ಬೆಂಗಳೂರು: ಲೋಕಾಯುಕ್ತ ಸಂಸ್ಥೆಯು ಮತ್ತೆ ಮೈ ಕೊಡವಿ ನಿಂತಿದ್ದು, ಹಿಂದಿನ ಅಧಿಕಾರ ಸಿಕ್ಕ 6 ತಿಂಗಳ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿ ಮೇಲೆ ದಾಳಿ ನಡೆಸಿದೆ. ಈ ಮೂಲಕ ಬಿಡಿಎಯಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಲೋಕಾಯುಕ್ತ ಸಜ್ಜಾಗಿದೆ.
ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ 6 ತಂಡದ 35 ಲೋಕಾಯುಕ್ತ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಯ ತಂಡವು ಶುಕ್ರವಾರ ಬಿಡಿಎ ಪ್ರಧಾನ ಕಚೇರಿ ಸೇರಿ ನಗರದಲ್ಲಿರುವ ವಿವಿಧ ಬಿಡಿಎ ಉಪ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಬಿಡಿಎಯಲ್ಲಿರುವ ನಗರ ಯೋಜನಾ ವಿಭಾಗ, ಎಂಜಿನಿಯರಿಂಗ್, ಭೂಸ್ವಾಧೀನ ಹಾಗೂ ಪರಿಹಾರ, ಸೈಟ್ ಪ್ಲ್ರಾನಿಂಗ್ ವಿಭಾಗಗಳ ಕಚೇರಿಗಳಲ್ಲಿ ಕಡತಗಳನ್ನು ಜಪ್ತಿ ಮಾಡಿದ ಲೋಕಾಯುಕ್ತ ಪೊಲೀಸರು ಪರಿಶೀಲಿಸಿದ್ದಾರೆ.
ಬಿಡಿಎ ಕಚೇರಿಯ 4 ಬಾಗಿಲು ಮುಚ್ಚಿ ದಾಖಲೆಗಳಿಗೆ ಶೋಧ ನಡೆಸಿದ್ದಾರೆ. ದಾಳಿ ವೇಳೆ ಬಿಡಿಎ ಕಚೇರಿ ಒಳಗಿದ್ದ ಪ್ರತಿಯೊಬ್ಬರನ್ನೂ ಒಬ್ಬೊಬ್ಬರಾಗಿ ವಿಚಾರಣೆ ನಡೆಸಿ, ತಪಾಸಣೆ ನಡೆಸಿ ಪೊಲೀಸರು ಹೊರಕ್ಕೆ ಬಿಟ್ಟು ಕಳುಹಿಸಿದರು. ಸಂಜೆಯವರೆಗೂ ಬಿಡಿಎ ಕಚೇರಿ ಆವರಣದಲ್ಲೇ ಟೇಬಲ್ ಹಾಕಿ ಕುಳಿತು ಜಪ್ತಿ ಮಾಡಲಾದ ಬಿಡಿಎ ನಿವೇಶನಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಐಜಿಪಿ ಸುಬ್ರಹ್ಮಣೇಶ್ವರ್ ರಾವ್ ಖುದ್ದು ಭೇಟಿ ಕೊಟ್ಟು ಸಿಬ್ಬಂದಿಗೆ ಮುಂದಿನ ತನಿಖೆ ಹೇಗೆ ನಡೆಸಬೇಕು ಎಂಬ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಇದೇ ವೇಳೆ ಕಚೇರಿಯಲ್ಲಿ ಸಾರ್ವಜನಿಕರ ಜತೆಗೆ ಡೀಲ್ ಕುದುರಿಸಲು ಮುಂದಾಗಿದ್ದ ಮೂವರು ಬ್ರೋಕರ್‌ಗಳು ಲೋಕಾ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್‌ಪಿ ಕೆ.ವಿ.ಅಶೋಕ್ ನೇತೃತ್ವದಲ್ಲಿ ದಾಖಲೆ ಶೋಧ ಕಾರ್ಯ ಮುಂದುವರೆದಿದೆ.
