ಬೆಂಗಳೂರು: ಒಂದು ಕಾಲದಲ್ಲಿ ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಲೋಕಾಯುಕ್ತವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಬಿಜೆಪಿ ಶಾಸಕರು ಹಾಗೂ ತಮ್ಮ ವಿರೋಧಿಗಳಿಗೆ ಬಿಸಿ ಮುಟ್ಟಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲ ದಿನಗಳ ಹಿಂದೆ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿರುವ ಪ್ರಕರಣಗಳ ಸ್ಥಿತಿ ಗತಿಗಳ ಕುರಿತು ಮಾಹಿತಿ ಸಲ್ಲಿಸಲು ಸರ್ಕಾರ ಸೂಚಿಸಿದೆ.
ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ಲೋಕಾಯುಕ್ತ ಪೊಲೀಸ್ ವಿಭಾಗವನ್ನು ಸರ್ಕಾರವು ತನ್ನ ಎದುರಾಳಿಗಳ ಮೇಲೆ ಅಸ್ತ್ರವಾಗಿ ಪ್ರಯೋಗಿಸಲು ತೆರೆ ಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಡಳಿತ ಪಕ್ಷದ ಇತರ ನಾಯಕರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿರುವ ಪ್ರಕರಣಗಳು ಹಾಗೂ ಅದರ ಪ್ರಸ್ತುತ ಸ್ಥಿತಿ-ಗತಿಗಳ ವಿವರ ಸಲ್ಲಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಜೊತೆಗೆ ಕೆಲ ಮಹತ್ವದ ಪ್ರಕರಣಗಳಲ್ಲಿ ಸಂಗ್ರಹಿಸಿರುವ ದಾಖಲೆಗಳು, ಅಕ್ರಮ ಆಸ್ತಿ (ಡಿಎ ಕೇಸ್) ಪ್ರಕರಣ, ದಾಖಲಾಗಿರುವ ಎಫ್ಐಆರ್‌ಗಳ ಮಾಹಿತಿ ಕೇಳಿದ್ದಾರೆ. ಕಾಂಗ್ರೆಸ್‌ನ ವಿರೋಧಿಗಳ ಮೇಲಿನ ಕೆಲ ಪ್ರಕರಣಗಳು ಮರುಜೀವ ಪಡೆದರೆ, ಆಡಳಿತ ಪಕ್ಷದ ಮುಖಂಡರ ಆಪ್ತ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹಳ್ಳ ಹಿಡಿಯುವ ಸಾಧ್ಯತೆಗಳಿವೆ. ಕೆಲ ಬಿಜೆಪಿ ಶಾಸಕರು, ಪ್ರಭಾವಿ ರಾಜಕಾರಣಿಗಳು, ಎ ಗ್ರೇಡ್ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳನ್ನು ಗಾಳಕ್ಕೆ ಸಿಲುಕಿಸಲು ಕಾಂಗ್ರೆಸ್ ಸರ್ಕಾರ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದೆ.
ತನಿಖಾ ಹಂತದಲ್ಲಿವೆ ನೂರಾರು ಪ್ರಕರಣ: ಲೋಕಾಯುಕ್ತಕ್ಕೆ ಅಧಿಕಾರ ಸಿಕ್ಕಿದ ಬಳಿಕ 156ಕ್ಕೂ ಅಧಿಕ ಎಫ್ಐಆರ್‌ಗಳು ದಾಖಲಾಗಿವೆ. ಈ ಪೈಕಿ 18 ಅಕ್ರಮ ಆಸ್ತಿಗೆ (ಡಿಎ) ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಎಸಿಬಿಯಲ್ಲಿ ತನಿಖಾ ಹಂತದಲ್ಲಿದ್ದ 1,156ಕ್ಕೂ ಹೆಚ್ಚಿನ ಪ್ರಕರಣಗಳು ಈಗಾಗಲೇ ಲೋಕಾಯಕ್ತ ಅಂಗಳಕ್ಕೆ ಬಂದಿವೆ. ಕೋಟ್ಯಂತರ ರೂ. ಅಕ್ರಮ ಆಸ್ತಿಗೆ ಸಂಬಂಧಿಸಿದ ನೂರಾರು ಪ್ರಕರಣಗಳು ತನಿಖಾ ಹಂತದಲ್ಲಿವೆ. ಶೇ.30ರಷ್ಟು ಪ್ರಕರಣ ಬೆಂಗಳೂರು ಲೋಕಾಯುಕ್ತ ವಿಭಾಗಕ್ಕೆ ಸೇರಿದರೆ, ಉಳಿದ ಶೇ.70ರಷ್ಟು ಕೇಸ್‌ಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 24 ಎಫ್ಐಆರ್ ದಾಖಲಾಗಿವೆ.
