Advertisement
ಬಹುತೇಕ ಆರ್‌ಟಿಒ ಕಚೇರಿಗಳಲ್ಲಿ ಏಜೆಂಟ್‌ಗಳ ಹಾವಳಿ ಕಂಡು ಬಂದಿದೆ. ಬೆಂಗಳೂರಿನ ಯಲಹಂಕ, ಇಂದಿರಾನಗರ, ಜಯನಗರ, ಕೋರಮಂಗಲ, ಜ್ಞಾನಭಾರತಿ, ರಾಜಾಜಿನಗರ, ಯಶವಂತಪುರ ಸೇರಿದಂತೆ ಒಟ್ಟು 13 ಪ್ರಾದೇಶಿಕ ಸಾರಿಗೆ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕಚೇರಿಯಲ್ಲಿದ್ದ ದಾಖಲೆ ಪರಿಶೀಲಿಸಿದಾಗ ಕೆಲವೊಂದು ಅರ್ಜಿ, ಕಡತಗಳನ್ನು ಹಲವು ತಿಂಗಳಿಂದ ವಿಲೇವಾರಿ ಮಾಡದೇ ಬಾಕಿ ಉಳಿಸಿಕೊಂಡಿರುವುದು, ಏಜೆಂಟ್‌ಗಳ ಮೂಲಕ ಲಂಚಕ್ಕೆ ಬೇಡಿಕೆಯಿಡಲು ಅಧಿಕಾರಿಗಳು ಪರೋಕ್ಷವಾಗಿ ಪ್ರಯತ್ನಿಸಿರುವುದು ಪತ್ತೆಯಾಗಿದೆ.
Related Articles
Advertisement
ಬಳಿಕ ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ರಚಿಸಿ ಬೆಂಗಳೂರಿನಾದ್ಯಂತ ಇರುವ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಏಕಕಾಲದಲ್ಲಿ ದಾಳಿ ಮಾಡಿ ಅಕ್ರಮ ಪತ್ತೆ ಹಚ್ಚುವಂತೆ ಆದೇಶಿಸಿದ್ದರು.
ಒಂದು ಕಚೇರಿಗೆ 10 ಅಧಿಕಾರಿಗಳ ತಂಡ: ದಾಳಿ ನಡೆಸಿದ ಬಳಿಕ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ “ಉದಯವಾಣಿ’ ಜತೆ ಮಾತನಾಡಿ, ಮೊದಲಿಂದಲೂ ಆರ್‌ಟಿಒ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುವ ಬಗ್ಗೆ ಆರೋಪಗಳು ಕೇಳಿ ಬಂದಿತ್ತು. ಬೆಂಗಳೂರಿನಲ್ಲಿ ಏಜೆಂಟ್‌ಗಳ ಹಾವಳಿ ಹೆಚ್ಚಾಗಿದೆ, ಅರ್ಜಿ ಸಲ್ಲಿಸಿರುವುದು ಶೀಘ್ರದಲ್ಲಿ ವಿಲೇವಾರಿಯಾಗುತ್ತಿಲ್ಲ ಎಂಬುದು ಸೇರಿದಂತೆ ಸಾರ್ವಜನಿಕರಿಂದ ಆರ್‌ಟಿಒ ಕಚೇರಿ ಸಿಬ್ಬಂದಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಎಸ್‌ಪಿ, ಡಿವೈಎಸ್‌ಪಿ, ಜಿಲ್ಲಾ ನ್ಯಾಯಾಧೀಶರು, ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಒಂದು ಆರ್‌ಟಿಒ ಕಚೇರಿ ಪರಿಶೀಲನೆಗೆ 10 ಅಧಿಕಾರಿಗಳ ತಂಡ ರಚಿಸಲಾಗಿತ್ತು. ಆರ್‌ಟಿಒ ಕಚೇರಿಯ ಟ್ರಾನ್ಸ್‌ಪೋರ್ಟ್ ವಿಭಾಗ, ನಾನ್ ಟ್ರಾನ್ಸ್‌ಪೋರ್ಟ್ ವಿಭಾಗ, ಪರವಾನಗಿ ವಿಭಾಗ, ಪರ್ಮಿಟ್ಸ್ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಪರಿಶೀಲನೆ ನಡೆಸಲಾಗಿದೆ.
ಯಾವೆಲ್ಲಾ ಅರ್ಜಿ ವಿಲೇವಾರಿಗೆ ಬಾಕಿ ಇದೆ. ಏನೆಲ್ಲಾ ಗೋಲ್ ಮಾಲ್ ನಡೆಯುತ್ತಿದೆ? ಎಂಬಿತ್ಯಾದ ಆರೋಪಗಳ ಬಗ್ಗೆ ಸಂಪೂರ್ಣ ವರದಿಬೇಕು ಎಂದು ಹೇಳಿರುವುದಕ್ಕೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಲಾಗಿದೆ ಎಂದರು.
ಬೆಂ. ಗ್ರಾಮಾಂತರದಲ್ಲೂ ದಾಳಿ:
ದೇವನಹಳ್ಳಿ: ಪಟ್ಟಣದ ರಾಣಿ ಸರ್ಕಲ್‌ನಲ್ಲಿರುವ ಆರ್‌ಟಿಒ ಕಚೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಅಧಿಕಾರಿ ಕಚೇರಿ ಮೇಲೆ ದಾಳಿ ಮಾಡಿ ವಿವಿಧ ಪತ್ರಗಳನ್ನು ಪರಿಶೀಲಿಸಿದರು. ಲೋಕಾಯುಕ್ತ ಅಧಿಕಾರಿ ಪವನ್ ನೆಜ್ಯೂರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಆರ್‌ಟಿಒ ಕಚೇರಿಗಳಲ್ಲಿ ಭ್ರಷ್ಟಾಚಾರದ ಮತ್ತು ಅವರ ನಡೆಯುತ್ತಿರುವ ಕುರಿತು ಸಾರ್ವಜನಿಕ ದೂರನ್ನು ಆಧರಿಸಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿ ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡಿದ್ದಾರೆ.