Advertisement

Lokasabha Election: ಬಿಜೆಪಿ ಆತ್ಮಾವಲೋಕನದಲ್ಲಿ ಆರೋಪ-ಪ್ರತ್ಯಾರೋಪ

12:30 AM Jul 06, 2024 | Team Udayavani |

ಬೆಂಗಳೂರು: ಕೊನೆಗೂ ಲೋಕಸಭಾ ಸೋಲಿನ ಆತ್ಮಾವಲೋಕನ ಸಭೆಯನ್ನು ಬಿಜೆಪಿ ಪ್ರಾರಂಭಿಸಿದ್ದು, ರಾಯಚೂರು, ಕಲಬುರಗಿ, ಬಳ್ಳಾರಿ ಹಾಗೂ ಕೊಪ್ಪಳ ಕ್ಷೇತ್ರದ ಸೋಲಿನ ವಿಶ್ಲೇಷಣೆ ನಡೆದಿದ್ದು, ಬಳ್ಳಾರಿ ಸೋಲಿಗೆ ನಾನೇ ಕಾರಣ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

Advertisement

ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರ್ವಾಲ್‌, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷರು, ಮಾಜಿ ಸಂಸದರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ಆರೋಪ-ಪ್ರತ್ಯಾರೋಪಗಳ ಸುರಿಮಳೆ ನಡೆದಿದೆ. ಕಲಬುರಗಿ ಸೋಲಿಗೆ ನಾಯಕರ ಒಳ ಒಪ್ಪಂದವೇ ಕಾರಣ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ಚುನಾವಣೆಯಲ್ಲಿ ಈ ಎಲ್ಲ ಹಿನ್ನಡೆಯನ್ನು ಮೆಟ್ಟಿ ನಿಲ್ಲುವಂತೆ ನಿರ್ದೇಶನ ನೀಡಿದ್ದಾರೆ.

ಮೊದಲಿಗೆ ರಾಯಚೂರು ಲೋಕಸಭಾ ಕ್ಷೇತ್ರದ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲಾಗಿದ್ದು, ರಾಜಾ ಅಮರೇಶ್‌ ನಾಯಕ್‌ಗೆ ಟಿಕೆಟ್‌ ಕೊಡಬೇಡಿ ಎಂದು ಕಾರ್ಯಕರ್ತರು ವರದಿ ನೀಡಿದ್ದರೂ, ಅವಕಾಶ ಕಲ್ಪಿಸಿದ್ದೇ ಸೋಲಿಗೆ ಕಾರಣ ಎಂಬ ಆರೋಪ ವ್ಯಕ್ತವಾಗಿದೆ. ಸಭೆಯಲ್ಲಿ ಜೆಡಿಎಸ್‌ ವಿರುದ್ಧವೂ ಸ್ಥಳೀಯರಿಂದ ಬೇಸರ ವ್ಯಕ್ತವಾಗಿದ್ದು, ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋಲುವುದಕ್ಕೆ ಜೆಡಿಎಸ್‌ ಕಾರಣ ಎಂಬ ನೇರ ಆರೋಪ ವ್ಯಕ್ತವಾಗಿದೆ. ಚುನಾವಣ ಪೂರ್ವದಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲಾ ನಾಯಕರ ಸಭೆ ನಡೆಸಬೇಕಿತ್ತು. ಬಿ.ವಿ. ನಾಯ್ಕ ಪರ ಒಲವಿದ್ದರೂ ಟಿಕೆಟ್‌ ನೀಡದಿರುವುದು ತಪ್ಪಾಗಿದೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ “ಕೈ’ ಹಿಡಿದ “ಗ್ಯಾರಂಟಿ’!
ಕೊಪ್ಪಳ ಲೋಕಸಭಾ ಕ್ಷೇತ್ರದ ಪರಾಮರ್ಶೆ ಸಭೆಯಲ್ಲಿ ಶಾಸಕ ಗಾಲಿ ಜನಾರ್ದನ್‌ ರೆಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ್‌, ಪರಾಜಿತ ಅಭ್ಯರ್ಥಿ ಡಾ.ಬಸವರಾಜ್‌ ಕ್ಯಾವಟೂರು ಭಾಗಿಯಾಗಿದ್ದರು. ಅಭ್ಯರ್ಥಿ ಬದಲಾವಣೆ ಸೋಲಿಗೆ ಕಾರಣವಲ್ಲ, ಸಂಗಣ್ಣ ಕರಡಿ ಸ್ಪರ್ಧಿಸಿದ್ರೆ ಇನ್ನೂ ಹೆಚ್ಚು ಅಂತರದಲ್ಲಿ ಪಕ್ಷ ಸೋಲುತ್ತಿತ್ತು. ಟಿಕೆಟ್‌ ಘೋಷಣೆ ಸ್ವಲ್ಪ ವಿಳಂಬವಾಗಿದ್ದರಿಂದ ತಯಾರಿ ಕಷ್ಟವಾಯ್ತು. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ ಕೈ ಹಿಡಿದಿದೆ. ಸಂಗಣ್ಣ ಕರಡಿ ಪಕ್ಷ ತೊರೆದಿದ್ದು ಒಂದಿಷ್ಟು ಮತ ಪರಿವರ್ತನೆಗೆ ಕಾರಣವಾಗಿದೆ. ಹಿಟ್ನಾಳ್‌ ಕುಟುಂಬದ ಬಗ್ಗೆ ಅನುಕಂಪದ ಅಲೆ ಕೆಲಸ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next