Advertisement

ಲೋಕಾ ಚುನಾವಣೆಗೆ ತಳಮಟ್ಟದಿಂದ ಸಿದ್ಧ 

07:34 AM Oct 15, 2018 | |

ಬೆಂಗಳೂರು: ಲೋಕಸಭಾ ಚುನಾವಣೆ-2019ಕ್ಕೆ ತಳಮಟ್ಟದಿಂದಲೇ ಸಕಲ ಸಿದ್ಧತೆ ಆರಂಭಿಸಿರುವ ಬಿಜೆಪಿ, ಪಕ್ಷ ಸಂಘಟನೆ ಹಾಗೂ ಬಲವೃದ್ಧಿಗಾಗಿ ನೀಡಿರುವ ಏಳು ಪ್ರಮುಖ ಟಾಸ್ಕ್ ಗಳನ್ನು ಅ.31 ರೊಳಗೆ ಮುಗಿಸು ವಂತೆ ಸಂಸದರು, ಶಾಸಕರು ಹಾಗೂ ಜಿಲ್ಲಾ
ಪ್ರಮುಖರಿಗೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಜ್ವಲ, ಉಜಾಲ, ದೀನ್‌ದಯಾಳ್‌ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನಾ, ಜನ್‌ಧನ್‌, ಫ‌ಸಲ್‌ ಬಿಮಾ ಯೋಜನೆ ಹಾಗೂ ಮುದ್ರಾ ಸೇರಿ ಪ್ರಮುಖ ಯೋಜನೆಗಳ ಫ‌ಲಾನುಭವಿಗಳ ಜತೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಸಂವಾದ ನಡೆಸಲು ಶಾಸಕರು-ಸಂಸದರಿಗೆ  ನಿರ್ದೇಶನ ನೀಡಲಾಗಿತ್ತು.

Advertisement

ಬಿಜೆಪಿಯ ಶಾಸಕರು- ಸಂಸದರು ಇಲ್ಲದ ಕ್ಷೇತ್ರಗಳಲ್ಲಿ ಪಕ್ಷದಿಂದ ನೇಮಿಸಿರುವ ಕ್ಷೇತ್ರದ ಉಸ್ತುವಾರಿಗಳು ಅಥವಾ ಜಿಲ್ಲಾ ತಂಡದಿಂದ ಈ ಕಾರ್ಯಕ್ರಮ ನಡೆಸುವಂತೆ ನಿರ್ದೇಶಿಸಲಾಗಿತ್ತು. ಕೇಂದ್ರ ಸರ್ಕಾರದ ಯೋಜನೆಯ ಅನುಕೂಲತೆಗಳ ಕುರಿತು ಫ‌ಲಾನುಭವಿಗಳಿಂದಲೇ ಮಾಹಿತಿ ಕಲೆ ಹಾಕಿ ಅದನ್ನು ಕ್ರೋಢೀಕರಿಸಿ ವರದಿ ರೂಪದಲ್ಲಿ ನೀಡುವಂತೆ ತಿಳಿಸಲಾಗಿತ್ತು. ಈ ಟಾಸ್ಕ್ನ್ನು ಅ.31ರೊಳಗೆ ಪೂರ್ಣಗೊಳಿಸಲು ತಿಳಿಸಲಾಗಿದೆ. ಈ ಮಧ್ಯೆ, ಮಹಾತ್ಮಾಗಾಂಧಿ ಜನ್ಮದಿನದ ಪ್ರಯುಕ್ತ ತಿಂಗಳು ಪೂರ್ತಿ ಸ್ವತ್ಛತಾ ಸೇವಾ ಕಾರ್ಯಕ್ರಮ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸ್ಮರಣೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ
ಕಾವ್ಯಾಂಜಲಿ ಕಾರ್ಯಕ್ರಮ ಈಗಾಗಲೇ ಪೂರ್ಣಗೊಂಡಿದೆ.  ಜತೆಗೆ, ಕಾರ್ಯಾಂಜಲಿ ಕಾರ್ಯಕ್ರಮದಡಿ  ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣಾ ಶಿಬಿರ ಸೇರಿ ವಿವಿಧ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ದೇಶಿಸಲಾಗಿತ್ತು.
ಇದೂ ಸಹ ಮುಗಿದಿದೆ. ಈ ಕಾರ್ಯಕ್ರಮದಿಂದ ಕಾರ್ಯಕರ್ತರಿಗೆ ಉತ್ತೇಜನ ನೀಡುವುದರ ಜತೆಗೆ ಪಕ್ಷಕ್ಕೆ ಹೊಸಬರನ್ನು ಕರೆತರುವ ಪ್ರಯತ್ನವೂ ಆಗಿದೆ. ಸರ್ಜಿಕಲ್‌ ಸ್ಟ್ರೈಕ್‌ ದಿನಾಚರಣೆಯನ್ನು ಕಡ್ಡಾಯವಾಗಿ ನಡೆಸುವಂತೆ ನೀಡಿದ್ದ ಆದೇಶವೂ ಜಾರಿಯಾಗಿದೆ
ಎಂದು ರಾಜ್ಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. 