ಬಿಡಿಎ ಮೇಲೆ ದಾಳಿ ಏಕೆ ? : ಬಿಡಿಎ ಮೂಲೆ ನಿವೇಶನ ಹಂಚಿಕೆ ಹಾಗೂ ಲೇಔಟ್ ನಿರ್ಮಾಣ ಪ್ರಕ್ರಿಯೆಯಲ್ಲಿ ಗೋಲ್ಡ್ ಮಾಲ್, ಫಲಾನುಭವಿಗಳಿಗೆ ಪರಿಹಾರ ನೀಡುವಲ್ಲಿ ಅವ್ಯವಹಾರ, ಬೇರೆಯವರಿಗೆ ನೋಂದಣಿಯಾಗಿರುವ ನಿವೇಶನ ಮಾರಾಟ, ಪರಿಹಾರ ವಿತರಿಸಲು ವಿಳಂಬ, ಸೈಟು ಪ್ಲ್ರಾನಿಂಗ್ ಪಡೆಯಲು ಲಂಚ ಸೇರಿದಂತೆ ಬಿಡಿಎ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಸಾಲು-ಸಾಲು ದೂರುಗಳು ಲೋಕಾಯುಕ್ತಕ್ಕೆ ಬಂದಿದ್ದವು. ಇದರ ಜತೆಗೆ ಈ ಹಿಂದೆ ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ನಡೆಸಿದಾಗ ಬಿಡಿಎ ಅಧಿಕಾರಿಗಳ ಹಲವು ವ್ಯವಹಾರಗಳು ಬೆಳಕಿಗೆ ಬಂದಿದ್ದವು. ಎಸಿಬಿ ರದ್ದಾದ ಬಳಿಕ ಈ ತನಿಖಾ ವರದಿಯೂ ಲೋಕಾಯಕ್ತ ಸಂಸ್ಥೆಗೆ ಬಂದಿತ್ತು. ಒಟ್ಟಾರೆ ಬಿಡಿಎಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಪತ್ತೆಯಾಗಿತ್ತು. ಈ ಎಲ್ಲ ದಾಖಲೆಗಳನ್ನು ಆಧರಿಸಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಕೆಲ ದಿನಗಳ ಹಿಂದೆ ವಿಶೇಷ ತಂಡ ರಚಿಸಿ ಬಿಡಿಎ ಅವ್ಯವಹಾರದ ವಿರುದ್ಧ ಸಾಕ್ಷ್ಯ ಸಂಗ್ರಹಿಸಿದೆ.
ಲೋಕಾಯುಕ್ತರ ಖುದ್ದು ಭೇಟಿ ಇದೇ ಮೊದಲು : ಲೋಕಾಯುಕ್ತ ಸಂಸ್ಥೆಗೆ ಅಧಿಕಾರ ಸಿಕ್ಕಿದ ಬಳಿಕ ಇದೇ ಮೊದಲ ಬಾರಿಗೆ ಖುದ್ದು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರೇ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಿಡಿಎ ಕಾರ್ಯದರ್ಶಿ ವೈ.ಬಿ.ಶಾಂತರಾಜು ಕಚೇರಿಗೆ ಭೇಟಿ ಕೊಟ್ಟು ಕೆಲ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಇದಾದ ಬಳಿಕ ದಾಳಿ ನಿರತ ಲೋಕಾಯುಕ್ತ ಅಧಿಕಾರಿಗಳ ಬಳಿ ಚರ್ಚಿಸಿದ ಅವರು, ಯಾವ ವಿಭಾಗದಲ್ಲಿ ದೂರುದಾರರಿಗೆ ವಂಚನೆಯಾ ಗಿದೆ ಎಂಬ ಬಗ್ಗೆ ದೂರುದಾರರನ್ನು ಸಂಪರ್ಕಿಸಿ ಹೇಳಿಕೆ ಪಡೆದುಕೊಳ್ಳಿ. ಕೂಲಂಕುಷವಾಗಿ ಪರಿಶೀಲಿಸಿ ದಾಳಿ ಮುಕ್ತಾಯಗೊಳಿಸಬೇಕು. ಸಾರ್ವಜನಿಕರ ದೂರು ಪಡೆದು ಕಚೇರಿಯ ಎಲ್ಲೆಡೆ ದಾಖಲೆ ಪರಿಶೀಲಿಸಿ. ಬಿಡಿಎ ನಿವೇಶನ ಹಂಚಿಕೆ, ಭೂ ಸ್ವಾಧೀನ, ಟೌನ್ ಪ್ಲ್ರಾನಿಂಗ್‌ಗಳ ಮೇಲೆ ನಿಗಾ ಇಟ್ಟು ತನಿಖೆ ನಡೆಸಿ ಎಂದು ಸೂಚನೆ ಕೊಟ್ಟಿದ್ದಾರೆ.