರೆ ಜಗದೀಶ ಶೆಟ್ಟರ್‌ಗೆ ಪರ್ಯಾಯ ಕ್ಷೇತ್ರ ಇಲ್ಲದೇ ಹೋದಾಗ ಕೊನೆಗೆ ಬೆಳಗಾವಿ ಕ್ಷೇತ್ರಕ್ಕೆ ಪರಿಗಣಿಸಲಾಯಿತು. ಒಮ್ಮೆ ಟಿಕೆಟ್‌ ಘೊಷಣೆಯಾದ ಮೇಲೆ ಜಿಲ್ಲೆಯ ನಾಯಕರು ಸುಮ್ಮನಾದರು. ನಮಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ ಎಂಬ ಸಂದೇಶ ನೀಡಿದರು.

ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಯಿತು. ಸಂಧಾನ ಸಭೆ ನಡೆಸಿದ ಯಡಿಯೂರಪ್ಪ ಸಹ ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡುವ ನಿರ್ಧಾರ ಮಾಡಿದ್ದು ಪಕ್ಷದ ವರಿಷ್ಠರು. ಇದರಲ್ಲಿ ನನ್ನ ಹಸ್ತಕ್ಷೇಪ ಇಲ್ಲ. ಕಾರಣ ಏನೇ ಅಸಮಾಧಾನ ಇದ್ದರೂ ಅದನ್ನು ಇಲ್ಲಿಗೇ ಬಿಡಬೇಕು. ಈಗ ಎಲ್ಲರೂ ಒಂದಾಗಿ ಹೈಕಮಾಂಡ್‌ ನಿರ್ಧಾರಕ್ಕೆ ಸಮ್ಮತಿ ನೀಡಿ ಗೆಲ್ಲಿಸಬೇಕು ಎಂಬ ಸಂದೇಶ ನೀಡಿದರು.

ಜಗದೀಶ ಶೆಟ್ಟರ್‌ಗೆ ಟಿಕೆಟ್‌ ಕೊಟ್ಟಿರುವದನ್ನು ಜಿಲ್ಲೆಯ ಎಲ್ಲ ನಾಯಕರು ಮನಸ್ಸಿಲ್ಲದಿದ್ದರೂ ಪಕ್ಷದ ಹಿತದೃಷ್ಟಿಯಿಂದ ಒಪ್ಪಿಕೊಂಡಿದ್ದಾರೆ. ಹೀಗಾಗಿ ಎಲ್ಲಿಯೂ ಬಂಡುಕೋರರ ಭೀತಿ ಕಾಣಿಸುತ್ತಿಲ್ಲ. ಆದರೆ ಸಂಧಾನ ಸಭೆಯಿಂದ ಕೆಲವು ಪ್ರಮುಖ ನಾಯಕರು ದೂರ ಉಳಿದಿದ್ದು ನಾನಾ ರೀತಿಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದ್ದು ಸುಳ್ಳಲ್ಲ.

Advertisement

ಜಗದೀಶ ಶೆಟ್ಟರ್‌ಗೆ ಸವಾಲು: ಹಾಗೆ ನೋಡಿದರೆ ಜಗದೀಶ ಶೆಟ್ಟರ್‌ಗೆ ಬೆಳಗಾವಿ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ. ಸಕಾರಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಅಂಶಗಳ ಸಂಖ್ಯೆಯೇ ಹೆಚ್ಚು. ಮುಖ್ಯವಾಗಿ ಶೆಟ್ಟರ್‌ ಅವರಿಗೆ ಕ್ಷೇತ್ರದ ಪರಿಚಯ ಹಾಗೂ ಸಂಪರ್ಕ ಇಲ್ಲ ಎಂಬ ಕೊರತೆ ಕಾಡಲಿದೆ. ಇದಲ್ಲದೆ ಹಾಲಿ ಸಂಸದರು ಸಹ ಕ್ಷೇತ್ರದ ಜನರ ಜತೆ ನಿರೀಕ್ಷಿತ ಪ್ರಮಾಣದಲ್ಲಿ ಬೆರೆಯಲಿಲ್ಲ ಎಂಬ ಅಭಿಪ್ರಾಯ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಕಾಣುತ್ತಿದೆ. ಇದೆಲ್ಲದರ ಜತೆಗೆ ಲಿಂಗಾಯತ ಪಂಚಮಸಾಲಿ ಎಂಬ ಟ್ರಂಪ್‌ ಕಾರ್ಡ್‌ ಶೆಟ್ಟರ್‌ ಅವರಿಗೆ ಸಮಸ್ಯೆ ತಂದೊಡ್ಡಲಿದೆ.

