Advertisement

ಬಿಬಿಎಂಪಿಗೆ ಲೋಕಾ ನೋಟಿಸ್‌

12:08 PM Oct 23, 2017 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಲ್ಲಿ ನಿರ್ಮಾಣಗೊಂಡ 343ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಪಾಲಿಕೆಗೆ ತಪ್ಪು ಮಾಹಿತಿ ನೀಡಿದ್ದರಿಂದ 200 ಕೋಟಿ ರೂ. ನಷ್ಟವಾಗಿರುವ ವಿಚಾರ ಇದೀಗ ಲೋಕಾಯುಕ್ತ ಅಂಗಳ ತಲುಪಿದೆ.

Advertisement

ಬಿಬಿಎಂಪಿ ಅಕ್ರಮ ಜಾಹೀರಾತು ಪ್ರಕರಣದ ಬಳಿಕ ಲೋಕಾಯುಕ್ತ ಮೆಟ್ಟಿಲೇರಿದ ನೂರಾರು ಕೋಟಿ ರೂ.ಅಕ್ರಮ ಆರೋಪದ ಪ್ರಕರಣ ಇದಾಗಿದೆ. ಆರಂಭಿಕ ಹಂತದಲ್ಲಿ ಅಧಿಕಾರಿಗಳಿಂದ ಮಾಹಿತಿ ಕೋರಿರುವ ಲೋಕಾಯುಕ್ತರು ಪ್ರಾಥಮಿಕ ವಿಚಾರಣೆ ಬಳಿಕ ಪಾಲಿಕೆಗೆ ನಷ್ಟ ಉಂಟು ಮಾಡಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸುವ ಸಾಧ್ಯತೆಯಿದೆ.

 ಆಸ್ತಿ ಮಾಲಿಕರು ತಪ್ಪು ಮಾಹಿತಿ ನೀಡಿದ್ದರೂ ಪಾಲಿಕೆ ಬೊಕ್ಕಸಕ್ಕೆ 200 ಕೋಟಿ ರೂ. ನಷ್ಟವುಂಟಾಗಲು ಪಾಲಿಕೆ ಅಧಿಕಾರಿಗಳ ಕರ್ತವ್ಯ ಲೋಪವೂ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. 

ಆಸ್ತಿ ಮಾಲಿಕರು ತಪ್ಪು ಮಾಹಿತಿ ನೀಡಿರುವ ವಿಚಾರ ಹಾಗೂ ಅಧಿಕಾರಿಗಳು ಆ ಬಗ್ಗೆ ಗಮನಹರಿಸಿದ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, ಕಂದಾಯ ವಿಭಾಗದ ಜಂಟಿ ಆಯುಕ್ತರು, ಆಯಾ ವಲಯದ ಜಂಟಿ ಆಯುಕ್ತರು ಹಾಗೂ ಉಪ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಿ ಆದೇಶಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ನಿರ್ಮಾಣಗೊಂಡಿರುವ ಯಾವ್ಯಾವ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳ ಬಗ್ಗೆ ಸಮೀಕ್ಷೆ ನಡೆಸಬೇಕು .ಈ ಎಲ್ಲಾ ಕಟ್ಟಡಗಳು ಯಾವ್ಯಾವ ಪ್ರದೇಶಗಳಲ್ಲಿ ನಿರ್ಮಾಣಗೊಂಡಿವೆ. ಅದರ ಮಾಲಿಕರು ಯಾರು?. ಪ್ರತಿ ಕಟ್ಟಡದ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು. ಸ್ವಾಧೀನ ಪತ್ರ ಪಡೆದುಕೊಂಡಿರುವ ಎಷ್ಟು ಅಪಾರ್ಟ್‌ಮೆಂಟ್‌ಗಳಿಗೆ ಸ್ವಾಧೀನ ಪ್ರಮಾಣಪತ್ರ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡುವಂತೆ ತಾಕೀತು ಮಾಡಿದ್ದಾರೆ.