ಕ್ಷೇತ್ರವಾರು ಪಾದಯಾತ್ರೆ: ಈ ನಡುವೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ದಿನಕ್ಕೆ 10 ಕಿಲೋ ಮೀಟರ್‌ನಂತೆ 15 ದಿನಕ್ಕೆ 150 ಕಿ.ಮೀ. ಪಾದಯಾತ್ರೆ ನಡೆಸಬೇಕೆಂದು ಕೇಂದ್ರದಿಂದ ನಿರ್ದೇಶನ ನೀಡಲಾಗಿತ್ತು. ರಾಜ್ಯದ ಬಹುತೇಕ ಬಿಜೆಪಿ ಶಾಸಕರು ಹಾಗೂ ಸಂಸದರು ಪಾದಯಾತ್ರೆಗೆ ಸಿದ್ಧತೆ ನಡೆಸಿದ್ದರಾದರೂ, ಕಾರ್ಯಕ್ರಮ ಮಾತ್ರ ನಡೆದಿಲ್ಲ. ಪಾದಯಾತ್ರೆಯ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಇದಾಗಿದೆ. ಈ ಮಧ್ಯೆ, ಉಪಚುನಾವಣೆ ಘೋಷಣೆಯಾಗಿದ್ದರಿಂದ ಚುನಾವಣೆಯ ನಂತರ ಚಾಲನೆ ದೊರೆಯಲಿದೆ. ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಜನ್ಮದಿನವಾದ ಅಕ್ಟೋಬರ್‌ 31ರಂದು ಏಕತೆಯ ಓಟದ ಅಧಿಕೃತ ಕಾರ್ಯಕ್ರಮದ ಮೂಲಕ ಮೊದಲ ಹಂತದ ಏಳು ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ. ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಕರ್ನಾಟಕದ ಉಪ ಚುನಾವಣೆಯ ಫ‌ಲಿತಾಂಶದ ನಂತರ ಇನ್ನಷ್ಟು
ಕಾರ್ಯಕ್ರಮಗಳನ್ನು ಕೇಂದ್ರ ಬಿಜೆಪಿ ಸಿದ್ಧಪಡಿಸಿ ನೀಡಲಿದೆ. ಅಷ್ಟೋತ್ತಿಗೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿ ಪ್ರಚಾರ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ವಿವರಿಸಿದರು.

ಉಪ ಚುನಾವಣೆ ನಂತರ ಪಾದಯಾತ್ರೆ
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾದಯಾತ್ರೆಯನ್ನು ಅಕ್ಟೋಬರ್‌ ಮೊದಲ ವಾರದಿಂದಲೇ ಆರಂಭಿಸಬೇಕಿತ್ತು. ಆದರೆ, ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿ ರುವುದರಿಂದ ಬಹುತೇಕ ರಾಜ್ಯ ನಾಯಕರು ಚುನಾವಣಾ ಸಿದ್ಧತಾ ಕಾರ್ಯದಲ್ಲಿ ಇದ್ದಾರೆ. ಹೀಗಾಗಿ, ಪಾದಯಾತ್ರೆಗೆ ಬೇಕಾದ ತಯಾರಿ ಇನ್ನೂ ಆಗಿಲ್ಲ. ಹೀಗಾಗಿ, ಚುನಾವಣಾ ಫ‌ಲಿತಾಂಶದ ನಂತರ ಪಾದಯಾತ್ರೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾಹಿತಿ ನೀಡಿದ್ದಾರೆ.

ಇಂದು ಸಭೆ
ಅ.31ರಂದು ನಡೆಯಲಿರುವ ಏಕತಾ ಓಟ ಕಾರ್ಯಕ್ರಮವನ್ನು ಸಂಘಟನಾತ್ಮಕವಾಗಿ ಮಾಡಲು ಬೇಕಾದ ತಯಾರಿಯನ್ನು ಬಿಜೆಪಿ ಈಗಾಗಲೇ ಆರಂಭಿಸಿದೆ. ಕಾರ್ಯಕ್ರಮದ ಅಂತಿಮ ಸಿದ್ಧತೆಗೆ ಅ.15ರಂದು ಮಧ್ಯಾಹ್ನ 3 ಗಂಟೆಗೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ರಾಜ್ಯ ನಾಯಕರ ಸಭೆ ನಡೆಯಲಿದೆ. ಗುಜರಾತ್‌ ಸರ್ಕಾರದ ಇಂಧನ ಸಚಿವ ಸೌರಬ್‌ ಪಟೇಲ್‌ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Advertisement

● ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next