ಉಡುಪಿ: ಲೋಕಾಯುಕ್ತ ಅಧಿಕಾರಿಗಳ ತಂಡ ಉಡುಪಿಯಲ್ಲಿ ಕಾರ್ಯಚರಣೆಗಿಳಿದಿದ್ದು, ಉಡುಪಿಯ ಸರಕಾರಿ ಕಚೇರಿಗಳಿಗೆ ಡಿವೈ ಎಸ್ ಪಿ ಭಾಸ್ಕರ್ ವಿ ಬಿ ಮತ್ತವರ ತಂಡ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಕೋವಿಡ್ 19 ಸೋಂಕು ತೀವ್ರವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ, ಅದನ್ನು ನಿಯಂತ್ರಿಸಲು ಸರಕಾರಿ ಇಲಾಖೆಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ಪರಿಶೀಲನೆ ನಡೆಸಲು ಸೋಮವಾರ ಲೋಕಾಯುಕ್ತ ತಂಡ ಫೀಲ್ಡ್ ಗಿಳಿದಿತ್ತು. ಈ ಕುರಿತು ಮಾಹಿತಿ ಇಂದು ಹೊರಬಿದ್ದಿದೆ.
ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿ ಕಂಡು ಲೋಕಾಯುಕ್ತ ಅಧಿಕಾರಿಗಳು ಶಾಕ್ ಆಗಿದ್ದಾರೆ. ಕೋವಿಡ್ ವೈರಸ್ ನಿಯಂತ್ರಿಸಲು ಪ್ರಮುಖ ಪಾತ್ರ ವಹಿಸಬೇಕಾದ ನಗರ ಸಭೆಯಲ್ಲಿ ಸರಕಾರದ ನಿಯಮಾವಳಿಗಳು ಉಲ್ಲಂಘನೆಯಾಗಿದ್ದು ಕಂಡು ಬಂದಿದೆ. ನಗರ ಸಭೆಯಲ್ಲಿ ಸಾಮಾಜಿಕ ಅಂತರ ಮರೆಯಾಗಿದ್ದು, ನಗರ ಸಭೆಗೆ ಒಳ ಪ್ರವೇಶಿಸುವ ಬಳಿ ಸಾನಿಟೈಸರ್ ಒಂದನ್ನು ಇರಿಸಿರುವುದು ಬಿಟ್ಟರೆ, ಬೇರೆ ಸರಕಾರಿ ನಿಯಾಮಗಳು ಪಾಲನೆಯಾಗದಿರುವುದು ಕಂಡ ಲೋಕಾಯುಕ್ತರು ಅಧಿಕಾರಿಗಳನ್ನ ತಾರಟೆಗೆ ತೆಗೆದುಕೊಂಡರು.
ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಮಾಸ್ಕ್ ಹಾಕದೇ ಕಾರ್ಯ ನಿರ್ವಹಿಸುತ್ತಿರುವುದು ದಾಳಿಯ ವೇಳೆಗೆ ಕಂಡು ಬಂದಿದೆ. ಕಚೇರಿಯೊಳಗಡೆ ಹೊರಗಡೆ ಹೋಗುವವರ ವಿವರಗಳನ್ನು ನಮೋದಿಸಬೇಕೆಂಬ ನಿಯಮವಿದ್ದರೂ, ಇಲ್ಲಿ ಪಾಲನೆಯಾಗುತ್ತಿಲ್ಲ. ತಾಲೂಕು ಕಚೇರಿ ಅವರಣದಲ್ಲಿರುವ ಕ್ಯಾಂಟೀನ್ ನಲ್ಲಿ ಯಾವುದೇ ಸುರಕ್ಷತಾ ಕ್ರಮ ಇಲ್ಲದಿರುವುದನ್ನು ಕಂಡ ಡಿವೈಎಸ್ ಪಿ ಗರಂ ಅದರು. ಸಬ್ ರಿಜಿಸ್ಟ್ ರ್ ಕಚೇರಿಯಲ್ಲೂ ನಿಯಮವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು. ಗುಂಪು ಗುಂಪಾಗಿ ಸಾಮಾಜಿಕ ಅಂತರ ಮರೆತು ಸಾರ್ವಜನಿಕರು ಸೇರಿದ್ದರು. ಇಲ್ಲಿ ಜನರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಿರದೇ ಇರುವುದು ಲೋಕಾಯುಕ್ತ ದಾಳಿ ವೇಳೆಗೆ ಕಂಡು ಬಂದಿದೆ.
ನಗರದ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಹಲವೆಡೆ ಲೋಕಾಯುಕ್ತ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಸರಕಾರಿ ಕಚೇರಿ ಮಾತ್ರವಲ್ಲದೇ ನಗರದ ಕೆಲವೊಂದು ಹೋಟೆಲುಗಳು, ಎಲೆಕ್ಟ್ರಾನಿಕ್ ಮಳಿಗೆ, ಬಾರ್ ಅ್ಯಂಡ್ ರೆಸ್ಟೋರೆಂಟ್ ಗಳಿಗೂ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಅಂತರ ಹಾಗೂ ಸರಕಾರಿ ಅದೇಶ ಉಲ್ಲಂಘನೆ ಮಾಡುವ ಅಂಗಿಡಿ ಮಾಲೀಕರ ಲೈಸೆನ್ಸ್ ರದ್ದು ಮಾಡುವುದಾಗಿ ಎಚ್ಚರಿಸಿದ್ದಾರೆ.