ಹೊಸದಿಲ್ಲಿ/ಕೋಲ್ಕತಾ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗಾಗಿ ವಿಪಕ್ಷಗಳ ಒಕ್ಕೂಟ ರಚನೆಗೆ ಸಿದ್ಧತೆ ಬಿರುಸಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಗ್ಗಟ್ಟಿನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಒಂದು ಹಂತದ ಸಹಮತವೂ ವ್ಯಕ್ತವಾಗಿದೆ. ಜೆಡಿಯು, ಟಿಎಂಸಿ, ಡಿಎಂಕೆ, ಎಸ್‌ಪಿ ಸೇರಿದಂತೆ ಹಲವು ಪಕ್ಷಗಳ ನಾಯಕರು ಈ ಬಗ್ಗೆ ಸಮ್ಮತಿಯನ್ನೂ ಸೂಚಿಸಿದ್ದಾರೆ. ಆದರೆ ಒಕ್ಕೂಟ ರಚನೆಗೆ ಪ್ರಧಾನವಾಗಿ ಪಾತ್ರ ವಹಿಸುತ್ತಿರುವ ಕಾಂಗ್ರೆಸ್ ತನ್ನ ಬಿಗಿ ನಿಲುವು ಸಡಿಲಿಸಿದರೆ, ಗೆಲುವು ಸಾಧ್ಯ ಎಂದು ಪ್ರತಿಪಾದಿಸುತ್ತಿದ್ದಾರೆ.
ತಾನು ಗೆಲ್ಲುವ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು. ಇನ್ನುಳಿದಂತೆ ಪ್ರಾದೇಶಿಕ ಪಕ್ಷಗಳು ಬಲವಾಗಿರುವ ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶಗಳಲ್ಲಿ ಆಯಾ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್ ಸಹಕಾರ ನೀಡಬೇಕು ಮತ್ತು ಅಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬಾರದು. ಜತೆಗೆ ಕಾಂಗ್ರೆಸ್ ಬಲ ಹೊಂದಿರುವ ಕ್ಷೇತ್ರಗಳಲ್ಲಿ ಮಾತ್ರ ಕೇಂದ್ರೀಕರಿಸಿ ಉಳಿದೆಡೆ ಮಿತ್ರ ಪಕ್ಷಗಳಿಗೆ ನೆರವು ನೀಡಬೇಕು ಎಂಬ ಅಭಿಪ್ರಾಯವನ್ನು ಜೆಡಿಯು, ಡಿಎಂಕೆ, ಎಸ್‌ಪಿ ಮುಖಂಡರು ವ್ಯಕ್ತಪಡಿಸಿದ್ದಾರೆ.
ಜೂ.12ರಂದು ಪಟ್ನಾದಲ್ಲಿ ನಡೆಯಲಿರುವ ವಿಪಕ್ಷಗಳ ಸಭೆಗೆ ಮುನ್ನವೇ ಈ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಪರಾಮರ್ಶೆಯೂ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖೀಸಿ “ನ್ಯೂಸ್ 18′ ವರದಿ ಮಾಡಿದೆ. ಜತೆಗೆ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಕೂಡ ವಿಪಕ್ಷಗಳ ಒಗ್ಗಟ್ಟಿನ ಪ್ರಧಾನಮಂತ್ರಿ ಅಭ್ಯರ್ಥಿ ಯನ್ನು ಆಯ್ಕೆ ಮಾಡಿ ಕಣಕ್ಕೆ ಇಳಿಸುವ ಪ್ರಯತ್ನಕ್ಕೂ ಸಹಮತ ಸೂಚಿಸಿದ್ದಾರೆ.
ಪಕ್ಷ ತ್ಯಜಿಸುವ ಸಾಧ್ಯತೆ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದಿಂದ 22 ಶಾಸಕರು, 9 ಸಂಸದರು ಹೊರಬರುವ ಸಾಧ್ಯತೆ. ಅಲ್ಲಿ ಅವರ ವಿರುದ್ಧ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು “ಸಾಮ್ನಾ’ ಸಂಪಾದಕೀಯದಲ್ಲಿ ಬರೆಯಲಾಗಿದೆ.
Related Articles
ಕಾಂಗ್ರೆಸ್ ವರ್ಸಸ್ ಟಿಎಂಸಿ
ಪಶ್ಚಿಮ ಬಂಗಾಳದಲ್ಲಿ ಇರುವ ಪಕ್ಷದ ಏಕೈಕ ಶಾಸಕ ಬೈರೋನ್ ಬಿಶ್ವಾಸ್ ಅವರನ್ನು ಸೆಳೆದುಕೊಂಡ ಟಿಎಂಸಿ ಕ್ರಮದ ಬಗ್ಗೆ ಕಾಂಗ್ರೆಸ್ ಪ್ರಬಲವಾಗಿ ಆಕ್ಷೇಪಿಸಿದೆ. ಇಂಥ ಕ್ರಮಗಳು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಕ್ಕೂಟ ರಚಿಸಬೇಕು ಎಂಬ ಮಹತ್ವಾಕಾಂಕ್ಷೆಗೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಕಟುವಾಗಿ ಟೀಕಿಸಿದ್ದಾರೆ. “ಬಿಜೆಪಿ ವಿರುದ್ಧ ಯಾವ ರೀತಿಯ ಹೋರಾಟ ನಡೆಸಬೇಕು ಎಂಬುದರ ಬಗ್ಗೆ ಕಾಂಗ್ರೆಸ್‌ನ ಪಾಠ ನಮಗೆ ಬೇಡ’ ಎಂದು ಟಿಎಂಸಿ ನಾಯಕ ಸುಖೇಂದು ರಾಯ್ ತಿರುಗೇಟು ನೀಡಿದ್ದಾರೆ.