Advertisement
ರಾಜ್ಯದ 15 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಕೂಡ ಒಮ್ಮೆಗೆ ಪ್ರಕಟವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿಯು ಕಾರ್ಯ ಪ್ರವೃತ್ತವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಸೂಕ್ತ ವೇದಿಕೆ ಸಜ್ಜುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ.
Related Articles
ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಹಾಗೂ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಮಹಾಘಟಬಂಧನ ಹೆಸರಿನಲ್ಲಿ ಒಂದುಗೂಡುತ್ತಿರುವ ಸಂದರ್ಭದಲ್ಲಿ ಪಕ್ಷದ ವರ್ಚಸ್ಸಿಗೆ ತುಸು ಧಕ್ಕೆಯಾದಂತಿದೆ ಎಂಬ ಮಾತುಗಳು ಸಣ್ಣದಾಗಿ ಕೇಳಿಬರುತ್ತಿದೆ. ಅದರ ಬೆನ್ನಲ್ಲೇ ಪ್ರತಿಪಕ್ಷಗಳ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡುವ ರೀತಿಯಲ್ಲಿ ಒಮ್ಮೆಗೆ 200 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಿ ಪ್ರಕಟಿಸುವ ಮೂಲಕ ಚುನಾವಣೆಗೆ ಭರ್ಜರಿ ಪ್ರವೇಶ ನೀಡಲು ಸಜ್ಜಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
Advertisement
ಫೆಬ್ರುವರಿ ಮೊದಲ ವಾರದಲ್ಲಿ ಘೋಷಣೆ ಸಾಧ್ಯತೆಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯು ಈಗಾಗಲೇ ರಾಜ್ಯವಾರು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿ ಪರಿಶೀಲನೆ ನಡೆಸುತ್ತಿದೆ. ರಾಜ್ಯ ನಾಯಕರು ಸಲ್ಲಿಸಿದ ಮಾಹಿತಿ ಜತೆಗೆ ನಾನಾ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ತಾಳೆ ಹಾಕಿ ಪರಿಶೀಲನೆ ನಡೆಸಲಿದೆ. ಬದಲಾದ ರಾಜಕೀಯ ಸನ್ನಿವೇಶ, ಜಾತಿ- ಸಮುದಾಯ- ಪ್ರಾದೇಶಿಕವಾರು ಧನಾತ್ಮಕ, ಋಣಾತ್ಮಕ ಅಂಶಗಳನ್ನು ಪರಿಗಣಿಸಿ ವಿಸ್ತೃತ ಚರ್ಚೆ ನಡೆಸಿ ನಂತರ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ. ಜ.11 ಹಾಗೂ 12ರಂದು ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಈ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಿ ಫೆಬ್ರುವರಿ ಮೊದಲ ವಾರದಲ್ಲಿ ಏಕಕಾಲಕ್ಕೆ 200 ಅಭ್ಯರ್ಥಿಗಳ ಹೆಸರು ಪ್ರಕಟಿಸಿ ಪ್ರಚಾರ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ಹೇಳಿವೆ. ಒಟ್ಟಾರೆ ಲೋಕಸಭಾ ಚುನಾವಣೆಗೆ ಸಕಲ ರೀತಿಯಲ್ಲೂ ಸಜ್ಜುಗೊಳ್ಳುತ್ತಿರುವ ಕಮಲ ಪಾಳಯ ಏಕಕಾಲಕ್ಕೆ 200 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿ ದೇಶಾದ್ಯಂತ ಚುನಾವಣಾ ಕಣ ರಂಗೇರಿಸಲು ಅಣಿಯಾಗುತ್ತಿದೆ. ಪ್ರತಿಪಕ್ಷಗಳು ಮೈತ್ರಿ, ಮಹಾಘಟಬಂಧನ ಹೆಸರಿನಲ್ಲಿ ಸೀಟು ಹಂಚಿಕೆ, ಹೊಂದಾಣಿಕೆಗೆ ತಲೆ ಕೆಡೆಸಿಕೊಳ್ಳುತ್ತಿರುವ ಹಂತದಲ್ಲೇ ಮೊದಲ ಸುತ್ತಿನಲ್ಲಿ 200 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಗೊಂದಲವಿಲ್ಲದಂತೆ ಪ್ರಚಾರ ನಡೆಸಲು ಲೆಕ್ಕಾಚಾರ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ 15 ಅಭ್ಯರ್ಥಿಗಳ ಹೆಸರು ಪ್ರಕಟ ನಿರೀಕ್ಷೆ
ಇದೇ ಪಟ್ಟಿಯಲ್ಲಿ ರಾಜ್ಯದ 15 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗುವ ನಿರೀಕ್ಷೆ ಇದೆ. ಹಾಲಿ ಬಿಜೆಪಿ ಸಂಸದರಿರುವ ಬಹುಪಾಲು ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ 15 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ. ಮೈಸೂರು- ಕೊಡಗು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಎರಡನೇ ಹಂತದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಅಕಾಲಿಕ ಮರಣದಿಂದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತಂತೆ ಅಭಿಪ್ರಾಯ ಸಂಗ್ರಹ ವೇಳೆ ತೇಜಸ್ವಿನಿ ಅನಂತ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಹೆಸರು ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಈ ಬಗ್ಗೆ ಇನ್ನಷ್ಟು ಪರಿಶೀಲಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವರಿಷ್ಠರು ಚಿಂತಿಸಿದ್ದಾರೆ. ಮೈಸೂರು- ಕೊಡಗು ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಎರಡನೇ ಹಂತದಲ್ಲಿ ಪ್ರಕಟಿಸಲು ಚಿಂತಿಸಲಾಗಿದೆ ಎನ್ನಲಾಗಿದೆ. – ಎಂ. ಕೀರ್ತಿಪ್ರಸಾದ್