Advertisement

ಬ್ರಿಮ್ಸ್‌ಗೆ ಲೋಕಾಯುಕ್ತ ಎಸ್‌ಪಿ ಭೇಟಿ-ಪರಿಶೀಲನೆ

06:32 PM Aug 25, 2022 | Team Udayavani |

ಬೀದರ: ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರದಿಂದ ಇರುವ ಎಲ್ಲ ಸೌಲಭ್ಯಗಳನ್ನು ಒದಗಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಆರೋಗ್ಯ ಸೇವೆಯಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಕಲಬುರಗಿ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಎ.ಆರ್‌ ಕರ್ನೂಲ್‌ ಹೇಳಿದರು.

Advertisement

ನಗರದ ಬ್ರಿಮ್ಸ್‌ ಆಸ್ಪತ್ರೆಗೆ ಆಕಸ್ಮಿಕ ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿಗಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಹಾಜರಾತಿ ಪುಸ್ತಕವನ್ನು ವೀಕ್ಷಿಸಿ, ಕೆಲವು ವೈದ್ಯಾಧಿಕಾರಿಗಳು ರುಜು ಹಾಕದೇ ಇರುವುದನ್ನು ಕಂಡು ಪ್ರತಿದಿನ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾತಿ ಪುಸ್ತಕದಲ್ಲಿ ರುಜು ಮಾಡುವುದು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರ ಚಲನವಲನ ರಜಿಸ್ಟರ್‌ ಹಾಗೂ ನಗದು ನೀಡಿ ಪುಸ್ತಕ ನಿರ್ವಹಿಸುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚಿಸಿದರು.

ಆಸ್ಪತ್ರೆಯ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾಪಾಡುವುದು, ಆಯುಷ್ಮಾನ ಯೋಜನೆಯಡಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಬಗ್ಗೆ ಹಾಗೂ ಉಳಿದ ಆಯುಷ್ಮಾನ ಕಾರ್ಡ್‌ಗಳನ್ನು ವಿತರಣೆ ಮಾಡುವುದು, ಔಷಧ ವಿತರಣಾ ಸಹಿಗಳನ್ನು ಸರಿಯಾಗಿ ನಿರ್ವಹಿಸುವುದು ಹಾಗೂ ಆಸ್ಪತ್ರೆಯ ಆವರಣದ ಶೌಚಾಲಯವನ್ನು ಶುಚಿತ್ವ ಕಾಪಾಡಲು ಹಾಗೂ ಕೋವಿಡ್‌ ಮುಂಜಾಗ್ರತೆ ಕ್ರಮ ವಹಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬೀದರ ಲೋಕಾಯುಕ್ತ ಪೊಲೀಸ್‌ ಉಪಾಧೀಕ್ಷಕ ಎನ್‌.ಎಂ. ಓಲೇಕಾರ, ಪೊಲೀಸ್‌ ನಿರೀಕ್ಷಕರಾದ ಡಿ.ಬಿ. ಕಟ್ಟಿಮನಿ, ಅಮರೇಶ ಬಿ.ಹೂಗಾರ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next