ವಿಜಯಪುರ: ಕರ್ನಾಟಕ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಶುಕ್ರವಾರ ನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪ್ರತಿ ತಿಂಗಳ ಕಚೇರಿ ವಿವರವನ್ನು ಲೋಕಾಯುಕ್ತ ಕಚೇರಿಗೆ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದರು.
ಅಲ್ಲದೇ ಅಧಿಕಾರಿಗಳಿಗೆ ಬದ್ಧತೆಯ ಕರ್ತವ್ಯ ನಿರ್ವಹಣೆಯ ಕುರಿತು ಮಾರ್ಗದರ್ಶನ ಮಾಡಿ, ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಕಂಡು ಬಂದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಆರ್‌ಟಿಒ ಕಚೇರಿಯಲ್ಲಿ ಸಲ್ಲಿಕೆಯಾದ ಹಾಗೂ ವಿಲೆ ಮಾಡಲಾದ ಕಡತಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಲೋಕಾಯುಕ್ತರು, ಕಡತ ವಿಲೆ ಮಾಡುವಲ್ಲಿ ಅನಗತ್ಯವಾಗಿ ವಿಳಂಬ ಮಾಡದಂತೆ ತಾಕೀತು ಮಾಡಿದರು.
ಚೆಕ್ ಪೊಸ್ಟ್ ಗಳಲ್ಲಿ ತೀವ್ರ ಸಮಸ್ಯೆ ಇರುವ ಮಾಹಿತಿ ಬರುತ್ತಿವೆ. ಒಂದೊಮ್ಮೆ ಈ ಕುರಿತು ದೂರು ಬಂದರೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಆರ್‌ಟಿಒ ಅವರಿಗೆ ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಿರಬೇಕು. ಮನಸ್ಸಿಗೆ ಬಂದಂತೆ ಕಚೇರಿಗೆ ಬರುವುದು, ಹೋಗುವುದು ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಳ್ಳಿ ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಪ್ರತಿ ತಿಂಗಳ ವಾಹನ ನೋಂದಣಿ ಸೇರಿದಂತೆ ಇತರೆ ಕೆಲಸಕ್ಕಾಗಿ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿ, ವಿಲೆ ಮಾಡಿದ ವಿವರ, ವಿಲೆ ಮಾಡದೇ ಉಳಿದ ಕಡತಗಳಿಗೆ ಸೂಕ್ತ ಕಾರಣ ಸಹಿತ ಲೋಕಾಯುಕ್ತ ಕಚೇರಿಗೆ ಮಾಹಿತಿ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದರು. ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಇತರರು ಇದ್ದರು.