ಕಾಂಗ್ರೆಸ್‌ ನಾಯಕರು ಶೆಟ್ಟರ್‌ ಹೆಸರು ಘೋಷಣೆಯಾಗುತ್ತಿದ್ದಂತೆ ಪ್ರಚಾರದಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಬಿಟ್ಟು ಪಂಚಮಸಾಲಿ ಕಾರ್ಡ್‌ ಬಳಕೆ ಮಾಡಲು ಆರಂಭ ಮಾಡಿದ್ದಾರೆ. ಇದನ್ನು ಜಗದೀಶ ಶೆಟ್ಟರ್‌ ಯಾವ ರೀತಿ ನಿಭಾಯಿಸುತ್ತಾರೆ ಎಂಬುದು ಕುತೂಹಲದ ಪ್ರಶ್ನೆ.

ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲೇ ಉಳಿಯಬೇಕಾದರೆ ಜಗದೀಶ ಶೆಟ್ಟರ್‌ ಸ್ಥಳೀಯ ನಾಯಕರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕ್ಷೇತ್ರದಲ್ಲಿರುವ 2000ಕ್ಕೂ ಅಧಿಕ ಮತಗಟ್ಟೆಗಳ ಮಾಹಿತಿ ಇರುವ ನಾಯಕರು ಹಾಗೂ ಕಾರ್ಯಕರ್ತರಿಗೆ ಅದರ ಜವಾಬ್ದಾರಿ ಕೊಡಬೇಕು ಎಂಬುದು ಮುಖಂಡರ ಅಭಿಪ್ರಾಯ.

ಚರ್ಚೆಗೆ ಗ್ರಾಸವಾದ ಜಾರಕಿಹೊಳಿ: ಜಿಲ್ಲೆಯಲ್ಲಿ ಯಡಿಯೂರಪ್ಪ ಎರಡು ದಿನಗಳ ಕಾಲ ಇದ್ದರೂ ಜಾರಕಿಹೊಳಿ ಸಹೋದರರು ಯಾವ ಸಭೆ ಹಾಗೂ ಪ್ರಚಾರ ಕಾರ್ಯಕ್ಕೆ ಬರದೆ ದೂರ ಉಳಿದಿದ್ದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಜಗದೀಶ ಶೆಟ್ಟರ್‌ಗೆ ಬೆಳಗಾವಿ ಟಿಕೆಟ್‌ ಕೊಡಿಸುವಲ್ಲಿ ಜಾರಕಿಹೊಳಿ ಸಹೋದರರ ಪಾತ್ರವೂ ಇದೆ ಎಂಬ ಮಾತುಗಳ ನಡುವೆಯೇ ಇಬ್ಬರೂ ಸಹೋದರರು ಜಿಲ್ಲಾ ನಾಯಕರ ಜತೆಗೆ ನಡೆದ ಸಂಧಾನ ಸಭೆಯಲ್ಲಿ ಏಕೆ ಭಾಗವಹಿಸಲಿಲ್ಲ ಎಂಬ ಅನುಮಾನದ ಪ್ರಶ್ನೆಗಳು ಮೂಡಿವೆ.

ಒಂದು ಮೂಲದ ಪ್ರಕಾರ ಜಿಲ್ಲೆಯ ನಾಯಕರು ಜಾರಕಿಹೊಳಿ ಸಹೋದರರಿಗೆ ಚುನಾವಣಾ ಕಾರ್ಯದ ನೇತೃತ್ವ ನೀಡಬಾರದು ಎಂಬ ಒತ್ತಾಯ ಮಾಡಿದ್ದಾರೆ. ಇದರಿಂದ ಕೆಲ ನಾಯಕರು ಪ್ರಚಾರ ಕಾರ್ಯದಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಸಂಧಾನ ಸಭೆಗೆ ಬಂದಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಆತ್ಮವಿಶ್ವಾಸ ಹೆಚ್ಚಿಸಿದ ರ್ಯಾಲಿ: ಒಂದು ಕಡೆ ಅಸಮಾಧಾನ, ಟಿಕೆಟ್‌ ಸಿಗಲಿಲ್ಲ ಎಂಬ ನೋವಿನ ನಡುವೆ ಬುಧವಾರ ನಗರದಲ್ಲಿ ನಡೆದ ರ್ಯಾಲಿ ಹಾಗೂ ಪ್ರಚಾರ ಕಾರ್ಯ ಜಗದೀಶ ಶೆಟ್ಟರ್‌ ಅವರಿಗೆ ಹೊಸ ಆತ್ಮವಿಶ್ವಾಸ ಮೂಡಿಸಿರುವದು ಸುಳ್ಳಲ್ಲ. ಬೆಳಗಾವಿ ನನ್ನ ಕರ್ಮಭೂಮಿ, ಇಲ್ಲಿಯೇ ಮನೆ ಮಾಡುವದಾಗಿ ಹೇಳಿರುವ ಶೆಟ್ಟರ್‌ ತಮ್ಮ ಕರ್ಮಭೂಮಿಯಲ್ಲಿ ಯಾವ ಫಲ ಪಡೆಯುತ್ತಾರೆ ಎಂಬ ಕುತೂಹಲ ಜನರಲ್ಲಿದೆ.

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next