ಗುಂಡ್ಲುಪೇಟೆ(ಚಾಮರಾಜನಗರ): 60 ವರ್ಷದ ಹಿಂದೆ ಸರ್ಕಾರ ಸಾಗುವಳಿ ಚೀಟಿ ನೀಡಿದ್ದರು ಕೂಡ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿ ಮುಂಟೀಪುರ ಹಾಗೂ ಬರಗಿ ಕಾಲೋನಿ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ.
ತಾಲೂಕಿನ ಬರಗಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಕಾಡಂಚಿನ ಮುಂಟೀಪುರ ಹಾಗೂ ಬರಗಿ ಕಾಲೋನಿಯಲ್ಲಿ ಸುಮಾರು 650ಕ್ಕಿಂತ ಅಧಿಕ ಮತದಾರರಿದ್ದು, ಬೇಡಿಕೆ ಈಡೇರಿಸದಿದ್ದರೆ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮದ ಅಂಬೇಡ್ಕರ್ ನಾಮಫಲಕದ ಮುಂದೆ ಭಿತ್ತಿಪತ್ರ ಹಿಡಿದು ಆಕ್ರೋಶ ಹೊರಹಾಕಿ ಎಚ್ಚರಿಕೆ ನೀಡಿದ್ದಾರೆ.
ಮುಂಟೀಪುರ ಹಾಗೂ ಬರಗಿ ಕಾಲೋನಿಯ ಪರಿಶಿಷ್ಟ ಜಾತಿಯ ಸುಮಾರು ನೂರಕ್ಕೂ ಅಧಿಕ ಮಂದಿಗೆ 1961-62ನೇ ಸಾಲಿನಲ್ಲಿ ಸರ್ಕಾರದಿಂದ ಸಾಗುವಳಿ ಪತ್ರ ನೀಡಲಾಗಿತ್ತು. ಆದರೂ ಸಹ ಇಲ್ಲಿಯ ತನಕ ದುರಸ್ತಿ ಮಾಡಿಲ್ಲ. ಈ ಕಾರಣದಿಂದ ಅರಣ್ಯ ಇಲಾಖೆಯವರು ನಮಗೆ ಸೇರಿದೆ ಎಂದು ತಂತಿ ಬೇಲಿ ಹಾಕಿಕೊಂಡಿದ್ದಾರೆ. ಇದನ್ನು ಗಮಿಸಿದರೆ ತಾಲೂಕು ಆಡಳಿತ ನಮ್ಮನ್ನು ದಾರಿ ತಪ್ಪಿಸುತ್ತಿದ್ದು, ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಮುಂಟೀಪುರ ಗ್ರಾಮದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ವಾಸವಾಗಿದ್ದರು ಸಹ ಇಲ್ಲಿಯ ತನಕ ಕಂದಾಯ ಗ್ರಾಮವೆಂದು ಘೋಷಣೆ ಮಾಡಿಲ್ಲ. ಈ ಕಾರಣದಿಂದ ಹಕ್ಕು ಪತ್ರ, ಇ ಸ್ವತ್ತು ನೀಡುತ್ತಿಲ್ಲ. ಸ್ವತಂತ್ರ ಬಂದ 70 ವರ್ಷ ಕಳೆದರು ಗ್ರಾಮದಲ್ಲಿ ಸ್ಮಶಾನವೇ ಇಲ್ಲ. ಜೊತೆಗೆ ಜಾನುವಾರುಗಳನ್ನು ಮೇಯಿಸಲು ಗೋಮಾಳವಿಲ್ಲ. ಬರಗಿ ಕಾಲೋನಿಯಲ್ಲಿಯೂ ಸಹ ಇದೇ ಸಮಸ್ಯೆಗಳಿವೆ. ಈ ಬಗ್ಗೆ ಹಲವು ವರ್ಷದಿಂದಲೂ ತಹಸೀಲ್ದಾರ್, ಜಿಲ್ಲಾಧಿಕಾರಿ, ಜನಸ್ಪಂದನ ಕಾರ್ಯಕ್ರಮ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕೂಡ ಪ್ರಯೋಜನವಾಗಿಲ್ಲ. ಆದ್ದರಿಂದ ನಮ್ಮ ನ್ಯಾಯಯುವ ಸಮಸ್ಯೆಗಳು ಇತ್ಯರ್ಥವಾಗುವವರೆಗೂ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಶಿವಯ್ಯ, ರಾಜು, ಬರಗಿ ಕಾಲೋನಿ ನಾಗರಾಜು, ಬೆಳ್ಳಯ್ಯ, ಈಶ್ವರ್, ಮಹದೇವಸ್ವಾಮಿ ಸೇರಿದಂತೆ ಮುಂಟೀಪುರ ಹಾಗೂ ಬರಗಿ ಕಾಲೋನಿ ಗ್ರಾಮಸ್ಥರು ಹಾಜರಿದ್ದರು.