ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿ ಹೊಂದಿರುವ ಬಿಜೆಪಿಗೆ ಆರ್‌ಎಸ್‌ಎಸ್ ಕೆಲವೊಂದು ಸಲಹೆ ನೀಡಿದೆ.
ವಿಧಾನಸಭೆ ಚುನಾವಣೆ ಫಲಿತಾಂಶ ಹಾಗೂ ನಂತರದ ರಾಜಕೀಯ ವಿದ್ಯಮಾನಗಳ ಆಧಾರದಲ್ಲಿ ಜಾತಿವಾರು ಸಮೀಕರಣವೂ ಆಗಿರುವುದರಿಂದ ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕ ಕಾರ್ಯತಂತ್ರ ರೂಪಿಸಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಆಗಿದ್ದೇ ಆದರೆ ಕೆಲವು ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ತಟಸ್ಥ ಇರುವ ಸಾಧ್ಯತೆಗಳೂ ಇವೆ.
ಅಂತಹ ನಾಯಕರು ಹಾಗೂ ಕಾರ್ಯಕರ್ತರನ್ನು ಬಿಜೆಪಿಯತ್ತ ಸೆಳೆಯಬೇಕು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ದೊರೆಯದೆ ಬೇರೆ ಪಕ್ಷಗಳಿಗೆ ಹೋಗಿ ಸ್ಪರ್ಧೆ ಮಾಡಿ ಸೋತರೂ ಗಮನಾರ್ಹ ಮತ ಪಡೆದಿರುವವರನ್ನು ಮತ್ತೆ ಪಕ್ಷಕ್ಕೆ ವಾಪಸ್ ತರಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಕೆಲವು ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಮಾಜಿ ಶಾಸಕರಿಗೂ ಸಮ್ಮಿಶ್ರ ಸರ್ಕಾರದ ಬಗ್ಗೆ ಸಮ್ಮತಿಯಿಲ್ಲ. ಅಂತವರು ಸ್ಥಳೀಯವಾಗಿ ಪ್ರಬಲವಾಗಿದ್ದರೆ ಬಿಜೆಪಿಗೆ ಸೆಳೆಯಬಹುದು. ಆದರೆ, ಭ್ರಷ್ಟಾಚಾರ -ಅವ್ಯವಹಾರ ಆರೋಪ ಇದ್ದರೆ ಅವರಾಗಿಯೇ ಬಂದರೂ ಸೇರಿಸುವುದು ಬೇಡ.
ಮುಂದಿನ ಲೋಕಸಭೆ ಚುನಾವಣೆ ರಾಜ್ಯದ ಮಟ್ಟಿಗೆ ಜಾತಿ ಸಮೀಕರಣದಲ್ಲಿಯೇ ನಡೆಯುವ ಸಾಧ್ಯತೆ ಇರುವುದರಿಂದ ಮುಸ್ಲಿಂ, ಒಕ್ಕಲಿಗ ಮತಗಳು ಒಟ್ಟಾಗಲಿವೆ. ಬಿಜೆಪಿ ವೋಟ್‌ಬ್ಯಾಂಕ್ ಆಗಿರುವ ಮತಗಳು ಚದುರದಂತೆ ನೋಡಿಕೊಂಡು, ಜತೆಗೆ, ದಲಿತ ಹಾಗೂ ಹಿಂದುಳಿದ ಸಮುದಾಯದ ಮತಗಳತ್ತ ದೃಷ್ಟಿ ಹರಿಸಬೇಕು ಎಂದು ಆರ್‌ಎಸ್‌ಎಸ್ ಸಲಹೆ ನೀಡಿದೆ.
ರಾಜ್ಯದ 28 ಕ್ಷೇತ್ರವಾರು ತಮ್ಮದೇ ಆದ ಮಾರ್ಗದಲ್ಲಿ ಸಮೀಕ್ಷೆ ಸಹ ನಡೆಸಿ, ಕೆಲವೆಡೆ ಅಭ್ಯರ್ಥಿಗಳ ಬದಲಾವಣೆಯ ಬಗ್ಗೆಯೂ ವರದಿ ನೀಡಿದೆ. ಹಳೇ ಮೈಸೂರು, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಹೆಚ್ಚು ಸೀಟು ಗೆಲ್ಲುವ ಕುರಿತು ಕಾರ್ಯತಂತ್ರ ಬದಲಾಯಿಸಿಕೊಳ್ಳಲು ಆರ್ ಎಸ್‌ಎಸ್ ಸೂಚಿಸಿದೆ ಎಂದು ತಿಳಿದು ಬಂದಿದೆ.