Advertisement

ಜೊತೆಗೆ ಇದುವರೆಗೂ ಪಾಲಿಕೆ ಸಂಗ್ರಹಿಸಿರುವ, ಸಂಗ್ರಹಿಸದ ಆಸ್ತಿ ತೆರಿಗೆ ಮೊತ್ತ, ಸಂಗ್ರಹಿಸದಿರಲು ನಿಖರ ಕಾರಣಗಳು ಏನು? ಬಾಕಿ ಉಳಿದಿರುವ ಆಸ್ತಿ ತೆರಿಗೆ ವಸೂಲು  ಮಾಡಲು ಕೈಗೊಂಡಿರುವ  ಕ್ರಮಗಳೇನು? ಯಾವ ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹಿಸದೇ ಕರ್ತವ್ಯ ಲೋಪ ಮೆರೆದಿದ್ದಾರೆ. ಅಂತಹ ಅಧಿಕಾರಿಗಳ ಪಟ್ಟಿಯನ್ನು ನೀಡುವಂತೆ ಸೂಚಿಸಿದ್ದಾರೆ.

ಕೂಡಲೇ ಆಯಾ ವಲಯದ ಅಧಿಕಾರಿಗಳು ಸಂಬಂಧಪಟ್ಟ ಅಪಾರ್ಟ್‌ಮೆಂಟ್‌ಗಳ, ಕಟ್ಟಡಗಳ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಕ್ರಮ ಕೈಗೊಂಡು ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ನಗರದ ಕಟ್ಟಡಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ಆಸ್ತಿ ಸಂಗ್ರಹಿಸುವುದು ಪಾಲಿಕೆ ಅಧಿಕಾರಿಗಳ ಕರ್ತವ್ಯ. ಹೀಗಿದ್ದರೂ, ಕರ್ತವ್ಯಲೋಪ ಎಸಗಿ ಪಾಲಿಕೆ ಬೊಕ್ಕಸಕ್ಕೆ ನಷ್ಟವುಂಟು ಮಾಡುವುದು ಸರಿಯಲ್ಲ. ಈ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುವ ಅಗತ್ಯವಿರುವ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಜಂಟಿ ಆಯುಕ್ತರ ಮೇಲೆ ತೂಗುಕತ್ತಿ! 
ಕಟ್ಟಡ ಹಾಗೂ ಅಪಾರ್ಟ್‌ಮೆಂಟ್‌ ಮಾಲಿಕರ ಜೊತೆ ಶಾಮೀಲಾಗಿ ಆಯಾ ವಲಯದ ಜಂಟಿ ಆಯುಕ್ತರು ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಪಾಲಿಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸ‌ಮಿತಿ ಅಧ್ಯಕ್ಷ ಗುಣಶೇಖರ್‌ ಆರೋಪಿಸಿದ್ದರು.  ಈ  ಆರೋಪದ ಮೇರೆಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಲಯ ಜಂಟಿ ಅಧಿಕಾರಿಗಳಿಗೂ ಲೋಕಾಯುಕ್ತರು ನೋಟಿಸ್‌ ಜಾರಿಗೊಳಿಸಿದ್ದಾರೆ.

ಆಸ್ತಿ ತೆರಿಗೆಯನ್ನು ನಿಖರವಾಗಿ ಸಂಗ್ರಹಿಸುವ ಸಲುವಾಗಿ ನಗರದ ಅಪಾರ್ಟ್‌ಮೆಂಟ್‌ಗಳು ಹಾಗೂ ಕಟ್ಟಡಗಳ ವಿಸ್ತೀರ್ಣ ಸಮೀಕ್ಷೆ ನಡೆಯುತ್ತಿದೆ. ಈಗಾಗಲೇ 50 ಅಪಾರ್ಟ್‌ಮೆಂಟ್‌ಗಳ ಸಮೀಕ್ಷೆ ಪೂರ್ಣಗೊಂಡಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಲೋಕಾಯುಕ್ತರಿಗೆ ವರದಿ ಸಲ್ಲಿಸಲಾಗುವುದು. ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಅಧಿಕಾರಿಗಳು ಲೋಪ ಎಸಗಿದ್ದರೆ ಕ್ರಮ ಕೈಗೊಳ್ಳಲಾಗುವುದು.
-ಮಂಜುನಾಥ್‌ಪ್ರಸಾದ್‌, ಬಿಬಿಎಂಪಿ ಆಯುಕ್ತ 

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next