ಲೋಕಾಯುಕ್ತ ಮೊಟಕುಗೊಳಿಸಿದ್ದ ಕಾಂಗ್ರೆಸ್: 2016ರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಹ್ಯೂಬ್ಲೋಟ್ ವಾಚ್ ಪ್ರಕರಣ ಮುನ್ನೆಲೆಗೆ ಬಂದ ಕೆಲ ದಿನಗಳಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗಕ್ಕಿದ್ದ ಅಧಿಕಾರ ಮೊಟಕುಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಲಾಗಿತ್ತು. ಬಿಜೆಪಿ ಸರ್ಕಾರದ ಅಧಿಕಾರಾವಧಿಯ ಕೊನೆಯ ಹಂತದಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಮತ್ತೆ ಹಿಂದಿನ ಅಧಿಕಾರ ಕೊಟ್ಟು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು.
Related Articles
ಸದ್ಯದಲ್ಲೇ ಲೋಕಾಯುಕ್ತದಿಂದ ದಾಳಿ?
ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಕೆಲ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವುದಕ್ಕೆ ಸಂಬಂಧಿಸಿ ಸಾಕ್ಷ್ಯ ಕಲೆ ಹಾಕುವಲ್ಲಿ ಲೋಕಾಯುಕ್ತ ಪೊಲೀಸರು ನಿರತರಾಗಿದ್ದಾರೆ. ಈ ಅಧಿಕಾರಿಗಳು ಈ ಹಿಂದಿನ ಬಿಜೆಪಿ ಸರ್ಕಾರದ ಸಚಿವರು, ಮುಖಂಡರಿಗೆ ಆಪ್ತರಾಗಿದ್ದರು ಎನ್ನಲಾಗಿದೆ. ಶೀಘ್ರದಲ್ಲೇ ಕೆಲ ಅಧಿಕಾರಿಗಳ ಕಚೇರಿ, ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಲಿರುವ ಬಗ್ಗೆ ನಂಬಲರ್ಹ ಉನ್ನತ ಮೂಲಗಳು “ಉದಯವಾಣಿ’ಗೆ ಸುಳಿವು ನೀಡಿದೆ.
ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದಿಂದ ಯಾವುದೇ ಒತ್ತಡಗಳು ಬಂದಿಲ್ಲ. ಭ್ರಷ್ಟರ ವಿರುದ್ಧ ನಿರಂತರವಾಗಿ ಸಮರ ಸಾರಲು ಲೋಕಾ ಪೊಲೀಸ್ ವಿಭಾಗ ಸಜ್ಜಾಗಿದೆ.
| ನ್ಯಾ.ಬಿ.ಎಸ್.ಪಾಟೀಲ್, ಲೋಕಾಯುಕ್ತರು
ಸರ್ಕಾರದಿಂದ ಮಾಹಿತಿ ಕೇಳಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಲೋಕಾಯುಕ್ತವು ಕಾನೂನು ಪ್ರಕಾರ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭ್ರಷ್ಟರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
| ಉಷಾರಾಣಿ, ರಿಜಿಸ್ಟ್ರಾರ್, ಲೋಕಾಯುಕ್ತ ಸಂಸ್ಥೆ.
ಅವಿನಾಶ ಮೂಡಂಬಿಕಾನ